Tuesday, October 27, 2015

ಮತ್ತೆ ಬದುಕಿದ ದೇಶಮಂಗಲ..! .

                  ಕಾಸರಗೋಡು ಬೆದ್ರಡ್ಕ ಪೂಮಾಣಿ-ಕಿನ್ನಿಮಾಣಿ ಸನ್ನಿಧಿಯಲ್ಲಾಗುವ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದ ಸಮಯ. ಆಗ ದೇಶಮಂಗಲ ಕೃಷ್ಣ ಕಾರಂತರನ್ನು ನೋಡಿದ, ಮಾತನಾಡಿದ ನೆನಪು. ವಿವಿಧ ಸಂದರ್ಭಗಳಲ್ಲಿ ಕಾರಂತರ ಬೌದ್ಧಿಕ ಗಟ್ಟಿತನವನ್ನು ಗಣ್ಯರು ನೆನಪಿಸುವುದನ್ನು ಕೇಳಿದ್ದೇನೆ. ಅವರು ದೂರವಾಗಿ ದಶಕ ಕಳೆದರೂ ಯಕ್ಷಗಾನದ ಸುದ್ದಿ ಮಾತನಾಡುವಾಗಲೆಲ್ಲಾ ದೇಶಮಂಗಲದವರನ್ನು ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ.
               ಸುಮಾರು ತೊಂಭತ್ತು ಸಂವತ್ಸರ ಬದುಕಿದ ಕೃಷ್ಣ ಕಾರಂತರು ಕುಟುಂಬಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಲಿಲ್ಲ. ಸಾಮಾಜಿಕವಾಗಿ ಬದ್ಧತೆಯ ಬದುಕನ್ನು ರೂಢಿಸಿಕೊಂಡವರು. ಯಕ್ಷಗಾನದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡವರು. ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಮಾಡಿದವರು. ಅವರ ಪ್ರವೃತ್ತಿಗೆ ದಶಬಾಹುಗಳು. ತಾನುಣ್ಣದಿದ್ದರೂ ಉಣ್ಣದವರಿಗೆ ನೆರಳಾದವರು. ಹಾಗೆಂತ ಕಾರಂತರೇನೂ ಆರ್ಥಿಕ ಶ್ರೀಮಂತರಲ್ಲ. ಹೃದಯ ಶ್ರೀಮಂತಿಕೆ ಇದ್ದುದರಿಂದಲೇ ಈಗಲೂ ಪ್ರಸ್ತುತರು.
               ವ್ಯಕ್ತಿ ಮರಣಿಸಿದಾಗ ಊರಿನ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದರ ಮೇಲೆ ಆತನ ಸಿದ್ಧಿ-ಪ್ರಸಿದ್ಧಿ. ಊರು ಮಾತ್ರವಲ್ಲ ಹೊರ ಊರಿನ ಗಣ್ಯರು ಕೂಡಾ ನೆನಪಿಸುವ ವ್ಯಕ್ತಿತ್ವ ಕಾರಂತರಲ್ಲಿತ್ತು. ನ್ಯಾಯಾಲಯದ ಮೆಟ್ಟಲೇರುವ ಬಹುವಿಧದ ವಿವಾದಗಳಿಗೆ ಕಾರಂತರು ಸ್ಪಂದಿಸುತ್ತಿದ್ದ ರೀತಿ ಅನನ್ಯ.  ವಿವಾದಗಳು ರಾಜಿಯಲ್ಲಿ ಮುಗಿಯುವುದಿದ್ದರೆ ಕಾರಂತರ ಮಧ್ಯಸ್ತಿಕೆ. ಅವರು ನೀಡುವ ನಿಷ್ಪಕ್ಷಪಾತ ತೀರ್ಮಾನವನ್ನು ಜನ ಸ್ವೀಕರಿಸುತ್ತಿದ್ದರು. ನ್ಯಾಯದ, ನ್ಯಾಯಾಲಯದ ಎಲ್ಲಾ ಪ್ರಕ್ರಿಯೆಗಳು ಅವರಿಗೆ ಸಲೀಸು.
