Saturday, September 3, 2016

ನಾಲ್ಕು ದಶಕದ ತೀರ್ಥಯಾತ್ರೆ - ಎಡನೀರು ತಾಳಮದ್ದಳೆ ಸಪ್ತಾಹದ ಹಿರಿಮೆ


                  ಯಕ್ಷಗಾನದ ಹಿರಿಯ ಕಲಾವಿದರ ಮಾತಿಗೆ ಕಿವಿಯಾದಾಗ ಶ್ರೀ ಎಡನೀರು ಮಠದ ಉಲ್ಲೇಖವಿಲ್ಲದೆ ಮಾತು ಪೂರ್ಣವಾಗುವುದಿಲ್ಲ. ಆ ಮಾತಿನಲ್ಲಿ ಖುಷಿಯಿದೆ, ಆನಂದವಿದೆ, ವಿಶ್ವಾಸವಿದೆ, ನಂಬುಗೆಯಿದೆ. ಮಾತೃತ್ವದ ಸ್ಪರ್ಶವಿದೆ. ಮಗುವಿನ ಪ್ರೀತಿಯನ್ನು ಅನುಭವಿಸಿದ ಸಂತೃಪ್ತಿಯಿದೆ. ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ಕಲಾವಿದರ ಪಾಲಿಗೆ ಗುರು, ಮಗು, ತಾಯಿ, ಬಂಧು, ವೈದ್ಯ.
                  ಕಲಾವಿದರಿಗೆ ಶ್ರೀಮಠವು ಮನೆ. ಶೇಣಿಯವರೊಮ್ಮೆ ಹೇಳಿದ ನೆನಪು, ಪೂಜ್ಯರ ಪ್ರೀತಿಯ ತೆಕ್ಕೆಯಿಂದ ಬಿಡಿಸಲಾಗದಷ್ಟು ಬಂಧ, ಅನುಬಂಧ. ಸಿಗುವ ಅಕ್ಕರೆಯು ಸಕ್ಕರೆಯಷ್ಟು ಸಿಹಿ. ಕೂಟ, ಆಟಗಳು ಜರುಗಿದಾಗ ಕಲಾವಿದರಿಗಿಂತಲೂ ಹೆಚ್ಚು ಅನುಭೂತಿಯನ್ನು ಶ್ರೀಗಳು ಅನುಭವಿಸುತ್ತಾರೆ. ಒಂದರ್ಥದಲ್ಲಿ ಶ್ರೀಮಠವು ಯಕ್ಷಗಾನಕ್ಕೆ, ಕಲಾವಿದರಿಗೆ ಕೇಂದ್ರವಿದ್ದಂತೆ...
                ನಾಲ್ಕಾರು ಅರ್ಥಧಾರಿಗಳು ಸೇರಿದರೆ ಸಾಕು, ಅಹೋರಾತ್ರಿ ತಾಳಮದ್ದಳೆ ಖಚಿತ. ಮರುದಿವಸ ಕೂಟದ ಕಟು ವಿಮರ್ಶೆ. ಹಿಮ್ಮೇಳದಿಂದ ತೊಡಗಿ ಅರ್ಥಗಾರಿಕೆ ತನಕ. ಮೂರ್ನಾಲ್ಕು ದಿವಸ ನಿರಂತರ ತಾಳಮದ್ದಳೆಯ ದಾಸೋಹ. ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು, ಕುಬಣೂರು ಬಾಲಕೃಷ್ಣ ರಾಯರು, ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್, ದೇರಾಜೆ ಸೀತಾರಾಮಯ್ಯ, ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ಶಂಕರನಾರಾಯಣ ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್... ಹೀಗೆ ಅನೇಕರು ಕೂಟಕ್ಕೆ ಕಳೆಯೇರಿಸಿದವರು. ಇವರೆಲ್ಲರ ಅರ್ಥವನ್ನು ಕೇಳಿಯೇ ಕಲಾವಿದರಾಗಿ ರೂಪುಗೊಂಡವರೆಷ್ಟೋ.
