Thursday, April 29, 2010

ಹಳ್ಳಿ ಸೊಗಸಿನ ಕಲಾವರಣ

ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನದ 'ಸಾವಿರ ಸಂಭ್ರಮ'ವು ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಸಂಪನ್ನಗೊಂಡಿತು. ಅಂದು ಕೇರಳದ ಪ್ರಸಿದ್ಧ 'ಕಥಕ್ಕಳಿ'ಯ ಪ್ರದರ್ಶನವಿತ್ತು.

ಕಥಕ್ಕಳಿಗೂ ಹಿಮ್ಮೇಳವಿದೆ ತಾನೆ. ಅದರ ಹಿಮ್ಮೇಳದವರು ಬರಿಮೈಯಲ್ಲಿ ರಂಗಸ್ಥಳಕ್ಕೆ ಬಂದಾಗ, ಓರ್ವ ಸುಶಿಕ್ಷಿತ ಮಹನೀಯ, 'ಛೇ.. ಇವರು ಕಾಲದಲ್ಲಿದ್ದಾರೆ... ಸಮವಸ್ತ್ರವನ್ನಾದರೂ ಧರಿಸಬಹುದಿತ್ತಲ್ಲಾ. ನಾವಿಷ್ಟು ಮಂದಿ ಪ್ರೇಕ್ಷಕರಿದ್ದಾಗ ಬರಿಮೈಯಲ್ಲಿ ರಂಗಕ್ಕೆ ಬರುವುದು ಆಶ್ಲೀಲವಲ್ವಾ' ತಮ್ಮ ಮಾತನ್ನು ಇತರರು ಕೇಳಿಸಿಕೊಳ್ಳಲೇಬೇಕು ಎಂಬ ಹಠದಲ್ಲಿದ್ದಂತೆ ವರ್ತಿಸುದ್ದರು.

ಕಥಕ್ಕಳಿಯ ಹಿಮ್ಮೇಳ ಕಲಾವಿದರು 'ಬರಿಮೈ'ಯಲ್ಲಿ ಬಂದಿರುವುದು ಇವರಿಗೆ ಅಶ್ಲೀಲ! ಇಂತಹ 'ಅಪೂರ್ವ ಆಲೋಚನೆ' ಅಲ್ಲಿ ಸೇರಿದ್ದ ಬೇರ್ಯಾವ ವಿದ್ವಾಂಸರಿಗೂ ಹೊಳೆಯಲೇ ಇಲ್ಲ. ಅದು ಆ ಕಲೆಯ ಸೊಗಸು-ಸೊಗಡು. ಬಹುಶಃ ಕಥಕ್ಕಳಿಯ ಪರಿಚಯವಿರುತ್ತಿದ್ದರೆ, ನೋಡಿರುತ್ತಿದ್ದರೆ ಪ್ರಾಯಃ ಅವರು ಹೀಗನ್ನುತ್ತಿರಲಿಲ್ಲವೋ ಏನೋ? ಬಿಳಿವಸ್ತ್ರ, ಹಣೆಯಲ್ಲಿ ಭಸ್ಮ-ತಿಲಕ ಧರಿಸಿ, ವಾದನ ಪರಿಕರಗಳೊಂದಿಗೆ ರಂಗದಲ್ಲಿ ನಿಂತಾದ ಕಥಕ್ಕಳಿಯ ಲೋಕವೊಂದು ಅನಾವರಣಗೊಳ್ಳುತ್ತದೆ. ಆದರೂ ಅವರ 'ಸಮವಸ್ತ್ರದ ಕಲ್ಪನೆ' ಆಲೋಚಿಸುವಂತಾದ್ದು.

ಭಾರತೀಯ ಕಲೆಗಳು ಇತ್ತೀಚೆನ ದಿನಗಳಲ್ಲಿ 'ಆದುನಿಕ ಸ್ಪರ್ಶಕ್ಕೆ' ಒಳಗಾಗುತ್ತಿವೆ. ಬಹುಶಃ ಕಥಕ್ಕಳಿಯ ಬಗ್ಗೆ 'ಬರಿಮೈ' ವಿಮರ್ಶೆಯನ್ನು ಮಾಡಿದ ಮಹನೀಯರು ಕೂಡಾ ಆಧುನಿಕ ಸ್ಪರ್ಶಕ್ಕೆ ಒಳಗಾಗಿರಬಹುದು. ಕಲೆಯನ್ನು ನೋಡುವ ನಮ್ಮ ಕಣ್ಣುಗಳಿಗೆ ಮೊದಲಾದ್ಯತೆಯಲ್ಲಿ ಚಿಕಿತ್ಸೆಯಾಗಬೇಕು ಅನ್ನಿಸುತ್ತದೆ. ಹೆಚ್ಚಿನ ಸಮಾರಂಭಗಳಲ್ಲಿ ನೋಡಿದ್ದೇನೆ - ವಸ್ತುವಿನೊಳಗೆ ಇಳಿಯದೆ, ಸುತ್ತಾಡದೆ 'ತಕ್ಷಣದ ಪ್ರತಿಕ್ರಿಯೆ' ನೀಡಿ ಸುಭಗನಂತೆ ಕಾಣಿಸಿಕೊಳ್ಳುವ ಮಂದಿಗಳನ್ನು!

