Friday, September 1, 2017

ಅಹಮಿಕೆಯ ದಾಸ್ಯಕ್ಕೆ ಒಡ್ಡಿಕೊಳ್ಳದ ಮದ್ಲೆಗಾರ


ಪ್ರಜಾವಾಣಿಯ - ದಧಿಗಿಣತೋ - ಅಂಕಣ  / 23-6-2017

               ಯಕ್ಷಗಾನದ ಪಾತ್ರಗಳ ಗುಣ-ಸ್ವಭಾವಕ್ಕೆ ಅನುಗುಣವಾದ ರಂಗನಡೆಯೇ ಅದರ ಸೌಂದರ್ಯ. ಚೆಂಡೆ, ಮದ್ದಳೆಗಳ ನುಡಿತಕ್ಕೂ ಪ್ರಮಾಣವಿದೆ. ದೂರದಿಂದಲೇ ಚೆಂಡೆಯ ನುಡಿತದ ಗತಿಯನ್ನು ಆಲಿಸಿ, ನಿಖರವಾಗಿ  ಇಂತಹುದೇ ಪಾತ್ರಗಳೆನ್ನುವ ಪ್ರಾಜ್ಞರಿದ್ದರು. ಬದಲಾದ ಕಾಲಘಟ್ಟದಲ್ಲಿ ರಂಗ ಗತಿ, ನುಡಿತಗಳ ವೇಗ, ಪಾತ್ರ ಸೌಂದರ್ಯಗಳು ಮಸುಕಾದಂತಿದೆ. ತಾನು ಹವ್ಯಾಸಿ ರಂಗದಲ್ಲಿ ಬಹುಕಾಲ ವ್ಯವಸಾಯ ಮಾಡಿದ್ದರೂ ಪಾತ್ರ ಗತಿಯ ಮತ್ತು ಚೆಂಡೆಯ ನುಡಿತಗಳ ಪ್ರಮಾಣಬದ್ಧ ಜ್ಞಾನವನ್ನು ಹೊಂದಿ, ಅದನ್ನು ರಾಜಿಯಿಲ್ಲದೆ ಅನುಷ್ಠಾನಿಸಿದವರು ಮದ್ಲೆಗಾರ ವೆಂಕಟೇಶ ಉಳಿತ್ತಾಯರು (65).
               ಪುತ್ತೂರು ತಾಲೂಕಿನ ಆರ್ಲಪದವು ಹುಟ್ಟೂರು. ಅಜ್ಜ ಸುಬ್ರಾಯ ಉಳಿತ್ತಾಯರು ವೇಷಧಾರಿ. ಅಣ್ಣ ಅನಂತರಾಮ ಉಳಿತ್ತಾಯರು ಅರ್ಥಧಾರಿ, ವೇಷಧಾರಿ. ತಂದೆ ಕೃಷ್ಣ ಉಳಿತ್ತಾಯರು ಯಕ್ಷಗಾನದಲ್ಲಿ ಆಲ್ರೌಂಡರ್. ಇವರ 'ದೇವಿ ಮಹಲ್' ಹೋಟೆಲ್ ಚೆಂಡೆ ಮದ್ದಳೆಗಳ ಸದ್ದಿಲ್ಲದೆ ತೆರೆಯುತ್ತಿರಲಿಲ್ಲ! ಯಕ್ಷಗಾನವು ಸಾಂಸ್ಕೃತಿಕವಾಗಿ ಮೇಲ್ಮೆಯಲ್ಲಿದ್ದ ಕಾಲಘಟ್ಟದಲ್ಲಿ ದೇವಿ ಮಹಲಿನ ಆವರಣವು ಕಲಾವಿದರ ಹರಟೆಯ ತಾಣ. ತಾಳಮದ್ದಳೆಗಳು ಸಂಪನ್ನವಾಗುತ್ತಿದ್ದ ವೇದಿಕೆ. ಆಟಗಳ ಆಡುಂಬೊಲ.