              ಹೀಗೆ ನಡೆಯುತ್ತಿದ್ದ ತಾಳಮದ್ದಳೆಯು ಮುಂದೆ ಸಪ್ತಾಹವಾಗಿ ರೂಪಾಂತರಗೊಂಡಿತು. ದೂರದೂರಿನ ಕಲಾವಿದರು ಆಗಮಿಸಿದರು. ಮುಂದೆ ಪೂಜ್ಯ ಶ್ರೀಗಳ ಚಾತುರ್ಮಾಸ್ಯ ವೃತಾಚರಣೆ ಸಂದರ್ಭದಲ್ಲಿ ಸಪ್ತಾಹವು  ಪೋಣಿಕೆಯಾಯಿತು. ಕೂಟಕ್ಕೆ ವೈಭವ ಬಂತು. ಅರ್ಥಧಾರಿಯಾಗಿ ಪಡಿಮಂಚವೇರುವುದು ಕಲಾವಿದರಿಗೆ ಹೆಮ್ಮೆ. ಮಠದ ಹೊರತಾಗಿ ಪೂಜ್ಯರು ಹಾಡುವುದಿದ್ದರೆ ಸಪ್ತಾಹದಲ್ಲಿ ಮಾತ್ರ.
                ತಾಳಮದ್ದಳೆಯ ಸ್ವರೂಪ ನೀರ್ಣಯಕ್ಕೆ ಸ್ವಾಮೀಜಿಯವರೇ ನಿರ್ದೇಶಕ. ಕಲಾವಿದರ ಸಾಮಥ್ರ್ಯಕ್ಕನುಸಾರವಾಗಿ ಪಾತ್ರ ನಿರ್ಣಯ. ನಿಗದಿತ ಸಮಯಕ್ಕೆ ಹೊಂದುವ ಪ್ರಸಂಗ ಮತ್ತು ಪದ್ಯಗಳ ಆಯ್ಕೆ. ಕೂಟ ಯಶಕ್ಕೆ ಕಲಾವಿದರೊಂದಿಗೆ ಸಮಾಲೋಚನೆ. ಹಿರಿಯರೊಂದಿಗೆ ಕಿರಿಯ ಅರ್ಥಧಾರಿಗಳ ಮಿಳಿತ. ಸಮರ್ಥ ಹಿಮ್ಮೇಳದ ಜೋಡಣೆ. ಶ್ರೀಗಳು ಭಾಗವತಿಕೆ ಮಾಡುತ್ತಾ, ಅರ್ಥವನ್ನೂ ಗಮನಿಸುತ್ತಾ ಇರುವುದರಿಂದ  ಪಾತ್ರಗಳು ಹಳಿ ತಪ್ಪುವುದಿಲ್ಲ! ಶ್ರೀಗಳ ನಿರ್ದೇಶನಕ್ಕೆ ಪ್ರತ್ಯೇಕವಾದ ಸೌಂದರ್ಯವಿದೆ. ಸಪ್ತಾಹದಲ್ಲಿ ಪ್ರಸಂಗಕ್ಕೆ ನ್ಯಾಯ ಸಲ್ಲುತ್ತದೆ. ಸ್ವಾಮೀಜಿಯವರು ಹಾಡುವ ಕಾರಣ ಅವ್ಯಕ್ತ ಶಿಸ್ತು ರಂಗದಲ್ಲಿ ಮಾತ್ರವಲ್ಲ, ಪ್ರೇಕ್ಷಕರಲ್ಲೂ ಅನಾವರಣಗೊಳ್ಳುತ್ತದೆ, ಎನ್ನುತ್ತಾರೆ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್.