ಇರಲಿ, ಯಕ್ಷಗಾನವನ್ನು ನೋಡಿದರೆ ಕೆಲವೊಂದು ವೇಷಭೂಷಣಗಳಲ್ಲಿ ಮಾತ್ರ ಯಕ್ಷಗಾನವನ್ನು ಗುರುತಿಸಬಹುದೇ ವಿನಾ, ಮತ್ತೆಲ್ಲಾ ಬಹುತೇಕ ಪರಿಷ್ಕಾರವಾಗಿದೆ. ಈ ಬದಲಾವಣೆ, ಪರಿಷ್ಕಾರವನ್ನು 'ಅಭಿವೃದ್ಧಿ' ಎಂದು ವ್ಯಾಖ್ಯಾನಿಸುತ್ತೇವೆ. ಕಾಲದ ಪರಿಮಾಣಕ್ಕೆ ತಕ್ಕಂತೆ ಚೌಕಟ್ಟಿನೊಳಗೆ ಬದಲಾವಣೆ ಗ್ರಾಹ್ಯ. ಬದಲಿಗೆ ಯಕ್ಷಗಾನ ಭಾಗವತಿಕೆಯಲ್ಲಿ ಜಾನಪದ ಹಾಡನ್ನೋ, ಹಿಂದಿ ಹಾಡಿನ ನಡೆಯನ್ನೋ ಬಳಸಿದರೆ 'ಆಟ ಮುಗಿಯುತ್ತದೆ- ಬೆಳಗಾಗುತ್ತದೆ' ಅಷ್ಟೇ.

ನಮ್ಮ ಹಳ್ಳಿಗಳಲ್ಲಿ ನಡೆಯುವ ಯಕ್ಷಗಾನ, ಯುವಕ ಮಂಡಲಗಳ ವಾರ್ಷಿಕೋತ್ಸವ, ಜಾತ್ರಾ ಸಮಯಗಳ ಸಾಂಸ್ಕೃತಿಕ ಸಮಾರಂಭಗಳಲ್ಲಿ ಹಳ್ಳಿ ಸೊಗಸಿದ್ದ ದಿನಗಳಿದ್ದುವು. ಹೇಳುವಂತಹ 'ಫಿನಿಶಿಂಗ್' ಇಲ್ಲದೆ, ಅಲ್ಲಲ್ಲಿನ ಸಂಪನ್ಮೂಲಗಳನ್ನು ಬಳಸಿ ಅಭಿವ್ಯಕ್ತಗೊಳ್ಳುತ್ತಿದ್ದುವು. ನಾಟಕವೊಂದು ನಿಶ್ಚಿತವಾದರೆ, ಒಂದೆರಡು ತಿಂಗಳ ಹಿಂದೆಯೇ ಅದಕ್ಕೆ ತಾಲೀಮು. ಸ್ಟೇಜ್ ಪ್ರಾಕ್ಟೀಸ್. ಯಕ್ಷಗಾನವಾದರೆ ಮೂರ್ನಾಲ್ಕು ತಿಂಗಳಿಂದಲೇ ತರಬೇತಿ-ಆಧ್ಯಯನ.

ಇಂತಹ ಸ್ಥಿತಿ ಬದಲಾಗಿದೆ. ಎಲ್ಲಾ ಕಡೆ 'ರೆಡಿ ಟು ಈಟ್'! ಜನಪ್ರಿಯತೆಯ ಗುಂಗು ಹಳ್ಳಿ ಪ್ರತಿಭೆಗಳನ್ನೂ ಬಿಟ್ಟಿಲ್ಲ. ಸಿನಿಮಾ ಢಾಂಢೂಂ ಹಾಡುಗಳು, ಕುಣಿತಗಳು, ಮೈಕುಲುಕಾಟ.. ಇತ್ಯಾದಿಗಳು ಹಳ್ಳಿ ಸ್ಟೇಜ್ಗಳನ್ನೂ ಬಿಟ್ಟಿಲ್ಲ. ಇದರಿಂದಾಗಿ ಪಾರಂಪರಿಕವಾಗಿ ನಡೆಯುತ್ತಿದ್ದ ನಾಟಕ, ಯಕ್ಷಗಾನ, ದೇವರನಾಮ.. ಗಳು ಮಸುಕಾಗಿವೆ.

