Thursday, August 10, 2017

ಯಕ್ಷಾನಂದಕ್ಕೆ ಮೂರ್ತರೂಪ ನೀಡಿದ ಷಷ್ಟ್ಯಬ್ದ


ಪ್ರಜಾವಾಣಿಯ 'ದಧಿಗಿಣತೋ' ಅಂಕಣ  / 22-4-2017
  
               ಕಲೆ, ಕಲಾವಿದ, ಕಲಾಭಿವ್ಯಕ್ತಿ... ವಿಚಾರಗಳ ಸಿಹಿ-ಕಹಿಗಳನ್ನು ವೇದಿಕೆಗಳಲ್ಲಿ, ಪರಸ್ಪರ ಮಾತುಕತೆಗಳಲ್ಲಿ  ವಿಮರ್ಶಿಸುತ್ತೇವೆ. ಸರಿ-ತಪ್ಪುಗಳನ್ನೇ ಹೆಚ್ಚು ದಾಖಲಿಸುತ್ತೇವೆ. ಇದರಲ್ಲಿ ಕಲ್ಪಿತಕ್ಕೆ ಸಿಂಹಪಾಲು ಇಂತಹ ಸಂದರ್ಭಗಳಲ್ಲಿ ಸಂದಹೋದ ಹಿರಿಯರ ಅಭಿವ್ಯಕ್ತಿಗಳು ಧುತ್ತೆಂದು ನೆನಪಾಗುತ್ತದೆ. ಆ ಹಿರಿಯರ ಅಭಿವ್ಯಕ್ತಿ ನೋಡದವರೂ ಮಾತಿಗೆ ತೊಡಗುತ್ತಾರೆ. ಇಷ್ಟೆಲ್ಲಾ ಆಗುತ್ತಿರುವಾಗ ವರ್ತಮಾನದ ರಂಗವು ಅದರ ಪಾಡಿಗೆ ಇದ್ದುಬಿಡುತ್ತದೆ. ಅಭಿವ್ಯಕ್ತಿಗಳು ಕೂಡಾ ಯಾಂತ್ರಿಕವಾಗಿ ನಡೆಯುತ್ತಲೇ ಇರುತ್ತದೆ. ಅಭಿಮಾನಿಗಳ ಮತಿಯ ನೇರಕ್ಕೆ ಹೊಗಳಿಕೆ, ತೆಗಳಿಕೆಗಳಿಗೆ ಗರಿ ಮೂಡುತ್ತಾ ಇರುತ್ತದೆ.
               ಮತ್ತೊಂದೆಡೆ ಹವ್ಯಾಸಿ ರಂಗವು ಯಾರದ್ದೇ ಹಂಗಿಲ್ಲದೆ, ಹಂಗಿಗೂ ಬೀಳದೆ ಸದ್ದಿಲ್ಲದೆ ಬೆಳೆಯುತ್ತಿದೆ. ಮೇಳಗಳ ಹೊರತಾದ ಹವ್ಯಾಸಿ ಪ್ರದರ್ಶನಗಳ ಸಂಖ್ಯೆ ಅಗಣಿತ. ಹವ್ಯಾಸಿಗಳು ಅಂದಾಗ ಮೂಗು ಮುರಿಯಬೇಕಾದ್ದಿಲ್ಲ. ಹಗುರವಾಗಿ ಕಾಣಬೇಕಾದ್ದಿಲ್ಲ. ಅವರಲ್ಲಿ ಅಪ್ಪಟ ಯಕ್ಷಗಾನದ ಕಾಳಜಿಯಿದೆ ಎನ್ನುವುದನ್ನು ವೃತ್ತಿ ರಂಗಭೂಮಿ ಮರೆಯಕೂಡದು. ಸ್ವಲ್ಪವಾದರೂ ಸಾಮಾಜಿಕ ಸಂಪರ್ಕ, ಸಂಬಂಧಗಳ ಗಾಢತೆ, ಭಾವದ ತೇವಗಳು ಹಸಿಯಾಗಿ ಹವ್ಯಾಸಿ ರಂಗದಲ್ಲಿ ಕಾಣಬಹುದು. ಇವರಲ್ಲೆಂದೂ ಗೇಲಿ-ತಮಾಶೆ, ಪರದೂಷಣೆಗಳು ರಂಗಾನುಭವಕ್ಕೆ ಬಂಡವಾಳವಲ್ಲ.
