Tuesday, September 5, 2017

ರಂಗ-ಪ್ರಸಂಗ ಆಶಯ - ಹಳೆಯ ಪ್ರಸಂಗಗಳಿಗೆ ಮರುಜೀವ




ಉದಯವಾಣಿ-ಕಲಾವಿಹಾರದಲ್ಲಿ ಪ್ರಕಟಿತ - 23-6-2017

               ಉಡುಪಿಯ ರಾಜಾಂಗಣದಲ್ಲಿ 'ರಂಗ-ಪ್ರಸಂಗ' ಎನ್ನುವ ಯಕ್ಷಗಾನ ದಾಖಲಾತಿ ಕಲಾಪ. ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ(ರಿ)ದ ಆಯೋಜನೆ. ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಕಲ್ಪನೆ. ಮೂರು ಯಕ್ಷಗಾನ ಪ್ರಸಂಗಗಳ ಪ್ರಸ್ತುತಿ.
            ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳ ನಿರ್ದೇಶನದಲ್ಲಿ 'ಬ್ರಹ್ಮಕಪಾಲ', ಬಲಿಪ ನಾರಾಯಣ ಭಾಗವತರ ಸಾರಥ್ಯದಲ್ಲಿ 'ಸೈಂದವ ವಧೆ' ಪ್ರಸಂಗಗಳ ಪ್ರದರ್ಶನ. ಈ ಪ್ರಸಂಗಕ್ಕೆ ಬಲಿಪ ಪ್ರಸಾದ್, ಬಲಿಪ ಶಿವಶಂಕರ ಇವರ ಸಾಥ್. ಸಿರಿಬಾಗಿಲು ರಾಮಕೃಷ್ಣ ಮಯ್ಯರ ಭಾಗವತಿಕೆಯಲ್ಲಿ 'ಇಂದ್ರಜಿತು' ಪ್ರಸಂಗ. ಮೊದಲ ಮತ್ತು ಕೊನೆಯ ಪ್ರಸಂಗಗಳು ಬಹುತೇಕ ಚಾಲ್ತಿಯಲ್ಲಿರುವ ಆಖ್ಯಾನಗಳು. ಎರಡನೆಯದು ಮಾತ್ರ ಎಕ್ಸ್ಕ್ಲೂಸಿವ್.
                ಪ್ರಸಂಗವೊಂದು ರಂಗಪ್ರಯೋಗವಾಗಲು ಹಲವು ಯೋಚನೆ, ಯೋಜನೆಗಳ ಒಳಸುರಿಗಳನ್ನು ಬೇಡುತ್ತದೆ. ಪ್ರಸಂಗಗಳ ಅರಿವು ಕಲಾವಿದರಿಗೆ ಇರಬೇಕಾದುದು ಅಗತ್ಯ. ಚಾಲ್ತಿಯ ಪ್ರಸಂಗವಾದರೆ ಓಕೆ. ಐದತ್ತು ನಿಮಿಷದ ಸಮಾಲೋಚನೆಯಲ್ಲಿ ಮಾನಸಿಕವಾಗಿ ರಂಗಚಲನೆಯ ಚಿತ್ರದಚ್ಚು ಸಿದ್ಧವಾಗಿರುತ್ತದೆ. ಹೊಸ ಪ್ರಸಂಗಗಳಿಗೆ ಇಂತಹ ಸಲೀಸುತನವಿಲ್ಲ ಮತ್ತು ಹಗುರವಾಗಿ ಕಾಣಲು ಪ್ರಸಂಗ ಬಿಡದು.
             'ಸೈಂದವ ವಧೆ' ಪ್ರಸಂಗದ ಕಥಾನಕ ಚಿಕ್ಕದು. ಹೇಳುವಂತಹ ಗಾಢ ಸಂದೇಶಗಳಿಲ್ಲದ ಪ್ರಸಂಗ. ಅಭಿಮನ್ಯು ಕಾಳಗದ ಮುಂದುವರಿದ ಭಾಗ. ಪ್ರಸಂಗದ ಪೂರ್ವಾರ್ಧದಲ್ಲಿ ದುಃಖ, ಕರುಣ ರಸಗಳ ಸನ್ನಿವೇಶಗಳು. ಉತ್ತರಾರ್ಧದಲ್ಲಿ ತಾಂತ್ರಿಕ ರಂಗಚಲನೆಯುಳ್ಳ ಯುದ್ಧ ಭಾಗಗಳು. ಸ್ವಲ್ಪ ಕ್ಲಿಷ್ಟ ಅನ್ನಿಸುವ  ಸಂದರ್ಭಗಳು. ಬಲಿಪ ನಾರಾಯಣ ಭಾಗವತರು ತಮ್ಮ ದಕ್ಷ ನಿರ್ದೇಶನದಲ್ಲಿ ಪ್ರಸಂಗವನ್ನು ಮುನ್ನಡೆಸಿ ಮುಗಿಸಿದಾಗ ಸಿರಿಬಾಗಿಲು ಮಯ್ಯರು ಖುಷ್!
