Friday, September 2, 2016

"ನನ್ನ ಹಾಡುಗಾರಿಕೆಗೆ ಶೇಣಿಯವರು ಹೊಳಪನ್ನು ನೀಡಿದರು" - ಪದ್ಯಾಣ ಗಣಪತಿ ಭಟ್


           ತೆಂಕುತಿಟ್ಟು ಯಕ್ಷಗಾನದ ಭಾಗವತ - ಪದ್ಯಾಣ ಗಣಪತಿ ಭಟ್. ಯಕ್ಷಗುರು ದಿ.ಮಾಂಬಾಡಿ ನಾರಾಯಣ ಭಾಗವತರ ಶಿಷ್ಯ.  ಸುರತ್ಕಲ್, ಮಂಗಳಾದೇವಿ, ಕರ್ನಾಟಕ, ಎಡನೀರು, ಹೊಸನಗರ ಮೇಳಗಳಲ್ಲಿ ನಾಲ್ಕು ದಶಕಕ್ಕೂ ಮಿಕ್ಕಿದ ವ್ಯವಸಾಯ. ಯಾರದ್ದೇ ಮಾದರಿಯಾಗದೆ ಸ್ವ-ಶೈಲಿಯೊಂದನ್ನು ರೂಪಿಸಿದ ಭಾಗವತ. ಒಂದು ಕಾಲಘಟ್ಟದಲ್ಲಿ ಮಿಂಚಿನ ಸಂಚಾರವನ್ನುಂಟು ಮಾಡಿದ 'ಯಕ್ಷಮೇಘ!'
            ಪದ್ಯಾಣ ಗಣಪತಿ ಭಟ್ಟರ ಗಾಯನಕ್ಕೆ ಹೊಳಪನ್ನು ನೀಡಿದವರು ಕೀರ್ತಿಶೇಷ ಶೇಣಿ ಗೋಪಾಲಕೃಷ್ಣ ಭಟ್ಟರು. ಅವರೊಂದಿಗೆ ಕೂಟಾಟಗಳಲ್ಲಿ ಭಾಗವಹಿಸುತ್ತಾ ಅವಕಾಶಗಳನ್ನು ಆಪೋಶನ ಮಾಡಿಕೊಂಡವರು. ಶೇಣಿಯವರೊಂದಿಗಿನ ಒಡನಾಟದ ಕೆಲವು ಕ್ಷಣಗಳನ್ನು ಅವರ ಮಾತಿನಲ್ಲೇ ಕೇಳೋಣ.
                                         *****                                              *****

              ...ಸುರತ್ಕಲ್ ಮೇಳದಲ್ಲಿ 'ಸಂಗೀತಗಾರ' ಹೇಳಿಕೊಳ್ಳಲು ಹೆಮ್ಮೆಪಡುತ್ತಿದ್ದ ದಿನಮಾನಗಳು. ದಿನಗಳು ಸರಿದಂತೆ 'ಯಕ್ಷಗಾನಕ್ಕೂ ಆಳವಿದೆ! ಎಂಬ ಅರಿವು ಮೂಡುತ್ತಾ ಬಂತು. ಆಗ ಶೇಣಿ ಗೋಪಾಲಕೃಷ್ಣ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಬಣ್ಣದ ಮಾಲಿಂಗ, ಕೊಕ್ಕಡ ಈಶ್ವರ ಭಟ್, ಮಧೂರು ಗಣಪತಿ ರಾವ್.. ಮೊದಲಾದ ಕಲಾವಿದರಿಂದ ಮೇಳ ಸಂಪನ್ನವಾಗಿತ್ತು.. 'ಎಲ್ಲರಂತೆ ಇವರೂ ಕಲಾವಿದರು' ಎಂದಷ್ಟೇ ತಿಳಿದಿದ್ದೆ. ಐದು ವರುಷ ಹೀಗೆ ಕಳೆದಿತ್ತು.