ಮೊನ್ನೆ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅರುವತ್ತಾರನೇ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಈ ಎಲ್ಲಾ ವಿಚಾರಗಳು ಗಿರಕಿ ಹೊಡೆದುವು! ಕನ್ನಾಡು-ಕೇರಳದ ಗಡಿಯಂಚಿನ ಗ್ರಾಮ 'ಬನಾರಿ'. ಯಕ್ಷಗಾನದ ಪ್ರಾತಃಸ್ಮರಣೀಯ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ - ಆರೇಳು ದಶಕಗಳ ಹಿಂದೆ ಹುಟ್ಟು ಹಾಕಿದ ಸಾಂಸ್ಕೃತಿಕ ವೇದಿಕೆಯು ಬದುಕನ್ನರಳಿಸುವ ಉಪಾದಿ.

ಕೀರ್ತಿಶೇಷ ಗುಡ್ಡಪ್ಪ ಗೌಡರು ಒಮ್ಮೆ ಹೇಳಿದ್ದರು - 'ಬನಾರಿ ಸುತ್ತೆಲ್ಲಾ ಅಕ್ಷರಾಭ್ಯಾಸಿಗಳು ಕಡಿಮೆಯಿದ್ದ ಕಾಲದಲ್ಲಿ, ಕೈಹಿಡಿದು ಅಕ್ಷರ ಬರೆಸಿದವರು ವಿಷ್ಣು ಭಟ್ಟರು. ಹಿಂದೆಲ್ಲಾ ಋಷ್ಯಾಶ್ರಮದಲ್ಲಿರುವ ಗುರುಕುಲ ಮಾದರಿಯಂತಹುದನ್ನು ಬನಾರಿಯಲ್ಲಿ ಕಟ್ಟಿ, ಶಿಷ್ಯರನ್ನು ರೂಪಿಸಿ, ಅವರ ಮೂಲಕ ತನ್ನಾಶಯದ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸುತ್ತಿದ್ದ ಪರಿ ಅನ್ಯಾದೃಶ'.
ಬನಾರಿಯ ನೆಲದಲ್ಲಿ ಕುಣಿದ, ಮಾತನಾಡಿದ ಎಷ್ಟೋ ಕಲಾವಿದರು 'ಹೆಸರು' ಮಾಡಿದವರೇ. ನಿರಕ್ಷರಿಗಳಿಗೆ ಅಕ್ಷರಪ್ರೀತಿಯನ್ನು ಹುಟ್ಟಿಸಿ, ಓದುವ ಅಭ್ಯಾಸವನ್ನು ಮಾಡಿಸಿದ ಮಾಸ್ತರರು ಬನಾರಿ ನೆಲದಲ್ಲಿ ಜೀವಂತ.

ತಾನು ಗೆಜ್ಜೆ ಕಟ್ಟಿದರು. ವೇಷ ತೊಟ್ಟರು. ಕುಣಿದರು. ತನ್ನ ಶಿಷ್ಯರಲ್ಲೂ ಅದನ್ನೇ ನಿರೀಕ್ಷಿಸಿದ್ದರು. ಊಟ, ವಸತಿ ಕೊಟ್ಟು ಒಂದಷ್ಟು ಯಕ್ಷಗಾನ ಕಲಾವಿದರನ್ನು ರೂಪಿಸಿದ ಮಾಸ್ತರ್ ವಿಷ್ಣು ಭಟ್ಟರ ಬನಾರಿ ನೆಲ ಯಕ್ಷಗಾನಕ್ಕೆ ವಿಶ್ವವಿದ್ಯಾನಿಲಯ.
ಭೂಒಡಲಲ್ಲಿ ಸಿಕ್ಕ ಕೃಷ್ಣನ ಸುಂದರ ಮೂರ್ತಿಗೆ ಚಿಕ್ಕ ಆಲಯ ಕಟ್ಟಿಸಿ, ಅದಕ್ಕೆ ಯಕ್ಷಗಾನವನ್ನು ಥಳಕು ಹಾಕಿ, ಆರಾಧನಾ ಕಲೆಯಾದ ಯಕ್ಷಗಾನಕ್ಕೆ ಮತ್ತಷ್ಟು ದೇವತಾ ಸ್ಪರ್ಶ ಕೊಟ್ಟರು. ಕಲಾವಿದರಲ್ಲಿ ಭಯ-ಭಕ್ತಿ ಹುಟ್ಟಿತು. ಕಲೆಯ ಬಗ್ಗೆಯೂ ಆದರ ಹೆಚ್ಚಾಯಿತು.