              ಮಯ್ಯರ ಖುಷಿಗೆ ಕಾರಣ ಇಲ್ಲದಿಲ್ಲ. ಮೂರ್ನಾಲ್ಕು ತಿಂಗಳಿನಿಂದಲೇ ಸೈಂದವ ಅವರನ್ನು ಕಾಡಿದ್ದ, ಪೀಡಿಸಿದ್ದ ಕೂಡಾ! ಪ್ರಸಂಗದ ನಡೆ ಗೊತ್ತಿತ್ತೇ ವಿನಾ ರಂಗಪ್ರಯೋಗ ಮತ್ತು ಅದರ ಫಲಿತಾಂಶದ ಕುರಿತು ನಿಖರತೆ ಇದ್ದಿರಲಿಲ್ಲ. ತಾಂತ್ರಿಕ ಪ್ರಸಂಗವಾದ್ದರಿಂದ ಕಲಾವಿದರನ್ನು ಸಂಘಟಿಸುವುದೂ ಕಷ್ಟದ ಕೆಲಸವೇ. ಪಾತ್ರಕ್ಕೆ ಸರಿಯಾದ ಕಲಾವಿದರ ಆಯ್ಕೆಯೂ ಒಂದು ಸವಾಲು. ಆಪ್ತ ಕಲಾವಿದರೊಂದಿಗೆ ಮಾತುಕತೆ, ಹಿರಿಯ ಕಲಾವಿದರಿಂದ ಮಾಹಿತಿಗಳನ್ನು ಕಲೆಹಾಕುವ ಕೆಲಸ ಸಣ್ಣದಲ್ಲ.
              ಪ್ರದರ್ಶನಕ್ಕಿಂತ ಮುಂಚಿತವಾಗಿ ಬಲಿಪರು 'ಸೈಂದವ ವಧೆ' ಪ್ರಸಂಗದಲ್ಲಿ ಬಣ್ಣ ಹಚ್ಚುವ ಕಲಾವಿದರೊಂದಿಗೆ ಪ್ರಸಂಗದ ನಡೆ ಮತ್ತು ರಂಗಚಲನೆಯ ಮಾಹಿತಿಯನ್ನು ಹಂಚಿಕೊಂಡರು. ಯಾವ್ಯಾವ ಪಾತ್ರಕ್ಕೆ ಎಷ್ಟೆಷ್ಟು ಪದ್ಯ, ತಾಂತ್ರಿಕ ಮಾಹಿತಿ, ಪದ್ಯ ಸಾಗುವ ವಿಧಾನ.. ಹೀಗೆ ಸೂಕ್ಷ್ಮ ವಿಚಾರದತ್ತ ಅರ್ಥವಾಗುವಂತಹ ಮಾಹಿತಿ ನೀಡಿದ್ದು ಮತ್ತು ಆ ಮಾಹಿತಿಯಂತೆ ಕಲಾವಿದರು ರಂಗದಲ್ಲಿ ಅಭಿನಯಿಸಿದ್ದರ ಪರಿಣಾಮದಿಂದ ಸೈಂದವ ಗೆದ್ದ! ಪ್ರಸಂಗದ ಆಶಯದಂತೆ ಅರ್ಜುನ ಮತ್ತು ಕೃಷ್ಣನಿಗೆ ಸೈಂದವನನ್ನು ಕೊಲ್ಲಲು ಬರೋಬ್ಬರಿ ಮೂರುವರೆಯಿಂದ ನಾಲ್ಕು ತಾಸು ಬೇಕಾಯಿತು!
