Saturday, December 29, 2018

ಮೂರು ವರುಷದ ಹೃದಯಿಗನಲ್ಲಿ ಮೂವತ್ತು ವರುಷದ ಭಾವ!






                ಸೆಪ್ಟೆಂಬರ್ 20. ಕಾಸರಗೋಡು ಜಿಲ್ಲೆಯ ಕೋಟೂರು ಸನಿಹದ ಮುಳಿಯಾರು ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದುವು. ಎರಡು ತಿಂಗಳ ಹಿಂದಿನಿಂದಲೇ ಪ್ರಸಂಗ, ಕಲಾವಿದರ ಆಯೋಜನೆಯ ರೂಪುರೇಷೆ, ಸಮಾಲೋಚನೆ. “ ಆಟದ ಬಳಿಕ ಯಕ್ಷಗಾನದಿಂದ ಪೂರ್ತಿಯಾಗಿ ಕಳಚಿಕೊಳ್ಳುತ್ತೇನೆ.” ಎಂದಿದ್ದ ಪೆರಡಂಜಿ ಗೋಪಾಲಕೃಷ್ಣ ಭಟ್ಟರು (72) ಅಕ್ಟೋಬರ್ 8ರಂದು ಬದುಕಿನಿಂದಲೇ ತನ್ನನ್ನು ಕಳಚಿಸಿಕೊಂಡಿರುವುದು ಕಾಲನ ಆಟ. ಓರ್ವ ವ್ಯಕ್ತಿ ಮರಣಿಸಿದ ಬಳಿಕ ನುಡಿಹಾರ ಸಲ್ಲಿಸುವುದು ಸುಲಭ! ಆದರೆ ಮನವನ್ನು ಆವರಿಸಿದ ವ್ಯಕ್ತಿಯ ಚಿತ್ರಣವನ್ನು ನುಡಿಕಂಬನಿಗೆ ಪೋಣಿಸುವುದು ಹೃದಯ ಭಾರದ ಕೆಲಸ

                ಪ್ರದರ್ಶನಕ್ಕಿಂತ ಇಪ್ಪತ್ತು ದಿವಸದ ಮೊದಲೇ ಅಸೌಖ್ಯದಿಂದ ಆಸ್ಪತ್ರೆ ಸೇರಿದರು. ತೀವ್ರನಿಗಾದಲ್ಲಿದ್ದಾಗಲೂ ಪ್ರದರ್ಶನದ್ದೇ ನೆನಪು. ದಿನಕ್ಕೆ ಹತ್ತಾರು ಬಾರಿ ನಡೆಯಲಿರುವ ಹುಟ್ಟುಹಬ್ಬವನ್ನು ನೆನಪಿಸಿಕೊಳ್ಳುತ್ತಿದ್ದರು. ದಿನ ಸರಿದಂತೆ ಮೌನಕ್ಕೆ ಜಾರಿದ ಪೆರಡಂಜಿಯವರ ಯಕ್ಷಗಾನದ ಗುಂಗಿನ ಆದ್ರ್ರತೆ ಕಡಿಮೆಯಾಗುತ್ತಾ ಬಂತು.  ನಮಗೆ ಪೆರಡಂಜಿಯವರನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ ಕಾಣುತ್ತದೆ,” ಎಂದು ಅಡ್ಕ ಸುಬ್ರಹ್ಮಣ್ಯ ಭಟ್ಟರು ಗದ್ಗದಿತರಾದರು. ಇವರ ಸಾರಥ್ಯದಲ್ಲಿ ನವರಾತ್ರಿ ಸಂದರ್ಭದಲ್ಲಿ ಮಲ್ಲ ಶ್ರೀಕ್ಷೇತ್ರದಲ್ಲಿ ಪೆರಡಂಜಿಯವರಸೌಭಾಗ್ಯ ಸುಂದರಿಪ್ರಸಂಗದ ಪ್ರದರ್ಶನವೂ ನಿಶ್ಚಿತವಾಗಿತ್ತು. “ ಆಟ ರದ್ದು ಮಾಡುವುದು ಬೇಡವೆಂದೂ ಹೇಳಿದ್ದರಂತೆ!

