Tuesday, August 8, 2017

ಅದು ನುಡಿತವಲ್ಲ, ಒಂದು ಪಾತ್ರ

ಪ್ರಜಾವಾಣಿಯ 'ದಧಿಗಿಣತೋ' / 31-3-2017

                ಶ್ರೀ ಕಟೀಲು ಮೇಳದ ಆಟ. ದೇವೀ ಮಹಾತ್ಮೆ ಪ್ರಸಂಗ. ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆ. ಪದ್ಯಾಣ ಶಂಕರನಾರಾಯಣ ಭಟ್ಟರ (ಶಂಕರಪ್ಪಚ್ಚಿ, ಶಂಕರಣ್ಣ ಎನ್ನುವುದು ಆಪ್ತನಾಮ) ಚೆಂಡೆವಾದನ. ಮೊನ್ನೆಯಷ್ಟೇ ದೈವಾಧೀನರಾದ ಗೇರುಕಟ್ಟೆ ಗಂಗಯ್ಯ ಶೆಟ್ಟರ ಮಹಿಷಾಸುರನ ಪಾತ್ರ. ಮಹಿಷ ರಂಗಕ್ಕೆ ಪ್ರವೇಶವಾಗಿ ಶ್ರೀದೇವಿಯಲ್ಲಿ ಹತನಾಗುವ ವರೆಗಿನ ಒಂದೊಂದು ಕ್ಷಣಗಳ ರಂಗಕ್ರಿಯೆಗಳಿವೆಯಲ್ಲಾ, ನಿಜಕ್ಕೂ ಅದೊಂದು ರೂಪಕ. ಭಾವಾಭಿನಯಕ್ಕೆ ಶಂಕರ ಭಟ್ಟರ ಚೆಂಡೆಯ ನುಡಿತಗಳ ಭಾಷಾಲೇಪ. ಭಾವದ ಭಾಷೆ ಸುಲಭವಾಗಿ ಪ್ರೇಕ್ಷಕರಿಗೆ ಅರ್ಥವಾಗಬಹುದಾದ ನಾದಾಲೋಕ. ಇವರ ಚೆಂಡೆಯ ನುಡಿತವೇ ಇಡೀ ಪ್ರಸಂಗವನ್ನು ಚೊಕ್ಕವಾಗಿ ಮುನ್ನಡೆಸಿತ್ತು.
                ಗಂಗಯ್ಯ ಶೆಟ್ಟರ ಮಹಿಷಾಸುರನ ಒಂದೊಂದು ಹೆಜ್ಜೆಗೂ ಶಂಕರ ಭಟ್ಟರ ವೈವಿಧ್ಯದ ಮೆಲು ನುಡಿತಗಳು ಒಂದು ಹಿತಾನುಭೂತಿ. ರಂಗ ಪ್ರವೇಶಿಸಿದ ಬಳಿಕ ತಾಯಿಯನ್ನು ಕಾಣುವಾಗ ಮಾತೃವಾತ್ಸಲ್ಯ, ಪ್ರೀತಿಗಳ ಅಭಿವ್ಯಕ್ತಿ ಮರೆಯುವಂತಹುದಲ್ಲ. ತಾಯಿಯ ಜತೆಗಿರುವ ಮಹಿಷ, ಬ್ರಹ್ಮನಿಂದ ವರ ಪಡೆದ ಮಹಿಷ, ದೇವಲೋಕ ಮುತ್ತಿಗೆ ಹಾಕುವ ಮಹಿಷ, ಸ್ವರ್ಗವನ್ನು ಸ್ವಾಧೀನ ಪಡೆದಾದ ಬಳಿಕದ ಮಹಿಷ, ಶ್ರೀದೇವಿ ಯುದ್ಧಕ್ಕೆ ಬಂದಿದ್ದಾಳೆ ಎಂದು ತಿಳಿದ ಮಹಿಷ 'ಪರಿಪರಿಯ ಉತ್ಪಾತಗಳ ಕಾಣುತ..' ಪದ್ಯಕ್ಕೆ ಅಬ್ಬರಿಸುವ ಮತ್ತು ಶ್ರೀದೇವಿಯೊಂದಿಗೆ ಕಾಳಗ ಕೊಡುವ ಮಹಿಷ.. ಹೀಗೆ ಒಂದೊಂದು ಘಟ್ಟದಲ್ಲೂ ಮಹಿಷನ ಅಸುರತ್ವದ ಭಾವಗಳನ್ನು ಗಂಗಯ್ಯ ಶೆಟ್ಟರು ಪ್ರಸ್ತುತಿಪಡಿಸುತ್ತಿದ್ದ ದಿನಮಾನಗಳು ನೆನಪು.
