Saturday, October 31, 2015

ನಿಜಾರ್ಥದ 'ಒಂದನೇ ವೇಷಧಾರಿ'


             ವಿದ್ವಾಂಸ ಅರ್ಥಧಾರಿಗಳಿದ್ದ ತಾಳಮದ್ದಳೆ. ಸ್ವಗತದಲ್ಲೊಬ್ಬರು ಒಂದೆರಡು ಬಾರಿ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿದ್ದರು. ತಕ್ಷಣ ಭಾಗವತರು 'ಏನಿದರ ಅರ್ಥ' ಎಂದರು. ಅರ್ಥಧಾರಿ ಶ್ಲೋಕದ ಆರ್ಥವನ್ನು ವಿವರಿಸಿ ಅರ್ಥಗಾರಿಕೆ ಮುಂದುವರಿಸಿದರು. ನಂತರ ಭಾಗವತರನ್ನು ಮಾತನಾಡಿಸಿದಾಗ "ಆ ಶ್ಲೋಕದ ಅರ್ಥ ಗೊತ್ತಾಗಬೇಡ್ವಾ. ಪ್ರೇಕ್ಷಕರು ವಿದ್ವಾಂಸರಲ್ಲವಲ್ಲಾ" ಎಂದರು. ನಂತರ ಜರುಗಿದ ಪ್ರದರ್ಶನದಲ್ಲೂ ರಂಗವನ್ನು ನಿಯಂತ್ರಿಸುವ, ತಪ್ಪಾದಾಗ ಸ್ಥಳದಲ್ಲೇ ಸರಿಪಡಿಸುವ ಅವರು 'ಒಂದನೇ ವೇಷಧಾರಿ'ಯಾಗಿ ಕಂಡರು.
              ಇವರು ಬೇರಾರು ಅಲ್ಲ, ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳು. ಇವರೊಬ್ಬ ರಂಗ ನಿರ್ದೇಶಕ. 'ಯಕ್ಷಗಾನಕ್ಕೆ ನಿರ್ದೇಶಕ ಬೇಕೇ ಬೇಡ್ವೇ' ಎಂಬ ಜಿಜ್ಞಾಸೆಗೆ ಕುರಿಯ ಭಾಗವತರು ಪ್ರತ್ಯಕ್ಷ ಉತ್ತರದಂತೆ ಕಂಡರು. ಹಾಗಾಗಿಯೇ ಇರಬೇಕು - ಅವರಿಗೆ ಇಳಿವಯಸ್ಸಲ್ಲೂ ಕೂಟಾಟಗಳಿಗೆ ಬಹು ಬೇಡಿಕೆ. ಸಂಮಾನಗಳ ಮಾಲೆ. ಸರ್ವಾದರಣೀಯ ಪುರಸ್ಕಾರ. ಬೌದ್ಧಿಕ ಮತ್ತು ತಾಂತ್ರಿಕ ಸ್ಪರ್ಶ ಬಯಸುವ 'ದುಶ್ಶಾಸನ ವಧೆ, ಮೈರಾವಣ ಕಾಳಗ, ಇಂದ್ರಕೀಲಕ'ದಂತಹ ಪ್ರಸಂಗಗಳು ಕುರಿಯರನ್ನು ಕಾಯುತ್ತವೆ!
              ಕುರಿಯ ಶಾಸ್ತ್ರಿಗಳು ಮೊದಲು ಹವ್ಯಾಸಿಯಾಗಿ ಬಣ್ಣದ ವೇಷಧಾರಿ. ಕಲಾವಿದರಿಗೆ, ಯಕ್ಷಗಾನಕ್ಕೆ ಗೌರವ ತಂದ ಪ್ರಸಿದ್ಧ ಕುರಿಯ ಮನೆತನ. ಕಲಾವಿದರನ್ನು ಬೆಳೆಸಿದ ಗುರುಕುಲ. ಸಮಗ್ರ ಯಕ್ಷಗಾನದ ನೋಟ, ಮುನ್ನೋಟ. ಇವರ ದೊಡ್ಡಪ್ಪ ಪ್ರಾತಃಸ್ಮರಣೀಯ ಕುರಿಯ ವಿಠಲ ಶಾಸ್ತ್ರಿಗಳು. ಮೇಳಗಳ ಯಾಜಮಾನ್ಯದ ಸರ್ವಾನುಭವ. ಈ ಸಂಸ್ಕಾರದ ಪಾಕದಲ್ಲಿ ಗಣಪತಿ ಶಾಸ್ತ್ರಿಗಳು ಕಲಾ ಬದುಕನ್ನು ಕಟ್ಟಿಕೊಂಡರು. ಭಾಗವತನಾಗಿ ರೂಪುಗೊಂಡರು. ಕಟೀಲು ಮೇಳದಲ್ಲಿ ಗುರಿಕಾರ್ ನೆಡ್ಲೆ ನರಸಿಂಹ ಭಟ್ಟರಿಂದ ಪಕ್ವಗೊಂಡರು. ನಿಜಾರ್ಥದ ಒಂದನೇ ವೇಷಧಾರಿಯಾಗಿ ಬೆಳೆದರು.