ತನ್ನ ಶಿಷ್ಯರ ಕುಡಿತವನ್ನು ಬಿಡಿಸಲು ತಾನೇ 'ಅನ್ನ ಸತ್ಯಾಗ್ರಹ' ಮಾಡಿ ಯಶಸ್ವಿಯಾದ ಬಗೆ ಕಾಲದ ಕಥನ. ತಪ್ಪಿದವರಿಗೆ ಸಾತ್ವಿಕ ಶಿಕ್ಷೆ ಕಾದಿತ್ತು. ಅವರ ಕೋಪದ, ಶಿಕ್ಷೆಯ ಹಿಂದೆ ಇದ್ದುದು - ತಾಯಿಯ ಪ್ರೀತಿ-ಮಮತೆ. ನಮ್ಮ ಎಷ್ಟು ಯಕ್ಷಗಾನದ ಗುರುಗಳಲ್ಲಿ ಈ ಭಾವವಿದೆ ಹೇಳಿ? ಯಕ್ಷಗಾನವನ್ನು ಮನೆಯ ಅಂಗವಾಗಿ, ಕುಟುಂಬ ಸದಸ್ಯರ ಮಿಳಿತದೊಂದಿಗೆ ಕಟ್ಟಿದ ಆ ಕಾಲದ ವಾತಾವರಣವಿದೆಯಲ್ಲಾ, ಅದೇ ಈಗಲೂ ಮುಂದುವರಿಯುತ್ತಿರುವುದು ವಿಷ್ಣು ಭಟ್ಟರ ತಪ್ಪಸ್ಸಿನ ಫಲ.

ವಿಷ್ಣು ಭಟ್ಟರ ಚಿರಂಜೀವಿಗಳು ತಂದೆಯ ದಾರಿಯಲ್ಲಿ ಸಾಗುತ್ತಿದ್ದಾರೆ. ಜರಗುವ ಎಲ್ಲಾ ಕಾರ್ಯಕ್ರಮಗಳಿಗೂ 'ಆರಾಧನಾ ಸ್ಪರ್ಶ'. ಆಧುನಿಕತೆಯ ಥಳಕು ಕಡಿಮೆ. ಊರಿನ ಜನರಿಗೂ ಅಷ್ಟೇ - ಇದು ನಮ್ಮದು ಎಂಬ ಭಾವ. ಹಾಗಾಗಿ ಬನಾರಿ ನೆಲದಲ್ಲಿ ಜರಗುವ ಎಲ್ಲಾ ಕಲಾ ಸಂಬಂಧಿ ಕಾರ್ಯಕ್ರಮಗಳಂದು ಬಹುತೇಕ ಎಲ್ಲಾ ಮನೆಗಳಿಗೂ ಬೀಗ!

ತೀರಾ ಹಳ್ಳಿ ಸೊಗಸಿನಲ್ಲಿ ಸಹಜವಾಗಿ ನಡೆಯುವ ಬನಾರಿಯ ಯಕ್ಷಗಾನ ವಾರ್ಷಿಕೋತ್ಸವದಲ್ಲಿ ಭಾಗವಹಿಸುವುದು ಮುದ ನೀಡುವ ಸಂಗತಿ. ಕೈಯಲ್ಲಿ ರಿಮೋಟ್ ಹಿಡಿದು ಚಾನೆಲ್ ಬದಲಾಯಿಸುವ ಮನಸ್ಸುಗಳಿಲ್ಲಿ ಗೆಜ್ಜೆಕಟ್ಟಿ, ವೇಷತೊಟ್ಟು ಕುಣಿಯುತ್ತವೆ; ತಾಳ ಹಿಡಿದು ಹಾಡುತ್ತವೆ. ಇಂತಹ ಮನಸ್ಸುಗಳ ರೂಪೀಕರಣ ಕಾಲದ ಆವಶ್ಯಕತೆ.

No comments:

Post a Comment