                ಕೋಟೂರಿನಕಾರ್ತಿಕೇಯ ಕಲಾ ನಿಲಯವು ಒಂದು ಕಾಲಘಟ್ಟದಲ್ಲಿ ನಾಟಕ, ಯಕ್ಷಗಾನಗಳಿಗೆ ಖ್ಯಾತಿ. ಹಿರಿಯ ಅರ್ಥದಾರಿ ಅಡ್ಕ ಗೋಪಾಲಕೃಷ್ಣ ಭಟ್ಟರ ನೇತೃತ್ವದಲ್ಲಿ ಮಲೆಯಾಳಿ ನೆಲದಲ್ಲಿ ಯಕ್ಷಗಾನದ ಸೊಗಸನ್ನು ತೆರೆದಿಟ್ಟ ಸಂಘಟನೆ. ಹಲವಾರು ಕಲಾವಿದರನ್ನು ರೂಪುಗೊಳಿಸಿದ ಹಿರಿಮೆಯಿದೆ. ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಆಟದಲ್ಲೂ, ನಾಟಕದಲ್ಲೂ ಸ್ತ್ರೀಪಾತ್ರಧಾರಿ. ಇವರ ಮಾವ ಅಡ್ಕ ಗೋಪಾಲಕೃಷ್ಣ ಭಟ್ಟರು ವೇಷಧಾರಿ, ಅರ್ಥದಾರಿ, ನಿವೃತ್ತ ಅಧ್ಯಾಪಕ. 

              ಇವರಸತ್ಯವಾನ ಸಾವಿತ್ರಿನಾಟಕದ ಮೂಲಕ ಪೆರಡಂಜಿಯವರಿಗೆ ಬಣ್ಣದ ಗೀಳು. ಮುಂದೆ ಮಾವ-ಅಳಿಯನ ಯಕ್ಷರಂಗದ ಜತೆಗಾರಿಕೆಗಳು ಗಮನೀಯವಾಗಿದ್ದುವು. ಉದಾ: ‘ಈಶ್ವರ-ದಾಕ್ಷಾಯಿಣಿ, ‘ಹರಿಶ್ಚಂದ್ರ-ಚಂದ್ರಮತಿ, ‘ಈಶ್ವರ ಮೋಹಿನಿ, ‘ಭೀಮ-ದೌಪದಿ... ಜತೆ ಪಾತ್ರಗಳು. ಹಲವು ಕಾಲದ ಬಣ್ಣದ ಬದುಕಿಗೆಅಪಘಾತವು ಬ್ರೇಕ್ ಹಾಕಿತ್ತು! ಸಕ್ರಿಯತೆಯಿಂದ ನೇಪಥ್ಯಕ್ಕೆ ಸರಿದ ಪೆರಡಂಜಿಯವರು ಐದಾರು ವರುಷದೀಚೆಗೆ ಮತ್ತೆ ಮೊದಲಿನ ಫಾರ್ಮ್ಗೆ ಬಂದಿದ್ದರು. 

                2015 ಮಳೆಗಾಲದ ಒಂದು ದಿವಸ. ಪೆರಡಂಜಿಯವರ ಬಗ್ಗೆ ಕೇಳಿದ್ದೆ. ನೋಡಿದ್ದು, ಮಾತನಾಡಿದ ನೆನಪು ವಿರಳ. ಅಡ್ಕ ಗೋಪಾಲಕೃಷ್ಣ ಭಟ್ಟರ ಎಂಭತ್ತರ ಸಡಗರಕ್ಕೆ ಅಭಿನಂದನಾ ಗ್ರಂಥ ತಯಾರಿಯ ಪೂರ್ವಭಾವಿ ಸಮಾಲೋಚನೆ. ಉಡುಪುಮೂಲೆ ರಘುರಾಮ ಭಟ್ಟರೊಂದಿಗೆ ಅಡ್ಕದವರ ಮನೆ ಸೇರಿದಾಗ ಪೆರಡಂಜಿಯವರು ಬಹುಕಾಲದ ಪರಿಚಯ, ಸಲುಗೆಯಿದ್ದಂತೆ ಸ್ವಾಗತಿಸಿದರು, ಮುಕ್ತವಾಗಿ ಮಾತನಾಡಿದರು. ಅಂದಿನ ಅವರ ಆಪ್ತತೆಯು ಮನಸಾ ಬೆಸೆಯಿತು. ‘ಅಡ್ಕ ವಚೋಹಾಸಗ್ರಂಥದ ತಯಾರಿಗಳು ನಡೆಯುತ್ತಿದ್ದಾಗ ಅವರ ಬೌದ್ಧಿಕ ಗಟ್ಟಿತನದ ಅರಿವಾಗಿತ್ತು. ಬಣ್ಣದ ಬದುಕಿನ ಕಷ್ಟ-ಸುಖಗಳು ಅನಾವರಣಗೊಂಡಿದ್ದುವು.  