             ಈ ಪ್ರಸಂಗದ ಹಿನ್ನೆಲೆಯಲ್ಲಿ ಬಲಿಪರನ್ನು ಮಾತಿಗೆ ಎಳೆದೆ - ಮೊದಲು ಈ ರೀತಿಯ ಏರುಗತಿಯ ಪ್ರಸಂಗಗಳನ್ನು ಭಾಗವತ ಪುತ್ತಿಗೆ ರಾಮಕೃಷ್ಣ ಜೋಯಿಸಲು ಆಡಿಸುತ್ತಿದ್ದರು. ನಾನು ಗಾಂಧಿ (ಬಣ್ಣದ) ಮಾಲಿಂಗ, ಕುಟ್ಯಪ್ಪು, ಗೇರುಕಟ್ಟೆ ಗಂಗಯ್ಯ ಶೆಟ್ರು - ಈ ಮೂವರು ಬೇರೆ ಬೇರೆ ಸಂದರ್ಭದಲ್ಲಿ ಮಾಡಿದ ಸೈಂದವ ಪಾತ್ರಗಳಿಗೆ (ಪ್ರಸಂಗಗಳಿಗೆ) ಪದ್ಯ ಹೇಳಿದ್ದೇನೆ. ಈಚೆಗಂತೂ ತೀರಾ ಅಪರೂಪವಾಗಿದೆ. ಇಂತಹ ಪ್ರಸಂಗಕ್ಕೆ ರಂಗ ಮಾಹಿತಿ ಜಾಸ್ತಿ. ಅದಕ್ಕೆ ಪೂರಕವಾಗಿ ರಂಗದ ಪರಿಚಾರಕರಾದ 'ನೇಪಥ್ಯ ಕಲಾವಿದ'ರಿಗೂ ಪ್ರಸಂಗದ ಜ್ಞಾನ ಬೇಕು. ಮೊದಲು ರಂಗದ ಹಿಂದೆ ದುಡಿಯುವ ಸಹಾಯಕರಿಗೆ ಯಾವುದೇ ಪ್ರಸಂಗದ ಜ್ಞಾನವಿತ್ತು
              ಸೈಂದವ ವಧೆಯಂತಹ ತಾಂತ್ರಿಕಾಂಶಗಳನ್ನು ಬೇಡುವ ಪ್ರಸಂಗಗಳು ಬೇಕಾದಷ್ಟಿವೆ. ಉದಾ: ಸೇತುಬಂಧ, ಅಂಗದ ಸಂಧಾನ ಪ್ರಸಂಗಗಳು ತಾಳಮದ್ದಳೆಯಲ್ಲಿ ಜನಪ್ರಿಯವಾಗಿವೆ. ಹಿಂದೆ ಈ ಪ್ರಸಂಗಗಳನ್ನೂ ಆಡುತ್ತಿದ್ದ ನೆನಪು ಬಲಿಪರಿಗಿದೆ. ಬದಲಾದ ರಂಗ ಮತ್ತು ಸಾಮಾಜಿಕ ಮನಃಸ್ಥಿತಿಗಳಲ್ಲಿ ಸೈಂದವ ವಧೆ ಪ್ರಸಂಗ ಯಾಕೆ ಇಷ್ಟವಾಗುವುದಿಲ್ಲ? ಬಲಿಪರು ಹೇಳುತ್ತಾರೆ, ಅಭಿಮನ್ಯು ಕಾಳಗದ ಒತ್ತಿಗೆ ಬರುವ ಪ್ರಸಂಗವಿದು. ಇದರಲ್ಲಿ ಯಾವುದೆಲ್ಲಾ ಪಾತ್ರಗಳು ರಂಗಕ್ಕೆ ಬರುತ್ತವೋ ಅವೆಲ್ಲವೂ ಮುಂದಿನ ಪ್ರಸಂಗದಲ್ಲಿ ಮುಂದುವರಿಯಬೇಕಾಗುತ್ತದೆ. ಉದಾ: ಅರ್ಜುನ. ಪ್ರಸಂಗದ ಪೀಠಿಕೆಗೆ ಪ್ರವೇಶ. ಸೈಂದವ ವಧೆಯ ಬಳಿಕವೇ ಆತ ವೇಷ ಕಳಚಬೇಕು. ಅಷ್ಟು ಹೊತ್ತು ಅಂದರೆ ಇಡೀ ರಾತ್ರಿ ಒಬ್ಬನೇ ವೇಷ ಮಾಡುವುದೂ ತ್ರಾಸ. ಹಾಗಾಗಿ ಈ ಪ್ರಸಂಗ ಕಲಾವಿದರ ವಿಶ್ವಾಸ ಗಳಿಸಲಿಲ್ಲ!
