Thursday, August 24, 2017

ಭಾವಕೋಶದೆಡೆಗೆ ಜಾರಲು ಪಾತ್ರಗಳು ಅಂಜುತ್ತಿವೆ!


ಪ್ರಜಾವಾಣಿಯ ದಧಿಗಿಣತೋ ಅಂಕಣ / 5-5-2017

               ಹಿರಿಯ ಸ್ತ್ರೀಪಾತ್ರಧಾರಿ ಡಾ. ಕೋಳ್ಯೂರು ರಾಮಚಂದ್ರ ರಾಯರ 'ದ್ರೌಪದಿ', ಅರುವ ಕೊರಗಪ್ಪ ಶೆಟ್ಟರ 'ದುಶ್ಶಾಸನ', ಕೆ.ಗೋವಿಂದ ಭಟ್ಟರ 'ಕೌರವ', ರಾಮದಾಸ ಸಾಮಗರ 'ಶಕುನಿ' - 'ಅಕ್ಷಯಾಂಬರ ವಿಲಾಸ' ಪ್ರಸಂಗದ ಒಂದು ಪ್ರದರ್ಶನದಲ್ಲಿ ಬಣ್ಣ ಹಚ್ಚಿದ ಖ್ಯಾತರಿವರು. ಏನಿಲ್ಲವೆಂದರೂ ಎರಡು ದಶಕ ಮೀರಿತು. ಅಂದಿನ ರಂಗಾಭಿವ್ಯಕ್ತಿಯ ಚಿತ್ರವಿನ್ನೂ ಹಸಿಯಾಗಿದೆ. ದ್ರೌಪದಿಯ ಆರ್ತನಾದ, ದುಶ್ಶಾಸನನ ಅಟ್ಟಹಾಸ, ಕೌರವನ ಬೊಬ್ಬಾಟ, ಶಕುನಿಯ ಕುತಂತ್ರ... ಪಾತ್ರ ಸ್ವಭಾವಗಳು ಕಲಾವಿದರ ಮೈಮೇಲೆ ಆವೇಶವಾಗಿದ್ದುವು. ಮೂರುವರೆ ಗಂಟೆಗಳಷ್ಟು ಜರುಗಿದ ಆಟದಲ್ಲಿ ಪಾತ್ರಧಾರಿಗಳೇ ಮರೆತುಹೋಗಿದ್ದರು.
                'ದ್ರೌಪದಿ'ಯಾಗಿದ್ದ ಕೋಳ್ಯೂರರು ಪಾತ್ರವನ್ನು ಮುಗಿಸಿ ನೇಪಥ್ಯಕ್ಕೆ ಬಂದಿದ್ದರಷ್ಟೇ. ಅತ್ತು ಅತ್ತು ಕಣ್ಣುಗಳೆಲ್ಲಾ ಕೆಂಪಗಾಗಿದ್ದುವು. ಕಪೋಲಗಳು ಕಣ್ಣೀರಿನಿಂದ ತೋಯ್ದಿದ್ದವು. ಕಾಲು ಗಂಟೆ ಬಿಟ್ಟು ಬನ್ನಿ ಎಂದರು. ಒಂದೆರಡು ಗಂಟೆ ಕಳೆದು ಕೋಳ್ಯೂರರನ್ನು ಮಾತನಾಡಿಸಲು ಹೋದಾಗ ವಿಶ್ರಾಂತಿಯಲ್ಲಿದ್ದರು. ಪಾತ್ರಧಾರಿ ತನ್ನ ಪಾತ್ರ ಮುಗಿಸಿ ಚೌಕಿಗೆ ಸರಿಯುತ್ತಿರುವಾಗ ಆತ ತನ್ನೊಳಗಿನ ಪಾತ್ರವನ್ನು ಪೂರ್ತಿಯಾಗಿ ಕಳಚಿರುವುದಿಲ್ಲ. ಕಳಚಿ ಮೊದಲಿನಂತಾಗಲು ಸ್ವಲ್ಪ ವೇಳೆ ಬೇಕಾಗುತ್ತದೆ. ಅದಕ್ಕಾಗಿ ಸ್ವಲ್ಪ ಬಿಟ್ಟು ಬನ್ನಿ ಅಂದೆ ಎಂದು ನಕ್ಕಿದ್ದರು.