                ನಮ್ಮಿಬ್ಬರ ಒಡನಾಟವು ಫಕ್ಕನೆ ನೋಡುವಾಗ ಯಾರಿಗಾದರೂ ಮೂವತ್ತೋ, ನಲವತ್ತೋ ವರುಷದ ಪರಿಚಯದಂತೆ ತೋರುತ್ತಿತ್ತು. ಗ್ರಂಥ ರಚನೆಯ ಸಂದರ್ಭದಲ್ಲಿ ಎದುರಾದ ಅನೇಕ ಮಾನಸಿಕ ಒತ್ತಡಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು.  ಪರಿಹಾರಗಳನ್ನು ಕಂಡುಕೊಂಡಿದ್ದರು. ಲೇಖನ ಪರಿಷ್ಕರಣೆಯ ಸಂದರ್ಭದಲ್ಲಿ ಸಂಪಾದಕನಾಗಿ ರಾಜಿ ಮಾಡಿಕೊಳ್ಳದ ನನ್ನ ನಿಲುವನ್ನು ಮೆಚ್ಚಿಕೊಂಡಿದ್ದರು. ಹಿತರೇ ಅಹಿತರಾದ ಅನೇಕ ದೃಷ್ಟಾಂತಗಳಲ್ಲಾದ ನೋವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದೆವು. ಬಹುಶಃ ಎಲ್ಲಾ ಕಾರಣವಾಗಿ ಅಡ್ಕ ಮತ್ತು ಪೆರಡಂಜಿ ಮನೆಯ ಸದಸ್ಯರ ಯಾದಿಗೆ ನಾನೂ ಸೇರಿಹೋದೆ

                ಅಡ್ಕ ವಚೋಹಾಸಅಭಿನಂದನಾ ಗ್ರಂಥ ಮತ್ತು ಅಡ್ಕ ಗೋಪಾಲಕೃಷ್ಣ ಭಟ್ಟರಿಗೆ ಅಭಿನಂದನೆ ಕಲಾಪವು ವ್ಯವಸ್ಥಿತವಾಗಿ, ಯೋಜನಾಬದ್ಧವಾಗಿ ನಡೆಯಿತು. ಇದಕ್ಕೆಯಕ್ಷತೂಣೀರ ಸಂಪ್ರತಿಷ್ಠಾನ ಸಾರಥ್ಯ. ಇದರ ಅಧ್ಯಕ್ಷ ಬಳ್ಳಮೂಲೆ ಈಶ್ವರ ಭಟ್, ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ. ಎಲ್ಲಾ ಸು-ಮನಸಿಗ ಸದಸ್ಯರ ತನು-ಮನ-ಧನದ ಬೆಂಬಲವು ಕಾರ್ಯಕ್ರಮದ ಯಶಕ್ಕೆ ಸಾಕ್ಷಿಯಾಗಿತ್ತು. ವಾರದ  ಬಳಿಕ ಅಡ್ಕ ಗೋಪಾಲಕೃಷ್ಣ ಭಟ್ಟರು ಮನತುಂಬಿ ಹಾರೈಸುತ್ತಾ, “ಯಕ್ಷಗಾನ, ನಾಟಕ ರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿದ ಅಳಿಯನ (ಪೆರಡಂಜಿ) ಕುರಿತಾಗಿಯೂ ಪುಸ್ತಕ ಮಾಡಿಬಿಡಿ,” ಎಂದ ಅವರ ಆಶಯ ಈಡೇರಿಸಲಾದ ಕೊರಗು ಬಾಧಿಸುತ್ತಿದೆ

