Sunday, April 11, 2010

ಸಂಮಾನದಿಂದ.. ಡಾಕ್ಟರೇಟ್ವರೆಗೆ...

ಹಗಲಿಡೀ ಕಾಲ್ನಡಿಗೆ. ರಾತ್ರಿಯಿಡೀ ಜಾಗರಣೆ. ಕಾಸು ಸಿಕ್ಕರೆ ಪುಣ್ಯ! ಹೊತ್ತು ತಪ್ಪಿ ಭೋಜನ. ಅಪರೂಪಕ್ಕೊಮ್ಮೆ ಸುಗ್ರಾಸ. ಆಟ ಆಡಿಸುವಾತ ಉಳ್ಳವನಾದರೆ ಕೈಗೆ ನಾಲ್ಕಾಣೆ ಬಿದ್ದೀತು. ಆಗದು ಲಕ್ಷಕ್ಕೂ ಹಿರಿದು!

ಆಟವನ್ನು ಮೊದಲೇ ಬುಕ್ ಮಾಡುವುದು ವಿರಳ. ಕಾಲ್ನಡಿಗೆಯಲ್ಲಿ ಸಾಗುತ್ತಾ, ದೊಡ್ಡ 'ಮನೆ-ಮನೆತನ' ಸಿಕ್ಕರೆ ಅವರಲ್ಲಿ ವಿನಂತಿಸಿ, ತಾಳಮದ್ದಳೆ. ಒಂದು ಹೊತ್ತಿನ ಊಟ ಆಯಿತಲ್ವಾ! ಸ್ವಲ್ಪ ಹೆಚ್ಚೆ ಮನೆಯಜಮಾನನನ್ನು ಉಬ್ಬಿಸಿ, ರಾತ್ರಿಯ ಆಟಕ್ಕೆ ವೀಳ್ಯ ಪಡೆಯುವುದೂ ಇದೆ! ಕೇವಲ ಇಪ್ಪತ್ತೈದು ರೂಪಾಯಿ ವೀಳ್ಯ! ಆಟ 'ರೈಸಿದರೆ' ಮರುದಿವಸವೂ ಠಿಕಾಣಿ.

ಹೊಟ್ಟೆ ತುಂಬುವುದು ಮುಖ್ಯ. ಸಿಕ್ಕಿದ ಪುಡಿಗಾಸು ಮನೆವಾರ್ತೆಗೆ. ರಜೆ ಎಂಬುದಿಲ್ಲ. ಜ್ವರ ಬಂದರೂ ಚೌಕಿಯಲ್ಲೇ ಇರಬೇಕೇ ವಿನಾ, ರಜೆ ಮಾಡಿ ಮನೆಗೆ ಹೋಗುವಂತಿಲ್ಲ! ಒಂದು ಆಟದಿಂದ ಮತ್ತೊಂದು ಕಡೆಗೆ ಹತ್ತೋ-ಇಪ್ಪತ್ತೋ ಮೈಲು ಅಂತರ. ತಲಪಿದ ನಂತರಷ್ಟೇ ಸ್ನಾನ-ನಿತ್ಯಾನುಷ್ಠಾನ. ಭೋಜನವಾಗುವಾಗ ಗಂಟೆ ನಾಲ್ಕು ಮೀರುತ್ತಿತ್ತು. ಕೆಲವು ಸಲ ಮಧ್ಯಾಹ್ನ-ರಾತ್ರಿಯದು ಒಟ್ಟಿಗೆ ಆಗುವುದೂ ಇದೆ! ಸಣ್ಣ 'ಕೋಳಿನಿದ್ದೆ' ಪೂರೈಸಿ, ರಾತ್ರಿಯ ವೇಷಕ್ಕೆ ಅಣಿಯಾಗಬೇಕಾಗುತ್ತಿತ್ತು. ಅದೂ ಒಂದೇ ವೇಷವಲ್ಲ, ರಾತ್ರಿಯಿಡೀ-ಪಾಲಿಗೆ ಬಂದುದೆಲ್ಲವನ್ನೂ ನಿರ್ವಹಿಸಬೇಕು.

