Thursday, April 8, 2010

ಪಾತಾಳ ಪ್ರಶಸ್ತಿ ಪುರಸ್ಕೃತ ಮಾರ್ಗೋಳಿ ಗೋವಿಂದ ಸೇರಿಗಾರ್

'ಹಳೆಯ ಪ್ರಸಂಗಗಳು ರಂಗದಿಂದ ದೂರವಾಗುತ್ತಿರುವುದನ್ನು ನೋಡಿ ಬೇಸರವಾಗುತ್ತದೆ. ಅದರಲ್ಲಿರುವಷ್ಟು ಸತ್ವ, ಸತ್ಯ, ಬದುಕಿಗೆ ಪೂರಕವಾಗಿರುವ ಹೂರಣ ಮತ್ತು ಕಲಾಗಾರಿಕೆ ಆಧುನಿಕ ಪ್ರಸಂಗಗಳಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಯಕ್ಷಗಾನದ ವೈಭವಕ್ಕೆ ಮಸುಕಾಗಿದೆ' - ಎಂಬ ದುಃಖ ಬಡಗು ತಿಟ್ಟಿನ ಖ್ಯಾತ ಸ್ತ್ರೀಪಾತ್ರಧಾರಿ ಮಾರ್ಗೋಳಿ ಗೋವಿಂದ ಸೇರಿಗಾರ್ ಅವರದು.

ಐವತ್ತು ವರುಷಗಳ ರಂಗ ಬದುಕಿನಲ್ಲಿ ತೆಂಕು-ಬಡಗಿನುದ್ದಕ್ಕೂ ತಿರುಗಾಟ ಮಾಡಿದ ಮಾರ್ಗೋಳಿಯವರು ಬಡಗು ತಿಟ್ಟಿನ ಪ್ರಾತಿನಿಧಿಕ ಕಲಾವಿದ. ಬಡಗಿನ ಹಳೆಯ ಕ್ರಮಗಳ ಬಗ್ಗೆ ಅಧಿಕೃತ ದನಿ. ನಾಟ್ಯದಿಂದ ರಂಗಸೂಕ್ಷ್ಮದ ವರೆಗಿನ ಸಂಗತಿಗಳಿಗೆ ಈ ಕಾಲಘಟ್ಟದಲ್ಲಿ ಮಾರ್ಗೋಳಿಯವರು ಯಕ್ಷಗಾನಕ್ಕೆ ಅನಿವಾರ್ಯ.

ಮಾರ್ಗೋಳಿಯವರಿಗೀಗ ಎಂಭತ್ತನಾಲ್ಕು. ರಂಗ ಬದುಕಿನ ಉಚ್ಛ್ರಾಯ ಕಾಲದ ನೆನಪು ಅವರ ಇಳಿವಯಸ್ಸಿನ ಲವಲವಿಕೆಯ ಗುಟ್ಟು. ತನ್ನ ಹದಿಮೂರನೇ ವರುಷದಿಂದ ಬಣ್ಣದ ಬದುಕು ಆರಂಭ. ಕುಂದಾಪುರದ ಬಸ್ರೂರಿನಲ್ಲಿ ನಾಲ್ಕನೇ ತರಗತಿ ತನಕ ವಿದ್ಯಾಭ್ಯಾಸ. ಬದುಕಿನ ಅನಿವಾರ್ಯತೆಯೊಂದಿಗೆ ಬೆಳೆದು, ಬಡಗುತಿಟ್ಟಿನ ಬಹುತೇಕ ಖ್ಯಾತರೊಡನೆ ಪಾತ್ರವಹಿಸಿ, ತಾನೂ ಗಟ್ಟಿಯಾಗಿ ರಂಗದ ಸಾರಸರ್ವಸ್ವವನ್ನುಂಡ ಅಪರೂಪದ ಕಲಾಗಾರಿಕೆ.