                ವರುಷದ ಹಿಂದೆ ಮಾವನ ಆಶಯವನ್ನು ಅಳಿಯನ ಮುಂದಿಟ್ಟಿದ್ದೆ. “ನನ್ನ ಪುಸ್ತಕವಾ.. (ನಗು) ಯಾರಿಗೆ? ಓದುವವರಿದ್ದಾರಾ? ನಾನು-ನೀವು ಓದಬೇಕಷ್ಟೇಎಂದು ವಿಷಯಾಂತರ ಮಾಡಿದ್ದರು! ಮತ್ತೆರಡು ಬಾರಿ ನೆನಪಿಸಿದರೂ ಉದ್ದೇಶ ಪೂರ್ವಕವಾಗಿ ಕೇಳಿಯೂ ಕೇಳಿಸದಂತೆ ನಿರ್ಲಿಪ್ತರಾಗಿದ್ದರು. ಪೆರಡಂಜಿಯವರಿಗೆ ನಿರ್ಲಿಪ್ತತೆಯು ವಿಷಾದದ ಒಂದು ಮುಖ. ಸಹನೆಯು ಬದುಕು ಕಲಿಸಿದ ಪಾಠ. ‘ಅಹಂಹತ್ತಿರ ಬಾರದಂತೆ ಎಚ್ಚರ ವಹಿಸಿದ ಸ್ಥಿತಪ್ರಜ್ಞ. ಎಷ್ಟೋ ಬಾರಿ ಇವರ ಮೌನವನ್ನೋ, ವಿಷಾದದ ವರ್ತನೆಯನ್ನು ಅಪಾರ್ಥ ಮಾಡಿಕೊಂಡವರೂ ಇದ್ದಾರೆ.

                ಪೆರಡಂಜಿಯವರ ಯಕ್ಷಗಾನ ಕೃತಿಗಳು – “ಸ್ಕಂದ ಪರಿಣಯ, ಸೌಭಾಗ್ಯ ಸುಂದರೀ, ಲಂಕಾ ಪತನ, ರಾಜಾ ದಿಲೀಪ..” ಕಥಾ ರಚನೆಯ ಹಾದಿಗಳು, ಸನ್ನಿವೇಶ ಜೋಡಣೆ, ಪದ್ಯಗಳ ಭಾವಗಳು.. ಮುಂತಾದ ವಿಚಾರಗಳನ್ನು ಚರ್ಚಿಸುತ್ತಿದ್ದೆವು. ಇಂತಹ ಸಮಾಲೋಚನೆಗಳಲ್ಲಿ ತನ್ನ ಮಾತೇ ಅಂತಿಮವಾಗಬೇಕೆನ್ನುವಕೆಟ್ಟ ಹಠನುಸುಳುತ್ತಿರಲಿಲ್ಲ. ಮಂಥರೆಯ ಜೀವನವನ್ನು ಆಧರಿಸಿದ ಪ್ರಸಂಗವೊಂದರ ರಚನೆಯ ಬೀಜ ಒಂದೆರಡು ವರುಷದಿಂದ ಮನದಲ್ಲಿತ್ತು. ಪೂರಕವಾದ ಮತ್ತು ತೃಪ್ತಿಯಾದ ಹೂರಣಗಳು ಲಭಿಸದೇ ಇದ್ದುದರಿಂದ ಕಥಾ ಹಂದರದಲ್ಲೇ ಪ್ರಸಂಗ ಉಳಿಯಿತು. ‘ಚಂದ್ರಸೇನ ವಿಜಯವು ಕೊನೆಯ ಹಂತದಲ್ಲಿತ್ತು

                2018 ಆಗಸ್ಟ್ 2. ಪೆರಡಂಜಿಯವರ ಮಾವ (ಶ್ರೀಮತಿಯ ತಂದೆ) ಕಬೆಕ್ಕೋಡು ಶಂಭಟ್ಟರ ಶತಯಾನದ ಶುಭ ದಿನ. ಸ್ವ-ಶ್ರಮದಲ್ಲಿಅಭಿಷೇಚನಅಭಿನಂದನಾ ಕೃತಿಯನ್ನು ರಚಿಸಿದ್ದರು. ಮಡದಿ ಪ್ರೇಮಲತಾ ಸ್ಪೂರ್ತಿ. ಎರಡು ಮೂರು ತಿಂಗಳ ಹಿಂದಿನಿಂದಲೇ ಹೂರಣ ಸಂಗ್ರಹದ ಕೆಲಸದಲ್ಲಿದ್ದರು. ಸಮಾರಂಭದಲ್ಲಿ ನಾನೂ ಭಾಗವಹಿಸಿದ್ದೆ. “ಛೇ... ಬಿಡುಗಡೆ ಸಮಾರಂಭವನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತಲ್ವಾ. ನಿರೀಕ್ಷಿಸಿದಂತೆ ಆಗಿಲ್ಲಎಂದಿದ್ದರು. ಇದು ಮಾವನ ಕುರಿತಾದ ಗೌರವ ಭಾವ. ನೂರು ಪುಟದಅಭಿಷೇಚನಕೃತಿಯು ಕೊನೆಯದ್ದಾದೀತೆಂದು ಊಹಿಸಲು ಕಷ್ಟವಾಗುತ್ತದೆ

