Saturday, September 3, 2016

ಕೆನಡಾ ಯಕ್ಷಮಿತ್ರರ ಅರ್ಥಪೂರ್ಣ ಪಯಣ                "ವಿದೇಶದಲ್ಲೂ ಅತ್ಯಂತ ಸುಸಜ್ಜಿತ ಯಕ್ಷಗಾನ ಮೇಳವಿದೆ."
               ಯಕ್ಷಗಾನ ವಿದ್ವಾಂಸ, ಆರ್ಥದಾರಿ ಡಾ.ಎಂ.ಪ್ರಭಾಕರ ಜೋಶಿಯವರು ಕೆನಡಾದಿಂದ ಮಿಂಚಂಚೆ ಕಳುಹಿಸಿದರು.  ವಿನೋದಕ್ಕೆ ಅಂದಿರಬಹುದೆಂದು ಮರೆತುಬಿಟ್ಟಿದ್ದೆ. ವಾರದಲ್ಲೇ ಕಾರ್ಯಕ್ರಮಗಳ ರಾಶಿ ರಾಶಿ ಚಿತ್ರಗಳು ಕಂಪ್ಯೂನ ಇನ್ಬಾಕ್ಸಿನಲ್ಲಿತ್ತು. ಯಕ್ಷಗಾನವು ಇರುನೆಲೆಯಲ್ಲಿ ಇನ್ನೂ ಅಭಿವೃದ್ಧಿಯಾಗಬೇಕೆನ್ನುವ ತಿಳಿವಳಿಕೆ ಪ್ರಬಲವಾಗಿ ಮೂಡಬೇಕು. ಅಲ್ಲಿ ಈಗಲೇ ಅದು ಬೇರುಬಿಟ್ಟಿರುವುದು ಖುಷಿ ತಂದಿದೆ, ಎಂದು ಮಾತಿಗಿಳಿದರು.
                ಕೆನಾಡಾ ಟೊರೆಂಟೋದ 'ಯಕ್ಷ ಮಿತ್ರ' ಸಂಘಟನೆಯು ಪೂರ್ಣ ಪ್ರಮಾಣದ ಮೇಳ ಸ್ವರೂಪದಲ್ಲಿದೆ. ಪ್ರಾಯಃ ಅದಕ್ಕೀಗ ದಶಮಾನದ ಖುಷಿ. ಸಾಗರ ಮೂಲದ ರಾಘವೇಂದ್ರ ಕಟ್ಟಿನಕೆರೆ ನಿರ್ದೇಶಕರು. ವರುಷಕ್ಕೆ ಏನಿಲ್ಲವೆಂದರೂ ಇಪ್ಪತ್ತರಿಂದ ಇಪ್ಪತ್ತೈದು ಆಟಗಳು. ೨೦೧೬ ಜೂನ್ 2 ರಿಂದ 14ರ ತನಕ ಜೋಶಿಯವರ ಪ್ರವಾಸ. ಸುಮಾರು ಐದಾರು ದಿವಸ ಟೊರೆಂಟೋ, ಒಟ್ಟಾವಾ, ಮೋಂಟ್ರಿಯಲ್..ಗಳಲ್ಲಿ ಯಕ್ಷಗಾನದ್ದೇ ಕಾರ್ಯಕ್ರಮ.
                   ಟೊರೆಂಟೋದ ಕಾರ್ಯಕ್ರಮಕ್ಕೆ ಹೊರಗಿನಿಂದ ಆಮದು ಕಲಾವಿದರಿಲ್ಲ. ಜೋಶಿ ಒಬ್ಬರು ಮಾತ್ರ ಅತಿಥಿ. ಮಿಕ್ಕವರೆಲ್ಲಾ ಅಲ್ಲೇ ಸಿದ್ಧರಾದವರು. ವೀಡಿಯೋ ಕಾನ್ಪರೆನ್ಸ್ ಮೂಲಕ ಸಮಾಲೋಚನೆ. ಯಾವ ಪಾತ್ರವನ್ನು ಯಾವ ಕೋನದಲ್ಲಿ ಚಿತ್ರಿಸಬೇಕೆನ್ನುವ ಪೂರ್ವಭಾವಿ ತರಬೇತಿಗಳು ಪ್ರದರ್ಶನದ ಒಟ್ಟಂದಕ್ಕೆ ಪೂರಕ. ’ರಾವಣ ವಧೆ ಮತ್ತು ಭೀಷ್ಮ ಪರ್ವ ಪ್ರಸಂಗಗಳ ತಾಳಮದ್ದಳೆ. ಜೋಶಿಯವರಿಗೆ 'ರಾವಣ ಮತ್ತು ಭೀಷ'್ಮನ ಪಾತ್ರ.  ಮೇಳದಿಂದ ವಾಲಿ ವಧೆ ಪ್ರಸಂಗದ ಪ್ರದರ್ಶನ.
                  ನಮ್ಮಲ್ಲಿ ಧ್ವನಿವರ್ಧಕದ ವಿಪರೀತ ಬೊಬ್ಬಾಟದಿಂದಾಗಿ ಯಕ್ಷಗಾನವನ್ನು ವೀಕ್ಷಿಸುವುದು, ಆಲಿಸುವುದು ತೀರಾ ಹಿಂಸೆ! ಎಲ್ಲಿಯವರೆಗೆ ಅಂದರೆ ಧ್ವನಿಯ ಅಟ್ಟಹಾಸಕ್ಕೆ ಪ್ರೇಕ್ಷಕರೇ ಎದ್ದು ಹೋಗಿರುವುದನ್ನು ನೋಡಿದ್ದೇನೆ. ಕಲಾವಿದರಿಗೆ ವಾಲ್ಯೂಮ್ ಹೈ ಮತ್ತು ಶಾರ್ಪ್  ಕೊಟ್ಟಷ್ಟು ಸಂತೃಪ್ತಿ. ಎಷ್ಟೋ ಸಲ ಭಾಗವತಿಕೆಯನ್ನು ಚೆಂಡೆ, ಮದ್ದಳೆಗಳ ನುಡಿತಗಳು ನುಂಗಿಬಿಡುತ್ತವೆ! ಟೊರೆಂಟೋದ ಧ್ವನಿವರ್ಧಕ ವ್ಯವಸ್ಥೆ ತುಂಬಾ ಖುಷಿಯಾಯಿತು. ಕಾರ್ಯಕ್ರಮಕ್ಕೆ ಒಂದರ್ಧ ಗಂಟೆ ಮೊದಲು ಮೈಕ್ ಬ್ಯಾಲೆನ್ಸ್ ಮಾಡಿಬಿಡುತ್ತಾರೆ. ಮಧ್ಯೆ ಮಧ್ಯೆ ಏರಿಸುವ, ಇಳಿಸುವ ಪ್ರಕ್ರಿಯೆ ಇಲ್ಲ. ನಮ್ಮಲ್ಲೂ ಇಂತಹ ಪ್ರಕ್ರಿಯೆಗಳತ್ತ ಯೋಚಿಸಬೇಕು.
              ಕನ್ನಡ ಮೂಲದ ಸೀಮಿತ ಪ್ರೇಕ್ಷಕರು. ಜತೆಗೆ ರಂಗದ ಬಣ್ಣ, ನಡೆ, ಕುಣಿತದಲ್ಲಿ ಕಲೆಯನ್ನು ಕಂಡ ವಿದೇಶಿ ಕಲಾಪ್ರಿಯರು. ಪ್ರಸಂಗದ ಪದ್ಯ ಮತ್ತು ಭಾವಾರ್ಥವನ್ನು ಪರದೆಯಲ್ಲಿ ಮೂಡಿಸುವ ತಾಂತ್ರಿಕ ವ್ಯವಸ್ಥೆಗಳು ಕನ್ನಡೇತರರಿಗೆ ಕಥೆಯನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗಿತ್ತು.  ಕರಪತ್ರ, ಕಟೌಟ್ಗಳೆಲ್ಲಾ ಯಕ್ಷಗಾನೀಯ. ತಾಳಮದ್ದಳೆಗೆ ಎರಡು ಗಂಟೆಯ ಕಾಲಾವಧಿ. ಹಿಮ್ಮಾಹಿತಿ ನೀಡುವ ಜಾಗೃತ ಪ್ರೇಕ್ಷಕ ವರ್ಗ. ಪ್ರಶ್ನೋತ್ತರಗಳ ಮೂಲಕ ಸಂದೇಹ ನಿವಾರಣೆ.  ವಾಲಿ ವಧೆ ಪ್ರಸಂಗದಲ್ಲಿ 'ವಾಲಿ-ತಾರೆ' ಪಾತ್ರಗಳ ಸಂವಾದವನ್ನು ಅನೇಕ ಮಂದಿ ಮೆಚ್ಚಿಕೊಂಡಿದ್ದರು. ರಾವಣ ಪಾತ್ರ ಮಾಡಿ ರಾಜನೀತಿಯಲ್ಲಿ ಹೇಗೆ ಮೈತ್ರಿ ಹುಟ್ಟುತ್ತದೆ ಎನ್ನುವ ತರ್ಕಗಳು ಜನ ಮುಟ್ಟಿದೆ. ಭೀಷ್ಮ ಪರ್ವದ 'ಭೀಷ್ಮ' ಪಾತ್ರ ಲೌಕಿಕ ಉದಾಹರಣೆಯನ್ನು ಕೊಡಬಹುದೇ ಎನ್ನುವ ಪ್ರಶ್ನೆಯನ್ನು ಎದುರಿಸಿದೆ, ಎಂದು ಕೆನಡಾ ಕೂಟದ ಅನುಭವ ಹಂಚಿಕೊಳ್ಳುತ್ತಾರೆ;
                ವೇಷ, ಸಂಪ್ರದಾಯದಲ್ಲಿ ರಾಜಿಯಿಲ್ಲದ ನಿಲುವು. ಮೆಚ್ಚಬೇಕಾದ ಪ್ರಗತಿ ಸಾಧಿಸಿದ್ದಾರೆ. ವಿದೇಶದಲ್ಲಿ ಯಕ್ಷಗಾನದ ಹೆಸರಿನಲ್ಲಿ ಏನೇನೋ ಮಾಡಿಲ್ಲ. ಅಲ್ಲಿ ರಂಗಭೂಮಿಯನ್ನು ಮೆಚ್ಚುವ ಕಣ್ಣಿದೆ. ಕಲಾರಸಿಕತೆಯ ಮಟ್ಟ ಚೆನ್ನಾಗಿದೆ. ರಂಗದಲ್ಲಿ ಗಾಢ ಬೆಳಕಿಲ್ಲ. ಅವರು ತಂತ್ರಜ್ಞಾನವನ್ನು ಆಟಕ್ಕೆ ಅಳವಡಿಸಿದ್ದಾರೆ. ತರಬೇತಿಯಿದೆ. ಪ್ರತಿ ನಿಮಿಷವೂ ಯೋಚನೆ, ಯೋಜನೆ. ಮಧ್ಯೆ ಮಧ್ಯೆ ಪ್ರೇಕ್ಷಕರು ಎದ್ದು ಹೋಗುವುದಿಲ್ಲ. ಶಿಳ್ಳೆ, ಚಪ್ಪಾಳೆಗಳಿಲ್ಲ. ಕಾರ್ಯಕ್ರಮದ ಕೊನೆಗೆ ದೀರ್ಘ ಕರತಾಡನದ ಪ್ರಶಂಸೆ.