             ಕುರಿಯರಿಗೆ ತನ್ನ ಭಾಗವತಿಕೆ ಒಳ್ಳೆಯದಾಗಬೇಕು, ನಾಲ್ಕು ಜನ ಹಾಡಿ ಹೊಗಳಬೇಕು ಎನ್ನುವ ಬಯಕೆ ಇಲ್ಲವೇ ಎಳ್ಳಷ್ಟಿಲ್ಲ. 'ಆಟ ಒಳ್ಳೆಯದಾಗಬೇಕು' ಎಂಬ ಕಾಳಜಿ. ದೈಹಿಕವಾದ ಯಾವುದೇ ಸಮಸ್ಯೆಗಳು ರಂಗದ ಮುಂದೆ ಗೌಣ. "ನನಗೆ ಪ್ರಸಿದ್ಧ ವೇಷಧಾರಿಗಳೇ ಆಗಬೇಕೆಂದಿಲ್ಲ. ಸಾಮಾನ್ಯರನ್ನು ನೀಡಿ. ಆಟ ಮೇಲೆ ಹಾಕ್ತೇನೋ ಇಲ್ವೋ ನೋಡಿ," ಹಿಂದೊಮ್ಮೆ ಹೇಳಿದ್ದರು. ಪಾತ್ರಕ್ಕೆ ಅನುಗುಣವಾಗಿ ಕಲಾವಿದರನ್ನು ಸಿದ್ಧಗೊಳಿಸುವ ಜಾಣ್ಮೆ ಕುರಿಯರಿಗೆ ಹಿರಿಯರ ಬಳುವಳಿ. ಅವರು ಆಡಿಸುವ ಆಟದಲ್ಲೆಲ್ಲಾ ಯಕ್ಷಗಾನದ ಸಮಗ್ರತೆಯ ದರ್ಶನವನ್ನು ಕಂಡಿದ್ದೇನೆ.
           ಕುರಿಯರನ್ನು ಚೌಕಿ(ಬಣ್ಣದ ಮನ)ಯಲ್ಲಿ ಗಮನಿಸಿ. ಪ್ರದರ್ಶನ ಆರಂಭವಾಗುವ ಒಂದು ತಾಸಾದರೂ ಮುಂಚೆ ಆಗಮಿಸುತ್ತಾರೆ. ಒಂದೆಡೆ ಕುಳಿತಿರುತ್ತಾರೆ. ಅವರ ನಿರ್ದೇಶನದ ಪ್ರಸಂಗವಾದರೆ ಕಲಾವಿದರಿಗೆ ಮಾರ್ಗದರ್ಶನ ನೀಡುವ ಹಲವಾರು ಸಂದರ್ಭಗಳಿಗೆ ಸಾಕ್ಷಿಯಾಗಿದ್ದೇನೆ. ಎಷ್ಟು ಪದ್ಯ, ಅದಕ್ಕೆ ಹೇಗೆ ಅರ್ಥ, ರಂಗ ಕ್ರಿಯೆ, ಆಗಮನ-ನಿರ್ಗಮನ..ವನ್ನು ಸ್ಪಷ್ಟವಾಗಿ ಹೇಳುತ್ತಾರೆ. ಹೇಳಿದಂತೆ ರಂಗದಲ್ಲಿ ನಿರ್ವಹಿಸುತ್ತಾರೆ.