ಗುರು ವೀರಭದ್ರ ನಾಯಕ್, ಕೊಕ್ಕರ್ಣೆ ಗುಂಡು ನಾಯಕ್, ನರಸಿಂಹ ಕಮ್ತಿ.. ಮೊದಲಾದ ಆಢ್ಯರ ಗರಡಿಯಲ್ಲಿ ತಿದ್ದಿ-ತೀಡಿದ ಅಪ್ಪಟ ಪ್ರತಿಭೆ. ತೆಂಕುಟ್ಟಿನಲ್ಲಿ ಪ್ರಸಿದ್ಧವಾದ 'ದೇವಿ ಮಹಾತ್ಮೆ' ಪ್ರಸಂಗದ 'ಶ್ರೀದೇವಿ' ಪಾತ್ರಕ್ಕೆ ಬಡಗಿನ ರಂಗದಲ್ಲಿ ಜೀವತುಂಬಿ, ಅದಕ್ಕೆ ಪ್ರತ್ಯೇಕವಾದ ಎತ್ತರದ ಸ್ಥಾನ ರೂಪಿಸಿದ ಕೀರ್ತಿ ಮಾರ್ಗೋಳಿಯವರಿಗೆ ಸಲ್ಲಬೇಕು.

ಮಂದಾರ್ತಿ ಮೇಳದಿಂದ ತಿರುಗಾಟ (1939)ಆರಂಭ. ಮುಂದೆ ಸೌಕೂರು, ಸಾಲಿಗ್ರಾಮ, ಇಡಗುಂಜಿ, ಪೆರ್ಡೂರು, ಅಮೃತೇಶ್ವರೀ, ಕಮಲಶಿಲೆ, ಕೂಡ್ಲು, ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ. ಈ ಮಧ್ಯೆ ಅಮೃತೇಶ್ವರಿ ಮೇಳದ ಯಜಮಾನಿಕೆ ಮಾಡಿದ ಅನುಭವ. 'ಮಾರಣಕಟ್ಟೆ ಮೇಳವೊಂದರಲ್ಲೇ ಮೂವತ್ತಾರು ತಿರುಗಾಟ ಮಾಡಿದ್ದೇನೆ' ಎನ್ನುತ್ತಾ, ಮೇಳದ ತಿರುಗಾಟದ ರಸನಿಮಿಷಗಳನ್ನು ಹಂಚಿಕೊಳ್ಳುತ್ತಾರೆ.

ಏರುಜವ್ವನದದ ಇವರ ಸ್ತ್ರೀಸಹಜ ಒನಪು-ಒಯ್ಯಾರಗಳ ಪಾತ್ರಗಳನ್ನು ಈಗಲೂ ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ. ನಾಲ್ಕೈದು ದಶಕದ ಹಿಂದೆ ಕುಂಬಳೆಯಲ್ಲಿ ಜರುಗಿದ 'ಪಂಚವಟಿ' ಪ್ರಸಂಗದ 'ಮಾಯಾಶೂರ್ಪನಖಿ'ಯ ಪಾತ್ರವನ್ನು ರಂಗದಲ್ಲಿ ಬಿಡಿ, ಚೌಕಿಯಲ್ಲೇ ನೋಡಲು ಜನ ಮುಗಿಬೀಳುತ್ತಿದ್ದರಂತೆ. ಚೌಕಿಯಿಂದ ರಂಗಸ್ಥಳಕ್ಕೆ ಹೋಗುವ ದಾರಿಯ ಇಕ್ಕೆಡೆಯಲ್ಲೂ ಇವರಿಗೆ ರಕ್ಷಣೆ ಒದಗಿಸಬೇಕಾದ ಪ್ರಸಂಗ ಬಂದಿತಂತೆ. ಈ ಘಟನೆ ಹೇಳುವಾಗ 84ರ ಮಾರ್ಗೋಳಿಯರು ನಾಚಿ ನೀರಾಗಿ 24ರ ಯುವಕರಾಗುತ್ತಾರೆ!

