Friday, January 15, 2010

’ಹಿರಿಯಣ್ಣ’ನ ಒಡನಾಟದ ನೆನಪು (ಕೊನೆಯ ಕಂತು)

ಸಾಮಾನ್ಯವಾಗಿ ಪದ್ಯ ಹೇಳಿದ ಬಳಿಕ 'ಬಚ್ಚುಂಡು' ಅಂತ ಹೇಳುತ್ತಿದ್ದ ನಾಯ್ಕರಂದು, 'ಆಟ ಪೊರ್ಲು ಆಯಿಜಾ' (ಅಟ ಒಳ್ಳೆಯದಾಗಲಿಲ್ಲವಾ) ಅಂತ ಅಭಿಪ್ರಾಯ ಕೇಳಿದರು. ಎಂದೂ ಅವರು ಆಟ ಕಳೆದಾದ ಬಳಿಕ ಹೀಗೆ ಕೇಳಿದವರಲ್ಲ. ಯಾರ ಮಾತಿಗೂ ಕಿವಿಗೊಡುವವರಲ್ಲ. ಚೌಕಿಯಲ್ಲಿ ಮಂಗಲವಾದ ನಂತರ ತನ್ನ ಚೀಲ ಹೆಗಲಿಗೆ ಹಾಕಿ ಹೊರಡುತ್ತಿದ್ದರು.

ದೇವಿಮಹಾತ್ಮೆ ಪ್ರಸಂಗದ ಗುಂಗಿನಲ್ಲೇ ಇದ್ದರು. ಸರಿ, ಸ್ನಾನ, ಉಪಾಹಾರ ಮುಗಿಸುತ್ತಿದ್ದಂತೆ, ಕೃ.ಶಾ.ಶಾಸ್ತ್ರಿಗಳು ಜೀಪಿನೊಂದಿಗೆ ಹಾಜರ್. ಸುಮಾರು ಎಂಟು ಗಂಟೆಗೆ ಮಂಗಳೂರಿಗೆ ನಮ್ಮ ಪ್ರಯಾಣ. ಅಂದು ಕಲಾವಿದ ಚೇಕೋಡು ಕೃಷ್ಣ ಭಟ್ಟರು ತಮ್ಮ ತಾಳಮದ್ದಳೆ ರೆಕಾರ್ಡಿಂಗ್ ಇಟ್ಟುಕೊಂಡಿದ್ದರು. ಅದರ ಮಧ್ಯೆ ನಾಯ್ಕರ ಮೇಲಿನ ಅಭಿಮಾನದಿಂದ ಒಂದು ಗಂಟೆ ಅವರ ವೆಚ್ಚದಲ್ಲೇ ನಮಗಾಗಿ ಬಿಟ್ಟುಕೊಟ್ಟಿದ್ದರು.

ಮಂಗಳೂರಿಗೆ ಹೋಗುವ ದಾರಿಮಧ್ಯದಲ್ಲಿ ಆಟದ್ದೇ ಸುದ್ದಿ. ಹಳೆಯ ನೆನಪುಗಳನ್ನು ನಾಯ್ಕರು ಬಿಚ್ಚುತ್ತಿದ್ದರು. ಅದರಲ್ಲಿ ಸಿಹಿಯಿತ್ತು, ಕಹಿಯಿತ್ತು. ಬದುಕಿನ ನಡೆಯಿತ್ತು. ಕುಟುಂಬದ ಸುಖ-ದುಃಖವಿತ್ತು.