                ಪ್ರಜ್ಞಾಪೂರ್ವಕವಾದ ರಂಗಶಿಸ್ತು. ರಂಗಭೂಮಿಯನ್ನು ಬಳಸುವ ಕ್ರಮ, ನೃತ್ಯದ ತಿದ್ದುವಿಕೆ ಇನ್ನಷ್ಟು ಸುಧಾರಿಸಬೇಕಾಗಿದೆ. ಮಾಧ್ಯಮಗಳಲ್ಲಿ ಯಕ್ಷಗಾನ ಪರಿಚಯವಾಗಬೇಕು. ವಿಶ್ವ ಥಿಯೇಟರಿಗೆ ಅಲೌಕಿಕ ಕಲೆಯ ಸೊಬಗನ್ನು ತಿಳಿಸುವ ಕೆಲಸ ಆಗಬೇಕಾಗಿದೆ. ಕೆನಡಾ, ಅಮೇರಿಕಾದಂತಹ ವಿದೇಶ ನೆಲದಲ್ಲಿ ದುಡಿಯುವ ಕೈಗಳಿಗೆ ಉಣ್ಣಲು ಪುರುಸೊತ್ತಿಲ್ಲ! ಉದ್ಯೋಗದ ಧಾವಂತದಲ್ಲಿ ಇಂತಹ ಆಸಕ್ತಿಗಳಿಗೆ ಸಮಯವನ್ನು ಹೊಂದಿಸುವುದು ದೊಡ್ಡ ಸವಾಲಿನ ಕೆಲಸ.
               ನಮ್ಮಲ್ಲಿಗೆ ತಾಳಮದ್ದಳೆ ತಂಡವನ್ನು ತನ್ನಿ, ಎನ್ನುವ ಬೇಡಿಕೆಯನ್ನು ಜೋಶಿಯವರಲ್ಲಿ ಮುಂದಿಟ್ಟರಂತೆ. ಇಲ್ಲಿಂದ ಒಯ್ಯುವುದು ದೊಡ್ಡದಲ್ಲ. ಆದರೆ ಅವರನ್ನು ತಯಾರು ಮಾಡಿ, ಅವರಿಂದಲೇ ಪ್ರದರ್ಶನ, ತಾಳಮದ್ದಳೆ ಏರ್ಪಡಿಸುವುದರಿಂದ ಕಲೆಯ ವಿಸ್ತರಣೆ ಸಾಧ್ಯ, ಎನ್ನುತ್ತಾರೆ. ಸಾಂಸ್ಕೃತಿಕ ಮುಂದುವರಿಕೆ ವಿದೇಶಿ ನೆಲದಲ್ಲೂ ಆಗುತ್ತಾ ಇರುವುದು ಶ್ಲಾಘ್ಯ. ಸಣ್ಣ ಮಕ್ಕಳೂ ಯಕ್ಷಗಾನವನ್ನು ಆಸಕ್ತಿಯಿಂದ ನೋಡುತ್ತಾರೆ.
              'ವಾಲಿ ವಧೆ' ಪ್ರದರ್ಶನಕ್ಕೆ ಮುನ್ನ ಮೌಲ್ಯವರ್ಧನಾ ಶಿಬಿರ ಜರುಗಿತ್ತು.  ವೇಷಗಳ ಪ್ರವೇಶ, ರಂಗಚಲನೆ, ವಾಲಿಯನ್ನು ತಾರೆ ತಡೆಯುವ ರೀತಿ, ಯುದ್ಧಗಳು, ಕೊರಿಯೋಗ್ರಫಿಯ ಬಳಕೆ, ಅರ್ಥಗಾರಿಕೆಯ ಪ್ರಸ್ತುತಿ... ಇವೇ ಮೊದಲಾದ ಮೂಲಭೂತ ಅಂಶಗಳ ಹೂರಣವನ್ನಿಟ್ಟುಕೊಂಡ ಕಾರ್ಯಸೂಚಿ. ಈ ರೀತಿಯ ಸಮಾಲೋಚನೆಗಳು ಪ್ರದರ್ಶನದ ಒಟ್ಟಂದಕ್ಕೆ ಸಹಕಾರಿ. ನಮ್ಮಲ್ಲೂ ಇಂತಹ ಮನಃಸ್ಥಿತಿಗಳನ್ನು ರೂಪಿಸಿಕೊಳ್ಳಲೇ ಬೇಕಾಗಿದೆ, ಎನ್ನುವ ಆಗ್ರಹ ಜೋಶಿಯವರದು.