ಮಾರ್ಗೋಳಿಯವರ ಕಸೆ ಸ್ತ್ರೀಪಾತ್ರಗಳಲ್ಲಿ ಪ್ರತ್ಯೇಕವಾದ ಛಾಪು. 'ಮೀನಾಕ್ಷಿ' ಮೆಚ್ಚಿನ ಪಾತ್ರ. ಶಶಿಪ್ರಭೆ, ಭ್ರಮರಕುಂತಳೆ, ಚಿತ್ರಾಂಗದೆ, ಚಿತ್ರಲೇಖೆ ಹೀಗೆ ಅನೇಕ ಪಾತ್ರಗಳ ಶಿಲ್ಪ ಎಂದೂ ಮಾಸದು! ದೇಹ ಮಾಗುತ್ತಿದ್ದಾಗ 'ನನ್ನ ಸ್ತ್ರೀಪಾತ್ರ ಇನ್ನು ಸಾಕು' ಎಂದು ಕಂಡದ್ದೇ ತಡ, ಪುರುಷ ಪಾತ್ರಗಳ ನಿರ್ವಹಣೆ. ರಾಮ, ಕೃಷ್ಣ, ಅರ್ಜುನ, ಸುಧನ್ವ, ತಾಮ್ರಧ್ವಜ, ಕಮಲಭೂಪ.. ಪಾತ್ರಗಳ ನಿರ್ವಹಣೆ. ಪಾತ್ರಗಳನ್ನು ನಿರ್ವಹಿಸಿ, ಪ1986ರಿಂದ ರಂಗನಿವೃತ್ತಿ. ಎಂಟು ವರುಷ ಮಹಿಳೆಯರಿಗೆ ತರಬೇತಿ ನೀಡಿ ತನ್ನದೇ ಆದ ಯಕ್ಷತಂಡವನ್ನು ರೂಪಿಸಿದ್ದರು.

'ಸ್ತ್ರೀವೇಷಧಾರಿಯಾದವನು ಭಾವಜೀವಿಯಾಗಿರಬೇಕು. ಜೀವನವನ್ನು ಅತ್ಯಂತ ಸೂಕ್ಷ್ಮವಾಗಿ ಅನುಭವಿಸುವವರಿಗೆ, ಗಮನಿಸುವವರಿಗೆ ಹೆಚ್ಚಿಗೆ ಒಲಿಯುತ್ತದೆ' ಎನ್ನುತ್ತಾರೆ. ಹದಿನೆಂಟು ದಿವಸದ ಮಹಾಭಾರತ, ಹನ್ನೆರಡು ದಿವಸದ ರಾಮಾಯಣ ಪ್ರಸಂಗಗಳ ಪ್ರದರ್ಶನಗಳನ್ನು ನೆನಪಿಸಿಕೊಳ್ಳುವಾಗ ಭಾವುಕರಾಗುತ್ತಾರೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಬೆಂಗಳೂರಿನ 'ಕಲಾಶ್ರೀ ಪ್ರಶಸ್ತಿ', 'ಯಕ್ಷ ಸವ್ಯಸಾಚಿ', 'ರಂಗಸ್ಥಳದ ರಾಣಿ' ಪುರಸ್ಕಾರಗಳಿಂದ ಭಾಜನರು. ಮಾರ್ಗೋಳಿಯವರು ಕಲಾಸೇವೆಗೆ ಈಗ 'ಪಾತಾಳ ಪ್ರಶಸ್ತಿ'. ಎಪ್ರಿಲ್ 15, ೨೦೧೦ರಂದು ರಾತ್ರಿ 8 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಮಾರ್ಗೋಳಿಯವರಿಗೆ ಪಾತಾಳ ಪ್ರಶಸ್ತಿಯ ಪ್ರದಾನ.

No comments:

Post a Comment