ಮಂಗಳೂರು ತಲುಪಿದೆವು. ರೆಕಾರ್ಡಿಂಗ್ ರೂಂ ನಿಗದಿನ ಸಮಯಕ್ಕೆ ಸಿಕ್ಕಿತು. ಮದ್ದಳೆಗೆ ಪದ್ಯಾಣ ಜಯರಾಮ ಭಟ್ ಮತ್ತು ಚೆಂಡೆಗೆ ಪೆರುವಾಯಿ ನಾರಾಯಣ ಭಟ್ಟರ ಸಾಥಿ. ಒಂದೊಂದು ಪದ್ಯವನ್ನು ಬಹಳ ಚೆನ್ನಾಗಿ ಹಾಡಿದರು. ಒಂದು ಗಂಟೆ ಸ್ಟುಡಿಯದೊಳಗೆ ಕಳೆದದ್ದೇ ಗೊತ್ತಾಗಿಲ್ಲ. ದಕ್ಷಾಧ್ವರ, ಕರ್ಣಾವಸಾನ, ತಮ್ಮ ಗುರು ಅಜ್ಜನಗದ್ದೆ ಗಣಪಯ್ಯನವರ ಕೆಲವು ಕೃತಿಗಳು, ದೇವೇಂದ್ರನ ಒಡ್ಡೋಲಗ.. ಹೀಗೆ 'ವೆರೈಟಿ' ಪದ್ಯಗಳಿದ್ದುವು.

ಕ್ಯಾಸೆಟ್ಟಿನ ಕವರನ್ನು ವರ್ಣದಲ್ಲಿ ಚೇಕೋಡು ಕೃಷ್ಣ ಭಟ್ರು ಉಚಿತವಾಗಿ ಮುದ್ರಸಿ ಕೊಟ್ಟಿದ್ದರು. ಒಳಗಿನ ಧ್ವನಿಸುರುಳಿ ವೆಚ್ಚವನ್ನು ಮಾತ್ರ ಪಡೆದಿದ್ದರು. ಆದರೆ ವಿಧಿ ಹೇಗೆ ಮನುಷ್ಯನನ್ನು ಅಟ್ಟಿಸಿಕೊಂಡು ಬರುತ್ತದೆ ಅಂತ! ಉತ್ತಮ ಧ್ವನಿಮುದ್ರಣದ ಸ್ಟುಡಿಯೋ. ಯಾವುದೆ ಲೋಪದೋಷಗಳಿಲ್ಲ. ಇಂತಹ ಸ್ಟುಡಿಯೋದಲ್ಲಿ ನಾಯಕರು ಹಾಡಿದಾಗ ಮದ್ದಳೆಯ ದನಿ 'ಇಳಿಸ್ವರ'ದಲ್ಲಿ ರೆಕಾರ್ಡಿಂಗ್ ಆಗಬೇಕೇ? ಏನೇನು 'ಸರ್ಕಸ್' ಮಾಡಿದರೂ ಸರಿಮಾಡಲಾಗಲೇ ಇಲ್ಲ! 'ಅಷ್ಟಾದರೂ ಆಯಿತಲ್ಲಾ' ಅಂತ ಸಮಾಧಾನ.

24-3-1999. ನಾಯ್ಕರ ಶಿಷ್ಯ ದಾಮೋದರ ಪಾಠಾಳಿಯವರು ಮಿತ್ತಡ್ಕದಲ್ಲಿ ಕಟೀಲು ಮೇಳದ ಆಟ ಆಡಿಸಿದ್ದರು. ಅಂದು ಧ್ವನಿಸುರಳಿಯ ಬಿಡುಗಡೆ ಸಮಾರಂಭ. ವೇದಿಕೆ ಸಂಪನ್ನಗೊಂಡಿತ್ತು. ಗಣ್ಯರು ಉಪಸ್ಥಿತರಿದ್ದರು. ಧ್ವನಿಸುರುಳಿಯನ್ನು ಹಿರಿಯ ಮತ್ತು ಖ್ಯಾತ ಭಾಗವತರಾದ ಬಲಿಪ ನಾರಾಯಣ ಭಾಗವತರು ಬಿಡುಗಡೆ ಮಾಡಿ, ಶುಭ ಹಾರೈಸಿದ್ದರು.

