Wednesday, September 6, 2017

ಮಾಸಿದ ನೆನಪು ಸೂಸುವ ಚೆಲ್ನಗು

ಪ್ರಜಾವಾಣಿಯ - ದಧಿಗಿಣತೋ - ಅಂಕಣ /9-6-2017

             ಹಳ್ಳಿ ಮನೆ. ಜಗಲಿನಲ್ಲಿ ಭಾಗವತ ಕೊರಗಪ್ಪ ನಾಯ್ಕರು ಕುಳಿತು ಯೋಚಿಸುತ್ತಿದ್ದಾರೆ. ಅತಿಥಿಗಳು ಬಂದಾಗ ಚೆಲ್ನಗು ಬೀರುತ್ತಾರೆ. ಅವರಾಗಿಯೇ ಮಾತನಾಡಲಿ ಎಂದು ನೀವು ಬಿಗುಮಾನ ತೊರಿದರೆ ಮತ್ತದೇ ನಗು ಮತ್ತು ಗೌರವ ಭಾವದ ಸ್ವಾಗತ.
            ಅವರ ನೆನಪಿನ ಗೆರೆಗಳು ಮಸುಕಾಗಿವೆ. ಅಪರೂಪಕ್ಕೆ ಗೆರೆಯು ಮಿಂಚಿ ಮರೆಯಾದಾಗ ವಿಷಣ್ಣ ಮುಖ ಅರಳುತ್ತದೆ, ಪುಳಕಗೊಳ್ಳುತ್ತಾರೆ. ನೆನಪುಗಳು ರಾಚಿ ಬರುತ್ತವೆ. ಅದನ್ನು ಹಂಚಿಕೊಳ್ಳಲು ಸಾಧ್ಯವಾಗದೆ ಚಡಪಡಿಸುತ್ತಾರೆ. ನಿಮಿಷದ ಬಳಿಕ ಮತ್ತದೇ ಪೂರ್ವಸ್ಥಿತಿಯ ಸ್ಥಿತಪ್ರಜ್ಞತೆ.
           ಒಂದು ಕಾಲಘಟ್ಟದ ರಂಗದ ಬದುಕಿನಲ್ಲಿ ರಾತ್ರಿಯಿಡೀ ಭಾಗವತಿಕೆ ಮಾಡಿದ ನಾಯ್ಕರು ಮಾತನಾಡಲು ಅಶಕ್ತರು. ಒಂದೂವರೆ ದಶಕದಿಂದ ಬಾಧಿಸಿದ ಅಸೌಖ್ಯತೆ. ಆಸ್ಪತ್ರೆ ಅಲೆದಾಟದಿಂದ 'ಬಚ್ಚಿದ' ಬದುಕು. ಗುಣವಾಗುವ ನಿರೀಕ್ಷೆಯಲ್ಲಿ ಹಲವಾರು ವೈದ್ಯರುಗಳ ಭೇಟಿ. ನಿರಂತರ ಶುಶ್ರೂಷೆ. ಈಗ ಅತ್ತಿತ್ತ ನಡೆಯುವಷ್ಟು, ಗ್ರಹಿಸುವಷ್ಟು ಶಕ್ತ. ನೆನಪು ಮಾತ್ರ ದೂರ, ಬಹುದೂರ.
             ಅವರ ಸಮಕಾಲೀನ ಕಲಾವಿದರನ್ನು ನೆನಪಿಸಿಕೊಟ್ಟರೆ, ಕಳೆದ ದಿನಗಳು ಒಂದು ಕ್ಷಣ ನೆನಪಿನಂಗಳದಲ್ಲಿ ಕುಣಿಯುತ್ತಿತ್ತು. ಪ್ರಸಂಗವನ್ನು, ಪದ್ಯವನ್ನು ಜ್ಞಾಪಿಸಿದರೆ ಪದ್ಯದ ಸೊಲ್ಲನ್ನು ತಕ್ಷಣ ಹೇಳಿಬಿಡುತ್ತಾರೆ. ಸುತ್ತೆಲ್ಲಾ ಜರಗುತ್ತಿದ್ದ ತಾಳಮದ್ದಳೆಗಳ ಸ್ವಾರಸ್ಯ ಹೇಳಿದರೆ ಸ್ಪಂದಿಸುತ್ತಾರೆ. ಎಲ್ಲವೂ ನಿಮಿಷಾರ್ಧ. ಅಸ್ಪಷ್ಟ.