                ಒಂದು ವರುಷದಿಂದ ಪೆರಡಂಜಿಯವರ ಮಾನಸಿಕ ಸ್ಥಿತಿಯಲ್ಲಿ ಯಕ್ಷರಂಗದ ಕುರಿತು ವಿಷಾದವನ್ನು ಕಂಡಿದ್ದೇನೆ. ಅವರ ಮಾತು, ನಗುವಿನ ಮಧ್ಯೆ ಅವುಗಳನ್ನು ಅಡಗಿಸುತ್ತಿದ್ದರು. ತನ್ನ ಅನಾರೋಗ್ಯ ಮತ್ತು ಪರಿಣಾಮದ ಸ್ಪಷ್ಟ ಅರಿವು ಇತ್ತೇನೋ? ಒಂದಿನ ಬಹುಶಃಅಭಿಷೇಚನಕೃತಿ ಬಿಡುಗಡೆಯ ವಾರದ ಹಿಂದೆರಾತ್ರಿ ಹನ್ನೊಂದು ಗಂಟೆಯಾಗಿರಬಹುದು. ಪೆರಡಂಜಿಯವರಿಂದ ಕರೆ. “2018 ಸೆಪ್ಟೆಂಬರ್ ಇಪ್ಪತ್ತು. ನನ್ನ ಹುಟ್ಟಿದ ದಿನದ ಖುಷಿಗಾಗಿ ಆಟವಿದೆ. ಬರ್ತೀರಲ್ವಾ. ಇದು ನನ್ನ ಕೊನೆಯ ಹುಟ್ಟುಹಬ್ಬ.. ಅಲ್ಲಲ್ಲ.. ಯಕ್ಷಗಾನದಿಂದ ನಿವೃತ್ತಿಗೊಂದು ನೆಪ. ಮತ್ತೆ ನಾನು ದೂರ..” ಎಂದಿದ್ದರು. ಅಪರ ಹೊತ್ತಲ್ಲಿ ಯಾಕಾಗಿ ಕರೆ ಮಾಡಿದರೋ? ಅವರೊಳಗೆ ಯಾವ ಭಾವಗಳು ಸ್ಫುರಿಸಿದ್ದುವೋ? ಮಾತಿನ ಮಧ್ಯೆ ಅರಿವಿಲ್ಲದೆಯೋ, ವಿನೋದಕ್ಕಾಗಿಯೋ ಆಡಿದಕೊನೆಯ ಹುಟ್ಟುಹಬ್ಬಪದಗಳು ಪೆರಡಂಜಿಯವರನ್ನು ಯೋಗವಾಗಿ ಕಾಡಿತೋ

                ಮೂರು ವರುಷದ ಒಡನಾಟ. ಮೂವತ್ತು ವರುಷದ ಭಾವ. ಛೇ... ಓರ್ವ ವ್ಯಕ್ತಿ ಇಷ್ಟು ಕಡಿಮೆ ಅವಧಿಯಲ್ಲಿ ಸ್ನೇಹಿತನಾಗಿ, ಆಪ್ತನಾಗಿ, ಹೃದಯಿಗನಾಗಿ ಆವರಿಸಿದ್ದು ನಂಬಲಾಗದ ಸತ್ಯ. ಎರಡೋ ಮೂರೋ ದಿನಕ್ಕೊಮ್ಮೆ ಬರುತ್ತಿದ್ದ ಮೊಬೈಲ್ ಕರೆಗಳಲ್ಲಿ ಕಾಡು ಹರಟೆಗಳು ಕಡಿಮೆ. ಪ್ರಸಂಗ, ಪಾತ್ರ, ಪೌರಾಣಿಕ ವಿಚಾರಗಳ ಜಿಜ್ಞಾಸೆಗಳಿರುತ್ತಿದ್ದುವು. ಎಲ್ಲದಕ್ಕೂ ಕಿವಿಯಾಗುತ್ತಿದ್ದ ನನಗೆ ಅವರ ಮರಣದ ವಾರ್ತೆಗೂ ಕಿವಿಯಾಗುವುದು ದುರ್ದೈವ.. ಅಭಿನಂದನಾ ಗ್ರಂಥವನ್ನು ಬರೆಯಬೇಕಾದ ಕೈಯಲ್ಲಿ ಸ್ಮತಿ ಲೇಖನ ಬರೆಯುತ್ತಿರುವುದು ಕೈ ನಡುಗುವ ಕ್ಷಣ.  

1 comment: