Monday, October 19, 2015

ರಂಗ ಮರೀಚಿಕೆಗಳ ಮಧ್ಯೆ ಸಜೀವ ಗುರುಕುಲ

            ಅದೊಂದು ಯಕ್ಷಗಾನ ಕಲಿಕಾ ಶಾಲೆ. ದಿನಪೂರ್ತಿ ಗುರುಗಳ ಉಪಸ್ಥಿತಿ. ಶಿಷ್ಯರು ತಮ್ಮ ಬಿಡುವಿನ ವೇಳೆಯಲ್ಲಿ ಕಲಿಯುವ ವ್ಯವಸ್ಥೆ. ಸಮಯ ಹೊಂದಾಣಿಸಿಕೊಂಡರಾಯಿತು. ಗುರುವಿನ ಜತೆ ಇದ್ದು ಬೌದ್ಧಿಕವಾಗಿ ಅಪ್ಡೇಟ್ ಆಗಲು ಅವಕಾಶ.
ಇದು ಗುರು ಮೋಹನ ಬೈಪಾಡಿತ್ತಾಯರ ಕಲಿಕಾ ಶಾಲೆಯ ಸೂಕ್ಷ್ಮ ಚಿತ್ರ. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಗೆ ತಾಗಿಕೊಂಡಿರುವ  ಕಟ್ಟಡವೊಂದರಲ್ಲಿ ಇವರ ಗುರುಕುಲ. ಇಪ್ಪತ್ತಕ್ಕೂ ಮಿಕ್ಕಿ ಅಭ್ಯಾಸಿಗಳು ಒಂದು ವರುಷದಿಂದ ವಿದ್ಯಾರ್ಜನೆ ಮಾಡುತ್ತಿದ್ದಾರೆ.
           ಯಕ್ಷಗಾನ ಕೇಂದ್ರಗಳ ಏರು ಪರ್ವಕಾಲದತ್ತ ತಿರುಗಿ ನೋಡೋಣ.  ಯಕ್ಷಜ್ಞಾನ ಕಲಿಯುವ ದಾಹವಿದ್ದ ನೂರಾರು ಮನಸ್ಸುಗಳು. ಐದಾರು ತಿಂಗಳ ದಿನಪೂರ್ತಿ ಕಲಿಕೆ. ಗುರುಕುಲದಿಂದ ಹೊರ ಬಂದಾಗ ಹತ್ತಾರು ಕನಸುಗಳು. ಕೆಲವರಿಗೆ ವೃತ್ತಿ ಕಲಾವಿದನಾಗುವ ಆಸೆ.  ಮತ್ತೆ ಕೆಲವರಿಗೆ ಸ್ವವೃತ್ತಿಯೊಂದಿಗೆ ಹವ್ಯಾಸಿಯಾಗಿದ್ದುಕೊಳ್ಳುವ ನಿರೀಕ್ಷೆ.
               ಈಚೆಗೆ ಕೇಂದ್ರಗಳು ಅಭ್ಯಾಸಿಗಳ ಅಲಭ್ಯತೆಯಿಂದ ಉಸಿರೆಳೆದುಕೊಳ್ಳುತ್ತಿದೆ. ಸಾಮಾಜಿಕ ಬದುಕಿನ  ಪಲ್ಲಟಗಳ ಜತೆಗೆ ಯಕ್ಷಗಾನವನ್ನು ಪೂರ್ಣಕಾಲಿಕ ವೃತ್ತಿಯನ್ನಾಗಿ ಸ್ವೀಕರಿಸುವ ಅನಿವಾರ್ಯ ಇಲ್ಲದಿರುವುದೂ ಕಾರಣ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಒತ್ತಡ.  ಅಂಕ ಪಡೆಯುವ ಹುಮ್ಮಸ್ಸಿನಲ್ಲಿ ಸಾಂಸ್ಕೃತಿಕ ಭಾವಕ್ಕೆ ಮಸುಕು. ಕೂಡುಕುಟುಂಬ ಛಿದ್ರತೆ - ಹೀಗೆ ಹಲವು ಕಾರಣಗಳನ್ನು ಹುಡುಕಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಯಕ್ಷಗಾನವನ್ನು ಪ್ರೀತಿಸುವ ಮನಸ್ಸಿನ ಶುಷ್ಕತೆ.