              ನನ್ನ ಶ್ರದ್ಧೆ ಮತ್ತು ಪದ್ಯದ ಸೊಗಸುಗಾರಿಕೆಯನ್ನು ನೋಡಿಯೇ ಇರಬೇಕು, ಅಗರಿ ರಘುರಾಮ ಭಾಗವತರು ಪ್ರಸಂಗಗಳ ಪದ್ಯಗಳನ್ನು ಹೇಳಲು ಅನುವು ಮಾಡಿಕೊಟ್ಟರು. ರಾಗಜ್ಞಾನವನ್ನು ಕೇಳಿದ ಮೇಳದ ಯಜಮಾನ ವರದರಾಜ ಪೈಗಳು ಅಗರಿಯವರನ್ನು ಒಲಿಸಿದ್ದಿರಬೇಕು. ಹೀಗೆ ಅವಕಾಶ ಸಿಕ್ಕಾಗ ಶೇಣಿಯವರ ವೇಷಗಳಿಗೆ ಪದ್ಯ ಹೇಳುವ ಸಂದರ್ಭಗಳು ಒದಗಿದುವು.  ಉದಾ: 'ತಿರುಪತಿ ಕ್ಷೇತ್ರ ಮಹಾತ್ಮೆ' ಪ್ರಸಂಗದಲ್ಲಿ ಅವರ 'ಮಾಧವ ಭಟ್ಟ' ಪಾತ್ರ. ಇದರ ಪದ್ಯಗಳನ್ನು ತೋಚಿದಂತೆ ರಾಗಸಂಯೋಜಿಸಿ ಹೇಳುತ್ತಿದ್ದೆ.
                 ಒಂದಿವಸ ಹಗಲು ಅವರು ವಿಶ್ರಾಂತಿ ಪಡೆಯುವ ಚಾಪೆಯಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ಭಯ, ಭಕ್ತಿಯಿಂದ ಹೆದರಿ ಮುದುಡಿ ಕುಳಿತೆ. ಹಿಂದಿನ ಆಟಗಳಲ್ಲಿ ಹಾಡಿದ ಪದ್ಯವನ್ನು ಹೇಳಿಸಿದರು. ಬಳಸಿದ ರಾಗಗಳಿಗೆ ಬದಲಿ ರಾಗಗಳನ್ನು ಹಾಕಿ ಹಾಡಿ ತೋರಿಸಿದರು. ನಿಜಕ್ಕೂ ಅಚ್ಚರಿಯಾಯಿತು. ವೇಷಧಾರಿಗೆ ಹಾಡಲು ಬರುತ್ತದಾ?
             ಅವರಿಗೆ ತಾಳ, ರಾಗ, ರಂಗಮಾಹಿತಿ, ಯಾವ ದುಃಖಕ್ಕೆ ಯಾವ ರಾಗದಲ್ಲಿ ಹಾಡಬೇಕು ಎನ್ನುವ ಜ್ಞಾನವಿತ್ತು. ಅವರ ಪಾತ್ರದಲ್ಲಿ ಬರುವ ಪದ್ಯಗಳನ್ನು ಹೇಗೆ ಮತ್ತು ಯಾವ ರಾಗದಲ್ಲಿ ಹೇಳಬೇಕೆನ್ನುವ ಪಾಠವನ್ನು ಮಾಡಿದರು. ಶೇಣಿಯವರು ಹೇಗೆ ಪಾಠ ಮಾಡಿದರೋ ಅಂದು ರಾತ್ರಿಯ ಪ್ರದರ್ಶನದಲ್ಲಿ ಹಾಡಿ ಒಪ್ಪಿಸುತ್ತಿದ್ದೆ. ಒಂದೇ ವಾರದಲ್ಲಿ ಶೇಣಿಯವರ ಆ ಪಾತ್ರದ ಪದ್ಯಗಳು ಹಿಡಿತಕ್ಕೆ ಬಂದುವು.
               ಕೆಲವು ದಿವಸಗಳಲ್ಲಿ 'ರಾವಣ ವಧೆ' ಪ್ರಸಂಗ. ಶೇಣಿಯವರದು 'ರಾವಣ'ನ ಪಾತ್ರ.  'ಹರನೇ ಶಂಕರನೇ..' ಪದ್ಯವನ್ನು 'ಶುಭಪಂತುರಾವಳಿ' ರಾಗದಲ್ಲಿ ಹೇಳುತ್ತಿದ್ದೆ. ನಾಲ್ಕೈದು ದಿವಸ ಸಹಿಸಿದರು! ಇದನ್ನು 'ಆನಂದಭೈರವಿ' ರಾಗದಲ್ಲಿ ಹೇಳುವುದರಿಂದ ಪರಿಣಾಮ ಹೆಚ್ಚು ಎಂದರು. ಶೇಣಿಯವರ ದೃಷ್ಟಿಯಲ್ಲಿ ಅದು ರಾವಣನಿಗೆ ಅದು  ದುಃಖವಲ್ಲ. ಅವನಿಗಿರುವುದು ಚಿಂತೆ. ದುಃಖ, ಚಿಂತೆಯ ಸ್ಥಾಯಿಭಾವಗಳು ಬೇರೆ ಬೇರೆ. ಅವರು ಸೂಚಿಸಿದ 'ಆನಂದ ಭೈರವಿ' ರಾಗ ಕ್ಲಿಕ್ ಆಯಿತು.