           ಗಂಗಯ್ಯ ಶೆಟ್ಟರ ಭಾವಸ್ಫುರಣಗಳ ಹಿಂದೆ ಕುರಿಯ ಶಾಸ್ತ್ರಿಗಳ ಮತ್ತು ಶಂಕರ ಭಟ್ಟರ ನೇಪಥ್ಯದ ನಾದಪೀಯೂಷಗಳು ಪೂರಕ. ಈ ಮೂವರು ರಂಗದಲ್ಲಿರುವಷ್ಟು ದಿನ ಮಹಿಷ ವಧೆ ಆಖ್ಯಾನಕ್ಕೆ ಮುಗಿಬೀಳುವ ಯಕ್ಷಪ್ರಿಯರನ್ನು ನೋಡಿದ್ದೇನೆ, ಬೆರಗಾಗಿದ್ದೇನೆ. ಇದು  ಯಕ್ಷಗಾನದ ಪರಿಭಾಷೆಯಲ್ಲಿ ನಿಜಾರ್ಥದ 'ಕೊಡುಗೆ, ಸಾಧನೆ'. ಗಂಗಯ್ಯ ಶೆಟ್ಟರು ನಿರ್ವಹಿಸುತ್ತಿದ ಎಲ್ಲಾ ಪಾತ್ರಗಳಲ್ಲೂ 'ಪಾತ್ರ ಮನಸ್ಸು' ಜೀವಂತ. ರಂಗದಲ್ಲವರು ಗಂಗಯ್ಯ ಶೆಟ್ಟರಲ್ಲ. ಅವರೊಂದು ಪಾತ್ರ. ಹಾಗಾಗಿಯೇ ಅವರ ಅಭಿವ್ಯಕ್ತಿಗೆ ಪಾತ್ರಗಳೇ ಖುಷಿಪಟ್ಟಿವೆ.
               ಕಟೀಲು ಮೇಳದ ಈ ಮೂವರ ಜತೆಗಾರಿಕೆಯನ್ನು ಹಲವು ಬಾರಿ ವೀಕ್ಷಿಸಿ ಒಂದೂವರೆ ದಶಕ ದಾಟಿಬಹುದು. ಅಲ್ಲಿಂದ ಶಂಕರ ಭಟ್ಟರು ನನ್ನನ್ನು ಮೋಡಿ ಮಾಡಿದ್ದಾರೆ. ಆಟದ ನೋಟೀಸಿನಲ್ಲಿ ಅವರ ಹೆಸರನ್ನು ನೋಡಿದರೆ ಸಾಕು, ಹಲವು ಬಾರಿ ಆಟಕ್ಕೆ ಹೋಗಿದ್ದುಂಟು. ಹಾಗೆಂದು ಅವರಲ್ಲಿ ಮಾತನಾಡಿದ್ದಿಲ್ಲ. ನನ್ನಲ್ಲೂ ಅವರು ಮಾತನಾಡಿದ್ದಿಲ್ಲ. ಹಿಮ್ಮೇಳದ ಕಲಿಕೆ ಗೊತ್ತಿಲ್ಲದಿದ್ದರೂ ಚೆಂಡೆಯ-ಮದ್ದಳೆಯ ಅವರ ಒಂದೊಂದು ನುಡಿತಗಳು ಅದೇನೋ ಸಂವೇದನೆಯನ್ನು ಉಂಟುಮಾಡಿತ್ತು. ಅದು ಕಿವಿಗೆ ಅಪ್ಪಳಿಸುವುದಲ್ಲ, ಕೇಳಿಸುತ್ತಿದ್ದುವು. ಕರ್ಕಶ ಮಾಡುತ್ತಿರಲಿಲ್ಲ, ಕಿವಿಯ ಹತ್ತಿರ ಉಲಿಯುತ್ತಿದ್ದವು.