           ರಂಗಸ್ಥಳದ ಪಡಿಮಂಚದಲ್ಲಿ ಕುಳಿತರೆ ಸಾಕು. ಇಡೀ ರಂಗವೆ ಶರಣಾಗುವ ಅವ್ಯಕ್ತ ವ್ಯಕ್ತಿತ್ವ. ಪಾತ್ರಗಳು ತನ್ನ ನಿಲುಕಿನಾಚೆ ದಾಟಿದರೆ ಸ್ಥಳದಲ್ಲೇ ಹೊಗಳಿಕೆ. ತಪ್ಪಿದರೆ ಒಂದೆರಡು ಬಾರಿ ಜೀವದಾನ. ಕೈಯಲ್ಲಿದ ಜಾಗಟೆ ದೊಡ್ಡದನಿಯಲ್ಲಿ ಕೂಗಿತೋ ಪಾತ್ರಧಾರಿ ನಿರ್ಗಮಿಸಬೇಕು. ಇಲ್ಲದಿದ್ದರೆ ನಿರ್ಗಮನ ಮಾಡಿಸಿಬಿಡುತ್ತಾರೆ! ಇದು ಭಾಗವತರ ತಾಕತ್ತು. ಕಲಾವಿದರು ಒಪ್ಪಿದ್ದಾರೆ. ರಂಗ ಒಪ್ಪಿದೆ. ಕುಣಿಯುವ ಪಾತ್ರಗಳಿಗೆ ರಂಗದಲ್ಲೇ ಆಶುರಚನೆಯನ್ನು ಮಾಡಿ ಹಾಡಿದ್ದಿದೆ. ಇದರಿಂದ ಕಲೆಗೂ, ಕಲಾವಿದನಿಗೂ ರಂಗಸುಖದ ಅನುಭವ. ಪಾತ್ರವೊಂದರಿಂದ ಸನ್ನಿವೇಶ 'ಬೋರ್' ಆಗುತ್ತದೆ ಎಂದು ಕಂಡರೆ ನಿರ್ದಾಕ್ಷಿಣ್ಯವಾಗಿ ನೇಪಥ್ಯಕ್ಕೆ ತಳ್ಳುತ್ತಾರೆ!
            ಈ ರೀತಿಯ ರಂಗಶಿಕ್ಷಣದಿಂದ ಹಲವಾರು ಕಲಾವಿದರು ಸಿದ್ಧರಾಗಿದ್ದಾರೆ. ಕುರಿಯ ಭಾಗವತರನ್ನು ದಿನವೂ ಜ್ಞಾಪಿಸಿಕೊಳ್ಳುತ್ತಾರೆ. ವೇಷವನ್ನು ಮೆರೆಸುವ ಭಾಗವತಿಕೆ, ರಂಗದ ಕಲಾವಿದರ ಕಷ್ಟ-ಸುಖ, ತಾನೇ ಒಂದು ಪಾತ್ರವಾಗುವ ಲೀನತೆ, ಪ್ರಸಂಗದ ಸಮಗ್ರ ಮಾಹಿತಿ, ಒಂದು ಪ್ರಸಂಗ ಕೃತಿಯನ್ನು ತನ್ನದನ್ನಾಗಿ ಮಾಡಿಕೊಳ್ಳುವ ಪರಿ, ಒಟ್ಟೂ ರಂಗಕ್ಕೆ ಚಿಮ್ಮು ಉತ್ಸಾಹ ತರುವ ಕುರಿಯ ಭಾಗವತರಿಗೆ ಅವರೇ ಸಾಟಿ.
              ಇವರೊಂದಿಗೆ ಮದ್ಲೆಗಾರ ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ಹತ್ತು ವರುಷದ ತಿರುಗಾಟ. ಅವರೆನ್ನುತ್ತಾರೆ, "ರಂಗವು ಹೇಗೆ ಇರಬೇಕು ಎಂದು ಗ್ರಹಿಸಿದ್ದರೋ ಅದರಂತೆ ರೂಪುಗೊಳಿಸುವ ಅಪೂರ್ವ ಪ್ರತಿಭಾವಂತ. ಆಟದ ರೈಸುವಿಕೆಗೆ ರಾಜಿಯಿಲ್ಲದ ನಿರ್ವಹಣೆ. ಕಲಾವಿದರ ನಿಷ್ಠುರಗಳನ್ನು ಎದುರಿಸಿದ್ದಾರೆ. ಕುರಿಯರಂತೆ ಕಲಾವಿದರನ್ನು ವೇಷಕ್ಕೆ ತಯಾರು ಮಾಡುವ ಜ್ಞಾನ ಅಗರಿ ಶ್ರೀನಿವಾಸ ಭಾಗವತರಲ್ಲಿತ್ತು. ಸಂಘಟಕರು ಯಾವುದೇ ಪ್ರಸಂಗ ಹೇಳಲಿ ಅದನ್ನು ಒಪ್ಪಿಕೊಳ್ಳುವ, ಆಟವನ್ನು ಯಶಗೊಳಿಸುವ ಅವ್ಯಕ್ತ ಶಕ್ತಿಯನ್ನು ಕುರಿಯರಲ್ಲಿ ಕಂಡಿದ್ದೇನೆ."