                  ಮಾಗಧ ವಧೆ ಪ್ರಸಂಗ. ಅವರ 'ಮಾಗಧ' ಜನಪ್ರಿಯ. ಭೇರಿಯ ಶಬ್ದವನ್ನಾಲಿಸಿದ ಮಾಗಧನ ಚಿತ್ರಣ ಪರಿಣಾಮಕಾರಿ. ಅಬ್ಬಾ.. ಗ್ರಹಿಸಿದರೆ ಮೈಜುಂ ಎನ್ನುತ್ತದೆ. 'ತಿಳಿಯದಾದಿರೆ..' ಪದ್ಯಗಳನ್ನು 'ಮಾಂಡು ರಾಗ'ದಲ್ಲಿ ಎತ್ತುಗಡೆ ಮಾಡುತ್ತಾ, ವಿವಿಧ ರೀತಿಯಲ್ಲಿ ಹಾಡಿಸಿದ್ದರು. ಪಾತ್ರದ ಸ್ವಭಾವವನ್ನು ಹಾಡಿನ ಮೂಲಕವೂ ತೋರಿಸುವ ಜಾಣ್ಮೆ ಅದ್ಭುತ.
ರಾಗ ಸಂಚಾರವು 'ಪಂಚಮ'ಕ್ಕೆ ಹೋಗಿ ಮತ್ತೆ ಇಳಿಯುವ ಶೈಲಿಯು ಶೇಣಿಯವರಿಗೆ ಇಷ್ಟವಾಗುತ್ತಿತ್ತು.  ಆಟ, ಕೂಟಗಳಲ್ಲಿ ಹಾಡುವಾಗ ಜತೆಗೆ ಸ್ವರ ಸೇರಿಸುತ್ತಿದ್ದರು. ಇದು ಅವರ ಅರ್ಥಗಾರಿಕೆಗೆ ಬಂಗಾರದ ಕವಚ ತೊಡಿಸಿದಂತೆ ಸುಂದರವಾಗಿ ಕಾಣುತ್ತಿತ್ತು. ಪಂಚಮಕ್ಕೆ ಹೋಗುವ, ಇಳಿಯುವ ಶೈಲಿ ಇದೆಯಲ್ಲಾ ಇದೇ 'ಪದ್ಯಾಣ ಶೈಲಿ - ಶೇಣಿಯವರ ಪ್ರಶಂಸೆಯೂ ಹೌದು. ವಾಸ್ತವವೂ ಹೌದು.
                ಮೊದಮೊದಲು 'ಸಾಮ, ದೇವಗಾಂಧಾರ' ರಾಗಗಳು ಕೈಕೊಡುತ್ತಿದ್ದುವು. ಶೇಣಿಯವರು ರಂಗದಲ್ಲೇ ತಾನು ಹೇಳುತ್ತಾ, ಹೇಳಿಸಿ ಸರಿಪಡಿಸುತ್ತಿದ್ದರು. ಪದ್ಯಗಳಲ್ಲಿರುವ ಸಾಹಿತ್ಯಗಳನ್ನು ತಿದ್ದಿದ್ದರು. ಹಾಡುವಾಗ 'ಸಾಹಿತ್ಯ ಸ್ಪಷ್ಟತೆ' ಬೇಕು ಎಂದು ಪ್ರತಿಪಾದಿಸುತ್ತಿದ್ದರು. ರಂಗದಲ್ಲಿ ಅರ್ಥಗಾರಿಕೆಗೂ ಕಿವಿಯಾಗುತ್ತಿದ್ದೆ. ಇಂದೊಂದು ರೀತಿಯ 'ರಾವಣ'ನಾದರೆ ನಾಳೆ ಮತ್ತೊಂದು ರೂಪದ 'ರಾವಣ'.