           ನಾನು ಯಕ್ಷಗಾನಕ್ಕೆ ಶ್ರೀಕಾರ ಬರೆದ ಸಮಯ. ಸುರತ್ಕಲ್ಲಿನ ಮಾರಿಗುಡಿಯಲ್ಲಿ ಬಯಲಾಟ. ಅಂದು ಶಂಕರಣ್ಣನ ಚೆಂಡೆ. ಪ್ರಸಂಗ ಹಿರಣ್ಯಾಕ್ಷ ವಧೆ. ನನ್ನದು ಭೂದೇವಿ. ಹೆಚ್ಚು ವೇಷ ಮಾಡಿದ್ದೇನೆ ಎಂಬ ಕಾರಣಕ್ಕೆ ಸಣ್ಣ ಹಮ್ಮು-ಬಿಮ್ಮು ನನ್ನನ್ನು ಆವರಿಸಿತ್ತು! 'ಪಾತ್ರದ ನಡೆ ಗೊತ್ತುಂಟಾ' ಶಂಕರಪ್ಪಚ್ಚಿಯ ಪ್ರಶ್ನೆ. ಅವರು ಅಷ್ಟು ಕೇಳಿದ್ದೇ ತಡ, ನಾನು ಕಂಗಾಲು. ನನ್ನ ಸ್ಥಿತಿಯನ್ನು ನೋಡಿ, ಕಥೆಯ ನಡೆಯನ್ನು, ಪದ್ಯವನ್ನು ವಿವರಿಸಿ ಹೇಳಿದ್ದರು. ಪಾತ್ರವೂ ತೃಪ್ತಿಕರವಾಗಿ ಮೂಡಿಬಂತು. 'ವೇಷ ಯಶಸ್ಸಾಗಬೇಕಾದರೆ ಬೇರೆ ಆಟಗಳನ್ನು ನೋಡಬೇಕು' ಎಂಬ ಹಿತವಚನವನ್ನೂ ಹೇಳಿದ್ದರು.
                ಬಹುತೇಕ ವೃತ್ತಿ ಕಲಾವಿದರಿಗೆ ಹವ್ಯಾಸಿ ಕಲಾವಿದರನ್ನು ಕಂಡಾಗ ಅದೇನೋ ಮಾನಸಿಕ ಅಂತರ. ಬಹುಶಃ ಅವರ ಕಸುಬಿನ ಸುಭಗತೆಯೂ ಕಾರಣವಿರಬಹುದು. ಆದರೆ ಶಂಕರಣ್ಣನಲ್ಲಿ ಅಂತಹ ಭಾವ ಕಂಡಿಲ್ಲ. ಹಲವಾರು ಕೂಟ, ಆಟಗಳಲ್ಲಿ ಅವರು ಸಿಕ್ಕರೂ, 'ಹಾಗಲ್ಲ ಹೀಗೆ' ಎಂದು ಹೇಳುವುದನ್ನು ಕಂಡಾಗ 'ಯಕ್ಷ ಅಧ್ಯಾಪಕರು' ಸಿಕ್ಕಂತೆ ಖುಷಿಯಾಗುತ್ತಿತ್ತು.
                ಪುತ್ತೂರಿನಲ್ಲಿ ಹಿಂದೊಮ್ಮೆ ಶಂಕರ ಭಟ್ಟರಿದ್ದ ಮೇಳದ ಆಟವನ್ನು ವೀಕ್ಷಿಸುತ್ತಿದ್ದ ಮಹಿಳೆಯೋರ್ವರು ಉದ್ಗರಿಸಿದ್ದು ಏನು ಗೊತ್ತೇ - 'ಶಂಕರ ಭಟ್ಟರ ಚೆಂಡೆ ಮಾತನಾಡುತ್ತಿತ್ತು'. ಹಿಮ್ಮೇಳದ ಗಂಧಗಾಳಿಯಿಲ್ಲದ, ಯಕ್ಷಗಾನದ ಸೂಕ್ಷ್ಮ ವಿಚಾರಗಳ ಬಗ್ಗೆ ಅಷ್ಟೊಂದು ಅರಿವಿಲ್ಲದ ಓರ್ವ ಪ್ರೇಕ್ಷಕ ಮಹಿಳೆ ಹೀಗೆ ಉದ್ಗರಿಸಬೇಕಿದ್ದರೆ, ಅವರ ಚೆಂಡೆಯ ದನಿ ಎಷ್ಟೊಂದು ಮೋಡಿ ಮಾಡಿದ್ದಿರಬಹುದು.
               ನಮ್ಮಲ್ಲಿ ಯಕ್ಷಗಾನ ನೋಡುವ ಅದೆಷ್ಟೋ ಪ್ರೇಕ್ಷಕರಲ್ಲಿ ಯಕ್ಷಗಾನವನ್ನು ಅನುಭವಿಸುವ, ವಿಮರ್ಶಿಸುವ ಪರಿಪಾಠವಿದೆ. ಇಂತಹವರ ವಿಮರ್ಶೆ ವಸ್ತುನಿಷ್ಠವಾಗಿರುತ್ತವೆ. ವ್ಯಕ್ತಿಪರವಾಗಿರುವುದಿಲ್ಲ. ಇದರಲ್ಲಿ ಶೈಕ್ಷಣಿಕ ಶಿಸ್ತು ಇಲ್ಲದೇ ಇರಬಹುದು. ಆದರೆ ಅನುಭವಿಸಿದ 'ಅನುಭವ' ಇದೆಯಲ್ಲಾ, ಅದು ವಿಮರ್ಶಾ ರೂಪದಲ್ಲಿ ಹೊರ ಬಂದಾಗ, 'ಹೆಚ್ಚು ಗೊತ್ತಿದೆ ಎಂದು ತಿಳಿದಿರುವ' ನಮಗದು ಢಾಳಾಗಿ ಕಂಡರೂ, ಅದರ ಹಿಂದೆ ಸತ್ಯವಿದೆ ಎಂಬುದನ್ನು ಮರೆಯಲಾಗದು.