                ವಿನಾಯಕ ಹೆಗಡೆ, ಪರಮ್ ಭಟ್, ರಘು ಕಟ್ಟಿನಕೆರೆ, ನವೀನ್ ಹೆಗಡೆ, ಶ್ರೀಕಾಂತ ಹೆಗಡೆ, ನಾಗಭೂಷಣ ಮಧ್ಯಸ್ಥ, ಉದಯ ಶಾಸ್ತ್ರಿ, ವಿಷ್ಣು ಭಟ್ - ಟೊರೆಂಟೋ ಮೇಳದ ಸಾರಥಿಗಳು.  ಕಲ್ಲಭಾಗ್ ವಿನಾಯಕ್ ಹೆಗಡೆ, ರಘು ಕಟ್ಟಿನಕೆರೆ - ಮೇಳದ ಭಾಗವತರು. ಎಲ್ಲರೂ ಕನ್ನಾಡಿನವರೇ. ದೂರದಲ್ಲಿದ್ದರೂ ಯಕ್ಷಗಾನದ ಆಸಕ್ತಿಯನ್ನು ಬಿಡದೆ, ಸ್ಫೂರ್ತಿಯಿಂದ ತಂಡ ಕಟ್ಟಿರುವುದು ಇತರರಗೆ ಸ್ಫೂರ್ತಿ. 
               ಇನ್ನೊಮ್ಮೆ ಕೆನಡಾಕ್ಕೆ ಹೋಗುವ ಅವಕಾಶ ಸಿಕ್ಕರೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತೀರಿ? ಎನ್ನುವ ಕೀಟಲೆ ಪ್ರಶ್ನೆಗೆ ಜೋಶಿಯವರ ಉತ್ತರ ನೋಡಿ, "ಎರಡೂವರೆ ಗಂಟೆ ತಾಳಮದ್ದಳೆಯನ್ನು ಹೇಗೆ ಕ್ರಿಸ್ಪ್ ಆಗಿ ಕೊಡಬಹುದು. ಅಲ್ಲಿನ ಕಲಾವಿದರನ್ನು ಹೇಗೆ ಜೋಡಿಸಬಹುದು ಎನ್ನುವ ಯೋಚನೆಯಿದೆ," ಎಂದರು. ಕೆನಡಾದ ಆದಿವಾಸಿಗಳ ಕಥೆಯನ್ನು ಯಕ್ಷಗಾನಕ್ಕೆ ಅಳವಡಿಸುವ ದೊಡ್ಡ ಯೋಜನೆಯು ಯಕ್ಷಮಿತ್ರಕ್ಕಿದ್ದು ಜೋಶಿ ಬೆಂಬಲ ನೀಡಿದ್ದಾರೆ.
              ಕಡಲಾಚೆ ಹಾರಿದ ಜೋಶಿಯವರಿಗೆ ಯಕ್ಷಗಾನವನ್ನು ಮರೆತು ಕುಟುಂಬದೊಂದಿಗೆ ಹಾಯಾಗಿ ವಿಹರಿಸಬಹುದಿತ್ತು. ಆದರೆ ಅಲ್ಲಿನ ಅಭಿಮಾನಿಗಳು ಪ್ರೀತಿಯ ಹಗ್ಗದಿಂದ ಕಟ್ಟಿಬಿಟ್ಟರು. ಜೋಶಿಯವರೊಂದಿಗೆ ಮಾತನಾಡುತ್ತಾ ಇದ್ದಂತೆ ನನಗೆ ಅರಿವಾದುದು ಇಷ್ಟು - ಪ್ರದರ್ಶನದ ಪೂರ್ವಭಾವಿಯಾಗಿ ಸಮಾಲೋಚನೆ ಮಾಡಿಕೊಂಡರೆ ಉತ್ತಮವಾದ ಪ್ರದರ್ಶನವನ್ನು ಯಕ್ಷಗಾನೀಯವಾಗಿ ಕೊಡಬಹುದು. ನಮ್ಮಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ?
(ಪ್ರಜಾವಾಣಿ | ದಧಿಗಿಣತೋ | ೨-೯-೨೦೧೬)

No comments:

Post a Comment