             ಹೌದು. ಇದು ಒಂದು ಪ್ರಸಂಗದಲ್ಲಿ ಬರುವ ಕೆಲವೊಂದು ಪಾತ್ರಗಳು ಇಬ್ಬರಲ್ಲೋ, ಮೂವರಲ್ಲೋ ಹಂಚಿ ಹೋಗುವ ಕಾಲಸ್ಥಿತಿ. ಹಿಂದೆ ಮೇಳಗಳಲ್ಲಿ ಕಲಾವಿದರ ಸಂಖ್ಯೆ ಕಡಿಮೆ. ಈಗ ಜಾಸ್ತಿ. ಸಂಖ್ಯೆ ಕಡಿಮೆಯಿದ್ದಾಗ ಅಜ್ಞಾತ ಪ್ರಸಂಗಗಳೂ ರಂಗವೇರಿವೆ. ಕಲಾವಿದರು ಪ್ರಸಂಗವನ್ನು, ರಂಗವನ್ನು ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು. ಅವರಿಗೆ ಕಾಯಕಷ್ಟಕ್ಕಿಂತಲೂ ಪ್ರಸಂಗದ ಯಶ ಮುಖ್ಯವಾಗಿತ್ತು. ಹಾಗಾಗಿ ಸೈಂದವ ವಧೆಯಂತಹ ಪ್ರಸಂಗಗಳು ರಂಗವೇರುತ್ತಿದ್ದುವು, ಬಲಿಪರು ಕಳೆದ ಕಾಲದ ರಂಗಯತ್ನವನ್ನು ಮಾರ್ಮಿಕವಾಗಿ ಹೇಳುತ್ತಿದ್ದಾಗ ವರ್ತಮಾನದ ರಂಗವು ನನ್ನೊಳಗೆ ಹಲವಾರು ಪ್ರಶ್ನೆಯನ್ನು ಹುಟ್ಟುಹಾಕಿತು. ಆ ಪ್ರಶ್ನೆಗಳೆಲ್ಲವೂ ಸದ್ದಿಲ್ಲದೆ ಮೌನದ ಮೂಟೆಯೊಳಗೆ ಜಾರಿದುವು!
             ಬ್ರಹ್ಮಕಪಾಲ ಪ್ರಸಂಗದಲ್ಲಿ ಸೂರಿಕುಮೇರು ಗೋವಿಂದ ಭಟ್ಟರ 'ಈಶ್ವರ', ಎಂ.ಕೆ.ರಮೇಶ್ ಆಚಾರ್ಯರ 'ಶಾರದೆ', ಸುಣ್ಣಂಬಳ ವಿಶ್ವೇಶ್ವರ ಭಟ್ಟರ 'ಬ್ರಹ್ಮ', ಹರಿನಾರಾಯಣ ಎಡನೀರು ಅವರ 'ಕಿರಾತ' ಪಾತ್ರಗಳು;  ಸೈಂದವ ವಧೆಯಲ್ಲಿ ಸುಬ್ರಾಯ ಹೊಳ್ಳ ಕಾಸರಗೋಡು ಅವರ 'ಅರ್ಜುುನ', ವಿಷ್ಣು ಶರ್ಮರ 'ಕೃಷ್ಣ', ಉಬರಡ್ಕ ಉಮೇಶ ಶೆಟ್ಟರ 'ದ್ರೋಣ', ಶಂಭಯ್ಯ ಕಂಜರ್ಪಣೆಯವರ 'ಕೌರವ', ಹರೀಶ ಮಣ್ಣಾಪು ಅವರ 'ಸೈಂದವ'; ಕೊನೆಯ ಪ್ರಸಂಗದಲ್ಲಿ ಮಧೂರು ರಾಧಾಕೃಷ್ಣ ನಾವಡರ 'ಇಂದ್ರಜಿತು', ಚಂದ್ರಶೇಖರ ಧರ್ಮಸ್ಥಳ ಇವರ 'ಲಕ್ಷ್ಮಣ'.. ಹೀಗೆ ಒಬ್ಬೊಬ್ಬ ಪಾತ್ರಧಾರಿಯ ವೈಯಕ್ತಿಕ ರಂಗ ಕೊಡುಗೆಗಳು ಪ್ರಸಂಗದ ಯಶಕ್ಕೆ ಕಾರಣವಾದುವು.
