Friday, August 4, 2017

ಅಬ್ಬರದ ಅಲೆಯೊಳಗೆ ಕಲೆಯ ಒದ್ದಾಟ, ಅಭಿವ್ಯಕ್ತಿಗಳ ಗುದ್ದಾಟ!


ಪ್ರಜಾವಾಣಿಯ 'ದಧಿಗಿಣತೋ' / 10-3-2017

              ಮೇಳವೊಂದರ 'ದೇವಿ ಮಹಾತ್ಮೆ' ಆಟ. ಅದ್ದೂರಿಯ ಬೆಳಕು, ಧ್ವನಿ ವ್ಯವಸ್ಥೆ. ತುಂಬು ಸಹೃದಯಿ ಪ್ರೇಕ್ಷಕರು. ದೇವಿ ಮಹಾತ್ಮೆ ಪ್ರದರ್ಶನ ಅಂದರೆ ಸಾಮಾನ್ಯವಾಗಿ ಭಕ್ತಿಯ ಮನೋಭಾವದ ಪ್ರೇಕ್ಷಕರು. ಆರಂಭದಲ್ಲಿ ತ್ರಿಮೂರ್ತಿಗಳಿಗೆ ಆದಿಮಾಯೆ ಅನುಗ್ರಹಿಸುವ ಸನ್ನಿವೇಶ. ರಂಗವನ್ನು ಹೊಗೆಯಿಂದ ತುಂಬಿಸಲಾಗಿತ್ತು! ಜತೆಗೆ ಕಣ್ಣು ಕೋರೈಸುವ ಬಣ್ಣ ಬಣ್ಣದ ಆಧುನಿಕ ತಂತ್ರಜ್ಞಾನದ ಬೆಳಕು. ಕೃತಕ ಹೊಗೆಯ ಧಗೆಯೊಳಗೆ ಪಾತ್ರಗಳು ಮಿಂದೇಳುತ್ತಿದ್ದುವು. ಕಾಣದ ಲೋಕಕ್ಕೆ ಸನ್ನಿವೇಶ ಒಯ್ದಿತ್ತು! ಹತ್ತು ನಿಮಿಷ ರಂಗದ ಯಾವ ವ್ಯವಹಾರಗಳೂ ಕಾಣದಷ್ಟು ಕೃತಕ ಧೂಮ.
              ಕೃತಕವಾಗಿ ಧೂಮ ಸೃಷ್ಟಿಸುವ ತಾಂತ್ರಿಕತೆಗಳು ಸ್ಕೂಲ್ಡೇಗಳಂತಹ ಸಾಂಸ್ಕೃತಿಕ ರಂಗದಲ್ಲಿ ಮಾಮೂಲಿ. ಅದೀಗ ಆಟದ ರಂಗಕ್ಕೂ ನುಸುಳಿದೆ. ಉಸಿರಿಗೆ ಮಾರಕವಾದ ರಾಸಾಯನಿಕ(ಕೆಮಿಕಲ್)ಗಳಿಂದ ಸಿದ್ಧವಾದ ಧೂಮವನ್ನು ಸೇವಿಸಲೇಬೇಕಾದ ಪ್ರಾರಬ್ಧ. ಇದರಿಂದಾಗಿ ಕೆಮ್ಮು ಬಂದು ಭಾಗವತಿಕೆ ಮಾಡಲಾಗದ ಸ್ಥಿತಿಯು ಭಾಗವತರೊಬ್ಬರಿಗೆ ಬಂದುದು ನೆನಪಿದೆ. ಇನ್ನು ವೇಷಧಾರಿಗಳ ಪಾಡು? ಪ್ರೇಕ್ಷರಿಗಾದರೆ ಒಂದು ದಿವಸವಲ್ವಾ ಅಂತ ಸುಮ್ಮನಿರಬಹುದು. ವೇಷಧಾರಿಗಳಿಗೆ ನಿರಂತರ ಪಾಡು. 'ಇಂತಹ ವ್ಯವಸ್ಥೆಗಳನ್ನು ಕೈಬಿಡಲಾಗಿದೆ' ಎಂದು ಹೇಳುತ್ತಾ ಬಂದರೂ ಅದ್ದೂರಿತನದ ಪ್ರತಿಷ್ಠೆ ಮೇಳೈಸುತ್ತಲೇ ಇರುತ್ತದೆ. ಅಲ್ಲೋ ಇಲ್ಲೋ ಆದರೆ ಓಕೆ - ಸಹಿಸಬಹುದು.  
             ಧೂಮ ಬಾಧೆ ಒಂದು ಬಾರಿಯಲ್ಲ; ಮಹಿಷಾಸುರನ ಪ್ರವೇಶ, ಚಂಡಮುಂಡರ ಪ್ರವೇಶ, ದೇವಿ ಪ್ರತ್ಯಕ್ಷ.. ಮೊದಲಾದ ದೃಶ್ಯಗಳಲ್ಲಿ ಮರುಕಳಿಸುತ್ತಿತ್ತು. ನಾನು ಇಂತಹ ಧೂಮವನ್ನು ಸೇವಿಸಿ ಧ್ವನಿಕೆಟ್ಟು, ರಂಗದಿಂದ ಸ್ವಲ್ಪ ಹೊತ್ತು ನಿರ್ಗಮಿಸಿದ ಒಂದೆರಡು ಪ್ರದರ್ಶನಗಳು ನೆನಪಾಗುತ್ತವೆ. ಕಣ್ಣು, ಮನಸ್ಸು ಒಪ್ಪದ ರಂಗ ವಿಕಾರಗಳನ್ನು ಸರಿಸುವುದು - ರಂಗಕ್ಕೂ ಕ್ಷೇಮ, ಕಲಾವಿದರಿಗೂ ಆರೋಗ್ಯ. 'ಇಂತಹ ಗಿಮಿಕ್ಸ್ ಮಾಡಿದರೆ ಆಟಕ್ಕೆ ಜನ ಬರ್ತಾರೆ, ಯಕ್ಷಗಾನಕ್ಕೆ ಪ್ರಚಾರ ಸಿಗುತ್ತದೆ,' ಎಂದು ಹಿಂದೊಮ್ಮೆ ಕಲಾವಿದರೊಬ್ಬರು ಹೇಳಿದ್ದರು. ಗಿಮಿಕ್ಸ್ಗಳಿಂದ ಯಕ್ಷಗಾನ ಪ್ರಸಿದ್ಧವಾಗುತ್ತದೆ ಎಂದಾದರೆ ಅಂತಹ ಬೆಳವಣಿಗೆಗಳು ಯಕ್ಷಗಾನಕ್ಕಂತೂ ಖಂಡಿತಾ ಬೇಡ. ಗಿಮಿಕ್ಸ್ನಿಂದ ಬೆಳೆದ ಯಕ್ಷಗಾನದಲ್ಲಿ ಯಕ್ಷಗಾನ ಇದ್ದೀತೇ? ವಾಸ್ತವ ಬೇರೆ, ಅಭಿಮಾನ ಬೇರೆ.
            ಕೆಲವಡೆ 'ಮಹಿಷಾಸುರ' ಪಾತ್ರವನ್ನು ಕಿಲೋಮೀಟರ್ ದೂರದಿಂದಲೇ ಮೆರವಣಿಗೆಯಲ್ಲಿ ಕರೆ ತರಲಾಗುತ್ತದೆ. ಸೂಟೆ, ದೊಂದಿಯ ಮಧ್ಯೆ ಮಹಿಷಾಸುರ ಗಂಡುಗತ್ತಿನಿಂದ ಹೆಜ್ಜೆ ಹಾಕಬೇಕಾಗುತ್ತದೆ! ತಾಯಿ ಮಾಲಿನಿಯ ದನಿ ಕೇಳಿ ಸಭಾಮಧ್ಯದಿಂದ ಮಹಿಷನ ಪ್ರವೇಶವಾಗುತ್ತದೆ. ಆದರೆ ದೂರದ ನಡಿಗೆಯಿಂದ ಬಂದು  ರಂಗಪ್ರವೇಶಿಸುವಾಗ ಎಷ್ಟು ಹೊತ್ತು ವಿಳಂಬವಾದೀತು? ಅಷ್ಟು ಹೊತ್ತು - ಅಂದರೆ ಕನಿಷ್ಠ ಅರ್ಧ ಗಂಟೆಗೂ ಮಿಕ್ಕಿ - ರಂಗ ಖಾಲಿ. ಹಿಮ್ಮೇಳ ಕಲಾವಿದರು ವಾದನವನ್ನು ನಿಲ್ಲಿಸುವಂತಿಲ್ಲ. ಮಹಿಷನ ಪಾತ್ರವನ್ನು ಧರಿಸಿದ ಕಲಾವಿದನಿಗೂ ಮಾನಸಿಕ ಹಿಂಸೆ. ಸಂಘಟಕರ ಕಿರುಕುಳವೆಂಬ ಪ್ರಾರ್ಥನೆಗೆ ಮೌನಸಮ್ಮತಿಯ ಹಿಂದಿರುವ ಮಾನವೀಯ ಮುಖ ನಮಗೇನಾದರೂ ಕಾಣಿಸುತ್ತಿದ್ದೆಯೇ? ಕಾಣಿಸುತ್ತಿದ್ದರೆ ಬಹುಶಃ ಮಹಿಷಾಸುರನನ್ನು ಸಭಾ ವಲಯದಿಂದ ದೂರ ಕರೆದೊಯ್ದು ಸೂಟೆ ಸೇವೆಯೊಂದಿಗೆ ಕರೆತರುತ್ತಿರಲಿಲ್ಲ.