            ದೂರದೂರಿನವರು ಆರ್ಲಪದವಿಗೆ ಬಂದಾಗ ಉಳಿತ್ತಾಯರನ್ನು ಭೇಟಿಯಾಗದೆ ಪ್ರಯಾಣ ಮುಗಿಯುತ್ತಿರಲಿಲ್ಲ. ಯಕ್ಷಗಾನದ ಸುದ್ದಿಗಳ ವಿನಿಮಯದ ಜತೆಗೆ ಉಪಾಹಾರವನ್ನು ಹೊಟ್ಟೆಗಿಳಿಸಿದ ಬಳಿಕವೇ ವಿದಾಯ. ಅತಿಥಿ ಕಲಾವಿದರ ಪಾಲಿಗೆ ಹೋಟೆಲು ಅನ್ನ ದಾಸೋಹದ ಸೇವಾಲಯ. ಮೇಳಗಳು ಬಂದರಂತೂ ಉಳಿತ್ತಾಯರು ಬ್ಯುಸಿ!  ಆತಿಥ್ಯದಿಂದ ತೊಡಗಿ ಮರುದಿವಸ ಮೇಳದ ಟೆಂಟ್ ತೆಗೆಯುವಲ್ಲಿಯ ತನಕ 'ತನ್ನದೇ ಮೇಳ'ವೆಂದ ಸುಧಾರಿಕೆ. ಉಳಿತ್ತಾಯರು ಮತ್ತು ಹೋಟೆಲ್ ಒಂದು ತೆರನಾದ ಯಕ್ಷಪಾತ್ರಗಳೇ!
                  ಇಂತಹ ಗಾಢ ಯಕ್ಷಗಾನೀಯ ವಾತಾವರಣದಲ್ಲಿ ವೆಂಕಟೇಶ ಉಳಿತ್ತಾಯರ ಬಾಲ್ಯ ಅರಳಿತ್ತು.  ಬದುಕಿನ ಒಂದೊಂದೇ ಹೆಜ್ಜೆಯ ಏರಿಕೆ. ಅಲ್ಪ ಕಾಲದ ವಿದ್ಯಾಭ್ಯಾಸ. ಮೇಳದ ಬವಣೆ, ಕಲಾವಿದರ ಜೀವನವನ್ನು ಹತ್ತಿರದಿಂದ ನೋಡಿಯೇ 'ಮೇಳದ ಕಲಾವಿದ'ನಾಗುವ ಆಸೆಯು ಮುರುಟಿತ್ತು! ಚೆಂಡೆಯ ನುಡಿತದತ್ತ ಬಾಲ್ಯದೊಲವು. ಕಲಿಕಾ ಅವಕಾಶಗಳಿಲ್ಲದೆ ಆಸೆಯು ಸುಪ್ತತೆಯತ್ತ ಜಾರಿತು. ಈ ಮಧ್ಯೆ ಕಾಲನ ದೃಷ್ಟಿಗೆ ಸಿಲುಕಿದರು. ಯೌವನವನ್ನು ರಾಜಧಾನಿ ಸೆಳೆಯಿತು. ಹೋಟೆಲಿನಲ್ಲಿ ದುಡಿತ. ಸೂಪಶಾಸ್ತ್ರಗಳ ಸೂಕ್ಷ್ಮವಿಚಾರಗಳ ಆರ್ಜನೆ. ವಿವಿಧ ತಿಂಡಿಗಳ ಜೀವಭಾವದ ಆಪೋಶನ.