             "ಇಂತಹ ದಾಖಲಾತಿಗಳು ಭವಿಷ್ಯದ ಅಧ್ಯಯನ ಆಕಾಂಕ್ಷಿಗಳಿಗೆ ಆಕರವಾಗುತ್ತವೆ. ಎಲ್ಲವೂ ಸರಿ ಎಂದಲ್ಲ. ತಪ್ಪುಗಳು ಇರಬಹುದು. ತಪ್ಪು, ಸರಿ ಎನ್ನುತ್ತಾ ಏನನ್ನೂ ಮಾಡದಿದ್ದರೆ ಒಂದು ಪ್ರಾಕಾರದ ಬೆಳವಣಿಗೆ ಹೇಗೆ? ಅದು ಭವಿಷ್ಯಕ್ಕೆ ಹಸ್ತಾಂತರವಾಗುವುದೂ ಹೇಗೆ? ಯಕ್ಷಗಾನದಂತಹ ರಂಗಸೂಕ್ಷ್ಮದ ಪ್ರಸಂಗಗಳು ಇರುವಲ್ಲಿವರೆಗೂ ಸರಿ, ತಪ್ಪು ಎನ್ನುವ ವಾದ-ವಿವಾದಗಳು ಇದ್ದೇ ಇರುತ್ತವೆ. ವರ್ತಮಾನ ರಂಗದಲ್ಲಿ ಇರುವ ಹಿರಿಯರ ಅನುಭವದ ಹಿನ್ನೆಲೆಯಲ್ಲಿ ಪ್ರಸಂಗಗಳು ದಾಖಲಾಗುವುದು ಒಂದು ಉತ್ತಮ ಕೆಲಸ," ಎನ್ನುತ್ತಾರೆ ಹವ್ಯಾಸಿ ಕಲಾವಿದ, ವಿಮರ್ಶಕ ಉಡುಪಿಯ ಪ್ರಭಾಕರ ರಾವ್. 
             ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) - ಹಲವು ಕಾರ್ಯಹೂರಣಗಳನ್ನು ಹೊಂದಿದ ಮಲೆಯಾಳ ನೆಲದ ಸಂಘಟನೆ. ಕೇರಳ ಸರಕಾರವು ಕನ್ನಡವನ್ನು ಬದಿಗೊತ್ತುತ್ತಿರುವ ಕಾಲಘಟ್ಟದಲ್ಲಿ ಈ ಪ್ರತಿಷ್ಠಾನವು ತನ್ನ ಚಟುವಟಿಕೆಗಳಿಗೆ ಬೀಸು ಹೆಜ್ಜೆ ನೀಡಿದೆ. ಸಿರಿಬಾಗಿಲು ರಾಮಕೃಷ್ಣ ಮಯ್ಯರ ಕನಸಾದ 'ರಂಗ ಪ್ರಸಂಗ' ದಾಖಲಾತಿ ಕಲಾಪವು ಈ ಹಿಂದೆ ನೀರ್ಚಾಲು, ಪಾವಂಜೆಗಳಲ್ಲಿ ಜರುಗಿವೆ. ಉಡುಪಿಯದ್ದು ನಾಲ್ಕನೇ ಪ್ರಯೋಗ.
             ರಂಗ-ಪ್ರಸಂಗ ಆಯೋಜನೆಯ ಹಿಂದೆ ಯಕ್ಷಗಾನವನ್ನು ಪ್ರೀತಿಸುವ ಮತ್ತು ಒಪ್ಪಿದ ಆಸಕ್ತರ ಚಿಕ್ಕ ಗಡಣ ಮಯ್ಯರ ಹಿಂದಿದೆ. ಯಕ್ಷ ದಾನಿಗಳ ಸಹಕಾರವನ್ನೂ ಮರೆಯುವಂತಿಲ್ಲ. ಓರ್ವ ವೃತ್ತಿಪರ ಕಲಾವಿದನಾಗಿ ಯಕ್ಷಗಾನದ ಭವಿಷ್ಯ, ದಾಖಲಾತಿ ಮತ್ತು ಸಾಮಾಜಿಕ ಸಂಪರ್ಕವನ್ನು ಬದುಕಿನೊಂದಿಗೆ ಮಿಳಿತಗೊಳಿಸಿದ್ದಾರೆ.
(ಚಿತ್ರ : ಉದಯ ಕಂಬಾರು, ನೀರ್ಚಾಲು)

No comments:

Post a Comment