              ಈಚೆಗೆ ನವಮಾಧ್ಯಮ(ಸಾಮಾಜಿಕ ಜಾಲತಾಣ)ಗಳಲ್ಲಿ ಒಂದು ವೀಡಿಯೋ ಹರಿದಾಡುತ್ತಿತ್ತು. ಸೂಟೆಗಳ ಭರಾಟೆಯ ಮಧ್ಯೆ ಉರಿಯುತ್ತಿದ್ದ ಬೆಂಕಿಯ ದೊಡ್ಡ ಅಗ್ಗಿಷ್ಟಿಕೆಯನ್ನು ಮಹಿಷಾಸುರ ಪಾತ್ರಧಾರಿ ಲಂಘಿಸುವ ದೃಶ್ಯ. ಮಹಿಷಾಸುರನ್ನು ನಾವು 'ಯಕ್ಷಗಾನ ಪಾತ್ರ' ಎಂದು ಸ್ವೀಕರಿಸಲು ಯಾಕೆ ಮಾನಸಿಕ ಅಡ್ಡಿ? ಆತ ಬೆಂಕಿಗೆ ಹಾರುವವನಲ್ಲ, ಮೆರವಣಿಗೆಯಲ್ಲಿ ಬರಬೇಕಾದವನಲ್ಲ. ಅಭಿಮಾನಿಗಳ ಅಭಿಮಾನದ ಮುಂದೆ ಕಲಾವಿದರೂ ಅಭಿಮಾನಕ್ಕೆ ಶರಣಾಗುವಂತಹ ಒತ್ತಡವನ್ನು ಯಾಕೆ ಸೃಷ್ಟಿಸುತ್ತೇವೆ ಎಂದು ಅರ್ಥವಾಗುವುದಿಲ್ಲ. ಸಂಘಟಕರು ಈ ದಿಸೆಯಲ್ಲಿ ಯೋಚಿಸಬೇಕು.
ಕಲಾವಿದರು ಹಿಂದಿನ ರಾತ್ರಿ ನಿದ್ದೆಗೆಟ್ಟಿರುತ್ತಾರೆ. ಮರುದಿವಸ ಹಗಲು ವೈಯಕ್ತಿಕ, ಕೌಟುಂಬಿಕ ವಿಚಾರಗಳಿಂದಾಗಿ ನಿದ್ದೆ ಮಾಡಿಲ್ಲ ಎಂದಿಟ್ಟುಕೊಳ್ಳಿ. ಕಲಾವಿದನ ಈ ಸಮಸ್ಯೆ ಪ್ರೇಕ್ಷಕರಿಗೆ, ಸಂಘಟಕರಿಗೆ ಅರಿವಾಗುವುದಿಲ್ಲ.