               ೨೦೧೭ ಎಪ್ರಿಲ್  ೬ - ಕಾಸರಗೋಡು ಜಿಲ್ಲೆಯ ಶ್ರೀ ಮುಳಿಯಾರು ಕ್ಷೇತ್ರದಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ ಈ ವಿಚಾರಗಳು ನನ್ನ ಮನದೊಳಗೆ ರಿಂಗಣ ಹಾಕುತ್ತಿದ್ದುವು. ಅಂದು ನಿವೃತ್ತ ಅಧ್ಯಾಪಕ, ಯಕ್ಷಗಾನ ಕಲಾವಿದ ಅಡ್ಕ ಸುಬ್ರಹ್ಮಣ್ಯ ಭಟ್ಟರಿಗೆ ಅರುವತ್ತರ ಹರುಷ. ಹಿರಿಯ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ಟರ ಗರಡಿಯಲ್ಲಿ ರೂಪುಗೊಂಡ ಶಿಲ್ಪವೊಂದು ತನ್ನ ಅರುವತ್ತರ ಆಚರಣೆಗೆ ಆಯ್ದುಕೊಂಡುದು ಯಕ್ಷಗಾನ ಮತ್ತು ಕುಟುಂಬ ಸಮ್ಮಿಲನ. ಕುಟುಂಬ ಬಂಧುಗಳನ್ನು ಒಂದೆಡೆ ಸೇರಿಸಬೇಕೆನ್ನುವ ಆಶಯ.
              ಹಿರಿದಾದ ಅಡ್ಕ ಕುಟುಂಬದ ಬಹುತೇಕ ಸು-ಮನಸ್ಸುಗಳು ಮುಳಿಯಾರು ಕ್ಷೇತ್ರದಲ್ಲಿ ನೆರೆದಿದ್ದರು. ಅಡ್ಕ ಕುಟುಂಬವೆಂದರೆ ಅದು ಯಕ್ಷಗಾನ ಕುಟುಂಬ. ಅಲ್ಲಿನ ಹಿರಿ-ಕಿರಿಯ ಎಲ್ಲರಲ್ಲೂ ಯಕ್ಷವಾಹಿನಿ ಹರಿಯುತ್ತಿದೆ.  ಯಕ್ಷಗಾನದ ಸುದ್ದಿಗಳನ್ನು ಪುರುಷರು ಮಾತ್ರವಲ್ಲ, ಮಹಿಳೆಯರೂ ವಿಮರ್ಶಿಸುವಷ್ಟು ಸದೃಢರು. ಯಕ್ಷಗಾನೀಯ ವಾತಾವರಣದಲ್ಲಿ ಬದುಕನ್ನು ಅರಳಿಸಿಕೊಂಡ ಎಲ್ಲರೂ ಕಲೆಯ ಸ್ಪರ್ಶಕ್ಕೆ ಬಂದವರು. ಸಂಗೀತ, ಭರತನಾಟ್ಯ, ನಾಟಕ, ಯಕ್ಷಗಾನ ಹೀಗೆ ಒಂದಲ್ಲ ಒಂದು ಪ್ರಕಾರದಲ್ಲಿ ತೊಡಗಿಸಿಕೊಂಡವರು.
              ಅಡ್ಕ ಮನೆ ಮತ್ತು ಕುಟುಂಬದಲ್ಲಿ ಪೂಜೆ, ಶುಭ ಸಮಾರಂಭಗಳಿದ್ದರೆ ತಾಳಮದ್ದಳೆ ಖಚಿತ. ಒಂದಿಬ್ಬರು ಆಹ್ವಾನಿತ ಹಿರಿಯ ಕಲಾವಿದರೊಂದಿಗೆ ಕುಟುಂಬಸ್ತರೇ ಅರ್ಥಧಾರಿಗಳು. ಚೆಂಡೆ, ಮದ್ದಳೆ, ಭಾಗವತಿಕೆಯ ಸು-ನಾದಗಳು ಹೊರಹೊಮ್ಮಿದರೆ ಮಾತ್ರ ಬದುಕಿಗಲ್ಲಿ ಸುಭಗತನ. ಇಂತಹ ಬದುಕಿನಲ್ಲಿ ಅರಳಿದ ಸುಬ್ರಹ್ಮಣ್ಯ ಭಟ್ಟರು ತನ್ನ ಷಷ್ಟ್ಯಬ್ದವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕುಟುಂಬಸ್ತರನ್ನೂ ಸಮ್ಮಿಲನಗೊಳಿಸಿದರು. ಹೊಟ್ಟೆಗೆ ಮಾತ್ರವಲ್ಲ ಮನಸ್ಸು ತಂಪಾಗುವಷ್ಟು ಹೂರಣ ತುಂಬಿದರು. ಅಚಾನಕ್ಕಾಗಿ ಅಂದು ಕಾಸರಗೋಡು ಜಿಲ್ಲೆಯಲ್ಲಿ ಹರತಾಳವಿದ್ದರೂ ಕುಟುಂಬಿಕರು ಬೆಳ್ಳಂಬೆಳಿಗ್ಗೆಯೇ ಹಾಜರಿದ್ದರು.
              ಕೂಡುಕುಟುಂಬದ ಒಂದು ಕಾಲಘಟ್ಟವನ್ನು ಜ್ಞಾಪಿಸಿಕೊಳ್ಳಿ. ಅಲ್ಲಿ ಸಮಸ್ಯೆಗಳು, ಕಷ್ಟಗಳು ವೈಭವ ಪಡೆಯುತ್ತಿದ್ದಿರಲಿಲ್ಲ. ಹಿರಿಯರ ಮಾರ್ಗದರ್ಶನದಲ್ಲಿ ಸಂಸ್ಕಾರಯುತವಾದ ಬದುಕಿಗೆ ಅವಕಾಶವಿತ್ತು. ಮನೆ, ತೋಟ, ದೇವರು, ಕಲೆ.. ಹೀಗೆ ಒಬ್ಬೊಬ್ಬರಲ್ಲಿ ಜವಾಬ್ದಾರಿ ಹಂಚಿಹೋಗುತ್ತಿದ್ದುವು. ಕಾಲ ಕಾಲಕ್ಕೆ ಬೇಕಾದ ಆಗುಹೋಗುಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದುವು. ಕಾಲಸರಿಯುತ್ತಾ ಕೂಡುಕುಟುಂಬಗಳು ಹಂಚಿಹೋದುವು. ತಂತ್ರಜ್ಞಾನಗಳು ಬದುಕಿಗೆ ಅಂಟಿದುವು. ಭಾವಗಳ ತೇವಗಳು ಶುಷ್ಕತೆಯತ್ತ ಜಾರಿದುವು. ಪುರುಸೊತ್ತು ಎನ್ನುವುದು ಮರೀಚಿಕೆಯಾಯಿತು. ಎಲ್ಲರೂ ಒಟ್ಟು ಸೇರುವ ಮಾತು ಬಾಯಲ್ಲೇ ಉಳಿಯಿತು. ಇಷ್ಟೆಲ್ಲಾ ಆಧುನಿಕ ವಿಚಾರಗಳು ಬದುಕಿನಲ್ಲಿ ಮಿಳಿತಗೊಂಡಿದ್ದರೂ ಅಡ್ಕ ಕುಟುಂಬದ ಸದಸ್ಯರಿಗಂದು ಧಾರಾಳ ಪುರುಸೊತ್ತು ಇತ್ತು! ಯಾರಲ್ಲೂ ಗೊಣಗಾಟವಿಲ್ಲ, ಒತ್ತಡವಿಲ್ಲ. ಬದುಕಿನಲ್ಲಿ ಕಲೆಯೊಂದು ಇಳಿದ ಪರಿಣಾಮವಿದು. ಕಲೆಯ ಬಲೆಯಲ್ಲಿ ಬದುಕನ್ನು ರೂಪಿಸಿದ್ದರಿಂದ ಅವ್ಯಕ್ತ ಸಂಸ್ಕಾರ ವಾಹಿನಿಯೊಂದು ಅವ್ಯಕ್ತವಾಗಿ ಹರಿದಿತ್ತು. ಬದಲಾದ ಕಾಲಘಟ್ಟದಲ್ಲಿ ಇಂತಹ ಪ್ರಕ್ರಿಯೆಗಳು ನಿರಂತರ ಆಗಬೇಕಾಗಿದೆ.
                ಇರಲಿ, ವಿಚಾರ ಎಲ್ಲೋ ಹೋಯಿತಲ್ಲಾ. ಅಂದು ಪೂರ್ವಾಹ್ನ ಕುಟುಂಬದ ಸದಸ್ಯರಿಂದ ಸಂಗೀತ ಕಾರ್ಯಕ್ರಮ. ಪೂರ್ಣಿಮಾ ಗಣಪತಿ ಭಟ್, ಶಮಾ ಜಿ ಭಟ್, ಅನುಪಮಾ ಅಬ್ರಾಜೆ, ವಿಧಾತ್ರಿ ಅಬ್ರಾಜೆ, ಗೀತಾ ಶ್ಯಾಮಮೂರ್ತಿ ಪೆರಡಂಜಿ (ಗಾಯನ); ಪ್ರಭಾಕರ ಕುಂಜಾರು (ವಯಲಿನ್), ಶ್ರೀಧರ ಭಟ್ ಬಡಕ್ಕೆಕರೆ (ಮೃದಂಗ) ಮತ್ತು ಅನಿರುದ್ಧ ವಾಸಿಷ್ಠ ಶರ್ಮರಿಂದ ಕೀಬೋರ್ಡ್  ವಾದನ. ಹಿರಿಯರಾದ ಪೆರಡಂಜಿ ಗೋಪಾಲಕೃಷ್ಣ ಭಟ್ ಮತ್ತು ಗೋವಿಂದ ಬಳ್ಳಮೂಲೆ ಇವರಿಂದ ಬದುಕಿನ ವಾಸ್ತವದ ಪ್ರಹಸನ.