               ಬೈಪಾಡಿತ್ತಾಯರ ಗುರುಕುಲ ಈ ಹಿನ್ನೆಲೆಯಲ್ಲಿ ಮುಖ್ಯವಾಗುತ್ತದೆ. 'ವಾರಕ್ಕೊಂದು ಕ್ಲಾಸ್' ಎನ್ನುವ ಪ್ಯಾಕೇಜ್ ಕಲಿಕೆಗಿಂತ ಭಿನ್ನ. ಇದು ಆರ್ಥಿಕವಾಗಿ ಗುರುವಿಗೆ ಸಬಲವಾಗದು. ಆದರೆ ವಿದ್ಯಾರ್ಥಿಗಳಿಗೆ ಗಟ್ಟಿ ಗುರುಬಲ. ವಾರದ ತರಗತಿಗಳು ಬೇರೆ ಬೇರೆ ಕಡೆ ನಡೆದರೆ  ವಿದ್ಯಾರ್ಥಿಗಳ ಸಂಖ್ಯೆ ಅಧಿಕಗೊಳ್ಳಬಹುದು. ಒಂದು ಕಾಲಘಟ್ಟದಲ್ಲಿ ಪುತ್ತೂರು, ಸುಳ್ಯ, ವಿಟ್ಲ, ಸವಣೂರು, ಮುಂಬಯಿ.. ಹೀಗೆ ತರಗತಿಗಳನ್ನು ಮಾಡಿದ ಅನುಭವಿ
               ಇಂದು ಕಲಿಕಾ ಶಾಲೆಗಳು ವಿಸ್ತೃತವಾಗಿವೆ. ಅನುಭವಿ ಕಲಾವಿದರು ಗುರುಗಳಾಗಿ ರೂಪುಗೊಂಡಿದ್ದಾರೆ. ಹವ್ಯಾಸಿ ಕಲಾವಿದರು ಬೆಳೆದಿದ್ದಾರೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿ ತಂಡ ವೃತ್ತಿಪರರಂತೆ ಪ್ರದರ್ಶನ ನೀಡುತ್ತಿವೆ. ಖುಷಿ ಪಡುವ ಸಂಗತಿ. ಮೋಹನ ಬೈಪಾಡಿತ್ತಾಯರ ಗರಡಿಯಲ್ಲಿ ಪಳಗಿದ ಅನೇಕ ಶಿಷ್ಯರು ರಂಗದಲ್ಲಿ ಗುರುತರ ಹೆಜ್ಜೆಯೂರಿದ್ದಾರೆ. ಕಡಬ ನಾರಾಯಣ ಆಚಾರ್ಯ (ದಿ|), ರಮೇಶ ಭಟ್ ಪುತ್ತೂರು, ಜಗನ್ನಿವಾಸ ರಾವ್ ಪಿ.ಜಿ., ವಿಟ್ಲ ಪ್ರಕಾಶ್, ಶ್ರೀಶ ನೆಡ್ಲೆ, ಮಹೇಶ ಕನ್ಯಾಡಿ... ಹೀಗೆ ಸು-ಮನಸ್ಸಿನ ಹಲವು ಶಿಷ್ಯರು ತಮ್ಮ ಗುರುವಿನ ಜ್ಞಾನವನ್ನು ರಂಗದಲ್ಲಿ ಮರುಸೃಷ್ಟಿ ಮಾಡುತ್ತಾರೆ. 'ತಾನು ಬೈಪಾಡಿತ್ತಾಯರ ಶಿಷ್ಯ'ನೆಂದು ಸಂಭ್ರಮಿಸುತ್ತಾರೆ.