ಹಗಲಿನ ತನುಶ್ರಮ ಎಷ್ಟೋ ಸಲ ವೇಷಗಾರಿಕೆಯಲ್ಲಿ ಪ್ರತಿಫಲಿತವಾದುದಿದೆ. ಏನು ಮಾಡೋಣ. ಈಗಿನ ಹಾಗೆ ಸಾರಿಗೆಯಿರಲಿಲ್ಲ. ದೂರವಾಣಿಯಿಲ್ಲ. ಆಟಕ್ಕೆಂತ ಮನೆಯಿಂದ ಹೊರಟರೆ ಎರಡೋ, ಮೂರೋ ತಿಂಗಳು ಸಂಚಾರ. ನಮ್ಮ ಜವ್ವನದ ಕಾಲದ ತಿರುಗಾಟವನ್ನು ನೆನೆಸಿಕೊಂಡರೆ, ಈಗಿನವರಿಗೆ ಸುಖ ಸುಪ್ಪತ್ತಿಗೆ! ಆಟದಿಂದ ಆಟಕ್ಕೆ ಬಸ್ಸು ವ್ಯವಸ್ಥೆಯಿದೆ. ವಸತಿ-ಆಸನ ವ್ಯವಸ್ಥೆ ತುಂಬಾ ಸುಧಾರಿಸಿದೆ. ಕಲಾವಿದನ ಬದುಕು ಮೊದಲಿಗಿಂತ ಭಿನ್ನ. ಮಾನ-ಸಂಮಾನಗಳು ಅರಸಿಕೊಂಡು ಬರುತ್ತಿವೆ. ಸಮಾಜ ಕಲಾವಿದನನ್ನು ಗುರುತಿಸುತ್ತದೆ-ಮಾನಿಸುತ್ತದೆ. 'ಛೇ.. ನಾನು ತಿರುಗಾಟ ಮಾಡುತ್ತಿದ್ದಾಗ ಈಗಿನ ವ್ಯವಸ್ಥೆಗಳು ಬೇಕಿತ್ತು.. ಆಟದ ಕತೇನೇ ಬೇರಿತ್ತು..'

- ಹೀಗೆ ತನ್ನ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟವರು ಬಡಗು ತಿಟ್ಟಿನ ಹಿರಿಯ ಸ್ತ್ರೀಪಾತ್ರಧಾರಿ ಮಾರ್ಗೋಳಿ ಗೋವಿಂದ ಸೇರಿಗಾರ್. ಈ ಸಾಲಿನ 'ಪಾತಾಳ ಪ್ರಶಸ್ತಿ'ಯ ಆಯ್ಕೆಯನ್ನು ತಿಳಿಸಲು ಅವರ ಕುಂದಾಪುರದ ಮನೆಗೆ ಕಾಲಿಟ್ಟಾಗ, ಎಂಭತ್ತನಾಲ್ಕರ ಮಾರ್ಗೋಳಿ ಯವರು ಇಪ್ಪತ್ತನಾಲ್ಕಕ್ಕೆ ಇಳಿದಿದ್ದರು! ಇಳಿ ವಯಸ್ಸಲ್ಲೂ ತುಂಬು ಉತ್ಸಾಹ. ಹಳೆಯ ಕಲಾದಿನಗಳ ಪುಟಗಳನ್ನು ಪುನಃ ಓದುವ ಹಂಬಲ. ಇತರರಿಗೂ ತಿಳಿಸುವ ಕಾತರ. ರಂಗದ ಹಳೆಯ ಸಂಪ್ರದಾಯಗಳಿಗೆ ಅವರೊಬ್ಬ 'ಅಥಾರಿಟಿ'.