ಬಲಿಪರು ತಮ್ಮ ಮಾತು ಮುಗಿಸಿ ಇನ್ನೇನು ತಮ್ಮ ಆಸನದಲ್ಲಿ ಕುಳಿತುಕೊಳ್ಳಬೇಕು ಎಂದಿರುವಾಗ, ಚನಿಯ ನಾಯ್ಕರು ಅವರ ಬಳಿಗೆ ಹೋಗಿ, ನಮಸ್ಕರಿಸಿ, ಅವರಿಗೆ 'ತಾನು ಬಳಸುತ್ತಿದ್ದ ಜಾಗಟೆ ಮತ್ತು ಜಾಗಟೆ ಕೋಲು' ಪ್ರದಾನ ಮಾಡಿದರು! ಈ ಜಾಗಟೆ ಕೋಲು ಚನಿಯರಿಗೆ ಪರಂಪರಾ ಹಿನ್ನೆಲೆಯ ಭಾಗವತರಿಗೇ ನೀಡುವುದು ಔಚಿತ್ಯವೆಂದು ಬಗೆದು ಬಲಿಪರಿಗೇ ನೀಡಿರಬೇಕು. ಅಂದಿನಿಂದ ಚನಿಯರ ಜಾಗಟೆ ಹಿಡಿದೇ ಇಲ್ಲ!

ನನ್ನ ತೀರ್ಥರೂಪರು ಆಸ್ಪತ್ರೆಯಲ್ಲಿ ಬದುಕಿನ ಇಳಿಲೆಕ್ಕದಲ್ಲಿದ್ದರು. ಅವರನ್ನು ನೋಡಲು ಬಂದ ಚನಿಯರು ಮಾತನಾಡುತ್ತಿದ್ದಂತೆ, ಕಣ್ಣನ್ನು ಒರೆಸಿಕೊಳ್ಳುತ್ತಿದ್ದರು. ನಮ್ಮ ಸಂಬಂಧಿಕರಲ್ಲೂ ಬಾರದ ಕಣ್ಣೀರು ಚನಿಯರಲ್ಲಿ ಬಂದಿತ್ತು.

ಚನಿಯರ ಆರೋಗ್ಯದ ಕ್ಷೀಣತೆಯನ್ನ ಕಂಡು ಅಡೂರು ಶ್ರೀಧರ ರಾಯರು ಪರೀಕ್ಷೆಗಾಗಿ ಹುಬ್ಬಳ್ಳಿಯ ಅವರ ಮಗನ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷೆ ಮುಗಿಸಿ ಒಂದಷ್ಟು ಮಾತ್ರೆಗಳನ್ನು ಕಟ್ಟಿಕೊಟ್ಟು ಅವರ ಮನೆಗೆ ಬಿಟ್ಟು, ನೇರವಾಗಿ ನಮ್ಮನೆಗೆ ಬಂದರು. 'ಕೆಲಸ ಕೆಟ್ಟು ಹೋಯಿತು. ಭಾಗವತರಿಗೆ ಗಂಟಲಿನ ಸಮಸ್ಯೆ. ಅದಿನ್ನು ಗುಣವಾಗದು. ಎರಡೇ ತಿಂಗಳು' ಎಂದು ಕಣ್ಣೀರು ಹಾಕಿದರು. ಈ ವಿಚಾರ ಅವರಿಗೆ ಗೊತ್ತಿಲ್ಲ.

ದಿನ ಸರಿಯುತ್ತಿತ್ತು. ಒಂದೆರಡು ಬಾರಿ ಅವರನ್ನು ನೋಡಿ ಬಂದೆವು. ಕೃಶರಾಗಿದ್ದರು. ಮಾತುಕತೆಯೂ ದಿನೇ ದಿನೇ ಕಡಿಮೆಯಾಗುತ್ತಿತ್ತು. ಜತೆಗೆ ಆಹಾರ.. ನಿದ್ರೆ.. ಎಲ್ಲವೂ. 'ಆಯಿತು, ನಮ್ಮ ಭಾಗವತರ ಕತೆ ಮುಗಿಯಿತು' ಎನ್ನುತ್ತಾ ಬಂದೆವು.

