Saturday, September 16, 2017

ಕೂಟಬದ್ಧತೆ ನಿಯತ್ತಿನ ಬೊಳ್ಳಿಂಬಳ


ಪ್ರಜಾವಾಣಿಯ ’ದಧಿಗಿಣತೋ’ ಅಂಕಣ / 14-7-2017
  
               ಅಧ್ಯಾಪಕ ಸಮಾಜದ ಕಣ್ಣು. ಅವರಿಗೆ ಮನಸ್ಸುಗಳನ್ನು ಕಟ್ಟುವ ಹೊಣೆಗಾರಿಕೆ. ಪ್ರತಿಯಾಗಿ ಸಮಾಜದಿಂದ ಗೌರವದ ಮಾನ-ಸಂಮಾನ. ಸಾಮಾಜಿಕ ವಲಯದೊಳಗೆ ಪ್ರಭೆಯನ್ನು ಬೀರಿ ತಾನು ಬೆಳೆಯುತ್ತಾ, ಸಮಾಜವನ್ನು ಬೆಳೆಸುತ್ತಾ ಸಾಗುವ ಒಂದು ಕಾಲಘಟ್ಟಕ್ಕೆ ಸಾಕ್ಷಿಯಾಗುತ್ತಾರೆ, ಪುತ್ತೂರು ಪಾಣಾಜೆಯ ಬಿ.ಎಸ್.ಓಕುಣ್ಣಾಯರು. (ಬೊಳ್ಳಿಂಬಳ ಸುಬ್ರಾಯ ಓಕುಣ್ಣಾಯ) ಬಹುಕಾಲ ಪುತ್ತೂರಿನಲ್ಲಿದ್ದು ಪ್ರಸ್ತುತ ಮಂಗಳೂರಿನಲ್ಲಿ ವಾಸ. ಈಗವರಿಗೆ ಎಂಭತ್ತಮೂರು.
ಓಕುಣ್ಣಾಯರು ದೊಡ್ಡ ಕುಟುಂಬದ ಹಿರಿಯಣ್ಣ. ಯಕ್ಷಗಾನ ಅರ್ಥಧಾರಿ. ಪ್ರಾಮಾಣಿಕ ಅಧ್ಯಾಪಕ. ಸಾಮಾಜಿಕ ಒಲುಮೆಯ ನಿಲುವು. ಎದ್ದು ತೋರುವ ಗಾಂಭೀರ್ಯ. ಅದರೊಳಗೆ ಪರಿಪಕ್ವವಾಗಿರುವ ಹೂ-ಮನಸ್ಸು, ದಣಿವಿಲ್ಲದ ದುಡಿಮೆ. ಹೀಗೆ ಅವರ ಗುಣವಿಶೇಷಗಳಿಗೆ ದಶಬಾಹುಗಳು.
                ಯಕ್ಷಗಾನ ಕ್ಷೇತ್ರದಲ್ಲಿ ದಂತಕಥೆಗಳನ್ನು ಸೃಷ್ಟಿಸಿರುವ ಅರ್ಥಧಾರಿಗಳ ಒಡನಾಟದಲ್ಲಿ ಓಕುಣ್ಣಾಯರು ಸುಪುಷ್ಟವಾಗಿ ಬೆಳೆದವರು. ಅಂದಿನ ವಾಗ್ವೈಖರಿ, ಪುರಾಣ ಲೋಕದ ಜಾಲಾಟ, ಮಾತಿನ ಸರಸ-ವಿರಸಗಳು ಅವರಲ್ಲಿ ಮರುಹುಟ್ಟು ಪಡೆಯುತ್ತವೆ. ಒಂದು ಕಾಲಮಾನದ ಯಕ್ಷಗಾನದ ಸಮೃದ್ಧತೆಗೆ ಸಾಕ್ಷಿಯಾಗುತ್ತಾರೆ.