              ಹನ್ನೆರಡು ವರುಷದ ಪಟ್ಟಣ ವಾಸ. ಮರಳಿ ಹುಟ್ಟೂರಿಗೆ ಬಂದಾಗ ಉಳಿತ್ತಾಯರು 'ಸೂಪಜ್ಞ'ನಾಗಿದ್ದರು. ಪುತ್ತೂರಿನ ಹೋಟೆಲ್ ಒಂದರಲ್ಲಿ ಸೂಪಕಾರ ವೃತ್ತಿ. ಕರಾವಳಿಗೆ ಅಪರೂಪದ್ದಾದ ಖಾದ್ಯಗಳ ಪರಿಚಯ. ಕೈಗುಣವು ಒಂದೊಂದು ತಿಂಡಿಯಲ್ಲೂ ಉಳಿತ್ತಾಯರ ಹೆಸರನ್ನು ಕೆತ್ತಿದುವು. ತಿಂಡಿ ಸವಿದು ತೆರಳುವ ಗ್ರಾಹಕರೆಲ್ಲರೂ ಕೈಗುಣವನ್ನು ಹೊಗಳಿದ್ದೇ ಹೊಗಳಿದ್ದು. "ಪುತ್ತೂರಿನ ಹರಿಪ್ರಸಾದ್ ಹೋಟೆಲ್ ನನ್ನ ಬದುಕಿಗೆ ಹೊಸ ತಿರುವು ನೀಡಿತು. ನನ್ನ ಜ್ಞಾನಕ್ಕೆ ಅದರ ಯಜಮಾನರು ಮಾನ ಕೊಟ್ಟರು. ಬಾಣಸಿಗ ವೃತ್ತಿಗೆ ಗೌರವ ನೀಡಿದರು. ಅದುವರೆಗೆ ಎಲ್ಲೋ ಕಳೆದುಹೋಗಿದ್ದ ನನಗೆ ಮರುಜೀವ ನೀಡಿದರು," ಎನ್ನುವಾಗ ವಿನೀತರಾಗುತ್ತಾರೆ.
            ತನ್ನ ಇಪ್ಪತ್ತೆಂಟನೇ ವರುಷದಲ್ಲಿ ಅಮರಾವತಿ ಅವರೊಂದಿಗೆ ವಿವಾಹ. ಮನದೊಳಗೆ ಕತ್ತಲೆಯಲ್ಲಿದ್ದ ಯಕ್ಷಗಾನ ಒಲವಿನ ಬೀಜಕ್ಕೆ ಬೆಳಕಿನ ಕಿರಣ. ಸುಪ್ತವಾಗಿದ್ದ ಯಕ್ಷೊಲವು ಜಾಗೃತ. ಕಡಬ ಮೋಹನ ಬೈಪಾಡಿತ್ತಾಯರಿಂದ ಯಕ್ಷಾಕ್ಷರ ಕಲಿಕೆ. ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಹೆಚ್ಚಿನ ಅಭ್ಯಾಸ. ಇಬ್ಬರು ಗುರುಗಳಲ್ಲಿ ಹದಗೊಂಡ ವೆಂಕಟೇಶರು ಚೆಂಡೆ ಹೆಗಲಿಗೇರಿಸಿದರು. ಈ ಸಂದರ್ಭಗಳಲ್ಲಿ ತನ್ನ ಅಜ್ಞಾತವಾಸದ ಅವಧಿ ಮತ್ತು ಅದಕ್ಕೆ ಕಾರಣವಾದ ಬದುಕಿನ ಜಾರುವಿಕೆಯನ್ನು ಆಪ್ತರಲ್ಲಿ ಆಗಾಗ್ಗೆ ಹಂಚಿಕೊಂಡು ಕಣ್ಣು ತೇವ ಮಾಡಿಕೊಂಡುದುಂಟು.