               ಸಾಂಸ್ಕೃತಿಕ ವಿಚಾರಗಳನ್ನು ನೋಡುವ ದೃಷ್ಟಿ ಬದಲಾಗುತ್ತಿದೆ. ತಂತ್ರಜ್ಞಾನಗಳ ಬೀಸುನಡೆಗೆ ಯುವಕರು ಹೆಜ್ಜೆ ಹಾಕುತ್ತಿದ್ದಾರೆ. ಬದುಕಿಗೆ ಮಾರಕವೋ, ಪೂರಕವೋ ಎಂದು ಗೊತ್ತಿಲ್ಲದೆ ಮುನ್ನುಗ್ಗುವ ಮನಃಸ್ಥಿತಿಯನ್ನು ನೋಡಿದರೆ ಕಣ್ಣೆದುರೇ ಬೆಳೆಯುತ್ತಿರುವ ಯುವಮನಸ್ಸುಗಳು ಸಾಂಸ್ಕೃತಿಕ ಲೋಕದಿಂದ ಕಳಚಿಕೊಳ್ಳುತ್ತಿದ್ದಾರೇನೋ ಅನ್ನಿಸುತ್ತದೆ. ಈ ವಿಷಾದಗಳ ಮಧ್ಯೆ ಭರತನಾಟ್ಯ, ಸಂಗೀತ, ಯಕ್ಷಗಾನದಂತಹ ಶ್ರೀಮಂತ ಕಲೆಗಳನ್ನು ಅಪ್ಪಿಕೊಂಡ, ಒಪ್ಪಿಕೊಂಡ ಕಲಾಮನಸ್ಸಿನವರಿದ್ದಾರೆ.
              "ಯಕ್ಷಗಾನದ ಒಲವು ಎಲ್ಲೆಡೆ ಇದೆ. ಶಾಲಾ ವ್ಯವಸ್ಥೆಗಳು ಮತ್ತು ಮನೆಯ ವಾತಾವರಣಗಳು ಮಕ್ಕಳನ್ನು ಯಕ್ಷಗಾನ ಪ್ರವೇಶಕ್ಕೆ ಬಿಡುತ್ತಿಲ್ಲ. ಯಕ್ಷ ಕಲಿಕೆ ಕೆಲವೆಡೆ ಐಕಾನ್ ಆಗುತ್ತಿದೆ. ಪೂರ್ಣವಾಗಿ ಕಲಿಯುವ ಹುಮ್ಮಸ್ಸಿರುವುದಿಲ್ಲ. ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಕೆಂಬ ತುಡಿತ. ಮಕ್ಕಳಿಂದ ಹೆಚ್ಚು ಹೆತ್ತವರಲ್ಲಿ ಇಂತಹ ನಡೆಗಳಿವೆ. ಪೂರ್ಣವಾಗಿ ಯಕ್ಷಗಾನದ ಒಂದೊಂದು ವಿಭಾಗದ ಅಭ್ಯಾಸಕ್ಕೆ ಕನಿಷ್ಠವೆಂದರೂ ನೂರೈವತ್ತು ತರಗತಿಗಳು ಬೇಕು" ಎನ್ನುತ್ತಾರೆ ಬೈಪಾಡಿತ್ತಾಯರು.
               ಮುಂಬಯಿಯಲ್ಲಿ ಸ್ವಲ್ಪ ಕಾಲ ಬದುಕಿಗಾಗಿ ವಾಸವಾಗಿದ್ದರು. ಹಲವೆಡೆ ತರಗತಿಗಳನ್ನು ಮಾಡಿದ್ದರು. ಶಿಷ್ಯರ ಸಂಖ್ಯೆ ಅಧಿಕವಾಗಿತ್ತು. ಕರಾವಳಿ ಮೂಲದ ಸಾವಿರಾರು ಮಂದಿ ಮುಂಬಯಿಯಲ್ಲಿ ಇರುವುದರಿಂದ ಯಕ್ಷಗಾನಕ್ಕೆ ತುಂಬು ಬೆಂಬಲ. ಮುಂಬಯಿ ಬದುಕು ಬೈಪಾಡಿತ್ತಾಯರ ಬದುಕಿಗೆ ಟರ್ನ್. "ಮೋಹನ ಬೈಪಾಡಿತ್ತಾಯ ಯಾರೆಂದು ಕರಾವಳಿಯಲ್ಲಿ ಗೊತ್ತಿಲ್ಲ! ಆದರೆ ದೂರದ ಮುಂಬಯಿಯ ಯಕ್ಷಪ್ರಿಯರಿಗೆಲ್ಲ ಗೊತ್ತು," ಎನ್ನುತ್ತಾರೆ. ಅವರ ವಿನೋದದ ಮಾತಿನ ಸುತ್ತ ಕಾಣದ ಬಿಸಿಯುಸಿರಿನ ತಲ್ಲಣಗಳಿವೆ.