                ಸ್ವಾಮೀಜಿಯವರ ಭಾಗವತಿಕೆಯನ್ನು ನೋಡಿದ್ದೇನೆ, ಕೇಳಿದ್ದೇನೆ, ಅನುಭವಿಸಿದ್ದೇನೆ. ಪಾತ್ರ ಮಾತ್ರವಲ್ಲ ಪಾತ್ರಧಾರಿಗೂ ಒಪ್ಪುವಂತೆ ಹಾಡುವುದು ಶ್ರೀಗಳ ವಿಶೇಷ. ಭಾವದ ಭಾಷೆಯನ್ನು ಉದ್ದೀಪನಗೊಳಿಸುವ ವಿಶೇಷತೆ. ಪದ್ಯಛೇದ, ಪದಛೇದದ ನಾಜೂಕುತನ ಅನನ್ಯ, ಸುಸ್ಪಷ್ಟ.  ರಂಗವು ಸುಭಗಕ್ಕೇರಿದಾಗ ಅನುಭವಿಸುವ ಆನಂದ ಅಪಾರ. ರಂಗಸೊಬಗಿಗೆ ಅರ್ಥವು ತೊಡಕಾದಾಗ ಶ್ರೀಗಳೊಳಗಿನ ನಿರದೇಶಕ ಜಾಗೃತನಾಗುತ್ತಾನೆ. ಯಾವಾಗ ನಿರ್ದೇಶಕ ಎದ್ದುನಿಂತನೋ ಆಗ ಅರ್ಥಧಾರಿ ಬೆವರದೆ ವಿಧಿಯಿಲ್ಲ!
                ಸ್ವಾಮೀಜಿ ಹಾಡುವಾಗ ರಾಗಗಳು ತನುವನ್ನು ನೇವರಿಸುತ್ತವೆ. ನಾದಗಳು ತನುಸ್ಪರ್ಶವನ್ನು ಬಯಸುತ್ತವೆ. ಹಾಡುತ್ತಾ, ತನ್ಮಯತೆಯನ್ನು ಹೊಂದಿ ಸುಖಿಸುತ್ತಾರೆ. ತನ್ಮಯತೆಯು ಶ್ರೀಗಳಿಗೆ ಪೂಜೆ. ವೇಷಧಾರಿ, ಅರ್ಥಧಾರಿಗೆ ಈ ಅವ್ಯಕ್ತ ಜಾಡು ಗೊತ್ತಾಗಿಬಿಟ್ಟರೆ ಭಾವವೇ ಬಂದು ಪರಿಚಯಿಸುತ್ತದೆ. ರಾಗಗಳ 'ಸುಖ' ಅನುಭವ ವೇದ್ಯವಾಗುತ್ತದೆ. ಶ್ರೀಗಳ ದುಃಖ, ಕರುಣ ರಸಗಳ ಹಾಡುಗಳು ನಮಗರಿವಿಲ್ಲದೆ ಲೀನವಾಗಿಸುತ್ತವೆ.
                 ಶ್ರೀಮಠದಲ್ಲಿ ಜರುಗಿದ ಋತಿಗಳೇ ಅರ್ಥಧಾರಿಗಳಾಗಿ ಜರುಗಿದ್ದ ತಾಳಮದ್ದಳೆಯೊಂದು ಈಗ ಇತಿಹಾಸ. ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಶ್ರೀ ಶ್ರೀ ವಿದ್ಯಾಭೂಷಣತೀರ್ಥ ಶ್ರೀಪಾದಂಗಳವರು (ಆಗ), ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಭಾಗವಹಿಸಿದ್ದರು. ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಕಲಾಮಾಧ್ಯಮವೊಂದರ ಮೂಲಕ ಜನರಿಗೆ ಮನದಟ್ಟು ಮಾಡುವುದು ಯತಿಧರ್ಮಕ್ಕೆ ಪೂರಕ, ಎನ್ನುತ್ತಾರೆ ಸ್ವಾಮೀಜಿ.