                ಹಿಂದೊಮ್ಮೆ ಕೋಳ್ಯೂರರ 'ಚಂದ್ರಮತಿ'ಯನ್ನು ನೋಡಿದ್ದೆ. ಮಗ 'ಲೋಹಿತಾಶ್ವ'ನ ಶವವನ್ನು ಎತ್ತಿಕೊಂಡು ಸ್ಮಶಾನಕ್ಕೆ ತೆರಳುವ ಸಂದರ್ಭ. ರಂಗದಿಂದ ಆತನನ್ನು ಎತ್ತಿಕೊಂಡು ಪರದೆಯ ಹಿಂದೆ ಬಂದಿದ್ದರಷ್ಟೇ. ಆಗ ಸಂಘಟಕರಿಂದ ಧನ್ಯವಾದ ಸಮರ್ಪಣೆ. ಛೇ... ಪ್ರಸಂಗವನ್ನು ಹಾಳುಮಾಡಿಬಿಟ್ಟರು ಎಂದು ಗೊಣಗುತ್ತಿದ್ದ ಕೋಳ್ಯೂರರ ಕೈಯಲ್ಲಿ ಲೋಹಿತಾಶ್ವ ಎತ್ತಿಕೊಂಡ ಸ್ಥಿತಿಯಲ್ಲಿದ್ದದ್ದ. ಅವನನ್ನು ಕೆಳಗಿಳಿಸಲಿಲ್ಲ. ಒಂದೈದು ನಿಮಿಷದ ಬಳಿಕ ಪ್ರಸಂಗ ಮುಂದುವರಿಯಿತು. "ನೋಡಿ.. ಕರುಣಾಜನಕವಾದ ಸನ್ನಿವೇಶ. ತಾಯಿಯು ತನ್ನ ಮಗನ ಶವವನ್ನು ಹೊತ್ತುಕೊಂಡು ಹೋಗಿ ಸ್ಮಶಾನದಲ್ಲಿ ಆತನನ್ನು ಕಾಷ್ಠಕ್ಕಿಡುವ ಕ್ಷಣ. ಹಿಮ್ಮೇಳ, ಪಾತ್ರಧಾರಿ, ಪ್ರೇಕ್ಷಕರು..ಎಲ್ಲರೂ ಕಥಾಜಾಡಿನಲ್ಲಿರುತ್ತಾರೆ. ಈ ಗುಂಗಿಗೆ ಬ್ರೇಕ್ ಹಾಕಿದಾಗ ಮತ್ತೆ ಪಾತ್ರದೊಳಗೆ ಪ್ರವೇಶ ಮಾಡಲು ಅಂದು ಕಷ್ಟಸಾಧ್ಯವಾಗುತ್ತದೆ," ಎಂದಿದ್ದರು.
               ಕೋಡಪದವಿನಲ್ಲೊಮ್ಮೆ ಹರಿದಾಸ್ ಮಲ್ಪೆ ರಾಮದಾಸ ಸಾಮಗರ 'ಹರಿಶ್ಚಂದ್ರ'. ಹೆಂಡತಿ, ಮಕ್ಕಳನ್ನು ಮಾರುವ ಸನ್ನಿವೇಶ. ಸಾಮಗರಂದು ನಿಜ ಹರಿಶ್ಚಂದ್ರನಾಗಿದ್ದರು! ಗೋಳೋ ಎಂದು ಅಳುತ್ತಾ, ತನ್ನ ತಲೆಗೆ-ಎದೆಗೆ ಬಡಿದುಕೊಳ್ಳುತ್ತಿದ್ದ ದೃಶ್ಯದಲ್ಲಿ ಪ್ರೇಕ್ಷಕರೂ ಅತ್ತಿದ್ದರು! ಪಾತ್ರವೊಂದು ಗರಿಷ್ಠತಮ ಎಷ್ಟು ಪರಿಣಾಮ ಕೊಡಬಹುದೋ ಅಷ್ಟನ್ನು ಸಾಹಿತ್ಯಿಕವಾಗಿ, ಅಭಿನಯಪೂರ್ವಕವಾಗಿ ತೋರಿದ್ದರು. ಅದು ಅಭಿನಯವಾಗದೆ ಸಹಜವಾಗಿ ಚಿತ್ರಿತವಾಗಿತ್ತು. ಅಂದು ದಿನೇಶ ಅಮ್ಮಣ್ಣಾಯರ ಭಾಗವತಿಕೆ. ಇಡೀ ರಂಗ, ಟೆಂಟ್ ಮತ್ತು ಚೌಕಿಯ ಕಲಾವಿದರು ಕೂಡಾ ಈ ಸನ್ನಿವೇಶಕ್ಕೆ ಸಾಕ್ಷಿಯಾಗಿ ಗಪ್ಚಿಪ್ ಆಗಿದ್ದರು. ಸೂಜಿ ಬಿದ್ದರೂ ಸದ್ದು ಕೇಳುವಷ್ಟು ಮೌನ.