                 'ರಾಜಾ ಯಯಾತಿ'ಯಲ್ಲಿ ಅವರದು ಎರಡನೇ ಭಾಗದ ಯಯಾತಿ, 'ಕಡುಗಲಿ ಕುಮಾರ ರಾಮ'ದಲ್ಲಿ  ಅವರ ತುಘಲಕ್ ಪಾತ್ರವು ರಂಗಕ್ಕೆ ಬರುವಾಗ ಮಧ್ಯರಾತ್ರಿ ಮೀರುತ್ತಿದ್ದುವು. ಆಗ ಅಗರಿ ರಘುರಾಮ ಭಾಗವತರ ಸರದಿ. ಮದ್ದಳೆಯಲ್ಲೋ, ಚಕ್ರತಾಳದಲ್ಲಿದ್ದುಕೊಂಡು ಅರ್ಥಗಳನ್ನು ಕೇಳುತ್ತಿದ್ದೆ.
                 ಅವರ ಮನೋಧರ್ಮವೂ ನನ್ನ ಮನೋಧರ್ಮವೂ ಮಿಳಿತವಾದುದರಿಂದಲೇ ಶೇಣಿಯವರು ಬಹಳವಾಗಿ ಒಲವು ಇರಿಸಿದ್ದರು ಎಂದು ನಂಬಿದ್ದೇನೆ. ಹಾಗಾಗಿ ಅವರು ಭಾಗವಹಿಸುವ ಬಹುತೇಕ ತಾಳಮದ್ದಳೆಗಳಿಗೆ ಅವಕಾಶ ಬಂತು. ಸಂಘಟಕರು ಬಯಸಿದರು. ಹೀಗಾಗಿ ಒಂದು ಕಾಲಘಟ್ಟದ ತಾಳಮದ್ದಳೆ, ಆಟ ತಿರುಗಾಟಗಳು 'ಶೇಣಿ ಯುಗ'..
                                          *****                                    *****
              ಅನುಭವದಿಂದ ಮಾಗಿದ ಪದ್ಯಾಣರಿಗೆ ಈಗ ಅರುವತ್ತರ ಹರೆಯ. ತನ್ನ ಪದಯಾನ ಸಂಭ್ರಮವು  ಅಭಿಮಾನಿಗಳ ಪ್ರೀತಿಯ ಮೇರೆಗೆ ಮಂಗಳೂರು ಪುರಭವನದಲ್ಲಿ ೨೦೧೬ ಜೂನ್ 4, 5ರಂದು ಸಂಪನ್ನವಾಗಲಿದೆ. ಎರಡೂ ದಿನವೂ ಯಕ್ಷಾಂಜಲಿ. ಅಭಿನಂದನೆ. ಅಭಿವಂದನೆ. ಗೌರವ ಗ್ರಂಥ ಸಮರ್ಪಣೆ. ಸಾಕ್ಷ್ಯ ಚಿತ್ರ ಅನಾವರಣ.. ಹೀಗೆಲ್ಲ ತುಂಬು ಹೂರಣಗಳು. ತನ್ನ ಹಾಡುಗಾರಿಕೆಯನ್ನು ಸುರತ್ಕಲ್ ಮೇಳದಲ್ಲಿ ತಿದ್ದಿ, ರೂಪುಕೊಟ್ಟ ಅಗರಿ ರಘುರಾಮ ಭಾಗವತರಿಗೆ ಚೊಚ್ಚಲ 'ಪದ್ಯಾಣ ಪ್ರಶಸ್ತಿ' ಪ್ರದಾನ.
              ಆಧುನಿಕದ ಸುನಾಮಿಯ ಹೊಡೆತಕ್ಕೆ ಗಾಯನ ಕ್ಷೇತ್ರವು ಜೀಕುತ್ತಿರುವ ಹೊತ್ತಿನಲ್ಲೂ ಅನುಭವ ಪಕ್ವತೆಯಿಂದ ಎದ್ದು ಕಾಣುವ ಪದ್ಯಾಣ ಗಣಪತಿ ಭಟ್ಟರ ಪದಯಾನಕ್ಕೆ ಸಾಕ್ಷಿಯಾಗೋಣ. ಪುರಭವನಕ್ಕೆ ಬನ್ನಿ.
(ಚಿತ್ರಗಳು : ಯಜ್ಞ ಮಂಗಳೂರು)

No comments:

Post a Comment