                ಇವರ ತಂದೆ ಶಂಕರನಾರಾಯಣ ಓಕುಣ್ಣಾಯರು ಕವಿಭೂಷಣ ವೆಂಕಪ್ಪ ಶೆಟ್ಟರ ಶಿಷ್ಯ. ಆ ಸಮಯದ ಹಿರಿಯರೊಂದಿಗೆ ಬಿ.ಎಸ್. ಅವರಿಗೆ ಬಾಲ್ಯದಿಂದಲೇ ಒಡನಾಟ. ತಾಳಮದ್ದಳೆಯಲ್ಲಿ ಶ್ರೋತೃವಾಗಿಯೇ ಅರ್ಥಧಾರಿಯಾಗಿ ಬೆಳೆದ ಏಕಲವ್ಯ! ಶಲ್ಯ, ಕೌರವ, ಧರ್ಮರಾಯ, ಕೌರವ, ಪ್ರಹಸ್ತ, ಕರ್ಣ, ಭೀಷ್ಮ.. ಹೀಗೆ ಪ್ರೌಢ, ವೈಚಾರಿಕ ಪಾತ್ರಗಳು ಖ್ಯಾತಿ ತಂದವು. ವಾಲಿ ಮೋಕ್ಷ ಪ್ರಸಂಗದ 'ವಾಲಿ'ಯ ಅರ್ಥಗಾರಿಕೆಯ ಸಂಪನ್ನತೆಯಿಂದಾಗಿ 'ವಾಲಿ ಓಕುಣ್ಣಾಯರು' ಎಂದು ಆಪ್ತ ವಲಯದಲ್ಲಿ ಪರಿಚಿತರು.
                   ಪಾತ್ರ ವಿಶೇಷಣವು ಹೆಸರಿನೊಂದಿಗೆ ಹೊಸೆದ ಬಗೆ ಹೇಗೆ ಎಂದು ಪ್ರಶ್ನಿಸಿದ್ದೆ. ಓಕುಣ್ಣಾಯರು ನಗುತ್ತಾ ತಾನು ಅರ್ಥಧಾರಿಯಾಗಿ ರೂಪುಗೊಂಡ ದಿನಮಾನಗಳನ್ನು ನೆನಪಿಸಿಕೊಂಡರು. ಆಗಿನ ದೊಡ್ಡ ಅರ್ಥಧಾರಿಗಳ ಜತೆ ಒಡನಾಟವಿತ್ತು. ಅದು ನನ್ನ ಕಲಾ ವ್ಯವಸಾಯಕ್ಕೆ ಪೂರಕವಾಯಿತು. ಕೆಲವೊಂದು ಪಾತ್ರಗಳ ಗತ್ತು-ಗೈರತ್ತುಗಳು ಒಬ್ಬೊಬ್ಬರಲ್ಲಿ ಒಂದೊಂದು. ಇವರೆಲ್ಲರ ಅರ್ಥಗಾರಿಗಳನ್ನು ಕೇಳುತ್ತಾ, ಹೇಳುತ್ತಾ ನನ್ನದೇ ಆದ ಶೈಲಿಯನ್ನು ರೂಪಿಸಿಕೊಂಡಿದ್ದೆ.”ವಾಲಿವಧೆ’ ಪ್ರಸಂಗದ ಕೂಟ ಇದ್ದರೆ ’ವಾಲಿ’ಯ ಅರ್ಥ ನನಗೆ ಖಚಿತ. ಹಾಗಾಗಿ ಪರಿಚಿತ ವಲಯದಲ್ಲಿ ನನ್ನ ಹೆಸರಿನೊಂದಿಗೆ ವಾಲಿಯ ಪಾತ್ರ ಹೊಸೆಯಿತು!
                    ಕಲೆಯಲ್ಲಿ  ದೈವೀಕತೆಯನ್ನು ಕಂಡುಕೊಂಡವರು. ಪಾತ್ರಗಳ ಪರಾಕಾಯ ಪ್ರವೇಶವನ್ನು ಮಾಡಬಲ್ಲ ಸಮರ್ಥ. ಪ್ರಸಂಗದ ಪದ್ಯವನ್ನು, ಕಥಾನುಭವವನ್ನು ಕಿರಿಯರಿಗೆ ಹೇಳಿಕೊಡುವಲ್ಲಿ ಅವರು ತೋರುತ್ತಿದ್ದ ಕಾಳಜಿ ಅನನ್ಯ. ರಾಮಾಯಣ, ಮಹಾಭಾರತ, ಭಾಗವತದ ಮೂಲಗ್ರಂಥಗಳನ್ನು ಅಭ್ಯಾಸ ಮಾಡಿದವರು. ಯಕ್ಷಗಾನ ಬಹುತೇಕ ಪದ್ಯಗಳು ಕಂಠಪಾಠ.