              ನಿವೃತ್ತ ಅಧ್ಯಾಪಕ, ಅರ್ಥಧಾರಿ ಬಿ.ಎಸ್.ಓಕುಣ್ಣಾಯರು ನಾಯ್ಕರ ಒಡನಾಡಿ. ಪಾಣಾಜೆ ಸುತ್ತಮುತ್ತ ನಡೆಯುತ್ತಿದ್ದ ಬಹುತೇಕ ತಾಳಮದ್ದಳೆಗಳಲ್ಲಿ ಕೊರಗಪ್ಪ ನಾಯ್ಕರದ್ದೇ ಭಾಗವತಿಕೆ. ಇವರಿಗೆ ನಿಕಟ ಸಂಪರ್ಕ. ಓಕುಣ್ಣಾಯರ ಜತೆ ಅವರ ಮನೆಗೆ ಭೇಟಿ ನೀಡಿದಾಗ ಇವರನ್ನು ಗುರುತಿಸುವಲ್ಲಿ ನಾಯ್ಕರು ಕಷ್ಟಪಟ್ಟಿದ್ದರು. ಗೊತ್ತಾದ ಬಳಿಕ ಪಶ್ಚಾತ್ತಾಪದ ಬೇಗುದಿಯಲ್ಲಿ ಬೆಂದಿದ್ದರು.
                   ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ - ಖಂಡೇರಿಯು ಕೊರಗಪ್ಪ ನಾಯ್ಕರ ಹುಟ್ಟೂರು. ಪ್ರಸ್ತುತ ಸನಿಹದ ಅರೆಕ್ಕಾಡಿಯಲ್ಲಿ ಹಲವು ಸಮಯದಿಂದ ವಾಸ. ಈಗವರಿಗೆ ಎಪ್ಪತ್ತು ವರುಷ ದಾಟಿತು. ತಂದೆ ಐತು ನಾಯ್ಕ. ತಾಯಿ ಅಮ್ಮು. ಮೂರರ ತನಕ ವಿದ್ಯಾಭ್ಯಾಸ.
               ಬಾಲ್ಯದಿಂದಲೇ ಯಕ್ಷಗಾನದದ ಒಲವು. ಅದರಲ್ಲೂ ಭಾಗವತನಾಗಬೇಕೆಂಬ ಹಂಬಲ. ಕೇಳಿ ಕಲಿತುದೇ ಹೆಚ್ಚು. ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆಯ ಪಾಠ. ಬಣ್ಣದ ಕುಂಞಿರಾಮರಿಂದ ನಾಟ್ಯಾಭ್ಯಾಸ. ಲಕ್ಷ್ಮಣ ಆಚಾರ್ಯರಿಂದ ಮದ್ದಳೆಯ ಕಲಿಕೆ. ಮುಂದೆ ನಿಡ್ಲೆ ನರಸಿಂಹ ಭಟ್ಟರು ಚೆಂಡೆಗೆ ಗುರುವಾದರು.
                ಯಕ್ಷ ಪ್ರಚಂಡರ ಜತೆಗಿದ್ದ ಅನುಭವವು ಕೊರಗಪ್ಪ ನಾಯ್ಕರ ಮೇಳ ಜೀವನದ ಸುಭಗತನಕ್ಕೆ ಹೊಸ ದಿಕ್ಕು ತೋರಿತು. ಮೂವತ್ತೇಳು ವರುಷ ಶ್ರೀ ಕಟೀಲು ಮೇಳವೊಂದರಲ್ಲೇ ತಿರುಗಾಟ. ಸಂಗೀತಗಾರನಾಗಿ ಪಡಿಮಂಚವೇರಿದ ಭಾಗವತ ಮುಂದೆ ಇಡೀ ರಾತ್ರಿ ಆಟವನ್ನು ಆಡಿಸುವ ತನಕ ನಿಷ್ಣಾತರಾದರು.