                ಕಾರಂತರ ಭಾವ ಸಿರಿಬಾಗಿಲು ವೆಂಕಪ್ಪಯ್ಯ. ಇಬ್ಬರೂ ಯಕ್ಷ ಜಿಜ್ಞಾಸುಗಳು. ಪಾರ್ತಿಸುಬ್ಬ ರಚಿತ ರಾಮಾಯಣದ ಓಲೆಗರಿಗಳನ್ನು ಸಂಗ್ರಹಿಸಲು ನೆರವಾದ ಹಿರಿಚೇತನಗಳು. ಪುತ್ರಕಾಮೇಷ್ಟಿಯಿಂದ ಸುಗ್ರೀವ ಸಖ್ಯದ ತನಕದ ಕಥಾಭಾಗವನ್ನು ಇವರಿಬ್ಬರು ಸಂಗ್ರಹಿಸಿ ಸಹಕರಿದ್ದಾರೆಂದು ಕುಕ್ಕಿಲ ಕೃಷ್ಣ ಭಟ್ಟರು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ನಿಜಕ್ಕೂ ಇದು ಮಹಾತ್ಕಾರ್ಯ. ರಾಮಾಯಣ ಕೃತಿಯು ಅಚ್ಚಾಗಿದೆ. ಕಲಾವಿದರಲ್ಲಿ ಇರಲೇಬೇಕಾದ ಪುಸ್ತಕ.
               ಕೃಷ್ಣ ಕಾರಂತರಿಗೂ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರಿಗೂ ನಂಟು. ಸಾಮಗರೊಂದಿಗೆ ಒಡನಾಟ. ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದಲ್ಲಿ ನಡೆಯುತ್ತಿದ್ದ ಉದ್ಧಾಮರ ಕೂಟಗಳಲ್ಲಿ ಕಾರಂತರೂ ಭಾಗಿ. ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯುದ್ದಕ್ಕೂ ಕಾರ್ಯಕ್ರಮವನ್ನು ನೀಡಿದ ಹಿರಿಮೆ. ಶೇಣಿ-ಸಾಮಗ ಯುಗದಲ್ಲಿ ಅವರಿಗೆ ಸಮದಂಡಿಯಾಗಿ ಕಲಾವಿದರಾಗಿ, ವಿಮರ್ಶಕರಾಗಿ ಕಾಣಿಸಿಕೊಂಡಿದ್ದರು. "ತಾಳಮದ್ದಳೆಯಲ್ಲಿ ಇವರೆದುರು ಅರ್ಥಗಾರಿಕೆ ಹೇಳಲು ಬಹುತೇಕರು ಹಿಂಜರಿಯುತಿದ್ದರು. ಎದುರು ಅರ್ಥಧಾರಿಯನ್ನು ಅಟ್ಯಾಕ್ ಮಾಡುವ ಗುಣವು ಅವರ ಅಪಾರ ಜ್ಞಾನದ ಪ್ರತೀಕ," ಎನ್ನುತ್ತಾರೆ ಹಿರಿಯ ಅರ್ಥಧಾರಿ ಮಧೂರು ವೆಂಕಟಕೃಷ್ಣ.
              ಎಡನೀರು ಮಠದ ಹಿಂದಿನ ಯತಿಗಳಾದ ಪೂಜ್ಯ ಶ್ರೀ ಶ್ರೀ ಈಶ್ವರಾನಂದ ಭಾರತೀ ಸ್ವಾಮಿಗಳ ಆಪ್ತರಾಗಿದ್ದರು. ಶ್ರೀಮಠದ ವ್ಯವಹಾರಗಳನ್ನು ಸುಸೂತ್ರವಾಗಿ ಸೇವಾ ಭಾವದಿಂದ ಮಾಡುತ್ತಿದ್ದರು ಎಂದು ಹತ್ತಿರದಿಂದ ಬಲ್ಲವರು ನೆನಪಿಸುತ್ತಾರೆ. ಅಂತೆಯೇ ಅರಮನೆಗಳ ಕೆಲವು ವ್ಯವಹಾರಗಳ ಹೊಣೆಯೂ ಕಾರಂತರಿಗೆ ಇತ್ತಂತೆ. ಇದು ಅವರ ವ್ಯವಹಾರ ಕುಶಲತೆಗಳಿಗೆ ದೃಷ್ಟಾಂತ. ಊರಿನ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ದುಡಿದದ್ದಲ್ಲದೆ ಮಾರ್ಗದರ್ಶಕರಾಗಿದ್ದರು.