"ಓಕುಣ್ಣಾಯರದು ವೃತ್ತಿಗೆ ಅನುಗುಣವಾದ ನಿಯತ್ತಿನ ಜೀವನ. ಅರ್ಥಗಾರಿಕೆಯಲ್ಲಿ ಪಾತ್ರಗಳ ಸ್ವಭಾವವರಿತ ಅಭಿವ್ಯಕ್ತಿ. ಅವರೊಬ್ಬ ಭಾವಜೀವಿ. ಹಾಗಾಗಿ ಅವರ ಅರ್ಥಗಳೆಲ್ಲವೂ ಶ್ರೋತೃಗಳ ಮನ ಮುಟ್ಟುತ್ತದೆ, ಮೆಚ್ಚುತ್ತದೆ. ಅಪಾರ ಓದುವಿಕೆಯಿಂದಾಗಿ ನಿರ್ವಹಿಸುವ ಪಾತ್ರಗಳು ಸೊರಗುವುದಿಲ್ಲ. ತನ್ನಿದಿರು ಅರ್ಥಹೇಳಿದ ಕಲಾವಿದನ ಮನೋಧರ್ಮವನ್ನು ತಿಳಿದುಕೊಂಡು, ಸಂಭಾಷಣೆಯನ್ನು ಬೆಳೆಸುವಲ್ಲಿ ಅವರು ಅನುಸರಿಸುವ ವಿಧಾನ - ನಾನವರಲ್ಲಿ ಕಂಡುಕೊಂಡ ಧನಾತ್ಮಕ ಅಂಶ" ಎಂದು ಅವರನ್ನು ಹತ್ತಿರದಿಂದ ಬಲ್ಲ ಮಧೂರು ವೆಂಕಟಕೃಷ್ಣ ಶ್ಲಾಘಿಸುತ್ತಾರೆ.
                  "ಪುರಾಣದ ಕಥಾ ಪ್ರಸ್ತುತಿಯಲ್ಲಿ ಓಕುಣ್ಣಾಯರ ನಿಯತ್ತು ಗಾಢ. ಅರ್ಥಗಾರಿಕೆಯಲ್ಲಿ ಪುರಾಣಕ್ಕೆ ವಿರೋಧವಾದ ಅಂಶಗಳು ಬಳಕೆಯಾಗುವುದನ್ನು ಅವರು ಸಹಿಸರು. ಪದ್ಯದಿಂದ ಪದ್ಯಕ್ಕೆ ಟಚ್ ಕೊಡುತ್ತಾ ಅರ್ಥ ಹೇಳುವ ಸೊಗಸು. ಎದುರಾಳಿ ಪದ್ಯದ ಆಶಯದ ಆಚೀಚೆ ಸಂಚರಿಸಿದರೂ ಹೇಗೋ ಹೊಂದಿಸಿ ಪದ್ಯಕ್ಕೆ ಅರ್ಥವನ್ನು ತಂದು ನಿಲ್ಲಿಸುವ ಜಾಣ್ಮೆ ಅವರದು. ಎಷ್ಟೋ ಮಂದಿ ಪ್ರಸಂಗದ ಪದ್ಯದಲ್ಲಿರುವ ಭಾವವನ್ನು ಬಿಟ್ಟು ಎತ್ತಲೋ ವಿಷಯಾಂತರ ಮಾಡಿಬಿಡುತ್ತಾರೆ. ಇದು ತಾಳಮದ್ದಳೆಯ ಆಶಯಕ್ಕೆ ವಿರೋಧ. ಪ್ರಸಂಗದ ಅರ್ಥವ್ಯಾಪ್ತಿ ಏನಿದೆಯೋ ಅದರೊಳಗೆ ಅರ್ಥಧಾರಿ ಸಂಚರಿಸಬೇಕು", ಎನ್ನುತ್ತಾರೆ.
