Thursday, April 29, 2010

ಮರೆಯಾದ ಮಾತಿನ 'ಮಾಣಿಕ್ಯ'!ಹರಿದಾಸ ಮಲ್ಪೆ ರಾಮದಾಸ ಸಾಮಗ - 'ಸಣ್ಣ ಸಾಮಗ'ರು. ಇವರಣ್ಣ ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗ 'ದೊಡ್ಡ ಸಾಮಗ'ರು. ಇಬ್ಬರದೂ 'ದೊಡ್ಡ ವ್ಯಕ್ತಿತ್ವ'. ಅರ್ಥಗಾರಿಕೆಯಲ್ಲಿ 'ದೊಡ್ಡ ಹೆಜ್ಜೆ'. ಇವರ ಮಾತಿನ ಝರಿಯ ಮುಂದೆ ಮಾಣಿಕ್ಯದ ಪ್ರಭೆಯೂ ಮಸುಕಾಗುತ್ತಿತ್ತು! ಆದರೆ ಮಾತಿನ ಲೋಕದಲ್ಲೀಗ ಮೌನ! ಎಂಭತ್ತನಾಲ್ಕು ಸಂವತ್ಸರದ ಮಾತಿನ ಬದುಕಿಗೆ ವಿರಾಮ.

ರಾಮದಾಸ ಸಾಮಗರು - ಹರಿದಾಸರು. ಸಂಗೀತ ಅವರಿಗೆ ಖುಷಿ. ರಾಗ, ತಾಳ, ಲಯಗಳಲ್ಲಿ ಬಿಗಿ. ಒಂದು ಕಾಲಘಟ್ಟದಲ್ಲಿ ಮೃದಂಗವಾದಕರು. ಇವೆಲ್ಲವೂ ಹರಿಕೀರ್ತನೆ(ಕಥೆ)ಯಲ್ಲಿ ಮೇಳೈಸುತ್ತಿದ್ದುವು.

ಸಾಮಗರದು ಕಾವ್ಯಪ್ರಧಾನ ಅರ್ಥಗಾರಿಕೆ. ಕಾವ್ಯಾತ್ಮಕ ಶೈಲಿ-ವಾಕ್ಸರಣಿ. ಭಾವಾತ್ಮಕ ಧೋರಣೆ. ಧರ್ಮಶಾಸ್ತ್ರದ ಕಾವ್ಯಾತ್ಮಕ ಜ್ಞಾನ. ಶಬ್ಧಾಲಂಕಾರ ಹೆಚ್ಚು. ವೇಗದ ನುಡಿ.

ತಾಳಮದ್ದಳೆಯಲ್ಲಿ ಹಿಮ್ಮೇಳವನ್ನು ಪೂರ್ತಿ 'ಅನುಭವಿಸುವ' ಅರ್ಥಧಾರಿ. ಭಾಗವತಿಕೆ, ಚೆಂಡೆ, ಮದ್ದಳೆಯೊಂದಿಗೆ ಸಾಗುತ್ತದೆ-ಅಭಿವ್ಯಕ್ತಿ ಸಂಸಾರ. ಲಹರಿ ಬಂದಾಗ ಭಾಗವತರೊಂದಿಗೆ 'ಭಾಗವತ'ರಾಗುವುದೂ ಇದೆ. ರಂಗದಲ್ಲಿದ್ದಷ್ಟೂ ಹೊತ್ತು ಪಾತ್ರ - ಪಾತ್ರಧಾರಿ ಒಂದೇ.