                ಇಂತಹ ರಂಗದ 'ಅನುಭವಿಸುವಿಕೆ' ವಿಚಾರವೇ ವರ್ತಮಾನದಲ್ಲಿ ಮಾಸಿದಂತೆ ಕಾಣುತ್ತದೆ!  ಆಡಂಬರದ ಗೌಜಿ-ಗಮ್ಮತ್ತುಗಳು ಪಾತ್ರವನ್ನು ನುಂಗುತ್ತವೆ. ಪಾತ್ರಧಾರಿಗಳು ಒಪ್ಪಿಕೊಳ್ಳುತ್ತಾರೆ, ಬಿಡಿ. ಈ ಸೂಕ್ಷ್ಮ ವಿಚಾರಗಳು ಮೇಲ್ನೋಟಕ್ಕೆ ಅಗೋಚರ. ಆದರೆ ಪ್ರದರ್ಶನದ ಪರಿಣಾಮದಲ್ಲಿ ಎದ್ದು ಕಾಣುತ್ತದೆ. 'ಚಂದ್ರಮತಿ, ದ್ರೌಪದಿ, ಕಯಾದು, ಸುಭದ್ರೆ' ಪಾತ್ರಗಳು ರಂಗದಲ್ಲಿ ಅಳುತ್ತಿರುವಾಗ ಪ್ರೇಕ್ಷಕರಾದ ನಾವು ನಗುತ್ತಿರುತ್ತೇವೆ! ಅಲ್ಲ, ನಿರ್ಲಿಪ್ತರಾಗಿರುತ್ತೇವೆ. ಅದರರ್ಥ ನಮಲ್ಲಿ ರಸ-ಭಾವಗಳ ಶುಷ್ಕತೆಯ ಕೊರತೆ ಎನ್ನುವುದನ್ನು ಒಪ್ಪಿಕೊಳ್ಳಲಾರೆವು.
               ಎಂ.ಕೆ.ರಮೇಶ ಆಚಾರ್ಯರ 'ಕಯಾದು' ಪಾತ್ರವನ್ನು ನೋಡಿ ದುಃಖ ಸಹಿಸಲಾಗದೆ ಟೆಂಟಿನೊಳಗಿಂದ ಹೊರ ನಡೆದ ಅಮ್ಮಂದಿರು ಎಷ್ಟು ಮಂದಿ ಬೇಕು? ಪೂಕಳ ಲಕ್ಷ್ಮೀನಾರಾಯಣ ಭಟ್ಟರ 'ಸಾಂದೀಪನಿ'ಯ ಬದುಕಿನ ಸಂಕಷ್ಟವನ್ನು ನೋಡಿ ಮರುಗಿದ ಮಂದಿಯನ್ನು ನೋಡಿದ್ದೇನೆ. ಪೆರುವೋಡಿ ನಾರಾಯಣ ಭಟ್ಟರ 'ಪಾಪಣ್ಣ' ಪಾತ್ರವನ್ನು ನೋಡಿ ಮನಃಕರಗಿದವರು ಅಗಣಿತ. ಜಾಗೃತ ಪ್ರೇಕ್ಷಕರೊಳಗೆ ಪಾತ್ರಗಳು ಉಂಟುಮಾಡುವ ಪರಿವರ್ತನೆಗಳು ರಂಗದ ಜೀವಂತಿಕೆಗೆ ಮತ್ತು ಪಾತ್ರಧಾರಿಗಳ ಜಾಗೃತ ಚಿತ್ತಾಭಿವ್ಯಕ್ತಿಗೆ ಉದಾಹರಣೆ.