              ಈ ರೀತಿ ಬೆಂಕಿ ಹಾರಲು ಪ್ರಚೋದಿಸಿದಾಗ ಎಲ್ಲಾದರೂ ಬೆಂಕಿಯ ಕಿಡಿಯು ಧರಿಸಿದ ವೇಷಭೂಷಣಗಳ ಮೇಲೆ ಹಾರಿ ಆಗುವ ಅಪಾಯವನ್ನು ಊಹಿಸಲೂ ಭಯವಾಗುತ್ತದೆ. ಈಗೆಲ್ಲಾ ನೈಲಾನ್ ಬಟ್ಟೆಗಳ ವಸ್ತ್ರಗಳು. ಕಲಾವಿದರಿಗೆ ಏನಾದರೂ ತೊಂದರೆ ಆಯಿತೆನ್ನಿ. ಯಾರು ಅನುಭವಿಸಬೇಕು? ಅಭಿಮಾನವು ಕಲಾವಿದ ರಂಗದಲ್ಲಿ ಇರುವಷ್ಟು ಹೊತ್ತು ಮಾತ್ರ ಇರುತ್ತದೆ ಅಲ್ವಾ. ಹಾಗಾಗಿ ಕಲಾವಿದರನ್ನು ರಂಗದ ವ್ಯವಹಾರಕ್ಕಷ್ಟೇ ಅವರನ್ನು ಬಿಟ್ಟುಬಿಡಿ. ನಮ್ಮ ಆಸಕ್ತಿ, ಕುತೂಹಲ, ಕೌತುಕಗಳನ್ನು ಅವರ ಮೇಲೆ ಹೇರುವುದು ಬೇಡ. ಮಹಿಷಾಸುರನಿಗೆ ಮೆರವಣಿಗೆಯಲ್ಲಿ ಕರೆತಂದ ಆಯಾಸವಿರುವಾಗ ಆ ಕಲಾವಿದ ರಂಗದಲ್ಲಿ ಗಾಢವಾಗಿ ಅಭಿವ್ಯಕ್ತಿ ಮಾಡಲು ಸಾಧ್ಯವೇ? ಅಭಿವ್ಯಕ್ತಿ ಕ್ಷೀಣವಾದಾಗ 'ಈ ಮಹಿಷ ಪ್ರಯೋಜನವಿಲ್ಲ' ಎಂದು ನಾವೇ ಹಣೆಪಟ್ಟಿ ಕಟ್ಟಿಬಿಡುವುದಿಲ್ವಾ. ಮಹಿಷನಿಗೆ ವರ ಕೊಡುವವರು ನಾವೇ, ಶಾಪಕ್ಕೆ ಒಳಪಡಿಸುವರೂ ನಾವೇ! ಅಬ್ಬರದ ಸುಡುಮದ್ದುಗಳ ಸದ್ದಿಗೆ ಕಲಾವಿದರ ಕಿವಿ ಹೊಂದಾಣಿಕೆಯಾಗಿದೆ. ಬ್ಯಾಂಡ್, ವಾಲಗದ ನಾದವು ಯಕ್ಷಗಾನದ ಹೆಜ್ಜೆಗಾರಿಕೆಯ ಒಂದಂಶವನ್ನು ಕಸಿದುಕೊಂಡಿದೆ. ಸೊಂಟತ್ರಾಣವು ರಂಗಕ್ಕೆ ಸೀಮಿತವಾಗಿರಲಿ.
              ಈ ಅದ್ದೂರಿತನವನ್ನು ಸಹಿಸಿದ ಒಂದೇ ವಾರದಲ್ಲಿ ಮಂಗಳೂರು ಮರಕಡದಲ್ಲಿ 'ಶಬರಿಮಲೆ ಕ್ಷೇತ್ರ ಮಹಾತ್ಮೆ' ಪ್ರಸಂಗವೊಂದರಲ್ಲಿ ಭಾಗವಹಿಸಿದ್ದೆ. ರಂಗಕ್ಕೆ ತಾಗಿಕೊಂಡು ಕಾಡಿನ ದೃಶ್ಯವೊಂದನ್ನು ಪೋಣಿಸಲಾಗಿತ್ತು. ಪೂರಕವಾದ ಚಿಕ್ಕ ಚಿಕ್ಕ ಬಣ್ಣದ ಬೆಳಕುಗಳು. ಅಯ್ಯಪ್ಪನ ತಪಸ್ಸಿನ ದೃಶ್ಯಕ್ಕೆ ಈ ಹೆಚ್ಚುವರಿ ವ್ಯವಸ್ಥೆ ತುಂಬಾ ಹೊಂದಾಣಿಕೆಯಾಗಿತ್ತು. ತಾಯಿ ಬಂದು 'ನನ್ನ ಮಾಂಗಲ್ಯ ಉಳಿಸು' ಎಂದು ಬೇಡಿಕೊಂಡಾಗ ರಂಗದ ಬೆಳಕು ಮತ್ತು ಕಾನನದ ಮಧ್ಯೆ ಎದ್ದು ಬರುವ ಅಯ್ಯಪ್ಪನ ಸನ್ನಿವೇಶವು ಪರಿಣಾಮಕಾರಿಯಾಗಿ ಮೂಡಿಬಂತು. ಇಂತಹು ಪ್ರೇಕ್ಷಕರನ್ನು ಪುರಾಣ ಲೋಕಕ್ಕೆ ಒಯ್ಯುತ್ತದೆ. ಕಥೆಗೆ ಪೂರಕವಾದ ದೃಶ್ಯ ಜೋಡಣೆಯು ರಂಗಕ್ಕೆ ಪೂರಕ. ಅಂದು 'ಅಯ್ಯಪ್ಪ'ನ ಪಾತ್ರ ವಹಿಸಿದವರು ಎಡನೀರು ಮೇಳದ ಕಲಾವಿದ ಲಕ್ಷ್ಮಣ ಕುಮಾರ್ ಮರಕಡ. ನವೀನ್ ಶೆಟ್ಟಿ ಮುಂಡಾಜೆ 'ಮಣಿಕಂಠ'ನಾಗಿದ್ದರು.