ಸಾಮಗರ ವೇಷಭೂಷಣ - ಜುಟ್ಟು, ಜುಬ್ಬಾ, ಕಚ್ಚೆ, ಶಾಲು. ಆಧುನಿಕದ ಸೋಂಕಿಲ್ಲ. ಕಚ್ಚೆಯ 'ಮುನ್ನಿ'ಯ ತುದಿಯನ್ನು ಎಡಗೈ ಮೇಲೆ ಬಿಟ್ಟು ಮಾತಿನ ಮಂಚವನ್ನು ಏರುವುದೇ ಸಂಭ್ರಮ! ಮೊದಲ ವಂದನೆ ಭಾಗವತರಿಗೆ. ಅದೂ ಪೂರ್ಣಪ್ರಮಾಣದ ನಮಸ್ಕಾರ. ಇದು ಶ್ರಾವ್ಯ ವೇದಿಕೆಯ 'ದೃಶ್ಯ'. ತನ್ನದೇ ಆದ ಪರಂಪರೆ. ವೇದಾಂತ, ತರ್ಕ, ಮಂಡನೆ, ಕಥೆ-ಉಪಕಥೆಗಳಿಂದ ಆವರಿಸಿದ 'ಸ್ವಗತ'. ಯಾವುದೂ ಪೂರ್ವ ನಿರ್ಧರಿತವಲ್ಲ, ಅಲ್ಲಲ್ಲಿನ ಸ್ಪುರಣೆ.
ಪಾತ್ರ ವೈಭವ
ಕೂಡ್ಲು, ಮೂಲ್ಕಿ, ಕರ್ನಾಟಕ, ಇರಾ, ಸುರತ್ಕಲ್, ಕದ್ರಿ, ಬಪ್ಪನಾಡು, ಅಮೃತೇಶ್ವರೀ, ಶಿರಸಿ, ಪೆರ್ಡೂರು ಮೇಳಗಳಲ್ಲಿ ವೇಷಧಾರಿಯಾಗಿ ವ್ಯವಸಾಯ. ಬಯಲಾಟದ ಅರ್ಥಗಾರಿಕೆಗೆ ಸೊಗಸು ತಂದ ದಿನಗಳೀಗ ನೆನಪು. ನಾಟ್ಯ ಕೊರತೆಯನ್ನು 'ಮಾತಿನ ಕುಣಿತ'ದಿಂದ ತುಂಬಿದ್ದಾರೆ. ಪೂರ್ತಿ ರಂಗವನ್ನಾವರಿಸುವ ಮಾತು - ಸಹಜ ಅಂಗಾಭಿನಯ.

ಪಟ್ಟಾಭಿಷೇಕ ಪ್ರಸಂಗದ 'ದಶರಥ', ರುಕ್ಮಾಂಗದ ಚರಿತ್ರೆಯ 'ರುಕ್ಮಾಂಗದ', ಕರ್ಮಬಂಧದ 'ಭೀಷ್ಮ', ಬ್ರಹ್ಮಕಪಾಲದ 'ಈಶ್ವರ', ದಕ್ಷಾಧ್ವರದ 'ಶಿವ', ಅಕ್ಷಯಾಂಬರದ 'ಶಕುನಿ', ಪಾರಿಜಾತದ 'ಕೃಷ್ಣ', ಯಾವುದೇ ಪ್ರಸಂಗದ 'ರಾಮ'-'ಕೃಷ್ಣ' ಪಾತ್ರಗಳು ಮತ್ತು 'ಶಂತನು', 'ಉತ್ತರಕುಮಾರ', - ಮಾತಲ್ಲೇ ಮರುಹುಟ್ಟು ಪಡೆದಿವೆ. ಬಯಲಾಟದಲ್ಲಿ 'ವಿಶ್ವಾಮಿತ್ರ', 'ನಳ', 'ಹರಿಶ್ಚಂದ್ರ', 'ಕೈಲಾಸ ಶಾಸ್ತ್ರಿ', 'ಮಾಧವ ಭಟ್ಟ' ಪಾತ್ರಗಳಿಗೆ ಮುಗಿಬೀಳುವ ದಿನಗಳಿದ್ದುವು. ಕೋಳ್ಯೂರು ರಾಮಚಂದ್ರ ರಾವ್ ಮತ್ತು ಸಾಮಗರ 'ಯಕ್ಷದಾಂಪತ್ಯ'ವು ನಿಜದಾಂಪತ್ಯಕ್ಕೊಂದು ಆದರ್ಶ! ನಳ-ದಮಯಂತಿ, ಹರಿಶ್ಚಂದ್ರ-ಚಂದ್ರಮತಿಯರು ರಂಗದಲ್ಲಿ ಅತ್ತರೆ ಸಾಕು, ಪ್ರೇಕ್ಷಕರೂ ಕೂಡಾ ಕಣ್ಣೊರೆಸಿಕೊಳ್ಳುತ್ತಿದ್ದರು.