             ಬಳಿಕ ಯಕ್ಷ-ಗಾನ ವೈಭವ. ತಲ್ಪಣಾಜೆ ಶಿವಶಂಕರ ಭಟ್, ತಲ್ಪಣಾಜೆ ವೆಂಕಟ್ರಮಣ ಭಟ್, ಚಿನ್ಮಯ ಕಲ್ಲಡ್ಕ (ಭಾಗವತರು), ಈಶ್ವರ ಭಟ್ ಬಳ್ಳಮೂಲೆ, ಉದಯ ಕಂಬಾರು, ಈಶ್ವರ ಮಲ್ಲ (ಚೆಂಡೆ-ಮದ್ದಳೆ). ಸುಮಾರು ಒಂದೂವರೆ ಗಂಟೆಗಳ ಕಾಲ ಜರುಗಿದ ಯಕ್ಷಗಾನ ಹಾಡುಗಾರಿಕೆಯ ಪ್ರಸ್ತುತಿಯಲ್ಲಿ ಯಕ್ಷಗಾನದ ಹೊರತಾದ ಸಂಚಾರವಿದ್ದಿರಲಿಲ್ಲ. ನಿಜಾರ್ಥದಲ್ಲಿ ಗಾನವು ವೈಭವ ಪಡೆದಿತ್ತು. ಭಾಗವತರಿಗೆ ಶಿಳ್ಳೆ-ಚಪ್ಪಾಳೆಗಳ ಮೋಹವಿರಲಿಲ್ಲ. ಸಾಹಿತ್ಯವನ್ನು ಅಪಭ್ರಂಶಗೊಳಿಸುವ ಹಠವಿದ್ದಿರಲಿಲ್ಲ. ಕವಿಯ ಆಶಯ ಮತ್ತು ಮಟ್ಟುವಿನಂತೆ ಪದ್ಯಗಳು ಸರ್ವಾಂಗ ಸುಂದರವಾಗಿ ಮೂಡಿ ಬಂದಿದ್ದುವು. ಅಂದಿನ ಗಾನ ವೈಭವದಲ್ಲಿ ನಾನಂತೂ 'ಯಕ್ಷಗಾನ'ದ ಸೊಬಗನ್ನು ಕಂಡಿದ್ದೇನೆ.
               ಅಪರಾಹ್ನ ನೂತನ ಪ್ರಸಂಗ 'ಮುಳಿಯಾರು ಕ್ಷೇತ್ರ ಮಹಾತ್ಮೆ'ಯ ಪ್ರದರ್ಶನ. ಕಲಾವಿದ ಪೆರಡಂಜಿ ಗೋಪಾಲಕೃಷ್ಣ ಭಟ್ಟರು ಪ್ರಸಂಗದ ರಚಯಿತರು. ಪ್ರಸಂಗದಲ್ಲಿ ಎರಡು ವಿಭಾಗಗಳು. ಮೊದಲನೆಯದು ಸ್ಕಂದ ಪರಿಣಯ. ನಂತರದ್ದು ಶ್ರೀ ಮುಳಿಯಾರು ಕ್ಷೇತ್ರ ಮಹಾತ್ಮೆ. ಕುಟುಂಬದವರೇ ಕಲಾವಿದರು. ಮುಖ್ಯ ಪಾತ್ರಗಳಿಗೆ ಹಿರಿಯ ಅನುಭವಿಗಳಿದ್ದರು. ಸುಮಾರು ಆರುಗಂಟೆಗಳ ಕಾಲ ಪ್ರದರ್ಶನ ಲಂಬಿತವಾಗಿತ್ತು. ಮೊದಲ ಪ್ರಯೋಗವಾದ್ದರಿಂದ ಚಿಕ್ಕಪುಟ್ಟ ಗೊಂದಲಗಳು ಸಹಜ. ಕ್ಷೇತ್ರ ಮಹಾತ್ಮೆ ಎಂದಾಗ ಅದಕ್ಕೆ ಪೌರಾಣಿಕವಾದ ಹಿನ್ನೆಲೆಯನ್ನು ಟಚ್ ಕೊಡಬೇಕಾದುದು ಅನಿವಾರ್ಯ. ಇನ್ನೂ ಒಂದೆರಡು ಪ್ರಯೋಗವಾದ ಬಳಿಕವಷ್ಟೇ ಪ್ರಸಂಗ ಹದವಾಗುತ್ತದೆ, ಎನ್ನುತ್ತಾರೆ ಪ್ರಸಂಗಕರ್ತ ಪೆರಡಂಜಿ ಗೋಪಾಲಕೃಷ್ಣ ಭಟ್.