            ಶಂಕರಣ್ಣನ ಚೆಂಡೆಯಲ್ಲಿ ಆ ಮಹಿಳೆ ಗುರುತಿಸಿದ 'ಚೆಂಡೆ ಮಾತನಾಡುತ್ತದೆ' ಎಂಬ ಮಾತಿದೆಯಲ್ಲಾ ಅದನ್ನು ಈ ಹಿನ್ನೆಲೆಯಿಂದ ಅರ್ಥ ಮಾಡಿಕೊಳ್ಳಬೇಕು. ಪಾತ್ರಧಾರಿ ಮಾತ್ರ ಪಾತ್ರದೊಳಗೆ ಪರಾಕಾಯ ಪ್ರವೇಶ ಮಾಡುವುದಲ್ಲ, ಚೆಂಡೆವಾದಕನೂ ಪ್ರವೇಶ ಮಾಡುತ್ತಾನೆ ಎಂಬುದಕ್ಕೆ ದುಶ್ಶಾಸನ ವಧೆ..ಯಂತಹ ಪ್ರಸಂಗಗಲ್ಲಿ ಇವರ ತಾದಾತ್ಮ್ಯ ಸಾಕ್ಷಿಯಾಗಿ ಸಿಗುತ್ತದೆ. ಚೆಂಡೆ-ಮದ್ದಳೆಯ ವಾದನಕ್ಕೆ ಮಾಧುರ್ಯ ತುಂಬಿದ ಕಲಾವಿದ. ಪದ್ಯವನ್ನು ಅನುಸರಿಸಿಕೊಂಡೇ ಹೋಗುವ ನುಡಿತ. ಹಳೆಯ ಮತ್ತು ಹೊಸ ಕ್ರಮಗಳ ಸಮನ್ವಯತೆ.
             ಶಂಕರಪ್ಪಚ್ಚಿ ರಂಗದಲ್ಲಿ ಇರುವಷ್ಟು ಹೊತ್ತು ಪೂರ್ತಿ ಸಕ್ರಿಯ. ಉದಾಸೀನ ಎಂಬುದು ಅವರಿಂದ ದೂರ. ಪಾತ್ರಧಾರಿಗಳಿಗೆ ಸ್ಫೂರ್ತಿಯನ್ನು ನೀಡಿ, ಅವರಿಂದ 'ಕಸುಬನ್ನು' ಹೊರತೆಗೆದು ರಂಗದಲ್ಲಿ ಅನಾವರಣಗೊಳಿಸುವ ಪರಿ ಅಪರೂಪ. ಆಯಾಯ ಪಾತ್ರಗಳಿಗೆ ಹೊಂದುವ ಲಯ, ನಡೆ. ಪಾತ್ರಧಾರಿ ಎಷ್ಟೇ ವೇಗದಲ್ಲಿರಲಿ, ಪಾತ್ರದ-ಪ್ರಸಂಗದ ವೇಗಕ್ಕನುಸಾರವಾದ ಹಿಡಿತ. ಹಾಗಾಗಿ ಶಂಕರಪ್ಪಚ್ಚಿ ರಂಗದಲ್ಲಿದ್ದರೆ ಮದ್ದಳೆಗಾರ ಮತ್ತು ಭಾಗವತ ಹೆದರುವ ಅಗತ್ಯವೇ ಇಲ್ಲ.