             ಕಲಾವಿದರ ಕಷ್ಟಗಳಿಗೆ ಮಿಡಿಯುವ ಮನಸ್ಸು. ಅನಾರೋಗ್ಯದಲ್ಲಿದ್ದವರಿಗೆ ನೆರವಾಗುವ ಗುಣ. ಮೇಳದಲ್ಲಿದ್ದಷ್ಟು ಸಮಯ ಯಜಮಾನರಿಗೆ ತೊಂದರೆಯಾಗಲಿಲ್ಲ.  ಕಲಾವಿದರ ಯೋಗ-ಕ್ಷೇಮದ ಹೊಣೆಯನ್ನು ಕರ್ತವ್ಯ ದೃಷ್ಟಿಯಿಂದ ಮಾಡುತ್ತಿದ್ದರು. ಹೊಸಬರಿಗೆ ರಂಗದಲ್ಲಿ ಒರಟನಂತೆ ಫಕ್ಕನೆ ಕಂಡರೂ ನಿಜಕ್ಕೂ ಅವರದು ಮಗುವಿನ ಮನಸ್ಸು. ಮರುಗುವ ಮನಸ್ಸು. ಅವರಿಗೆ ಸಿಗುವ ಸಂಭಾವನೆಗಿಂತಲೂ ಹೆಚ್ಚು ಕಲಾವಿದರ ಆರೋಗ್ಯಕ್ಕಾಗಿ ವ್ಯಯಿಸುತ್ತಿದ್ದರು, ಜ್ಞಾಪಿಸುತ್ತಾರೆ ಪದ್ಯಾಣ. ಇಷ್ಟೆಲ್ಲಾ ಪರರಿಗಾಗಿ ಮಿಡಿಯುವ ಕುರಿಯರು ಎಂದೂ ವೈಯಕ್ತಿಕ ಕಷ್ಟ, ಸಮಸ್ಯೆಯನ್ನು ಯಾರಲ್ಲೂ ಹೇಳಿಕೊಂಡಿಲ್ಲ ಎನ್ನುವುದು ಗಮನೀಯ.
            'ಯಕ್ಷಮಿತ್ರ ನಮ್ಮ ವೇದಿಕೆ' ವಾಟ್ಸ್ಪ್ ತಂಡವು ನವೆಂಬರ್ 2ರಂದು ಕುರಿಯ ಭಾಗವತರಿಗೆ ಸಂಮಾನ ಏರ್ಪಡಿಸಿದೆ. ಕಟೀಲಿನಲ್ಲಿ ಸಂಜೆ 7 ಗಂಟೆಗೆ ಸಂಮಾನ ಸಮಾರಂಭ ಜರುಗಲಿದೆ. ಬಳಿಕ ನಿಶಿಪೂರ್ತಿ ಯಕ್ಷಗಾನ. ತಂಡದ ಎರಡನೇ ಕಾರ್ಯಕ್ರಮವಿದು. ಡಾ.ಪದ್ಮನಾಭ ಕಾಮತರ ಸರ್ವಸಾರಥ್ಯ. ನಾಲ್ಕುನೂರಕ್ಕೂ ಮಿಕ್ಕಿ ಸದಸ್ಯರನ್ನೊಳಗೊಂಡ ತಂಡದ ಕಾರ್ಯ ಮಾದರಿ.

(ಚಿತ್ರಗಳು - ಉದಯ ಕಂಬಾರ್, ವರ್ಣ ಸ್ಟುಡಿಯೋ, ಬದಿಯಡ್ಕ)


No comments:

Post a Comment