                 ಪುತ್ತೂರು, ಆರ್ಲಪದವು, ಪೆರ್ಲ - ಈ ಭಾಗಗಳಲ್ಲಿ ಹವ್ಯಾಸಿ ಆಟಗಳು ಯಥೇಷ್ಟ. ಹಿಮ್ಮೇಳ ಕಲಾವಿದರ ಕೊರತೆಯಿತ್ತು. ಉಳಿತ್ತಾಯರು ಯಾವಾಗ ಕಲಿಕೆ ಪೂರ್ಣಗೊಳಿಸಿ ರಂಗದಲ್ಲಿ ನಿಂತರೋ ಅಲ್ಲಿಂದ ಕೂಟ-ಆಟಗಳಿಗೆ ಬೇಡಿಕೆ. ಸಂಭಾವನೆಯ ಆಸೆಯಿಲ್ಲದೆ, ಸಂಘಟಕರಿಗೆ ಪೀಡೆ ಕೊಡದೆ ಭಾಗವಹಿಸಿದರು. ವಾಹನ ಸೌಕರ್ಯ ಇಲ್ಲದೆಡೆ ಗಂಟೆಗಟ್ಟಲೆ ನಡೆದರು. ಊಟ-ತಿಂಡಿಯ ಗೊಡವೆ ಇಲ್ಲದೆ ರಾತ್ರಿಗಳನ್ನು ಕಳೆದರು. ಪಾಲಿಗೆ ಬಂದ ಚಿಲ್ಲರೆ ಸಂಭಾವನೆಯನ್ನು ಗೊಣಗಾಟವಿಲ್ಲದೆ ಸ್ವೀಕರಿಸಿದರು.
                   ಪಾಲೆಚ್ಚಾರು ಗೋವಿಂದ ನಾಯಕರ ಭಾಗವತಿಕೆ, ಕೋನಡ್ಕ ಗೋಪಾಲಕೃಷ್ಣ ಕಲ್ಲೂರಾಯರು ಮತ್ತು ವೆಂಕಟೇಶ ಉಳಿತ್ತಾಯರ ಚೆಂಡೆ-ಮದ್ದಳೆ ಜತೆಗಾರಿಕೆಯು ಏನಿಲ್ಲವೆಂದರೂ ಎರಡು ದಶಕಗಳ ಕಾಲ ಹವ್ಯಾಸಿ ರಂಗಕ್ಕೆ ಉಸಿರಾಗಿತ್ತು. ಮೂವರು ಕೂಡಾ ಅಗ್ಗದ ಪ್ರಚಾರಕ್ಕಾಗಿ ಎಂದೂ ಹಾತೊರೆದವರಲ್ಲ. ಲೇಖನದ ಆರಂಭದಲ್ಲಿ ಉಲ್ಲೇಖಿಸಿದಂತೆ ಪ್ರಮಾಣಬದ್ಧ ನುಡಿತಗಳ ಮನಃಸ್ಥಿತಿಗಳು ಇವರಲ್ಲಿ ಮಿಳಿತವಾಗಿದ್ದುವು. ಪಾತ್ರೋಚಿತವಾದ ರಂಗನಡೆಗಳಿಗೆ ಮೂವರು ಗುರುವಾಗಿ ಪರಿಣಮಿಸಿದರು.
                ಹವ್ಯಾಸಿ ರಂಗದಲ್ಲಿ ಹಿಮ್ಮೇಳ ಪರಿಕರಗಳನ್ನು ಶ್ರುತಿ ಮಾಡುವ ಕ್ರಮಗಳು ಅಷ್ಟಕ್ಕಷ್ಟೇ. ಶ್ರುತಿ ಮಾಡುವುದು ಒಂದು ಜ್ಞಾನ. ಅದು ಅನುಭವದಿಂದಲೇ ಬರಬೇಕು. ಶ್ರುತಿ ಮಾಡಿದ ಬಳಿಕವೇ ಪ್ರದರ್ಶನವನ್ನು ಶುರು ಮಾಡುತ್ತಿದ್ದೆವು. ಇದರಿಂದಾಗಿ ವಾದನಸುಖವನ್ನು ಅನುಭವಿಸುವಂತಾಯಿತು. ಈ ಸೂಕ್ಷ್ಮವನ್ನು ಗ್ರಹಿಸಿದ ಅನೇಕ ಹಿರಿಯರು ಬೆನ್ನುತಟ್ಟಿದರು. ಹವ್ಯಾಸಿ ಕಲಾವಿದರಾದರೂ ರಂಗಕ್ಕೆ ಶಿಸ್ತು ಇತ್ತು. ಹಿಮ್ಮೇಳದವರನ್ನು ಗೌರವಿಸುತ್ತಿದ್ದರು. ಊರಿನವರಿಗೆ ಆಟ ಒಳ್ಳೆಯದಾಗಬೇಕೆನ್ನುವ ನಿರೀಕ್ಷೆಯಿದ್ದುವು. ಹಾಗಾಗಿ ಆಟ-ಕೂಟಗಳೆಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿ ಹೊಸ ಅನುಭವ ಕಟ್ಟಿಕೊಟ್ಟಿತು ಎಂದು ಹಳೆಯ ನೆನಪುಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.
