Friday, September 2, 2016

ಶಿಷ್ಟ ಯಕ್ಷಪ್ರಜ್ಞೆಯನ್ನು ಮರೆಯದ ಅಂಬಾ              ಮೂರು ದಶಕಗಳ ಹಿಂದಿನ ಆ ದಿನಗಳು ನೆನಪಿವೆ. ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳ. 'ಗೆಜ್ಜೆದ ಪೂಜೆ' ಪ್ರಸಂಗ. ಅಂಬಾಪ್ರಸಾದರ 'ತುಳಸಿ' ಪಾತ್ರಾಭಿವ್ಯಕ್ತಿಗೆ ಮಾರುಹೋಗಿದ್ದೆ. ಹಲವು ಬಾರಿ ಪ್ರಸಂಗವನ್ನು ವೀಕ್ಷಿಸಿದ್ದೆ. ಶಾರೀರ, ಹೆಣ್ತನ, ರಸೋತ್ಪತ್ತಿ, ಚುರುಕುಗತಿ, ಮನದೊಳಗಿಳಿಯುವ ಅಭಿವ್ಯಕ್ತಿಗಳು ಮೋಡಿ ಮಾಡಿದ್ದುವು. ನಂತರದ ದಿನಗಳಲ್ಲಿ ಕರ್ನೂರರು ಕೂಟಾಟಗಳನ್ನು ಸಂಯೋಜಿಸುತ್ತಿದ್ದರು. ಗೆಜ್ಜೆದ ಪೂಜೆಯ 'ತುಳಸಿ'ಯನ್ನು ಕರ್ನೂರರು ಹಲವು ಬಾರಿ ಜ್ಞಾಪಿಸುತ್ತಿದ್ದುದನ್ನು ಗಮನಿಸಿದ್ದೇನೆ.
               ಹೊಸನಗರ ಮೇಳದಲ್ಲಿ 'ಕನ್ಯಾಂತರಂಗ' ಪ್ರಸಂಗದ 'ಅಹಲ್ಯೆ'ಯು ಅಂಬಾಪ್ರಸಾದರ ಮಾಸ್ಟರ್ಪೀಸ್! ಉಜಿರೆ ಅಶೋಕ ಭಟ್ಟರ 'ಗೌತಮ'. ಬಳಿಕ 'ಪುಣ್ಯಕೋಟಿ' ಪ್ರಸಂಗ. ಇವರ ಅನುಭವದ ಪರಿಪುಷ್ಟತೆಯ ಮೇಲ್ಮೆಗಳು ಪಾತ್ರಗಳಿಗೆ ಹೊಸ ಸೃಷ್ಟಿ, ನೋಟವನ್ನು ನೀಡಿದೆ. ಎಷ್ಟು ವರುಷ ತಿರುಗಾಟ ಮಾಡಿದ ಎನ್ನುವ ಲೆಕ್ಕಣಿಕೆಯು ಅನುಭವಕ್ಕೆ ಮಾನದಂಡವಲ್ಲ. ಪಾತ್ರಗಳೇ ಬೆರಗಾಗುವಂತೆ ಮಾಡುವ ಅಭಿವ್ಯಕ್ತಿ ಇದೆಯಲ್ಲಾ, ಅದು ನಿಜವಾದ ಕೊಡುಗೆ. ಅಂಬಾಪ್ರಸಾದರು ತಮ್ಮೆಲ್ಲಾ ಪಾತ್ರಗಳಲ್ಲಿ ಇಂತಹ 'ಕೊಡುಗೆ'ಗಳನ್ನು ಸ್ಥಾಪಿಸಿದ್ದಾರೆ.
              ಅಂಬಾರಿಗೀಗ ಐವತ್ತಮೂರು. ಒಂದು ಕಾಲಘಟ್ಟದ ಪಾತ್ರಗಳೆಲ್ಲವೂ ಶೃಂಗಾರಕ್ಕೆ ಸೀಮಿತ. ಯಕ್ಷಗಾನದ ಚೌಕಟ್ಟಿನೊಳಗೆ, ಶಿಷ್ಟತೆಯನ್ನು ಕಾಪಾಡಿಕೊಂಡ ಶೃಂಗಾರ. ವೇಷಭೂಷಣದಿಂದ ತೊಡಗಿ, ಮಾತಿನ ವರೆಗೆ 'ಯಕ್ಷಗಾನ'ದ ಪ್ರಜ್ಞೆಯಿಟ್ಟುಕೊಂಡೇ ವ್ಯವಹರಿಸಿದ ಕಲಾವಿದ. ಶೃಂಗಾರ ಪಾತ್ರವೆಂದರೆ ರಂಗದಲ್ಲಿ 'ಹೆಚ್ಚು ತೆರೆದು' ಕಾಣಿಸಿಕೊಳ್ಳಬೇಕೆಂಬ ಪ್ರಸ್ತುತ ದಿನಮಾನಗಳೇ 'ಪಾತಾಳರ ಯೌವನದ ಶೃಂಗಾರ'ಕ್ಕೆ ನಾಚಿವೆ!