             "1962ರಲ್ಲಿ ಮಧೂರು ಕ್ಷೇತ್ರದಲ್ಲಿ ಜರುಗಿದ ಮೂಡಪ್ಪ ಸೇವೆ, 1961ರಲ್ಲಿ ಜರುಗಿದ ಕೋಟಿ ನಾಮಾರ್ಚನೆಗಳ ಸಂದರ್ಭದಲ್ಲಿ ಕಾರಂತರು ಕಾರ್ಯಕರ್ತರಾಗಿ ದುಡಿದಿದ್ದರು. ಇಂಡಿಯನ್ ನೇಶನಲ್ ಕಾಂಗ್ರೆಸಿನ ಸಕ್ರಿಯ ಕಾರ್ಯಕರ್ತರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದರು. ಇವರ ಸಾಮಥ್ರ್ಯವನ್ನು ಅರ್ಥಮಾಡಿಕೊಂಡಿದ್ದ ಆಗಿನ ಮದರಾಸು ಸರಕಾರವು ಮಾಯಿಪ್ಪಾಡಿ ಶಿಕ್ಷಕರ ತರಬೇತಿ ಶಾಲೆಯ ಕಟ್ಟಡ ನಿರ್ಮಾಣದ ಕಾರ್ಯವನ್ನು ಇವರಿಗೆ ವಹಿಸಿತ್ತು. ಕ್ಲುಪ್ತ ಸಮಯದಲ್ಲಿ ಕಾಮಗಾರಿಯನ್ನು ಮುಗಿಸಿದ್ದರು. ಇವರ ಸೇವೆಗೆ ಆಗಿನ ಶಿಕ್ಷಣ ಸಚಿವರಾದ ಭಕ್ತವತ್ಸಲಂ ಕಾರಂತರನ್ನು  ಅಭಿನಂದಿಸಿದ್ದರು," ಎಂದು ಮಧೂರು ಎಂ.ನರಸಿಂಹ ಮಯ್ಯರು ರಜತ ಕೂಟ ಎನ್ನುವ ಕೃತಿಯಲ್ಲಿ ಉಲ್ಲೇಖಿಸಿದ್ದು ಗಮನೀಯ.
             18-11-1915 ದೇಶಮಂಗಲ ಕೃಷ್ಣ ಕಾರಂತರ ಜನನ. ತಂದೆ ಸುಬ್ರಾಯ ಕಾರಂತ. ತಾಯಿ ಮೀನಾಕ್ಷಿ ಅಮ್ಮ. ಮಗ ಜಯರಾಮ. ಮಗಳು ಮೀನಾಕ್ಷಿ. ಕಾರಂತರ ಅಳಿಯ ಭಾಗವತ ರಾಮಕೃಷ್ಣ ಮಯ್ಯ. ಇವರ ಕನಸಿನ 'ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ'ವು ಕಾರಂತರ ಜನ್ಮಶತಮಾನೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ 'ಯಕ್ಷಪೂರ್ಣಿಮ' ಶೀರ್ಶಿಕೆಯಲ್ಲಿ ಆಚರಿಸಿದೆ.  ಹನ್ನೆರಡು ತಾಳಮದ್ದಳೆಗಳನ್ನು ಕೇರಳ, ಕರ್ನಾಟಕಗಳಲ್ಲಿ ಏರ್ಪಡಿಸಿದೆ. ಈ ಮೂಲಕ ಕಾರಂತರು ಮತ್ತೆ ಬದುಕಿದ್ದಾರೆ.