               ಹವ್ಯಾಸಿಗಳಲ್ಲಿ ಕಲಿಕೆಯ ದಾಹ ಹೆಚ್ಚಾಗಿ ಹಿಮ್ಮೇಳ ತರಗತಿ ನಡೆಸುವಂತೆ ಬೇಡಿಕೆ. 'ತಾನು ಭಾಗವತಿಕೆ ಕಲಿಯದೆ ಕಲಿಸುವುದೇನನ್ನು' ಎಂದು ನಯವಾಗಿ ತಿರಸ್ಕರಿಸಿದರು. "ಹೊಣೆಯರಿತ ನಿಲುವು ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಸ್ಥಾನದ ಕುರಿತು ಸ್ಪಷ್ಟವಾದ ಸ್ವ-ವಿವೇಚನೆ. ಬಿಗಿಮುಷ್ಠಿಯಲ್ಲಿ ಚೆಂಡೆಯ ಕೋಲು ಹಿಡಿದು ಉರುಳಿಕೆ ನುಡಿಸುವವರು ವಿರಳ. ಬಿಗಿಮುಷ್ಠಿಯ ಗಟ್ಟಿತನದ ದೃಢತೆಯ ಪೆಟ್ಟುಗಳು ವೇಷಧಾರಿಗಳ ಹೆಜ್ಜೆಗಾರಿಕೆಯನ್ನು ಮತ್ತು ನಾಟ್ಯದ ಮೇಲಿನ ಹಿಡಿತವನ್ನು ಸ್ಫುಟವಾಗಿ ತೋರಿಸಲು ರಂಗ ಸಹಾಯಕವಾಗಿದ್ದುವು. ಹಿಮ್ಮೇಳ ಪರಿಕರಗಳ ರಿಪೇರಿ, ತಯಾರಿ ಎರಡರಲ್ಲೂ ಜ್ಙಾನವಿತ್ತು, ಎಂದು ಉಳಿತ್ತಾಯರ ರಂಗಕಸುಬಿಗೆ ಕನ್ನಡಿ ಹಿಡಿಯುತ್ತಾರೆ," ಮುರಳಿ ರಾಯರಮನೆ. ಹಿಂದಿನಿಂದಲೇ ಉಳಿತ್ತಾಯರ ವಾದನ ಕ್ರಮವನ್ನು ಅವಲೋಕಿಸುತ್ತಾ, ಅವರೊಂದಿಗೆ ಮದ್ದಳೆ ನುಡಿಸುತ್ತಾ ಬಂದ ಇವರೀಗ ಉಳಿತ್ತಾಯರ ಅಳಿಯ. ಮಗಳು ಪ್ರಿಯಳ ಪ್ರಿಯ.