                  ಚಾತುರ್ಮಾಸ ವೃತಾಚರಣೆ ಎಂದಾಗ ಕಾಯಕಷ್ಟ ಸಹಜ. ವಿಶ್ರಾಂತಿ ದೂರ. ಹೀಗಿದ್ದೂ ಕಲಾಕಲಾಪಗಳನ್ನು ಕಾರ್ಯಕ್ರಮಗಳನ್ನು ಸ್ವಾಮೀಜಿ ವೀಕ್ಷಿಸುತ್ತಾರೆ, ವಿಮರ್ಶಿಸುತ್ತಾರೆ. ಕಲಾವಿದರನ್ನು ಮಾತನಾಡಿಸುತ್ತಾರೆ. ಯೋಗಕ್ಷೇಮ ವಿಚಾರಿಸುತ್ತಾರೆ. ಇಲ್ಲಿ ಯಕ್ಷಗಾನವು ಮನೋರಂಜನೆಯಲ್ಲ, ಅದು ಆರಾಧನಾ ಕಲೆ. ತೆಂಕುತಿಟ್ಟು, ಬಡಗುತಿಟ್ಟಿಗೆ ಸಮಾನ ಮಣೆ.
                   ಎಡನೀರು ಮೇಳಕ್ಕೆ ಬಹುತೇಕ ವರುಷಪೂರ್ತಿ ಹರಕೆ ಆಟಗಳು. ಅಲ್ಲೂ ಸಪ್ತಾಹ, ದಶಾಹಗಳ ಆಯೋಜನೆ. ಸ್ವಾಮೀಜಿಯ ನಿರ್ದೇಶನ, ಆಶಯವನ್ನು ಮೇಳದ ಎಲ್ಲಾ ಕಲಾವಿದರು ಗೌರವಿಸಿದ್ದಾರೆ, ಅನುಸರಿಸುತ್ತಿದ್ದಾರೆ. ಮೇಳವು ಮಠದಲ್ಲಿ ಪ್ರದರ್ಶನ ನೀಡುವಾಗ ಸ್ವಾಮೀಜಿ ಭಾಗವತಿಕೆ ಮಾಡುತ್ತಾರೆ. ಎಲ್ಲವೂ ಕಾಲಮಿತಿ ಪ್ರದರ್ಶನಗಳು. ಶ್ರೀಮಠಕ್ಕೆ ಆಗಮಿಸಿದವರು ಹೊಟ್ಟೆತುಂಬಾ ಉಂಡು ತೇಗಿದಾಗ ಮಾತ್ರ ಶ್ರೀಗಳಿಗೆ ಸಮಾಧಾನ. ಅದು ಮಠದ ಪರಂಪರೆ. ಎಡನೀರು ಯಕ್ಷಗಾನ ಸಪ್ತಾಹಕ್ಕೆ ನಾಲ್ಕು ದಶಕ ಮೀರಿತು.
                     ಈ ಬಾರಿ ಪುತ್ತೂರಿನ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎಡನೀರು ಶ್ರೀಗಳ ಚಾತುರ್ಮಾಸ್ಯ ವೃತಾಚರಣೆ. ಈ ಸಂದರ್ಭದಲ್ಲಿ ೨೦೧೬ ಆಗಸ್ಟ್ 9 ರಿಂದ 15ರ ತನಕ ಸಂಜೆ ಏಳೂವರೆಯಿಂದ ಹತ್ತರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಂಪನ್ನವಾಗಲಿದೆ. ಭರತಾಗಮನ, ಭೀಷ್ಮವಿಜಯ, ಪಂಚವಟಿ, ಭೀಷ್ಮಸೇನಾಧಿಪತ್ಯ-ಕರ್ಮಬಂಧ, ವಾಲಿವಧೆ, ಸುಧನ್ವಾರಜುನ, ಮಾಗಧ ವಧೆ ಪ್ರಸಂಗಗಳ ಪ್ರಸ್ತುತಿ.

(ಚಿತ್ರ : ಉದಯ ಕಂಬಾರು, ನೀರ್ಚಾಲು)

No comments:

Post a Comment