ಬಡಗಿನ ಐವತ್ತು ದಶಕದ ಮೇಳದ ವ್ಯವಸಾಯದಲ್ಲಿ ಎರಡು ವರುಷ ಕೂಡ್ಲು ಮೇಳದಲ್ಲಿ ತಿರುಗಾಟ ಮಾಡಿರುವ ಮಾರ್ಗೋಳಿ ಯವರು, ಇಲ್ಲಿನ ದೇವಿ ಮಹಾತ್ಮೆ ಪ್ರಸಂಗವನ್ನು ಅಭ್ಯಸಿಸಿ, ಬಡಗಿನಲ್ಲಿ ಇನ್ನಷ್ಟು ಒಪ್ಪ-ಓರಣಗೊಳಿಸಿದರು. 'ಶ್ರೀದೇವಿ' ಪಾತ್ರಕ್ಕೆ ಹೊಸ ಭಾಷೆಯನ್ನೇ ಬರೆದರು. ಭಾವವನ್ನು ಕೊಟ್ಟರು. ಸ್ವ-ಭಾವವನ್ನು ನೀಡಿದರು.

ಒಟ್ಟಿನಲ್ಲಿ - ನಮ್ಮಲ್ಲಿ ಪಾತಾಳ ವೆಂಕಟ್ರಮಣ ಭಟ್, ಕೋಳ್ಯೂರ್ ರಾಮಚಂದ್ರ ರಾವ್ ಹೇಗೋ, ಬಡಗಿನಲ್ಲಿ ಮಾರ್ಗೋಳಿ ಗೋವಿಂದ ಸೇರಿಗಾರ್. ಎಲ್ಲರೂ ಅಪ್ಪಟ ಚಿನ್ನ.

ಡಾಕ್ಟರೇಟ್

ಹಾಂ.. ಮರೆತೇ ಬಿಟ್ಟೆ. ಕೋಳ್ಯೂರ್ ರಾಮಚಂದ್ರ ರಾಯರಿಗೆ ಮಂಗಳೂರು ವಿಶ್ವವಿದ್ಯಾನಿಲಯವು 'ಡಾಕ್ಟರೇಟ್' ಪದವಿ ನೀಡಿ ಗೌರವಿಸಿದೆ. ಇನ್ನವರು ಡಾ.ಕೋಳ್ಯೂರು ರಾಮಚಂದ್ರ ರಾವ್. ಇದು ಯಕ್ಷಗಾನಕ್ಕೆ ಸಂದ ಗೌರವ.

ಕೀರ್ತಿಶೇಷ ಶೇಣಿ ಗೋಪಾಲಕೃಷ್ಣ ಭಟ್ಟರಿಗೆ 'ಡಾಕ್ಟರೇಟ್' ಪದವಿ ಬಂದಾಗ ಹಾಸಿಗೆಗಂಟಿದ್ದರು. ದೃಷ್ಠಿ ಮಂಜಾಗಿತ್ತು. ಮಾತು ತೊದಲುತ್ತಿತ್ತು. ಯಕ್ಷರಂಗದ ಒಂಟಿಸಲಗ ಒಂಟಿಯಾದ ಹೊತ್ತು. 'ಹತ್ತು ವರ್ಷದ ಮೊದಲೇ ಈ ಪದವಿ ಬರುತ್ತಿದ್ದರೆ, ನಾನು ಡಾ.ಶೇಣಿ ಅಂತ ಸೈನ್ ಮಾಡುತ್ತಿದ್ದೆ. ಲೆಟರ್ಹೆಡ್ ಮಾಡಿಸಿಕೊಳ್ಳುತ್ತಿದ್ದೆ. ಈಗ ಬಂದು ಏನು ಪ್ರಯೋಜನ' ಎಂದು ಮಾರ್ಮಿಕವಾಗಿ ಹೇಳಿದ್ದು ಮರೆಯದ ಮಾತು. ಬದುಕಿನ ಕೊನೆಯ ಕ್ಷಣದಲ್ಲೂ ಪುಟಿಯುತ್ತಿದ್ದ ಜೀವನೋತ್ಸಾಹ - ಕಾಡುವ ನೆನಪು.
ಸಂಮಾನ, ಪುರಸ್ಕಾರ, ಪದವಿಗಳು - ಕಲಾವಿದ ಸಕ್ರಿಯನಾಗಿದ್ದಾಗಲೇ ಮಡಿಲಿಗೆ ಬೀಳಬೇಕು. ಆಗ ಅದನ್ನು ಅನುಭವಿಸುವ, ಆನಂದಿಸುವ, ಖುಷಿಪಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕೋಳ್ಯೂರ್ ಅವರಿಗೆ ಸಂದ ಗೌರವ ಸಕಾಲಿಕ. ಡಾ.ಕೋಳ್ಯೂರ್ರಿಗೆ ಅಭಿನಂದನೆಗಳು.