                 ಮಗ ಕೃಷ್ಣಪ್ರಕಾಶ್. ಮಂಗಳೂರಿನ ಕರ್ನಾಟಕ ಬ್ಯಾಂಕಿನಲ್ಲಿ ಅಧಿಕಾರಿ. ಮಗನನ್ನು ವಾದನ ಲೋಕಕ್ಕೆ ಪರಿಚಯಿಸಿದ ವೆಂಕಟೇಶರ ತನುಶ್ರಮ ಅಜ್ಞಾತ. ಬಹುಶಃ ಕೃಷ್ಣಪ್ರಕಾಶ್ ಗರ್ಭದೊಳಗೆ ಮದ್ದಳೆಯ ನುಡಿತಗಳನ್ನು ಕೇಳಿಸಿಕೊಂಡಿರಬೇಕು! ಈಗ ವಾದನಲೋಕದಲ್ಲಿ ಹೊಸ ಹೆಜ್ಜೆಗಳನ್ನು ಊರಿ, ಏರುತ್ತಿದ್ದಾರೆ. ಇದು ಸ್ವ-ನಿರ್ಮಿತ 'ಜಾಗೃತ' ಏರುವಿಕೆ. ನಿತ್ಯ ಅಭ್ಯಾಸಿ, ಚಿಂತಕ. ಬೌದ್ಧಿಕವಾದ ಮಾತುಕತೆಗಳಿಗೆ  ತೆರೆದುಕೊಳ್ಳುವ ಗುಣವು ತಂದೆಯ ಬಳುವಳಿ.
                "ಮದ್ದಳೆ ವಾದನ ಕ್ಷೇತ್ರದಲ್ಲಿ ಮಗ ಪ್ರಕಾಶ್ ಮುಂದಿದ್ದಾನೆ. ಅವಕಾಶದ ಬಾಗಿಲು ತೆರೆಯುತ್ತಿದೆ. ಝೀರೋದಿಂದ ಬದುಕನ್ನು ರೂಪಿಸಿದ ನನಗೆ, ಕುಟುಂಬಕ್ಕೆ ಹೆಮ್ಮೆಯ ವಿಚಾರ. ಅವನ ಗೌರವಕ್ಕೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ನಾನೀಗ ವಾದನ ವ್ಯವಸಾಯದಿಂದ ಹಿಂದೆ ಸರಿಯುತ್ತಿದ್ದೇನೆ, ಸರಿದಿದ್ದೇನೆ" ಎಂದು ಖುಷಿಯಿಂದ ವೆಂಕಟೇಶರು ಹೇಳುತ್ತಾರೆ.  ಮಗನ ಆಭ್ಯುದಯವನ್ನು ಮನಸಾ ಅಭನಂದಿಸಿದ ಓರ್ವ ತಂದೆಯ ನಿರ್ಧಾರದ ಹಿಂದಿರುವ ಒಳತೋಟಿಗೆ ಶರಣು.
                 ಹವ್ಯಾಸಿ ಕ್ಷೇತ್ರದಲ್ಲಿ ಹಿಮ್ಮೇಳ ವಾದಕರು ಹಲವರಿದ್ದಾರೆ. ವೆಂಕಟೇಶ ಉಳಿತ್ತಾಯರಂತಹ ಬದ್ಧತೆಯ, ನಿಷ್ಠೆಯ ಮತ್ತು ತ್ಯಾಗ ಭಾವದ ಕಲಾವಿದರು ವಿರಳ. ಅಹಮಿಕೆಯ ದಾಸ್ಯಕ್ಕೆ ಒಡ್ಡಿಕೊಳ್ಳದ ಬಾಗುವ ವ್ಯಕ್ತಿತ್ವವು ಅವರ ಬದುಕಿಗೆ ಭೂಷಣ. ಈಚೆಗೆ ಪುತ್ತೂರು ಗೋಪಾಲಕೃಷ್ಣಯ್ಯ (ಗೋಪಣ್ಣ) ನೆನಪಿನ ಗೌರವ ಸ್ವೀಕರಿಸಿದರು.

2 comments: