Thursday, October 15, 2015

ತ್ಯಾಗಕ್ಕೆ ತೋರಣ ಕಟ್ಟಿದ ’ಸಹಧರ್ಮಿಣಿ ಸಂಮಾನ

            "ಮೇಳಕ್ಕೆ ಹೊರಡುವ ದಿನ ಹತ್ತಿರ ಬಂದಾಗ ಮಡದಿ ಸಾವಿತ್ರಿ ಮ್ಲಾನವಾಗುತ್ತಿದ್ದಳು. ಅಂದು ದೇವರಿಗೆ ತುಪ್ಪದ ದೀಪ ಹಚ್ಚಿ, ಹಣೆಗೆ ಬೊಟ್ಟಿಟ್ಟು, ನಮಸ್ಕಾರ ಮಾಡಿ, ಇಷ್ಟದೈವಕ್ಕೆ ಕಾಣಿಕೆ ಹಾಕಿ ನನ್ನನ್ನು ಕಳುಹಿಸಿಕೊಡುತ್ತಿದ್ದ ದಿನಗಳನ್ನು ಮರೆಯುವಂತಿಲ್ಲ.  ತಂದೆಯವರ ತಿಥಿ ಜನವರಿ-ಫೆಬ್ರವರಿ ತಿಂಗಳಲ್ಲಿ ಆಗುತ್ತಿತ್ತು. ಆಗ ಒಂದು ದಿವಸಕ್ಕೆ ಹೇಗೋ ಹೊಂದಿಸಿಕೊಂಡು ಮನೆಗೆ ಬರುತ್ತಿದ್ದೆ. ಬಳಿಕ ಪತ್ತನಾಜೆ - ಮೇ - ಕಳೆದೇ ನಮ್ಮಿಬ್ಬರ ಭೇಟಿ. ಅಷ್ಟು ಸಮಯ ವಿರಹ!.." ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್ಟರು ಮೇಳಜೀವನದ ಕ್ಷಣಗಳನ್ನು ಹಂಚಿಕೊಂಡರು.
              ಕಲಾವಿದನು ಮನೆ, ಮಡದಿ, ಮಕ್ಕಳ ಮೋಹ ತೊರೆದು ಬಣ್ಣದ ನಂಟನ್ನು ಅಂಟಿಸಿಕೊಳ್ಳಬೇಕು. ಆಟದಿಂದ ಆಟಕ್ಕೆ ಕಾಲ್ನಡಿಗೆಯ ಪಯಣ. ಒಂದು ಹೊತ್ತು ಊಟ ಸಿಕ್ಕರೆ ಅದುವೇ ಮೃಷ್ಟಾನ್ನ. ಕೈಗೇನಾದರೂ ನಾಲ್ಕುಕಾಸು ಬಿದ್ದರಂತೂ ಈಗಿನ ಕೋಟಿ ರೂಪಾಯಿ ಸಿಕ್ಕಷ್ಟು ಖುಷಿ. ಸಾಮಾಜಿಕ ಸ್ಥಿತಿಯೂ ಹಾಗಿತ್ತೆನ್ನಿ. ಬಣ್ಣ ಹಚ್ಚಿದರೆ ಮಾತ್ರ ಮನೆಯ ಬದುಕಿನ ರಥದ ಗಾಲಿ ತಿರುಗಬಹುದಷ್ಟೇ. ಹಿರಿಯರನ್ನು ಮಾತನಾಡಿಸಿ ನೋಡಿ. ಸಂಕಷ್ಟಗಳ ಸರಮಾಲೆಗಳ ದಿನಮಾನಗಳಿಗೆ ದನಿಯಾಗುತ್ತಾರೆ.