           "ಯಕ್ಷಗಾನ ಕಲಾವಿದ ಎಂದಾಗ ಸಮಾಜವು ಹಗುರವಾಗಿ ಕಾಣುತ್ತಿದ್ದ ಕಾಲಘಟ್ಟದಲ್ಲಿ ನನ್ನ ಮಾವ ಬೆನ್ನುತಟ್ಟಿ ಪ್ರೋತ್ಸಾಹಿಸಿದವರು. ಈ ಋಣ ಹೇಗೆ ತೀರಿಸಲಿ? ಹಿರಿಯರನ್ನು ಮಾನಿಸಬೇಕೆನ್ನುವುದು ಯಕ್ಷಗಾನ ಕಲಿಸಿದ ಪಾಠ. ಹೋದೆಡೆಯಲ್ಲೆಲ್ಲಾ ಕಲಾಭಿಮಾನಿಗಳು ಪ್ರಾಂಜಲವಾಗಿ ಪ್ರೋತ್ಸಾಹಿಸಿದ್ದಾರೆ," ಎನ್ನುತ್ತಾರೆ ರಾಮಕೃಷ್ಣ ಮಯ್ಯರು. ಯಕ್ಷಪೂರ್ಣಿಮಾದ ಸಮಾರೋಪವು ಅಕ್ಟೋಬರ್ 24 (ಇಂದು) ಬೆಳಿಗ್ಗೆ ಗಂಟೆ 10 ರಿಂದ ರಾತ್ರಿ 10ರ ತನಕ ಮಧೂರು ಪರಕ್ಕಿಲದಲ್ಲಿ ಸಂಪನ್ನವಾಗಿದೆ.  ಸಂಸ್ಮರಣೆ, ಗೋಷ್ಠಿ, ತಾಳಮದ್ದಳೆ, ಸಾಧಕ ಸಂಮಾನ, 'ಪುಳ್ಕೂರು ಬಾಚ' ಪ್ರಸಂಗ ಬಿಡುಗಡೆ, ದೊಂದಿಯಾಟ.. ಹೀಗೆ ತುಂಬು ಕಾರ್ಯಹೂರಣಗಳಿದ್ದುವು.
             ಹನ್ನೆರಡು ಕಾರ್ಯಕ್ರಮಗಳನ್ನು ಸಿರಿಬಾಗಿಲು ರಾಮಕೃಷ್ಣ ಮಯ್ಯರು ಏರ್ಪಡಿಸಿದ್ದರಲ್ಲಾ. ಆಯೋಜಕರಿಗೆ ಹೊರೆಯಾಗದೆ ನೀಡಿದಷ್ಟು ಮೊತ್ತವನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಆದರೆ ಶೇ.70ರಷ್ಟು ಆರ್ಥಿಕತೆಯನ್ನು ತನ್ನ ಯಕ್ಷಗಾನದ ಗಳಿಕೆಯಿಂದಲೇ ಹೊಂದಾಣಿಸಿದ್ದಾರೆ ಎನ್ನುವುದು ಅಜ್ಞಾತ ಸತ್ಯ. ಯಕ್ಷಗಾನವು 'ಪಕ್ಕಾ ಕಮರ್ಶಿಯಲ್'ನತ್ತ ಹೊರಳುತ್ತಿರುವ ದಿನಮಾನದಲ್ಲಿ ಮಯ್ಯರ ಸಾಹಸ ಮತ್ತು ನಿರ್ಧಾಾರದ ಮನಃಸ್ಥಿತಿಗಳು ಗ್ರೇಟ್. ವೃತ್ತಿ/ಹವ್ಯಾಸಿ ಕಲಾವಿದ ಬಂಧುಗಳು ಒಮ್ಮೆ ಕತ್ತು ತಿರುಗಿಸಿ ಇತ್ತ ನೋಡುವಿರಾ? ಅದರಲ್ಲೇನೋ ಸಂದೇಶವಿದೆಯಲ್ವಾ.

No comments:

Post a Comment