              ಅಂಬಾಪ್ರಸಾರ ಗರತಿ ಪಾತ್ರಗಳು ಔಚಿತ್ಯದ ಕಕ್ಷೆಯನ್ನು ಮೀರಿದ್ದಿಲ್ಲ. ಅಭಿಮನ್ಯು ಕಾಳಗದ 'ಸುಭದ್ರೆ'ಯು ತಾನು ಅಭಿಮನ್ಯುವಿನ ತಾಯಿ ಎನ್ನುವುದನ್ನು ಮರೆಯುವುದಿಲ್ಲ! ಬೆಳೆದು ನಿಂತ ಬಬ್ರುವಾಹನನ ತಾಯಿ ಎನ್ನುವ ಪ್ರಜ್ಞೆ ಇವರ ಚಿತ್ರಾಂಗದೆಗಿದೆ. ವಿವಿಧ ಭಾವಗಳ ಗನಿ 'ದಾಕ್ಷಾಯಿಣಿ' ಪಾತ್ರದ ಭಾವತೀವ್ರತೆಗಳು, ಕ್ಷಿಪ್ರ ರಂಗನಡೆಗಳು ಜತೆಪಾತ್ರಧಾರಿಗೆ ಸವಾಲಾಗಿ ಪರಿಣಮಿಸಿದುದನ್ನು ಕಂಡಿದ್ದೇನೆ. ಸಹಜವಾಗಿ ಸ್ತ್ರೀಪಾತ್ರಧಾರಿಗಳಿಗೆ ಹಿನ್ನಡೆ ತರುವ ವೀರರಸ ಪ್ರಧಾನವಾದ ಪ್ರಮೀಳೆ, ಶಶಿಪ್ರಭಾ, ಮೀನಾಕ್ಷಿ ಪಾತ್ರಗಳಲ್ಲಿ ಅಂಬಾಪ್ರಸಾದರ ಮುನ್ನಡೆಯಿದೆ. ಸಂದರ್ಭ ಸಿಕ್ಕಾಗ ಪುರುಷ ಪಾತ್ರಗಳನ್ನು ನಿರ್ವಹಿಸಿದ್ದಿದೆ.
              ಪಾತಾಳ ವೆಂಕಟ್ರಮಣ ಭಟ್ಟರು ಅಂಬಾಪ್ರಸಾದರ ತೀರ್ಥರೂಪರು. ಸ್ತ್ರೀಪಾತ್ರಕ್ಕೆ ಹೊಸ ಸ್ವರೂಪವನ್ನು ತಂದು, ರಂಗದಲ್ಲಿ ಅಳವಡಿಸಿದ ಅನ್ವೇಷಕ. ರಂಗದ ಕುರಿತು ನಿಖರವಾದ ನಡೆ, ನುಡಿಯನ್ನು ಹೊಂದಿದವರು. ಇವರ ಒಂದು ಕಾಲಘಟ್ಟದ ತಿರುಗಾಟವು ಯಕ್ಷಗಾನ ವೈಭವಕ್ಕೆ ಸಾಕ್ಷಿ. ವೆಂಕಟ್ರಮಣ ಭಟ್ಟರ ಕೀತರ್ಿಯ ಜಾಡಿನಲ್ಲಿ ಮಗ ಅಂಬಾ ಮುಂದುವರಿದರು. ಸ್ವಂತಿಕೆಯಲ್ಲಿ ಕಾಣಿಸಿಕೊಂಡರು. ಯಾರದ್ದೇ ನಕಲಾಗಲಿಲ್ಲ. ನೋಡಿ ಕಲಿತರು. ನೋಡಿ ತಿಳಿದರು. ತಿಳಿದು ತಿದ್ದಿಕೊಂಡರು.
                 ದೇಹ ಸ್ಥೂಲ ಆಗದಂತೆ ಕಾಪಾಡಿಕೊಳ್ಳುವುದು ಸ್ತ್ರೀಪಾತ್ರಧಾರಿಗಳಿಗೆ ಸವಾಲು. ಅಲ್ಲೋ ಇಲ್ಲೋ ಕೆಲವರು ಗೆದ್ದುಬಿಡುತ್ತಾರಷ್ಟೆ. ತನಗೂ ಸ್ಥೂಲತೆಯ ಕಾಟವಾದಾಗ ಅಂಬಾಪ್ರಸಾದರು ಅಧೀರರಾಗಿದ್ದರು.  ವೇಷದ ಆಕರ್ಷಣೆಯು ಸೊರಗುವುದನ್ನು ನೋಡಿ ದುಃಖಿಸಿದ್ದರು. ಮುಂದಿನ ಹಾದಿ ಕಾಣದೆ ಪರಿತಾಪ. ಸ್ತ್ರೀಪಾತ್ರಧಾರಿಗೆ 'ತನ್ನ ವೇಷದ ಆಕರ್ಷಣೆ ಕಡಿಮೆಯಾಗುತ್ತಿದೆ' ಎನ್ನುವ ಅರಿವು ಮೂಡುವುದೇ ಗ್ರೇಟ್. ಅಂಬಾಪ್ರಸಾದರು ಹೊಸನಗರ ಮೇಳದ ಪ್ರವೇಶದಿಂದ ಮೊದಲಿನಂತೆ ಬ್ಯಾಟಿಂಗ್! ಗರತಿ ಪಾತ್ರಗಳಿಗೆ ಹೊಸ ಹಾದಿ, ಪರಿಪೂರ್ಣ ಅಭಿವ್ಯಕ್ತಿಯನ್ನು ನೀಡಲು ಪೂರ್ಣ ಅವಕಾಶ. ತಾರಾಮೌಲ್ಯವು ಇವರೊಳಗೆ ಸ್ಥಿರವಾಯಿತು.
              ಓದಿದ್ದು ಒಂಭತ್ತನೇ ತರಗತಿ. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ಕಲಿಕೆ. ಗೋವಿಂದ ಭಟ್ ಸೂರಿಕುಮೇರಿ, ನೆಡ್ಲೆ ನರಸಿಂಹ ಭಟ್ಟರಿಂದ ಅಭ್ಯಾಸ. ಮಂಗಳೂರಿನ ಮಾಸ್ಟರ್ ವಿಠಲರಿಂದ ಭರತನಾಟ್ಯಾಭ್ಯಾಸ.  ಧರ್ಮಸ್ಥಳ ಮೇಳದಲ್ಲಿ ಆರಂಭದ ತಿರುಗಾಟ. ಸುಂಕದಕಟ್ಟೆ ಮೇಳದಲ್ಲಿ 'ಕಲಾವಿದ'ನಾಗಿ ರೂಪುಗೊಂಡರು. ಬಳಿಕ ಕದ್ರಿ, ಸುರತ್ಕಲ್, ಮಧೂರು, ಕಾಟಿಪಳ್ಳ, ಮಂಗಳಾದೇವಿ, ಪುತ್ತೂರು, ಕರ್ನಾಟಕ, ಎಡನೀರು, ಹೊಸನಗರ ಮೇಳಗಳಲ್ಲಿ ಮೂವತ್ತೆಂಟು ವರುಷದ ತಿರುಗಾಟಗಳು. ಈ ಮಧ್ಯೆ ಬಡಗು ತಿಟ್ಟಿನ ಶಿರಸಿ ಮಾರಿಕಾಂಬಾ ಮೇಳದಲ್ಲಿ ವ್ಯವಸಾಯ ಮಾಡಿದ್ದರು.
              ಅಂಬಾಪ್ರಸಾದರ ಸ್ತ್ರೀವೇಷದಲ್ಲಿ  'ಯಕ್ಷಗಾನ'ವಿದೆ. ಈಗಲೂ, ಮೊದಲೂ ಆ ಪ್ರಜ್ಞೆ ಅವರಲ್ಲಿ ಜಾಗೃತ. ಬಹುಶಃ ವೆಂಕಟ್ರಮಣ ಭಟ್ಟರ ರಂಗದ ಬದ್ಧತೆಯೂ ಕಾರಣವಿರಬಹುದು. ಪಾತ್ರ ಬಯಸುವ ಆಶಯ ಮತ್ತು ವ್ಯಾಪ್ತಿ ಇದೆಯಲ್ಲಾ, ಅದನ್ನು ಅನುಭವದ ಮೂಲಕ ಅಧ್ಯಯನ ಮಾಡಿದ್ದಾರೆ. ಹಾಗಾಗಿ ಅಂಬಾಪ್ರಸಾದರ ಪಾತ್ರಗಳೆಲ್ಲವೂ ಮೆಲುಕು ಹಾಕಬಹುದಾದುದು. ರಂಗಕ್ಕೆ ಬೇಕಾಗಿರುವುದು 'ಸ್ತ್ರೀವೇಷ, ಸ್ತ್ರೀಯಲ್ಲ'! ಬದುಕಿಗೆ ಹೆಚ್ಚು ಅಂಟಿಕೊಳ್ಳುವ ಸಿನಿಮಾ ಪ್ರಭಾವ ಇವರ ವೇಷಕ್ಕೆ ಸೋಕಿಲ್ಲದಿರುವುದರಿಂದಲೇ ಈಗಲೂ ಅಂಬಾಪ್ರಸಾದರಿಗೆ ಬೇಡಿಕೆ.
             ಪಾತಾಳ ವೆಂಕಟ್ರಮಣ ಭಟ್ಟರು ಒಂದೆಡೆ ಉಲ್ಲೇಖಿಸುತ್ತಾರೆ, ನನ್ನ ಸ್ತ್ರೀವೇಷವು ರಂಗಕ್ಕೆ ಬಂದಾಗ ಪ್ರೇಕ್ಷಕರು ಅಲರ್ಟ್ ಆಗುತ್ತಿದ್ದ ದಿನಗಳಿದ್ದುವು. ನಿದ್ದೆಗೆ ಜಾರಿದವರು ಎದ್ದು ಕುಳಿತುಕೊಳ್ಳುತ್ತಿದ್ದರು. ಬರಬರುತ್ತಾ ನನ್ನ ವೇಷಕ್ಕೆ ಪ್ರೇಕ್ಷಕರಿಂದ ಹೇಳುವಂತಹ ಪ್ರತಿಕ್ರಿಯೆ ಬಾರದೇ ಇದ್ದಾಗ ರಂಗನಿರ್ಗಮನಕ್ಕೆ ಮನ ಮಾಡಿದೆ, ಎಂದಿದ್ದರು. ಅಂಬಾಪ್ರಸಾದರು ಹಲವು ಬಾರಿ ತಂದೆಯವರ ಈ ನಿಲುವನ್ನು ನೆನಪಿಸುತ್ತಿದ್ದರು. ಸಮರ್ಥಿಸುತ್ತಿದ್ದರು.
              ಯಕ್ಷರಂಗಕ್ಕೆ 'ಗರತಿ ಪಾತ್ರಧಾರಿ'ಗಳು ಬೇಕಾಗಿದ್ದಾರೆ! ಗರತಿ ಪಾತ್ರ ನಿರ್ವಹಣೆ ಸುಲಭವಲ್ಲ. ಅನುಭವದಿಂದ ಮಾಗಿದಾಗ ಮಾತ್ರ ಪರಾಕಾಯ ಪ್ರವೇಶ ಸಾಧ್ಯ. ಅಂಬಾಪ್ರಸಾದರ ಸೀತೆ, ಚಂದ್ರಮತಿ, ದಮಯಂತಿ ಪಾತ್ರಾಭಿವ್ಯಕ್ತಿಗಳೆಲ್ಲಾ ಉತ್ತುಂಗಕ್ಕೇರಿದವುಗಳು. ಸುಭದ್ರೆ ಮತ್ತು ಚಿತ್ರಾಂಗದೆ, ಮಾಲಿನಿ ಮತ್ತು ಮೋಹಿನಿ ಪಾತ್ರಗಳ ವ್ಯತ್ಯಾಸಗಳನ್ನು ಸ್ತ್ರೀಪಾತ್ರಧಾರಿ ಅರಿಯದಿದ್ದರೆ ಅದನ್ನು 'ಪಾತ್ರ' ಎಂದು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆಗೆ ಸೀಮಿತವಾದೀತಷ್ಟೇ. ಆದರೆ ಅಂಬಾಪ್ರಸಾದರಲ್ಲಿ  ಇಂತಹ ಪಾತ್ರಸೂಕ್ಷ್ಮಗಳ ಅರಿವು ಗಟ್ಟಿಯಾಗಿದೆ. ಹಾಗಾಗಿ ರಂಗ ಎಂದೂ ಅವರನ್ನು ಬಿಡದು!
                ಅಂಬಾಪ್ರಸಾದ ಪಾತಾಳರ ಕಲಾಯಾನವನ್ನು ಗುರುತಿಸಿ ಉಪ್ಪಿನಂಗಡಿಯ ಸೌಹಾರ್ದ ಯಕ್ಷಗಾನ ಸಮಿತಿ ಮತ್ತು ಶ್ರೀ ಶಾರದೋತ್ಸವ ಸಮಿತಿಯು ಗೌರವಿಸುತ್ತಿದೆ. ೨೦೧೬ ಜುಲೈ 16, ಶನಿವಾರದಂದು ಸಂಜೆ ಉಪ್ಪಿನಂಗಡಿ ರಾಮನಗರದ 'ಶ್ರೀ ಶಾರದಾ ಮಂದಿರ'ದಲ್ಲಿ ಸಂಮಾನ ಕಾರ್ಯಕ್ರಮ ಜರುಗಲಿದೆ.
(Prajavani/Dadhiginatho Coloum)No comments:

Post a Comment