               ಇಂತಹ ರಂಗಸುಖ ಮತ್ತು ರಂಗಪರಿಣಾಮಗಳು ಈಚೆಗಂತೂ ವಿರಳವಾಗುತ್ತಿವೆ. ಬಹುತೇಕ ಪ್ರದರ್ಶನಗಳಲ್ಲಿ ಸಂಘಟಕರ ವಿಶೇಷಾತಿಥ್ಯಗಳು ರಂಗಪರಿಣಾಮಗಳ ಮೇಲೆ ಬಾಧಕವಾಗುವುದನ್ನು ಸ್ವತಃ ಅನುಭವಿಸಿದ್ದೇನೆ. ಪ್ರತಿಷ್ಠಿತರ ಮನೆಯಂಗಳದಲ್ಲಿ 'ದಕ್ಷಾಧ್ವರ' ಪ್ರಸಂಗ. ಕಿಕ್ಕಿರಿದ ಪ್ರೇಕ್ಷಕರು. ಉತ್ತಮ ಅನುಭವಿ ಕಲಾವಿದರು. ಪ್ರೇಕ್ಷಕರು ಮತ್ತು ರಂಗದ ಮೂಡ್ ಒಂದೇ ಸರಳರೇಖೆಯಲ್ಲಿದ್ದುವು. ಅಷ್ಟು ಹೊತ್ತಿಗೆ ಚರುಮುರಿ ಮತ್ತು ಐಸ್ಕ್ರೀಮ್ಗಳು ಪ್ರೇಕ್ಷಕರು ಕುಳಿತಲ್ಲಿಗೆ ವಿತರಣೆಯಾದುವು. ಪರಿಸ್ಥಿತಿ ಹೇಗಿರಬಹುದೆಂದು ಊಹಿಸಿ. ಆಗ ರಂಗದಲ್ಲಿ ಸಂಭಾಷಿಸುತ್ತಿದ್ದ 'ಈಶ್ವರ-ದಾಕ್ಷಾಯಿಣಿ' ಪಾತ್ರಗಳೂ 'ಚರುಮುರಿ'ಯಾದುವು! ಮತ್ತೊಂದೆಡೆ 'ಅಭಿಮನ್ಯು-ಸುಭದ್ರೆ' ಪಾತ್ರಗಳು ಸಂಭಾಷಿಸುತ್ತಿರುವಾಗ ಪ್ರೇಕ್ಷಕ ಸಂದೋಹಕ್ಕೆ ಚಹ ವಿತರಣೆಯಾಯಿತು. ಇಂತಹ ಸಂದರ್ಭಗಳಲ್ಲಿ ಪ್ರೇಕ್ಷಕರ ಮನಸ್ಸು ರಂಗದಿಂದ ವಿಮುಖವಾಗುತ್ತವೆ. ಗುಲ್ಲು ಎದ್ದಂತೆ ಭಾಸವಾಗುತ್ತದೆ. ಮತ್ತೆ ಪ್ರೇಕ್ಷಕರು ಮೊದಲಿನಂತಾಗಬೇಕಾದರೆ ಒಂದರ್ಧ ಗಂಟೆಯಾದರೂ ಬೇಕು. ಅಷ್ಟು ಹೊಂದಿಗೆ ರಂಗವು ಚಹ-ತಿಂಡಿಗಳಿಗೆ ಬಲಿಯಾಗಿರುತ್ತದೆ!
              ಪ್ರದರ್ಶನ ಒಳ್ಳೆಯದಾಗಬೇಕು ಎಂದು ಮಾಡುವ ವ್ಯವಸ್ಥೆಗಳು ಪ್ರದರ್ಶನದ ಯಶಸ್ಸಿಗೆ ಮಾರಕವಾಗುತ್ತಿವೆ. ಇದನ್ನು ಅನಿವಾರ್ಯ ಎನ್ನಲಾಗದು. ರಂಗದಿಂದ ಸ್ವಲ್ಪ ದೂರದಲ್ಲಿ, ರಂಗದ ಕ್ರಿಯೆಗಳಿಗೆ ತೊಂದರೆಯಾಗದಂತೆ ಆತಿಥ್ಯದ ವ್ಯವಸ್ಥೆಯನ್ನು ಮಾಡಬಹುದು. ಮಧ್ಯ ಮಧ್ಯೆ ನಡೆಯುವ ಸಭಾಕಾರ್ಯಕ್ರಮಗಳು, ಉದ್ಘೋಷಣೆಗಳು, ಪ್ರದರ್ಶನ ನಿಲುಗಡೆಗಳಿಂದ ಕಲಾವಿದರಿಗೆ ಪಾತ್ರಗಳನ್ನು ಅನುಭವಿಸಲು ತೊಡಕಾಗುತ್ತದೆ. ಅಪರೂಪಕ್ಕೆ ಆಟ ಆಡಿಸುವ ಸಂಘಟಕರು ಯಕ್ಷಗಾನದ ನಿಜಸುಖದಿಂದ ವಂಚಿತರಾಗುತ್ತಾರೆ.