               ಕಟೀಲು ಮೇಳ ಸೇರುವ ಪೂರ್ವದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಒಂದು ವರುಷ, ಕುಂಡಾವಿನಲ್ಲಿ ಒಂದು ವರುಷ ಮತ್ತು ಪುತ್ತೂರು ಮೇಳಗಳಲ್ಲಿ ವ್ಯವಸಾಯ ಮಾಡಿದ್ದರು.  ಮಳೆಗಾಲದಲ್ಲಿ ಸ್ಥಳೀಯವಾಗಿ ತಾಳಮದ್ದಳೆಗಳಲ್ಲಿ ಭಾಗಿಯಾಗುತ್ತಿದ್ದರು.
             ತಾಳಮದ್ದಳೆಯ ಬಿರುಬಿನ ಕಾಲ. ಮನೆಗಳಲ್ಲಿ ಶುಭ ಸಮಾರಂಭಗಳು ನಡೆದಾಗ ಅಲ್ಲೆಲ್ಲಾ ತಾಳಮದ್ದಳೆಗೆ ಮೊದಲ ಮಣೆ. ಉದ್ಧಾಮರ ಕೂಟಗಳು. ಆ ದಿನಗಳಲ್ಲಿ ನಾಯ್ಕರಿಗೆ ಬಿಡುವಿರದ ದುಡಿಮೆ. ಸಮಯ ಸಿಕ್ಕಾಗ ಆಸಕ್ತರಿಗೆ ಭಾಗವತಿಕೆ ಕಲಿಸಿಕೊಟ್ಟುದೂ ಇದೆ.
             'ಕರ್ನಾಟಕ ಮೇಳದಲ್ಲಿ ತುಳು ಪ್ರಸಂಗಗಳನ್ನು ಆಡುವ ಸಂದರ್ಭದಲ್ಲಿ ಇವರನ್ನು ವಿಶೇಷವಾಗಿ ಭಾಗವತಿಕೆಗೆ ಮೇಳದ ಯಜಮಾನರು ಆಹ್ವಾನಿಸುತ್ತಿದ್ದರು. ತುಳು ಭಾಷೆಯ ಕುರಿತು ಇವರಿಗಿದ್ದ ಅನುಭವವೇ ಇದಕ್ಕೆ ಕಾರಣ,' ಎಂದು ಗಂಡನಿಗೆ ಸಾಥ್ ಆಗುತ್ತಾರೆ ಮಡದಿ ಲಕ್ಷ್ಮೀ.
             ಅವರು ಈಗ ಹಾಡುವುದಿಲ್ಲ! ಅವರು ಹಾಡಿದ ಒಂದು ಕ್ಯಾಸೆಟ್ ಎಲ್ಲಾದರೂ ಸಿಕ್ಕರೆ ಅದು ದಾಖಲೆಯಾಗುತ್ತಿತ್ತು, ಎನ್ನುವ ಆಶಯ ಲಕ್ಷ್ಮೀಯವರಿಗಿದೆ. ಗಂಡನ ಆಸಕ್ತಿಯನ್ನು  ಗೌರವದಿಂದ ಕಾಣುವ, ಹೆಮ್ಮೆ ಪಟ್ಟುಕೊಳ್ಳುವ ಲಕ್ಷ್ಮೀಯವರ ಆಸೆ ಹುಸಿಯಾಗದು.