            ಪದ್ಯಾಣ ಜಯರಾಮ ಭಟ್ಟರು ಶಂಕರ ಭಟ್ಟರನ್ನು ಹತ್ತಿರದಿಂದ ಬಲ್ಲವರು, ಸರಿಯಾಗಿ ಕುಣಿಯುವವರಿದ್ದರೆ, ಹಾಡುವವರಿದ್ದರೆ ಶಂಕರಪ್ಪಚ್ಚಿಯ 'ದೇಕಿ'ಯೇ (ಉತ್ಸಾಹ, ರಂಗವನ್ನು ಎತ್ತಿಕೊಡುವ ಅವ್ಯಕ್ತ ಶಕ್ತಿ) ಬೇರೆ! ಚೌಕಿಯಲ್ಲಿ ಶ್ರುತಿ ಮಾಡುವಾಗ ಯಾರಾದರೂ ಮಾತನಾಡಿಯೋ, ಮೈಕಿನ ಸೌಂಡನ್ನು ಹೆಚ್ಚು ಮಾಡಿಯೋ ಹರಟೆ ಮಾಡಿದರಂತೂ ಕೆರಳಿಬಿಡುತ್ತಾರೆ. ಅಷ್ಟೊಂದು ಏಕಾಗ್ರತೆ. ತನ್ನ ವೃತ್ತಿಗೆ ನ್ಯಾಯ ಸಲ್ಲಿಸುವ ರೀತಿ ಅನನ್ಯ ಎಂದು ನೆನಪಿಸಿಕೊಳ್ಳುತ್ತಾರೆ.
ಭಾಗವತಿಕೆಯ ಆಸ್ವಾದನೆ ಅವರ ಧನಾಂಶ. ರಾಗಗಳನ್ನು ಅನುಭವಿಸುವ ಅಪರೂಪದ ವ್ಯಕ್ತಿತ್ವ. ದುಃಖ, ಕರುಣ ಸಂದರ್ಭಗಳು ಬಂದಾಗ ಬಹುತೇಕ ಚೆಂಡೆವಾದಕರು ಚೆಂಡೆಯನ್ನು ಕೆಳಗಿಟ್ಟು ನೇಪಥ್ಯಕ್ಕೆ ಸರಿಯುತ್ತಾರೆ. ಮತ್ತೆ ಭಾಗವತರು ಕರೆದಾಗಲಷ್ಟೇ ಬಂದಾರು. ಶಂಕರ ಭಟ್ಟರು ಹಾಗಲ್ಲ, ಅಲ್ಲಿನ ದೃಶ್ಯವನ್ನು, ಆ ಸಂದರ್ಭದ ಪದ್ಯವನ್ನು ಮನದಲ್ಲೇ ಗುಣುಗುಣಿಸುತ್ತಾ ಅನುಭವಿಸುತ್ತಾರೆ.
              ಯಾಕೋ ಏನೋ ಅವರೊಂದಿಗಿನ ಮಾತುಕತೆ ಮನಸ್ಸಿಗೆ ಹತ್ತಿರವಾದ ಕಾಲದಿಂದಲೇ ನನಗವರು 'ಅಪ್ಪಚ್ಚಿ.' ಎಲ್ಲರೂ ಹೇಳುವುದನ್ನು ಕೇಳಿಯೋ ಏನೋ ಅವರನ್ನು ಹಾಗೆಯೇ ಕರೆಯಲು ಆರಂಭಿಸಿರಬಹುದು. ಆದರೆ ಅವರೊಂದಿಗೆ ಮಾತನಾಡುವಾಗಲೆಲ್ಲಾ 'ಅಪ್ಪಚ್ಚಿ'(ಚಿಕ್ಕಪ್ಪ)ಯೊಂದಿಗೆ ಮಾತನಾಡಿದ ಅನುಭವ ನನಗಂತೂ ಆಗಿದೆ ಸತ್ಯ.
'ತಾನಾಯಿತು, ತನ್ನ ಕಸುಬಾಯಿತು' ಎಂದು ಇದ್ದು ಬಿಡುವ ಸ್ವಭಾವ. ಅವರಾಗಿ ಏನೂ ಹೇಳರು. ಆದರೆ ನಾವಾಗಿ ಪ್ರಶ್ನಿಸಿದರೆ, ಕೆಣಕಿದರೆ  ಓತಪ್ರೋತವಾಗಿ ಉತ್ತರಗಳ ಸರಮಾಲೆ. ಮಾತಿನಲ್ಲಿ ಹಿತ, ಮಿತ. ಹಾಸ್ಯಮಿಶ್ರಿತ ಮಾತುಗಳ ಒಡನಾಟ. ಅವರದ್ದೇ ಆದ ಭಾಷೆ, ಭಾವ ಪ್ರಪಂಚ. ಅದರೊಳಗೆ ಆಪ್ತತೆಯಿದೆ. ಮೋಡಿ ಮಾಡುವ ಕಾಂತ ಶಕ್ತಿಯಿದೆ.
(ಚಿತ್ರ : ರಾಮ್ ನರೇಶ್ ಮಂಚಿ)


No comments:

Post a Comment