ತುಳು ಯಕ್ಷಗಾನವನ್ನು ಜ್ಞಾಪಿಸಿಕೊಳ್ಳಿ. 'ತುಳು' ಭಾಷೆಯನ್ನು ಅಲ್ಲಿ ಹುಡುಕಬೇಕು! ಸಾಮಗರು ನಿರ್ವಹಿಸಿದ ಪಾತ್ರಗಳು 'ತುಳು'ವಿಗೊಂದು ಸಂಭ್ರಮ. ಹೊಸಹೊಸ ಶಬ್ಧಗಳು. 'ತುಳುವರು ಹುಬ್ಬೇರುವಷ್ಟು ಭಾಷಾ ಪ್ರಯೋಗ ಅವರಿಗೆ ಸಿದ್ಧಿ. 'ಕೋಳ್ಯೂರು-ಸಾಮಗರ ಮತ್ತು 'ಸಾಮಗ-ಮಿಜಾರು ಅಣ್ಣಪ್ಪ ಹಾಸ್ಯಗಾರರ' ಅಂದಿನ ರಂಗಪಾತ್ರಗಳ ವೈಭವ ಒಂದು 'ತುಳು ಪಠ್ಯ'! ಕೋಟಿಚೆನ್ನಯ್ಯ ಪ್ರಸಂಗದ 'ಬುದ್ಧಿವಂತ', ತುಳುನಾಡ ಸಿರಿಯ 'ಕಾಂತುಪೂಂಜ', ಕಾಡಮಲ್ಲಿಗೆಯ 'ಉದಯವರ್ಮ' - ಮತ್ತೆ ಮತ್ತೆ ಕಾಡುವ ಪಾತ್ರಗಳು.
ಮಾತಿನ ದಿಂಙಣ
ಸಾಮಗರದು 'ಚಿಂತನೆ ಮತ್ತು ರಂಜನೆ'ಯ ಮಾತು. ಅರ್ಥಗಾರಿಯಲ್ಲಿ 'ಚಿತ್ರಕ ಸಾಮಥ್ರ್ಯ'. ಒಂದು ವಸ್ತುವಿಷಯವನ್ನು ತಂದು ಕಣ್ಣಿಗೆ ಕಟ್ಟುವಂತೆ ಸನ್ನಿವೇಶವನ್ನು ನಿರ್ಮಿಸುವ ಅಪೂರ್ವತೆ.' ಮೂಲದಲ್ಲಿ ಕಥೆ ಒಂದು, ಪ್ರಸಂಗದಲ್ಲಿ ಇನ್ನೊಂದು. ಇಂತಹ ವೈರುಧ್ಯದ ಹೊತ್ತಲ್ಲಿ ವಾದ-ವಿವಾದಗಳು ಏರ್ಪಟ್ಟರೆ ತುದಿಮುಟ್ಟುವುದು ತ್ರಾಸ. ಈ ಎರಡನ್ನೂ ತಮ್ಮ ಅರ್ಥಗಾರಿಕೆಯಲ್ಲಿ ಸಮನ್ವಯ ಮಾಡಿ, ಪಾತ್ರಕ್ಕೆ ನ್ಯಾಯ ಸಲ್ಲಿಸುವತ್ತ ಗಮನ. ಮೊಗೆಮೊಗೆದು ಉಂಡ ಜ್ಞಾನದ ಫಲ!