              ಕೀರ್ತಿಶೇಷ ಅಡೂರು ಶ್ರೀಧರ ರಾಯರು ಕೆಲವು ಆಟಗಳಲ್ಲಿ ಯಜ್ಞ ಕುಂಡ, ಸುಧನ್ವನನ್ನು ಕಾದೆಣ್ಣೆಯ ಕೊಪ್ಪರಿಗೆಗೆ ಹಾಕುವ ದೃಶ್ಯಗಳನ್ನು ಕೃತಕವಾಗಿ ರಂಗದಲ್ಲಿ ನಿರ್ಮಿಸಿದ್ದರು. ಆ ಕಾಲಘಟ್ಟದಲ್ಲಿ ಅದು ಜನಮನ್ನಣೆ ಪಡೆದಿತ್ತು. ರಂಗಕ್ಕೆ ಪೂರಕವಾದ ರಂಗ ಜೋಡಣೆಗಳು ಪ್ರದರ್ಶನವನ್ನು ಎತ್ತರಕ್ಕೆ ಏರಿಸುತ್ತವೆ. ಕಲಾವಿದನಿಗೂ ತೃಪ್ತಿಯ ಭಾವ ಮೂಡುತ್ತದೆ. ಪ್ರೇಕ್ಷಕರೂ ರಂಗಸುಖವನ್ನು ಅನುಭವಿಸುತ್ತಾರೆ. 
            ನಮ್ಮಲ್ಲಿ ವೆಚ್ಚ ಮಾಡಲು ಹಣವಿದೆ, ಸಮಾಜದಲ್ಲಿ ಎದೆಯುಬ್ಬಿಸಿ ನಡೆಯುತ್ತೇವೆ. ಯಾರನ್ನೂ 'ಡೋಂಟ್ ಕೇರ್' ಮಾಡದ ಅಂತಸ್ತು ಇದೆ - ಇವೆಲ್ಲಾ ಅವನವನ ವೈಯಕ್ತಿಕ ಜೀವನದ ಸಂಪತ್ತುಗಳು. ಆರ್ಥಿಕ ಶ್ರೀಮಂತಿಕೆಯ ಛಾಯೆ ಯಕ್ಷಗಾನ ರಂಗಕ್ಕೆ ಬಾಧಿಸದಿರಲಿ. ಅದ್ದೂರಿತನಕ್ಕೂ ಮಿತಿಯಿರಲಿ. ಅದ್ದೂರಿಯ ಪ್ರಕಾಶದೊಳಗೆ ಯಕ್ಷಗಾನವನ್ನು ವಿಲವಿಲನೆ ಒದ್ದಾಡಿಸುವ ಹಠ ಬೇಡ.
           ಕಲಾವಿದನಿಗೂ ವೈಯಕ್ತಿಕ ಬದುಕು ಇದೆ, ಆತನಿಗೊಂದು ಮನಸ್ಸಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ರಂಗಾಭಿವ್ಯಕ್ತಿಯಲ್ಲಿ ಮಿತಿಯಿದೆ ಎಂದು ಅಭಿಮಾನಿ ದೇವರುಗಳು ತಿಳಿದರೆ ಸಾಕು, ಅದುವೇ ಕಲೆಗೆ ಸಲ್ಲಿಸುವ ಮಾನ. ನಮ್ಮೆಲ್ಲರ ಅಭಿಮಾನವು ಸಮಗ್ರ ಯಕ್ಷಗಾನದತ್ತ ವಾಲಲಿ. 
 

No comments:

Post a Comment