            ತನ್ನ ಸೋದರ ಹರಿನಾರಾಯಣ ಬೈಪಾಡಿತ್ತಾಯರು ಮೋಹನರಿಗೆ ಗುರು. ಅತ್ತಿಗೆ ಲೀಲಾವತಿ ಬೈಪಾಡಿತ್ತಾಯರ ಮಾರ್ಗದರ್ಶನ. ಕಲಿಕಾ ನಂತರ ಹತ್ತು ವರುಷ ಹವ್ಯಾಸಿಯಾಗಿ ಸಂಚಾರ. ಬಳಿಕ ಆದಿಸುಬ್ರಹ್ಮಣ್ಯ, ನಂದಾವರ, ಕಾಂತಾವರ, ಕರ್ನಾಟಕ, ಬೆಳ್ಮಣ್ಣು ಮೇಳಗಳಲ್ಲಿ ಎರಡು ದಶಕಗಳ ತಿರುಗಾಟ. ಬೆಳ್ಮಣ್ಣು ಮೇಳದ ವಾಹನ ಅಪಘಾತವು ಮೋಹನರ ಮೇಳ ಜೀವನಕ್ಕೆ ಕೊನೆಬಿಂದು. ಮೂರು ವರುಷ ಓಡಾಡದ ಸ್ಥಿತಿ. ಜತೆಗೆ ಆರ್ಥಿಕ ಸಂಕಟಗಳ ಮಾಲೆ. ಆರೋಗ್ಯ ಸುಧಾರಣೆ. 1995ರಿಂದ ಯಕ್ಷಗಾನ ಗುರುವಾಗಿ ಬದುಕಿಗೆ ದಾರಿ ಮಾಡಿಕೊಂಡರು. "ಬಹುಶಃ ನಾನು ಮೇಳದ ತಿರುಗಾಟದಲ್ಲಿರುತ್ತಿದ್ದರೆ ಎಂದೋ ಕಳೆದುಹೋಗುತ್ತಿದ್ದೆ. ಈಗ ನನಗೆ ನೂರಾರು ಶಿಷ್ಯರಿದ್ದಾರೆ. ಇದು ನನ್ನ ದೊಡ್ಡ ಆಸ್ತಿ," ಎನ್ನುವಾಗ ಮೋಹನರ ಮುಖ ಅರಳುತ್ತದೆ.
           ಮಡದಿ ಲಲಿತಾ. ರಾಮಕೃಷ್ಣ, ನವೀನ ಮಗಂದಿರು. ಮಗಳು ಮಮತಾ. ಉಜಿರೆ ಸನಿಹ ಮಗನ ಮನೆಯಲ್ಲಿ ವಾಸ್ತವ್ಯ. ಅಕ್ಟೋಬರ್ 18ರಂದು ಅಪರಾಹ್ನ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಮೊಹನ ಬೈಪಾಡಿತ್ತಾಯರಿಗೆ ಶಿಷ್ಯಾಭಿವಂದನ ಸಮಾರಂಭ. ಅರುವತ್ತಮೂರರ ಕಾಣ್ಕೆ. ಕಣ್ಣಿಗೆ ಕಾಣದ ತನ್ನ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ಕಂಡು ಆನಂದಿಸುವ ಕ್ಷಣ.


No comments:

Post a Comment