ಸಾಮಗರ ಅರ್ಥಗಾರಿಕೆ ಅಂದರೆ 'ವ್ಯಾಕರಣ ಪಾಠ' ಎಂದು ವಿನೋದಕ್ಕೆ ಹೇಳುವುದುಂಟು. ಇಲ್ಲಿ ಪ್ರಜ್ಞಾಪೂರ್ವಕವಾದ ಶುದ್ಧ ಕನ್ನಡ. 'ಶುದ್ಧ ಪ್ರಯೋಗಗಳು ಅರ್ಥಗಾರಿಕೆಯಲ್ಲಿ ಬರಬೇಕು' ಎನ್ನುತ್ತಾ 'ಇದು ಕನ್ನಡ ಭಾಷೆ ಉಳಿಸಲು ಯಕ್ಷಗಾನದ ಕೊಡುಗೆ' ಎಂದು ಪ್ರತಿಪಾದಿಸುತ್ತಿದ್ದರು.

ಸಾಮಾನ್ಯವಾಗಿ ಅರ್ಥಧಾರಿ ಎಲ್ಲಿ ತಪ್ಪುತ್ತಾನೋ - ಇದಿರು ಅರ್ಥಧಾರಿ ಕಾಯುತ್ತಿರುತ್ತಾನೆ - ಆಕ್ರಮಣ ಮಾಡಲು! ಸಾಮಗರು ಇದಿರಿದ್ದಾಗ ಸಣ್ಣ ಅರ್ಥಧಾರಿ ಬೆವರಬೇಕಾದ್ದಿಲ್ಲ. ಒಂದು ವೇಳೆ ತಪ್ಪಿದರೂ, ತಾನೇ ಸರಿಪಡಿಸುತ್ತಾ, ತನ್ನ ಪಾತ್ರವನ್ನು ಕೆಡಿಸಿಕೊಂಡಾದರೂ ಇದಿರಿನ ಪಾತ್ರವನ್ನೂ ಪೋಶಿಸುವ ಗುಣ. ಮನೋಭಂಗ ಮಾಡುವುದಿಲ್ಲ. ಇವರಿಂದಾಗಿ ಅಸಂಖ್ಯ ಪ್ರತಿಪಾತ್ರಗಳು ವಿಜೃಂಭಿಸಿವೆ.

ವಾದ-ಪ್ರತಿವಾದಗಳ ಹರಹು ತನ್ನ ನಿರ್ಣಯದ-ದಾರಿಯ ಚೌಕಟ್ಟಿನೊಳಗೆ ಸಂಚರಿಸುತ್ತವೆ. ಒಣಚರ್ಚೆಗಳಿಲ್ಲ. ಪಾತ್ರದ ಗೌರವವುಳಿಸಿಕೊಂಡೇ ಮಾತು. ಕೆಲವೊಂದು ಸಲ ವೀರರಸದ ಸಂದರ್ಭದಲ್ಲಿ ಕೆರಳುವಾಗ ಹಿಮ್ಮೇಳವೂ ಒಂದು ಕ್ಷಣ ಬೆರಗಾಗುತ್ತಿತ್ತು!

ಸಾಮಗರ ಅರ್ಥದಲ್ಲಿ ಚಿಂತನಗ್ರಾಹ್ಯ ವಿಚಾರಗಳ ಮಳೆ! ಉದಾ. 'ಅಮರಾವತಿಯೋ, ಅಮರವತಿಯೋ' ದ್ವಾರಾವತಿಯೋ, ದ್ವಾರವತಿಯೋ..ಏನೋ..ನನಗೆ ಗೊತ್ತಿಲ್ಲ' ಅಂತ ನಿಲ್ಲಿಸಿಬಿಡುತ್ತಾರೆ. ಅಂದರೆ ಅವರಿಗೆ ಗೊತ್ತಿಲ್ಲ ಎಂದಲ್ಲ. ಅಷ್ಟಕ್ಕೆ ನಿಲ್ಲಿಸಿ ಮುಂದಕ್ಕೆ ಹೋಗುತ್ತಾರೆ. ಇದನ್ನು 'ವಿನೋದ -ಗೇಲಿ'ಯಾಗಿ ಸ್ವೀಕರಿಸಿದವರೇ ಹೆಚ್ಚು. ಅದಕ್ಕೆ ಹಾಗೊಂದು ಅರ್ಥ ಇದೆಯಾ ಅಂತ ಆಲೋಚಿಸಿದವರು ಕಡಿಮೆ.