              ಪ್ರೇಕ್ಷಕರಾಗಿ, ಕಲಾವಿದರಾಗಿ, ವಿಮರ್ಶಕರಾಗಿ, ಸಂಘಟಕರಾಗಿ.. ಹೀಗೆ ಹಲವು ಸ್ತರಗಳಲ್ಲಿ ಅಂದು ಅಡ್ಕ ಕುಟುಂಬವು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ಕೋಟೂರಿನ 'ಯಕ್ಷತೂಣೀರ ಸಂಪ್ರತಿಷ್ಠಾನ'ವು ಎಲ್ಲಾ ಕಲಾಪಗಳನ್ನು ಸಂಘಟಿಸಿತ್ತು. ಕಾರ್ಯಕ್ರಮ ಮುಗಿದಾಗ ಅಡ್ಕ ಸುಬ್ರಹ್ಮಣ್ಯ ಭಟ್ಟರ ಕಣ್ಣಂಚಲ್ಲಿ ಆನಂದದ ಭಾಷ್ಪ. ಅವರನ್ನು ಮಾತನಾಡಿಸಿ ಮನೆಕಡೆಗೆ ಮುಖ ಹಾಕಿದಾಗ ಸಂಭ್ರಮವು ನನ್ನ ಮನದೊಳಗೆ ಇಳಿದಿತ್ತು. ಷಷ್ಟ್ಯಬ್ದವನ್ನು ಹೀಗೂ ಆಚರಿಸಲು ಸಾಧ್ಯ ಅಲ್ವಾ ಎನ್ನುವುದನ್ನು ತೋರಿಸಿದ್ದಾರೆ. ಅರುವತ್ತರ ನೆನಪಿಗಾಗಿ ಕುಟುಂಬಸ್ತರಿಗೆ, ಸ್ನೇಹಿತರಿಗೆ, ಆಪ್ತರಿಗೆ ಉಡುಗೊರೆಗಳನ್ನು ಕೊಡುತ್ತಾ ಖುಷಿಯನ್ನು ಅನುಭವಿಸುತ್ತಿದ್ದ ಸುಬ್ರಹ್ಮಣ್ಯ ಭಟ್ಟರ ಮನಃಸ್ಥಿತಿಯೇ ಖುಷಿ ರೂಪದಲ್ಲಿ ಸಾಕಾರವಾಗಿತ್ತು.
          ಆನಂದಕ್ಕಾಗಿ ಎಲ್ಲೆಲ್ಲಾ ಪ್ರವಾಸ ಮಾಡುತ್ತೇವೆ. ದೇವಾಲಯವನ್ನು ಸಂದರ್ಶಿಸುತ್ತೇವೆ. ಬೆಟ್ಟಗಳನ್ನು ಏರುತ್ತೇವೆ. ಹೋಮ-ಹವನ-ಪೂಜೆಗಳನ್ನು ಮಾಡುತ್ತೇವೆ. ಕೊನೆಗೆ ಆನಂದ ಎನ್ನುವುದು ಅನುಭವಕ್ಕೆ ಬಾರದೆ ಕೊರಗುತ್ತೇವೆ. 'ನನ್ನ ಆನಂದ ನನ್ನೊಳಗಿದೆ. ಅದಕ್ಕೆ ಮೂರ್ತ ರೂಪ ಕೊಟ್ಟರೆ ಆಯಿತು' ಎನ್ನುವುದು ಅಡ್ಕ ಸುಬ್ರಹ್ಮಣ್ಯರಿಗೆ  ಗೊತ್ತಿತ್ತು. ಹಾಗಾಗಿ ಅವರು ಕುಟುಂಬದವರೊಂದಿಗೆ ಆನಂದವನ್ನು ಕಂಡರು, ಅನುಭವಿಸಿದದರು. ತಾನು ನಂಬಿದ ಕಲೆಗೆ ಮಾನ ಕೊಟ್ಟರು. ಪ್ರತಿಯಾಗಿ ಮಾನವನ್ನು ಪಡೆದರು.

No comments:

Post a Comment