                ಸರಿ, ಯಜಮಾನನಿಗೆ ಮೇಳದ ತಿರುಗಾಟ. ಮನೆಯ ನಿರ್ವಹಣೆಯ ಹೊಣೆ ಪತ್ನಿಯ ಹೆಗಲಿಗೆ. ಮಕ್ಕಳ ವಿದ್ಯಾಭ್ಯಾಸದಿಂದ ತೊಡಗಿ ಹಿರಿಯರ ಯೋಗಕ್ಷೇಮದ ತನಕ. ಬೇಕಾದೆಡೆಯಲ್ಲೆಲ್ಲಾ ಸ್ವಯಂ ನಿರ್ಧಾರ. ಕೃಷಿ, ಹೈನುಗಾರಿಕೆ ಇದ್ದರಂತೂ ಕೆಲಸಗಳ ಹೊರೆ. ಎಲ್ಲವನ್ನೂ ಗೊಣಗಾಟವಿಲ್ಲದೆ ನಿರ್ವಹಿಸಿದ ಅಮ್ಮಂದಿರ ಬೆವರ ಶ್ರಮವನ್ನು ಎಷ್ಟು ಮಂದಿ ಗಮನಿಸಿದ್ದಾರೆ?
                 ಪತ್ನಿಯ ನೆನಹು ಒಂದೆಡೆ, ಮಕ್ಕಳ ನೆನಪು ಇನ್ನೊಂದೆಡೆ, ಹಿರಿಯರ ಆರೋಗ್ಯದ ಚಿಂತೆ, ಕೃಷಿ ಕಾರ್ಯಗಳ ಯೋಚನೆ - ಎಲ್ಲವನ್ನೂ ಮನಸ್ಸಿಗೆ ಹಚ್ಚಿಕೊಂಡೇ ಬಣ್ಣದ ಲೋಕಕ್ಕೆ ಬಿನ್ನಾಣದ ಸ್ಪರ್ಶವನ್ನು ನೀಡಬೇಕು. ಚಿಂತೆಯನ್ನು ಹಂಚಿಕೊಳ್ಳೋಣ ಅಂದರೆ ಇತರರದ್ದೂ ಇದೇ ಹಾಡು-ಪಾಡು. ಚಿಂತೆಯ ಮೂಟೆಯೊಳಗೆ ಬದುಕಿನ ರಿಂಗಣ. ಪಾತ್ರಾಭಿವ್ಯಕ್ತಿಗೆ ಹೊಗಳಿಕೆ, ಪ್ರಶಂಸೆ ಬಂದಾಗಲೆಲ್ಲಾ ನೆನಪಾಗುವ ಮನೆಮಂದಿ. ಖುಷಿಯನ್ನು ಅನುಭವಿಸಲು ಆಗದ ಕಲಾಬದುಕು.
           ಮನೆಯ ಹೊಣೆಯನ್ನು ಜಾಣ್ಮೆಯಿಂದ ಹತ್ತಿಯಂತೆ ಹಗುರ ಮಾಡಿಕೊಂಡು ಮಾನಿನಿಯರಿದ್ದಾರೆ. ಆದರೆ ಪತಿಯ ವಿಯೋಗದ ಕ್ಷಣ ಇದೆಯಲ್ಲಾ. ಅದಕ್ಕೆ ಶಬ್ದಗಳಿಲ್ಲ, ದನಿಯಿಲ್ಲ.! ಮಕ್ಕಳಿಗೆ ಅಪ್ಪನ ನೆನಪು ಬಂದಾಗ ನೋವನ್ನು ಮರೆತು ಎಳೆಯ ಮನಸ್ಸುಗಳಿಗೆ ಸಾಂತ್ವನ ಹೇಳಬೇಕು. ಸಂದುಹೋದ ಬದುಕಿನಲ್ಲಿ ಜೀವನದಲ್ಲೂ ಇಂತಹ ದಿನಮಾನಗಳು ಹಾದುಹೋಗಿದೆ.