ನಮ್ಮಲ್ಲಿ ಪ್ರತಿಭೆಯನ್ನು ಒಪ್ಪಲು, ಪ್ರಶಂಸಿಸಲು ಮಾತಿನ ದಾರಿದ್ರ್ಯ ಕಾಣುತ್ತೇವೆ. ಒಬ್ಬ ಅರ್ಥಧಾರಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಾಗ, ಕೀಳರಿಮೆಯನ್ನು ಆವಾಹಿಸಿಕೊಳ್ಳುವ ಸಹವರ್ತಿಗಳು ಎಷ್ಟು ಮಂದಿ ಬೇಕು? ಸಾಮಗರಿಗೆ ತನ್ನಿದಿರಿನ ಅರ್ಥಧಾರಿಗೆ ಪ್ರಶಂಸೆ ಸಿಕ್ಕಿದಾಗ, ತಾನೂ ಅದರೊಂದಿಗೆ ಬೆರೆಯುತ್ತಾರೆ. ಮುಖವರ್ತನೆಯಿಂದ ತಿಳಿಸುತ್ತಾರೆ. ಮುಂದಿನ ಅರ್ಥದಲ್ಲಿ ತಂದೇ ತರುತ್ತಾರೆ.

ಯಕ್ಷಗಾನದ ಚೌಕಟ್ಟಿನೊಳಗೆ ಪೌರಾಣಿಕವಾದ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದರು. ರಾಜಕಾರಣ ಅವರ ಆರ್ಥಗಾರಿಕೆಯಲ್ಲಿಲ್ಲ. ಇವರ ಬಹುಕಾಲದ ಒಡನಾಡಿ ಕೋಳ್ಯೂರು ರಾಮಚಂದ್ರ ರಾಯರು ಒಂದೆಡೆ ಹೇಳುತ್ತಾರೆ -'ಪತ್ರಿಕೆಯ ಭಾಷೆಯನ್ನು ಪಾತ್ರ ಚಿತ್ರಣದಲ್ಲಿ ಬಳಸಿಕೊಂಡಿರುವುದನ್ನು ನಾನು ನೋಡಿಲ್ಲ'!
ಮದುಡುವ ಮಗು-ಮನಸ್ಸು
ಬದುಕಿನಲ್ಲೂ ಸಾಮಗರು ಸರಳ, ಭಾವಜೀವಿ. ಮಗುವಿನ ಮನಸ್ಸು. ಭೇಟಿಗೆ ಬಂದವರನ್ನು ಪ್ರೀತಿಪೂರ್ವಕವಾಗಿ ಮಾತನಾಡಿಸಿ ತಾನು ಪಡೆವ ಸತ್ಕಾರವನ್ನು ಅವರಿಗೂ ಕೊಡಿಸುವ ಗುಣ. ಬಟ್ಟಲಿನ ದೋಸೆಯನ್ನು ಹಂಚಿ ತಿನ್ನುವ ಮನೋಭಾವ.

ಧುತ್ತೆಂದು ಎರಗಿದ ಶಾರೀರಿಕ ಅಸಹಾಯಕತೆ ಸಾಮಗರನ್ನು ಹಿಂಡಿ-ಹಿಪ್ಪೆ ಮಾಡಿತ್ತು. ರಂಗದಲ್ಲಿ ಶನಿಕಾಟಕ್ಕೆ ತುತ್ತಾದ 'ನಳ' ಪಾತ್ರದ ಭಾವವೇ ಯೋಗವಾಗಿ ಬಂತೋ ಏನೋ? ಕಳೆದೆರಡು ವರುಷಗಳಿಂದ ಹಾಸಿಗೆಗೆ ಒರಗಿದ 'ಮಾತಿನ ಮಾಣಿಕ್ಯ'ದ ಹೊಳಪು ಮಸುಕಾಗಿತ್ತು. ಈಗ ಪೂರ್ತಿ ಮೌನ. ಮಡದಿ ನಾಗರತ್ನ. ಇಬ್ಬರು ಗಂಡುಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳ ಸಂಸಾರ. ಎಪ್ರಿಲ್ 27, ೨೦೧೦ರಂದು ಎಂಭತ್ತನಾಲ್ಕು ಸಂವತ್ಸರ ಬಾಳಿದ ರಾಮದಾಸ ಸಾಮಗರ (20-6-1926) ಬದುಕು ಪೂರ್ತಿಯಾಯಿತು.