'ಪುತ್ತೂರು ಪ್ರಶಸ್ತಿ'

ಪುತ್ತೂರು ನಾರಾಯಣ ಹೆಗಡೆ ಅಂದರೆ ಸಾಕು, ನಮ್ಮ ಕಣ್ಣೆದುರಿಗೆ ಸಾಲು ಸಾಲು ಖಳ ಪಾತ್ರಗಳು ಮಿಂಚಿ ಮರೆಯಾಗುತ್ತವೆ. ಅವರು ಕಾಲವಾಗಿ ಸುಮಾರು ಎರಡು ದಶಕಗಳು ಸಂದರೂ ಪಾತ್ರಗಳು ಮನಃಪಟಲದಿಂದ ಮಾಸಿಲ್ಲ. ಮಸುಕಾಗಿಲ್ಲ. ಆ ಕಂಸ, ಜರಾಸಂದ, ಮಾಗಧ, ಭೌಮಸುರ, ಅಣ್ಣಪ್ಪ.. ಇವೆಲ್ಲಾ ಹೆಗಡೆಯವರಲ್ಲಿ ಮರುಹುಟ್ಟು ಪಡೆದ ದಿನಗಳು ಈಗ 'ಕಾಲದ ಕಥನ'.

ಹೆಗಡೆಯವರ ಚಿರಂಜೀವಿಗಳು ತಮ್ಮ ತೀರ್ಥರೂಪರ ನೆನಪಿಗಾಗಿ 'ಪುತ್ತೂರು ಪ್ರಶಸ್ತಿ'ಯನ್ನು ಸ್ಥಾಪಿಸಿದ್ದು, 'ಯಕ್ಷ ಸಂಜೀವಿನಿ ಪ್ರತಿಷ್ಠಾನ' ಮೂಲಕ ವರುಷಕ್ಕೊಮ್ಮ ಹಿರಿಯ ಕಲಾವಿದರಿಗೆ ಪ್ರದಾನ ಮಾಡುವ ಸಂಕಲ್ಪ ಮಾಡಿರುವುದು ನಿಜಕ್ಕೂ ಶ್ಲಾಘನೀಯ.
ಎಪ್ರಿಲ್ 11ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ಗದ್ದೆಯಲ್ಲಿ ನಡೆಯುವ ಶ್ರೀ ಧರ್ಮಸ್ಥಳ ಮೇಳದ ರಂಗವೇದಿಕೆಯಲ್ಲಿ, ಕಡತೋಕ ಮಂಜುನಾಥ ಭಾಗವತರಿಗೆ ಪ್ರಥಮ ಪ್ರಶಸ್ತಿಯ ಪ್ರದಾನವಾಗಲಿದೆ.

ಕೊನೆಯದಾಗಿ - ಖ್ಯಾತ ಹಾಸ್ಯಗಾರ ಪೆರುವೋಡಿ ನಾರಾಯಣ ಭಟ್ಟರಿಗೆ ಈ ಸಾಲಿನ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಅರಸಿ ಬಂದಿದೆ. ಹೀಗೆ ಪಾತಾಳ ಪ್ರಶಸ್ತಿ, ಕೋಳ್ಯೂರ್ಗೆ ಡಾಕ್ಟರೇಟ್, ಪುತ್ತೂರು ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ.. ಒಂದೇ ಎರಡೇ. ಕಲೆಯನ್ನು, ಕಲಾವಿದನನ್ನು ಪ್ರೀತಿಸುವವರಿಗೆ ಇಷ್ಟವಾಗುವ ಸಂಗತಿಗಳಿವು.

No comments:

Post a Comment