             ಈಗ ಕಾಲಘಟ್ಟ ಬದಲಾಗಿದೆ. ಆಧುನಿಕ ತಂತ್ರಜ್ಞಾನಗಳು ಧಾಂಗುಡಿಯಿಡುತ್ತಿವೆ. ಬೇಕಾದಾಗ ಮನೆಯವರೊಂದಿಗೆ ಸಂಪರ್ಕ ಸಾಧಿಸಬಹುದಾದ ಸಾಧನ ಅಂಗೈಯಲ್ಲಿದೆ.  ಒಬ್ಬೊಬ್ಬ ಸದಸ್ಯರೂ ವಾಹನ ಹೊಂದಬಹುದಾದ ಆರ್ಥಿಕ ಮೇಲ್ಮೈ ಹೊಂದಿದ್ದಾರೆ. ದುಡಿತಕ್ಕೆ ತಕ್ಕ ಅಲ್ಲದಿದ್ದರೂ ತೃಪ್ತಿಕರವಾದ ಸಂಭಾವನೆ. ಊಟ-ಉಪಾಹಾರದಲ್ಲಿ ಸಂತೃಪ್ತಿ. ಪ್ರತಿ ದಿನ ಮನೆಗೆ ಬಂದು, ಮನೆವಾರ್ತೆಯನ್ನೆಲ್ಲಾ ನಿಭಾಯಿಸಿ ಪುನಃ ಆಟಕ್ಕೆ ಹೋಗುವ ಸುಧಾರಣೆ ಬಂದಿದೆ.. ಇದು ಅಪೇಕ್ಷಣೀಯ ಮತ್ತು ಅಭಿಮಾನ.
              ಅಕ್ಟೋಬರ್ 2, ೧೯೧೫ರಂದು ಪಾವಂಜೆಯಲ್ಲಿ ಹತ್ತು ಮಂದಿ ಯಕ್ಷಗಾನ ಕಲಾವಿದರ ಸಹಧರ್ಮಿಣಿಯರಿಗೆ  ಸಂಮಾನ ಜರುಗಿತು. ಶ್ರೀಮತಿಯರಾದ ಜಯಲಕ್ಷ್ಮೀ ನಾರಾಯಣ ಬಲಿಪ ಭಾಗವತ, ವನಜಾಕ್ಷಿ ಶಂಕರನಾರಾಯಣ ಭಟ್ ಪದ್ಯಾಣ, ಶೀಲಾಶಂಕರಿ ಗಣಪತಿ ಭಟ್ ಪದ್ಯಾಣ, ಶೋಭಾ ಪುರುಷೋತ್ತಮ ಪೂಂಜ ಬೊಟ್ಟಿಕೆರೆ, ಶ್ಯಾಮಲಾ ಗಣಪತಿ ಶಾಸ್ತ್ರಿ ಕುರಿಯ, ವಾಣಿ ರಘುರಾಮ ಹೊಳ್ಳ ಪುತ್ತಿಗೆ, ಶಾರದಾ ಶ್ರೀಧರ ರಾವ್ ಕುಬಣೂರು, ಸುಧಾ ದಿನೇಶ ಅಮ್ಮಣ್ಣಾಯ, ಸಾವಿತ್ರಿ ಗೋವಿಂದ ಭಟ್, ಯಶೋದಾ ಮೋನಪ್ಪ ಗೌಡ - ಸಂಮಾನ ಸ್ವೀಕರಿಸಿದ ಅಮ್ಮಂದಿರು.
           'ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ರಿಲೀಜಿಯಸ್ ಟ್ರಸ್ಟ್' - ಈ ಮಾತೃಸಂಸ್ಥೆಯಡಿ ರೂಪುಗೊಂಡ 'ಚಂದ್ರಮ್ಮ ವಾಸುಭಟ್ಟ ಸ್ಮಾರಕ ಮಹಿಳಾ ಮಂಡಳಿ'ಯ ಚೊಚ್ಚಲ ಕಾರ್ಯಕ್ರಮವಿದು. ಪತಿಯ ತಾರಾಮೌಲ್ಯಕ್ಕೆ ಪರೋಕ್ಷವಾಗಿ ಹೆಗಲು ಕೊಟ್ಟ ಮನಸ್ಸುಗಳಿಗೆ ಸಂದ ನಿಜ ಗೌರವ. ಅವ್ಯಕ್ತ ತ್ಯಾಗ, ಸಹಿಷ್ಣು ಗುಣಗಳಿಗೆ ಪ್ರಾಪ್ತವಾದ ಮಾನ. ಸಂಮಾನದ ಕ್ಷಣ ಹೃದಯಸ್ಪರ್ಶಿಯಾಗಿತ್ತು. ಕಲಾವಿದರ ಸತಿಯರಿಗೆ ಸಾರ್ಥಕ್ಯದ ಕ್ಷಣವನ್ನು ತರುವಂತೆ ಸಂಘಟಕರು ಗೌರವಿಸಿದ್ದಾರೆ. ಈ ಪರಂಪರೆ ಮುಂದುವರಿಯಬೇಕು, ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ ಕಲಾವಿದೆ ವಿದುಷಿ ಸುಮಂಗಲ ರತ್ನಾಕರ್.
            ಸಾಧಕ ಕಲಾವಿದರಿಗೆ ಸಪತ್ನಿ ಸಹಿತ ಗೌರವ ಸಲ್ಲುವುದು ಅಲ್ಲೋ ಇಲ್ಲೋ ಅಪರೂಪಕ್ಕೊಮ್ಮೆ ಮಾತ್ರ. ಬದುಕಿನಲ್ಲಿ 'ಸತಿಯರ್ಧ-ಪತಿಯರ್ಧ' ಇದ್ದಂತೆ ಗೌರವದಲ್ಲೂ ಸಮಪಾಲು ಬೇಕು. ಗಂಡನ ಕ್ಷೇಮದ ಹಾರೈಕೆಯೊಂದಿಗೆ ಕುಟುಂಬವನ್ನು ಆಧರಿಸುವ ನಿಜವಾದ ಸಾಧಕಿಗೆ ಗೌರವ ಸಲ್ಲಬೇಕು. ಪತಿಯ ಗುಣಕಥನದೊಂದಿಗೆ ಪತ್ನಿಯ ಸಾಧನೆಯ ಮಿಂಚಿಂಗ್ ಪ್ರಸ್ತುತಿಗೊಂಡಾಗ ಕುಟುಂಬವೊಂದು ಕಲೆಯ ಪೋಷಣೆಗೆ ಸಮರ್ಪಿಸಿಕೊಂಡ ವೃತ್ತಾಂತ ಅನಾವರಣಗೊಳ್ಳುತ್ತದೆ.
           ಸಂಮಾನ ಸಮಾರಂಭಗಳು ಕಲಾವಿದರ ಬದುಕಿಗೊಂದು ತೋರಣ. ಅದು ಹತ್ತರೊಟ್ಟಿಗೆ ಹನ್ನೊಂದಾದರೆ ಸಂಮಾನದ ಗೌರವ ಗೌಣವಾಗುತ್ತದೆ. ನಿಧಿಯೊಂದಿಗೆ ಪ್ರಶಸ್ತಿ, ಸಂಮಾನ ಪ್ರದಾನಿಸುವ ಸಂಘಟನೆಗಳಿವೆ. ಇದು ಖುಷಿ ಕೊಡುವ ವಿಚಾರ. ಈ ಮಧ್ಯೆ ಕಾಟಾಚಾರದ ಎಷ್ಟೋ ಕಾರ್ಯಕ್ರಮಗಳನ್ನು ಎಣಿಸುವಾಗ ನೋವಾಗುತ್ತದೆ.
ಪಾವಂಜೆಯಲ್ಲಿ ಜರುಗಿದ ವಿನೂತನ ಸಂಮಾನ ಯೋಚನೆಯು ಹೊಸ ಹಾದಿ ತೋರಿದೆ. ಇದು ಅನುಸರಣೀಯ, ಅನುಕರಣೀಯ.
 
(ಚಿತ್ರ : ಕೃಷ್ಣಕುಮಾರ್ ಜೋಡುಕಲ್ಲು)


No comments:

Post a Comment