ಡಾ. ಶೇಣಿ ಗೋಪಾಲಕೃಷ್ಣ ಭಟ್ ಮತ್ತು ರಾಮದಾಸ ಸಾಮಗ - ಎಂಬ ಮಾತಿನ ಮಂಟಪದ ಎರಡು ಪ್ರಧಾನ ಸ್ತಂಭಗಳು ಕಳಚಿಬಿದ್ದುವು. ಇಹದಿಂದ ದೂರವಾದ ಮಲ್ಪೆ ರಾಮದಾಸ ಸಾಮಗರಿಗಿದು ನುಡಿನಮನ.

1 comment:

  1. ಪ್ರಿಯರಾದ ಕಾರಂತರಿಗೆ ನಮಸ್ಕಾರಗಳು, ನಿಮ್ಮ ಬ್ಲಾಗ್ ಗೆ ಭೇಟಿ ಕೊಡುತ್ತಿದ್ದೇನೆ. ಅಲ್ಲಿನ ಲೇಖನಗಳು ನನ್ನನ್ನು ಸುಲಭವಾಗಿ ಯಕ್ಷಲೋಕಕ್ಕೆ ಕೊಂಡೊಯ್ಯುತ್ತವೆ.ಸಾಮಗರ ಅಸಂಖ್ಯ ಅಭಿಮಾನಿಗಳಲ್ಲಿ ನಾನು ಒಬ್ಬ. ಅವರ ಮಾತಿನ ಶೈಲಿ, ತರ್ಕ, ವಿದ್ವತ್ತುಗಳು ಅಸಾಮಾನ್ಯ. ನಮಗೆ ಇಂಥಹ ಕಲಾವಿದರ ಮಹಾನ್ ಪ್ರತಿಭೆಯನ್ನು ಜಗತ್ತಿಗೆ ಸರಿಯಾಗಿ ಪರಿಚಯಿಸಲು ಆಗಲೇ ಇಲ್ಲ. ರಾಮಚಂದ್ರರಾಯರಿಗೆ ಮಂಗಳೂರು ವಿ ವಿ ಗೌರವ ಪದವಿ ನೀಡಿ ಒಳ್ಳೆ ಕೆಲಸ ಮಾಡಿತು. ಅದಕ್ಕಾಗಿ ನಾನು ಒಂದಷ್ಟು ಕೆಲಸ ಮಾಡಿದ್ದೆ ಎಂಬುದು ನನಗೆ ಸಮಾಧಾನ ನೀಡಿದೆ. ಬಲಿಪರಿಗೆ ಮತ್ತು ಸೂರಿಕುಮೇರು ಅವರಿಗೆ ಸೂಕ್ತವಾದ ರೀತಿಯ ಗೌರವ ಸಲ್ಲಲೇಬೇಕು. ಅಂಥಹ ದೊಡ್ಡ ಕಲಾವಿದರು ಜಗತ್ತಿನ ಬೇರಾವುದೇ ಕಲೆಯಲ್ಲಿ ಇರುವುದು ಸಾಧ್ಯವಿಲ್ಲ. ನಿಮ್ಮ ನಿರಂತರ ಪ್ರಯತ್ನಗಳಿಗೆ ಅಭಿನಂದನೆಗಳು. ಡೆಲ್ಲಿಗೆ ಬಂದರೆ ಭೇಟಿಯಾಗಲು ಮರೆಯಬೇಡಿ.

    ReplyDelete