                ಪ್ರಸ್ತುತ ಲಕ್ಷ್ಮೀ ಗಂಡನಿಗೆ ಆಸರೆ. ನಾಯ್ಕರಿಗೆ ದನಿ. ಅಸ್ಪಷ್ಟ ಮಾತುಗಳಿಗೆ ಸ್ಪಷ್ಟತೆಯ ಸ್ಪರ್ಶ ನೀಡುವ ಮಾರ್ಗದರ್ಶಕಿ. ಸರಕಾರದ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅಲ್ಪಕಾಲ ಕೆಲಸ. ಮಗ ದೇವಿಪ್ರಸಾದ್ ಸ್ವ-ಉದ್ಯೋಗದ ದುಡಿಮೆ. ನಾಯ್ಕರ ಅಸೌಖ್ಯತೆಗೆ ಇವರೆಲ್ಲರ ದುಡಿಮೆಯಲ್ಲಿ ಏನಿಲ್ಲವೆಂದರೂ ತಿಂಗಳಿಗೆ ಒಂದು, ಒಂದೂವರೆ ಸಾವಿರ ರೂಪಾಯಿ ಔಷಧಿಗೆ ಮೀಸಲಿಡುವಂತಹ ಸ್ಥಿತಿ.
                ಭಾಗವತ ಕುಬಣೂರು ಶ್ರೀಧರ ರಾಯರು ತಾನು 1991ರಲ್ಲಿ ಕಟೀಲು ಮೇಳದಲ್ಲಿದ್ದಾಗ ಕೊರಗಪ್ಪ ನಾಯ್ಕರು ಸಹ ಭಾಗವತರಾಗಿದ್ದರು ಎಂದು ತಮ್ಮ ಅಭಿನಂದನಾ ಗ್ರಂಥ 'ಯಕ್ಷಭೃಂಗ'ದಲ್ಲಿ ಉಲ್ಲೇಖಿಸುತ್ತಾರೆ.
                ಸ್ನೇಹಿತರಾದ ಪ್ರಭಾಕರ ರಾವ್ ಉಡುಪಿ ಮತ್ತು ಪಿ.ಕೆ.ನಾಯ್ಕ್ ಶಿರೋಲ್ತಡ್ಕರು ಕಾಟುಕುಕ್ಕೆಯಲ್ಲಿ ಅವರಿಗೆ ಸಂಮಾನ ಕಾರ್ಯಕ್ರಮವನ್ನಿಟ್ಟುಕೊಂಡಿದ್ದರು. ಅದಕ್ಕಿಂತ ಒಂದೆರಡು ತಿಂಗಳ ಮೊದಲು ನಾಯ್ಕರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಅಂದು ಗುರುತು ಹಿಡಿದು ಖುಷಿಯಿಂದ ಮನಸ್ಸಿನಲ್ಲೇ ಮಾತನಾಡಿದ್ದರು. ತಕ್ಷಣ ಕಣ್ಣೀರಿನ ಅಭಿಷೇಕ. ಆ ಕ್ಷಣದಲ್ಲಿ ಸುತ್ತಲಿದದವರ ಕಣ್ಣು ಆದ್ರ್ರವಾಗಿತ್ತು.
             ಬದುಕಿಗೆ ಎರವಾದ ಅಸೌಖ್ಯತೆಯು ಕೊರಗಪ್ಪ ನಾಯ್ಕರ ಯಕ್ಷ ಬದುಕು ಮಾತ್ರವಲ್ಲದೆ ಭವಿಷ್ಯವನ್ನು ಕಿತ್ತುಕೊಂಡಿತ್ತು. ಅವರೊಬ್ಬ ಸಂಪನ್ಮೂಲ ವ್ಯಕ್ತಿಯಾಗುವುದು ವಿಧಿಗೆ ಇಷ್ಟವಿರಲಿಲ್ಲ. ನೆನಪನ್ನೇ ಕಸಿದುಕೊಳ್ಳಬೇಕೆ? ಬಹುಶಃ ರಂಗದಲ್ಲಿ ನಾಯ್ಕರು ಇರುತ್ತಿದ್ದರೆ ಈಗಿನಂತೆ ಅಭಿಮಾನಿಗಳನ್ನು ಹೊಂದಿರುತ್ತಿದ್ದರು. ಫೇಸ್ಬುಕ್ಕಿನಲ್ಲಿ ಪ್ರತ್ಯೇಕ ಅಭಿಮಾನಿ ಪುಟ ತೆರೆಯಲ್ಪಡುತ್ತಿತ್ತು. ಅವರ ಹಾಡನ್ನು ಕೇಳುತ್ತಾ 'ರಾಕಿಂಗ್' ಅಂತ ವಾಟ್ಸಾಪ್ ಗುಂಪುಗಳಲ್ಲಿ ಸಿಹಿಕಮೆಂಟ್ಗಳ ಮಹಾಪೂರವೇ ಹರಿಯುತ್ತಿತ್ತು!