                ’ಅರ್ಥಧಾರಿಯು ಪಡಿಮಂಚದಲ್ಲಿ ಅರ್ಥಗಾರಿಕೆಗೆ ಕುಳಿತುಕೊಂಡು ಭಾಗವತರನ್ನು ಹಿಂತಿರುಗಿ ನೋಡಿದರೆ ಅದು ಭಾಗವತರಿಗೆ ಅವಮಾನ ಮಾಡಿದಂತೆ’ ಎನ್ನುವ ನಂಬುಗೆಯಿತ್ತು. ಕೂಟಗಳಲ್ಲಿ ಕೈಮೀರಿ ಕೆಲವೊಂದು ಘಟನೆಗಳು ನಡೆಯುತ್ತಿವೆ. ಅದನ್ನು ನಿಜವಾದ ಕಲಾವಿದನಾದವರು ರಂಗದಲ್ಲೇ ಬಿಟ್ಟು ಬರಬೇಕು. ನಿಜ ಜೀವನಕ್ಕೆ ಮಿಳಿತಗೊಳಿಸಬಾರದು. ದ್ವೇಷ ಭಾವನೆ ತಾಳಬಾರದು. ಮನಸ್ಸಿನಲ್ಲಿಟ್ಟುಕೊಂಡು ಹಗೆ ಸಾಧಿಸಬಾರದು. ಹಾಗೇನಾದರೂ ಆದರೆ ಯಕ್ಷಗಾನ ರಂಗದಲ್ಲಿ ಬೆಳೆಯಲು ಸಾಧ್ಯವಿಲ್ಲ. ಅಂತೆಯೇ ತಾಳಮದ್ದಳೆಯ ಅರ್ಥಧಾರಿಗಳು ಬಣ್ಣ ಹಚ್ಚಿ ವೇಷ ಮಾಡುವಾಗ ತಾಳಮದ್ದಳೆಯ ಗುಣಗಳು ರಂಗದಲ್ಲಿ ಬಾರದಂತೆ ಎಚ್ಚರ ಅಗತ್ಯ. ಇಲ್ಲಿ ಭಾಗವತನೇ ನಿರ್ದೇಶಕ. ಅವರ ಮಾತನ್ನು ಪಾಲಿಸುವುದು ವೇಷಧಾರಿಗಳ ಕರ್ತವ್ಯ - ಒಂದು ಕಾಲಘಟ್ಟದ ರಂಗದ ಎಚ್ಚರವನ್ನು ಓಕುಣ್ಣಾಯರು ಜ್ಞಾಪಿಸಿಕೊಳ್ಳುತ್ತಾರೆ.
                ಹಳೆಯ ತಲೆಮಾರಿನ ಅರ್ಥಗಾರಿಕೆಯ ವೈವಿಧ್ಯಕ್ಕೆ ಓಕುಣ್ಣಾಯರು ದನಿಯಾಗುತ್ತಾರೆ. ಆಗೆಲ್ಲಾ ಶಬ್ದ ಶಬ್ದಗಳನ್ನು ಹಿಂಜಿ ಮಾರಾಮಾರಿಯಾಗುವುದಿಲ್ಲ. ಅದು ಅರ್ಥಗಾರಿಕೆಯ ಧರ್ಮವೂ ಅಲ್ಲ. ಮಧ್ಯ ಮಧ್ಯೆ ರೋಚಕವಾದ ಪಂಚಿಂಗ್, ಧರ್ಮಸೂಕ್ಷ್ಮಗಳು ಅನಾವರಣಗೊಳ್ಳುತ್ತಾ ಹೋಗುವುದರಲ್ಲಿ ಸ್ವಾರಸ್ಯ. ತಾಳಮದ್ದಳೆಯ ಮೂಲಕ ಪುರಾಣದ ವಿಚಾರಗಳು ತಪ್ಪಾಗಿ ಪಸರಿಸಬಾರದು. ತಪ್ಪನ್ನು ಕೇಳಿದ ಅಭ್ಯಾಸಿಗಳು ಅದನ್ನೇ ಸರಿಯೆಂದು ಗ್ರಹಿಸಿ ತಮ್ಮ ಅರ್ಥಗಾರಿಕೆಯಲ್ಲಿ ಅಳವಡಿಸಿಕೊಂಡರೆ ತಪ್ಪುಸಂದೇಶವನ್ನು ಅರ್ಥಧಾರಿ ನೀಡಿದಂತಾಗುತ್ತದೆ. ಓಕುಣ್ಣಾಯರಲ್ಲಿ ಇಂತಹ ಎಚ್ಚರದ ಕೂಟಬದ್ಧತೆಗಳು ಸದಾ ಜಾಗೃತ.