ಮರುದಿನ ಅಂದರೆ 7-8-1999. 'ಚನಿಯ ನಾಯ್ಕರು ಹೋದರು' - ಫೋನ್ ಕರೆ. 20-25 ವರುಷದಿಂದ ಮನದಲ್ಲೆಲ್ಲಾ ಸುಳಿದಾಡುತ್ತ ಇದ್ದ ನಾಯ್ಕರ ಬದುಕಿನ ಅಂತ್ಯ. ಈ ವಿಚಾರವನ್ನು ಪೆರಾಜೆಯ ಅವರ 'ಅಭಿಮಾನಿಗಳೆಂದು ಗುರುತಿಸಿಕೊಂಡ' ಕೆಲವರನ್ನು ವಿಚಾರ ತಿಳಿಸಿದಾಗ 'ಹೌದಾ. ಛೇ.' ಉತ್ತರಕ್ಕೇ ಸೀಮಿತ.

ಚನಿಯ ನಾಯ್ಕರು ನನಗೆ ಬಂಧುವಲ್ಲ. ಆದರೆ ಬಂಧುಗಳಿಗಿಂತ ಹೆಚ್ಚಿನ ಅಭಿಮಾನವಿತ್ತು. ಅವರು ನನಗೆ ಅಣ್ಣನಲ್ಲ. ಆದರೆ ಒಡಹುಟ್ಟಿದ ಅಣ್ಣನಂತೆ ಅವರ ವ್ಯವಹಾರವಿತ್ತು. ನಾಕರು ರಕ್ತಸಂಬಂಧಿಯಲ್ಲ. ಆದರೆ ನನ್ನ ರಕ್ತಸಂಬಂಧಿಕರಿಗಿಂತಲೂ ಹೆಚ್ಚಿನ ಪ್ರೀತಿ-ವಿಶ್ವಾಸವಿತ್ತು.

ಚನಿಯರು ಕುಟುಂಬದ ಓರ್ವ ಸದಸ್ಯನಂತಿದ್ದರು. ಹಾಗಾಗಿ ಅವರ ಮರಣದಂದು ನನಗರಿವಿಲ್ಲದೇ ಬಿದ್ದ ನಾಲ್ಕು ಹನಿ ಕಣ್ಣೀರು ಅವರಿಗೆ ಸಂದ ಶೃದ್ಡಾಂಜಲಿ. ಸಂಬಂಧಿಕರು ಅಸ್ತಂಗತರಾದಾಗಲೂ ಅಷ್ಟು ಅಧೀರನಾಗಲಿಲ್ಲ.

ಚನಿಯರು ದೂರವಾಗಿ ಹನ್ನೆರಡು ವರುಷವಾಯಿತು. ಆದರೆ ಅವರ ಒಡನಾಡ, ನೆನಪು ನಿತ್ಯ ಜೀವಂತ. ಭಾಗವತಿಕೆಯಲ್ಲಿ ಯಾರೂ ಅನುಕರಿಸದ ಛಾಪು ಮೂಡಿಸಿದ ಚನಿಯರು ಯಕ್ಷಗಾನ ಮರೆಯದ ಯಕ್ಷಕೋಗಿಲೆ.

2 comments:

  1. Very nice series of article on very good artist. Thanks a lot. Please continue the good work.

    ReplyDelete
  2. ಕಾರಂತರೇ..ಅವರ ಒಂದೆರಡು ಹಾಡುಗಳನ್ನು ಇದರ ಜೊತೆಗೆ ಹಾಕಲು ಸಾಧ್ಯವೇ? ಪ್ರಯತ್ನಿಸಿ. ಸಾಧ್ಯವಾದಲ್ಲಿ ಚೆನ್ನಾಗಿತ್ತು.ಅಲ್ವೇ?
    ಭಾವಪೂರ್ಣ ಲೇಖನ..

    ReplyDelete