             ಕಾಟುಕುಕ್ಕೆ ಕೊರಗಪ್ಪ ನಾಯ್ಕರ ಸೇವಾತತ್ಪರತೆಗೆ ಲಭ್ಯವಾದ ಪ್ರಶಸ್ತಿಗಳು ಹಲವು. ಕುಂಬಳೆಯ ಕಣಿಪುರ ಸಾಂಸ್ಕೃತಿಕ ಪ್ರತಿಷ್ಠಾನ, ಬೊಂಡಾಳ ಪ್ರಶಸ್ತಿ, ಅಳಿಕೆ ರಾಮಯ್ಯ ರೈ ಸ್ಮಾರಕ ಪ್ರಶಸ್ತಿ, ಬೊಳ್ಳಿಂಬಳ ಪ್ರಶಸ್ತಿ, ಕಲಾರಂಗ ಪ್ರಶಸ್ತಿಗಳಲ್ಲದೆ; ವಿವಿಧ ಸಂಮಾನ, ಪುರಸ್ಕಾರಗಳು ಪ್ರಾಪ್ತವಾಗಿವೆ. ಬೊಳ್ಳಿಂಬಳ ಪ್ರಶಸ್ತಿ ಪ್ರದಾನದ ಸಂದರ್ಭದಲ್ಲಿ ದಿನಪತ್ರಿಕೆಯಲ್ಲಿ ಬರೆದ ಲೇಖನವು ಅವರಿಗೊಂದಿಷ್ಟು ಸಂಮಾನಗಳನ್ನು, ಪ್ರಶಸ್ತಿಯನ್ನು ತಂದುಕೊಟ್ಟಿದೆ ಎನ್ನಲು ಖುಷಿಯಾಗುತ್ತದೆ.
              ಇಂದು ಅಶಕ್ತ ಕಲಾವಿದರಿಗೆ ಗೌರವಪೂರ್ವಕವಾದ ಸಂಮಾನಗಳು, ಸಹಕಾರಗಳು ಪ್ರಾಪ್ತವಾಗುವುದನ್ನು ನೋಡುತ್ತೇವೆ. ಪುರಾಣ, ಕಲೆ, ಸಂಸ್ಕಾರಗಳನ್ನು ನಂಬದ ಸರಕಾರದ ಇಲಾಖೆಗಳಿಗೆ ನಾಯ್ಕರಂತಹ ಕಲಾವಿದರು ಪರಿಚಯವಾಗುವುದಿಲ್ಲ.
                ಮಾಸಾಶನಕ್ಕಾಗಿ ಅರ್ಜಿ ಸಲ್ಲಿಸಿ ಐದಾರು ವರುಷವಾಯಿತು, ಏನೂ ಪ್ರಯೋಜನವಾಗಿಲ್ಲ ಎಂದು ನೆನಪಿಸುತ್ತಾರೆ ಅವರ ಚಿರಂಜೀವಿ ದೇವಿಪ್ರಸಾದ್. ಕಲಾವಿದರಿಗೆ ಕಲಾಭಿಮಾನಿಗಳೇ ಆಸರೆ. ಅಭಿಮಾನವು ಅಶಕ್ತತೆಯಲ್ಲೂ ಪ್ರಕಟವಾದಾಗ ಮಾತ್ರ ಅಂತಹ ಅಭಿಮಾನಕ್ಕೆ ಗರಿಮೆ. ಏನಂತೀರಿ.

No comments:

Post a Comment