                 ಆರೇಳು ದಶಕದ ಹಿಂದೆ ಜೀವನದಲ್ಲಿ ಆತುಕೊಂಡ ಸಾಮಾಜಿಕ ಬದ್ಧತೆ, ವ್ಯವಸ್ಥೆ, ಹೊಣೆ, ಜವಾಬ್ದಾರಿಗಳು ಬದುಕಿಗೆ ಸುಭಗತನವನ್ನು ನೀಡಿದ್ದುವು.  ಅದರಲ್ಲಿ ಮಿಂದು ಪರಿಪಕ್ವಗೊಂಡುದರಿಂದ ಕೌಟುಂಬಿಕ ಜೀವನದಲ್ಲಿ ಎದುರಾಗಿದ್ದ ಎಲ್ಲಾ ಸಮಸ್ಯೆಗಳನ್ನು ಹಗುರಮಾಡಿಕೊಂಡ ಜಾಣ್ಮೆ ಅವರಿಗೆ ಒಲಿದತ್ತು. ತಾನು ನಂಬಿದ ಸತ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ನಿಜದ ನೇರಕ್ಕೆ ನಡೆದು ತೋರಿದ ಹಿರಿಯ. ಪುತ್ತೂರಿನ ಶಿವಳ್ಳಿ ಸಂಪದ ಸಂಘಟನೆ, ಸಂಪದ ಟ್ರೇಡರ್ಸ್ ಗೋತ್ರ-ಪ್ರವರ ಸೂಚಿ, ಶಿವಳ್ಳಿ ಸಮಾವೇಶ.. ಮೊದಲಾದ ಕಾರ್ಯಗಳ ಜವಾಬ್ದಾರಿಯನ್ನು ನಿಭಾಯಿಸಿದವರು.
                  ತನ್ನ ತಂದೆಯವರ ನೆನಪಿಗಾಗಿ 'ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ'ದ ಸ್ಥಾಪನೆ. ಅದರ ಮೂಲಕ ಹಿರಿಯರನ್ನು ಗೌರವಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಈ ವರುಷದ ಪ್ರತಿಷ್ಠಾನಕ್ಕೆ ದಶಮಾನದ ಸಂಭ್ರಮ. ಓಕುಣ್ಣಾಯರ ಮಡದಿ ಸರೋಜ. ಮೂವರು ಹೆಣ್ಣು, ಇಬ್ಬರು ಗಂಡುಮಕ್ಕಳು. ಎಲ್ಲರೂ ಉದ್ಯೋಗಸ್ಥರು. ಸಾಮಾಜಿಕವಾಗಿ ಉನ್ನತ ಸ್ಥಾನಮಾನವನ್ನು ಪಡೆದಿರುವ ಓಕುಣ್ಣಾಯರಿಗೆ 2014ರಲ್ಲಿ  ಸಹಸ್ರಚಂದ್ರ ದರ್ಶನದ ಭಾಗ್ಯ ಒದಗಿತ್ತು.  ಈ ಸಂದರ್ಭದಲ್ಲಿ ಕಲಾಯಾನದ ಹೆಗ್ಗುರುತಾಗಿ 'ಸಾರ್ಥಕ' ಎನ್ನುವ ಅಭಿನಂದನ ಕೃತಿಯನ್ನು ಕುಟುಂಬಸ್ಥರು ಪ್ರಕಾಶಿಸಿದ್ದರು.

No comments:

Post a Comment