               ಶಬರಿಮಲೆ ವ್ರತಧಾರಿಗಳು 'ಶಬರಿಮಲೆ ಕ್ಷೇತ್ರ ಮಹಾತ್ಮೆ' ಪ್ರಸಂಗವನ್ನು ಆಡಿಸುವುದು ರೂಢಿ. ಅಧಿಕ ಮಂದಿ ಪ್ರೇಕ್ಷಕರು ನೆರೆದಿರುತ್ತಾರೆ. ಇಂತಹ ಹೊತ್ತಲ್ಲಿ ಸಭಾಸದರಿಗೆ ಸೂಚನೆಗಳನ್ನು ನೀಡುವುದು ವ್ಯವಸ್ಥೆಯ ಒಂದಂಗ.  ಆಗ ರಂಗದಲ್ಲಿ ಪಾತ್ರಗಳು ಸಂಭಾಷಿಸುತ್ತಿದ್ದರೂ, ನಿರ್ವಾಹಕರು ಸೂಚನೆಗಳನ್ನು ಘೋಷಿಸುವುದಕ್ಕೆ ರಂಗಕ್ಕೇರುವ ನೂರಾರು ದೃಷ್ಟಾಂತಗಳಿವೆ. ಇಂತಹ ಬೆಳವಣಿಗೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಇದರಿಂದ ಯಕ್ಷಗಾನ ಕ್ಷೇತ್ರಕ್ಕೆ ಏನೂ ತೊಂದರೆಯಿಲ್ಲ. ಆದರೆ ರಂಗ ಪರಿಣಾಮಗಳು ದೊರಕದೆ ನೀರಸ ಅನುಭವವಾಗುತ್ತದೆ.
                 ಹಿಂದಿನ ಹಿರಿಯ ಕಲಾವಿದರ ಪಾತ್ರಗಳು ನೀಡುತ್ತಿದ್ದ ಭಾವ ಪರಿಣಾಮಗಳ ಛಾಯೆಯನ್ನು ಈಗಿನ ಯುವ ರಂಗನಿಷ್ಠ, ಮೇಳನಿಷ್ಠ ಕೆಲವರಲ್ಲಿ ಕಾಣಬಹುದು. ಅವಿನ್ನೂ ಪಕ್ವತೆಯ ಅಂಚಿನಲ್ಲಿದೆಯಷ್ಟೇ. ಹಿರಿಯ ಕಲಾವಿದರ ಪಾತ್ರಗಳ ಮಾದರಿಗಳ ದಾಖಲಾತಿಗಳು ಇವರಿಗೆ ಅನುಕೂಲವಾಗಬಹುದು. ತೊಟ್ಟ ವೇಷವೊಂದು  ರಂಗದಲ್ಲಿ ಪಾತ್ರವಾಗಬೇಕಾದ ಅರ್ಹತೆಯನ್ನು ಕಲಾವಿದ ಸ್ವಯಂ ಆಗಿ ರೂಢಿಸಿಕೊಳ್ಳಬೇಕಷ್ಟೇ. ಇದಕ್ಕಾಗಿ ಹಿರಿಯ ಕಲಾವಿದರ ಸಂಪರ್ಕ,  ಓದುವಿಕೆ ಮತ್ತು ಜ್ಞಾನ ಹಸಿವಿನ ತೇವವು ಆರದಂತೆ ಸದಾ ಜಾಗೃತವಾಗಿರುವುದು ಮುಖ್ಯ. ಸಂಘಟಕರೂ ಕೂಡಾ ತಮ್ಮ ವ್ಯವಸ್ಥೆಯನ್ನು ಪ್ರದರ್ಶನಕ್ಕೆ ಬಾಧಕವಾಗದಂತೆ ಬದಲಾಯಿಸುವುದೂ ಅನಿವಾರ್ಯವಾಗುತ್ತದೆ.
            ಬಹುಶಃ ಹೀಗೆನ್ನುವುದು ವರ್ತಮಾನದ ಯಕ್ಷ ಮನಃಸ್ಥಿತಿಗೆ ವಿರುದ್ಧವಾಗಬಹುದೇನೋ? ಸಂಘಟಕ, ಕಲಾವಿದ, ಮೇಳ - ಈ ಮೂವರು ಪರಸ್ಪರ ಪೂರಕವಾದ ಮನಃಸ್ಥಿತಿಯನ್ನು ಹೊಂದಿದರೆ ಮಾತ್ರ ಪ್ರದರ್ಶನದ ಯಶಸ್ಸು. ಇಲ್ಲದಿದ್ದರೆ ಪಾತ್ರಗಳು ಭಾವಕೋಶದೆಡೆಗೆ ಜಾರಲು ನಿತ್ಯ ಅಂಜುವ ಸ್ಥಿತಿ ಏರ್ಪಡಬಹುದು!
(ಸಾಂದರ್ಭಿಕ ಚಿತ್ರಗಳು  -  ಶ್ಯಾಮಕುಮಾರ್ ತಲೆಂಗಳ, ಮುರಳಿ ರಾಯರಮನೆ)

No comments:

Post a Comment