Sunday, July 30, 2017

ಒಂದೂವರೆ ಚಪಾತಿಯಲ್ಲಿ ಮೆರೆದ ಮಾನವೀಯ ಮಿಡಿತ..!

ಪ್ರಜಾವಣಿ ಅಂಕಣ 'ದಧಿಗಿಣತೋ' / 6-1-2017

                ಸುಮಾರು ದಶಕದ ಹತ್ತಿರವಾಯಿತು. ಕಟೀಲು ಶ್ರೀ ಕ್ಷೇತ್ರದಲ್ಲಿ ತಾಳಮದ್ದಳೆ ಸಪ್ತಾಹದ ಸಂದರ್ಭ. ಶಾರೀರಿಕವಾಗಿ ಆಗಲೇ ಹರಿದಾಸ್ ಮಲ್ಪೆ ರಾಮದಾಸ ಸಾಮಗರು (ಕೀರ್ತಿಶೇಷ) ಸೊರಗಿದ್ದರು. ಪತ್ನಿಯ ಆಸರೆಯೊಂದಿಗೆ ಕೂಟಕ್ಕೆ ಆಗಮಿಸಿದ್ದರು. ಕಟೀಲಿನಲ್ಲಿ ಮೇಳದ ಆಟ ಹೊರತು ಪಡಿಸಿ ಮಿಕ್ಕೆಲ್ಲಾ ಯಕ್ಷಗಾನ ಸಂಬಂಧಿ ಕಾರ್ಯಕ್ರಮಗಳು ದೇವಳದ ಎದುರಿನ ಶಾಲೆಯಲ್ಲಿ ನಡೆಯುತಿದ್ದುವು. ಅಲ್ಲಿನ ಮುಖ್ಯ ಗುರುಗಳ ಕೊಠಡಿಯು ಸಪ್ತಾಹದ ಸಮಯದಲ್ಲಿ 'ಕೂಟದ ಚೌಕಿ'! ಪುಚ್ಚೆಕೆರೆ ಕೃಷ್ಣ ಭಟ್ಟರ ಕಾಲದಿಂದ ತೊಡಗಿ ಈಗಲೂ ಚೌಕಿ ಸದಾ ಲವಲವಿಕೆ.
                ಅಂದು ಸಾಮಗರು ಒಂದು ಗಂಟೆ ಮುಂಚಿತವಾಗಿ ಆಗಮಿಸಿದ್ದರು. ಅವರೊಂದಿಗೆ ಮುಕ್ತವಾಗಿ ಮಾತನಾಡುವ ಅವಕಾಶ ಸಿಕ್ಕಿತ್ತು. ತನ್ನ ಬಾಲ್ಯದ ಯಕ್ಷಗಾನದ ವಾತಾವರಣ, ಮೇಳದ ತಿರುಗಾಟದ ರೋಚಕ ಕ್ಷಣ, ತಾಳಮದ್ದಳೆಯ ರಸನಿಮಿಷಗಳು, ಕಹಿ ಘಟನೆಗಳು. ಶೇಣಿಯವರೊಂದಿಗಿನ ಒಡನಾಟ, ಕೂಟದ  ತಿಕ್ಕಾಟ.. ಹೀಗೆ. ಅವರ ಮಾತಿನ ಓಘ ಎಷ್ಟಿತ್ತೆಂದರೆ ಪೂರ್ಣವಿರಾಮ ಇಲ್ಲವೇ ಇಲ್ಲ. ಸನಿಹದಲ್ಲಿದ್ದ ಸಹಧರ್ಮಿಣಿ 'ಇಂದು ಮಾತನಾಡಿದ್ದು ಸಾಕು, ಇನ್ನೊಮ್ಮೆ ಮಾತನಾಡಿದರೆ ಆಗದೇ' ಎಂದು ಅವರ ಆರೋಗ್ಯದ ಹಿನ್ನೆಲೆಯಲ್ಲಿ ಎಚ್ಚರಿಸುತ್ತಿದ್ದರು.
               ಚೌಕಿಗೆ ಕಾಫಿ, ಚಹ, ಉಪಾಹಾರ ಬಂದರೆ ಸಾಕು - ಕಲಾವಿದರು ಅಲರ್ಟ್ ಆಗಬೇಕೆನ್ನುವ ಸೂಚನೆ. ಅಂದು ಚಪಾತಿ, ಗಸಿ, ಜಿಲೇಬಿ ತಟ್ಟೆಯಲ್ಲಿ ಕುಳಿತಿತ್ತು. ಯಾರೋ ಹೇಳಿದರು - 'ಸಾಮಗರಿಗೆ ಜಿಲೇಬಿ ಇಷ್ಟ'! ಸಾಮಗರು ನಗುತ್ತಾ ಜಿಲೇಬಿಯನ್ನು ಬಾಯಿಗಿಟ್ಟು ಎಲ್ಲರನ್ನು ನಗಿಸಿದ್ದರು ಕೂಡಾ! ಎಲ್ಲರಿಗೂ ತಲಾ ಮೂರು ಚಪಾತಿಯಂತೆ ವಿತರಣೆ. ಹಿಂದಿನ ತಾಳಮದ್ದಳೆಗಳ 'ಬೇಕು-ಬೇಡಗಳ ರಿಂಗಣ'ದೊಂದಿಗೆ ಬಹುತೇಕರ ತಟ್ಟೆ ಖಾಲಿಯಾಗಿತ್ತು. ಆದರೆ ಸಾಮಗರ ತಟ್ಟೆಯಲ್ಲಿ ಚಪಾತಿ ಕಾಯುತ್ತಿತ್ತು. ಅವರು ತಿನ್ನಲು ಆರಂಭಿಸಲೇ ಇಲ್ಲ. ಅತ್ತಿತ್ತ ನೋಡುತ್ತಾ ಯಾರನ್ನೋ ಕಾಯುತ್ತಿರುವಂತೆ ಭಾಸವಾಗುತ್ತಿತ್ತು. 'ತಿನ್ನಿ ಸಾಮಗ್ರೆ, ಬೇರೆ ಏನು ಬೇಕಿತ್ತು' ಎಂದು ಶಾಲಾ ಗುರುಗಳ ಸಾತ್ವಿಕ ಕೋರಿಕೆ.
               'ಓಹೋ.. ಹೌದಲ್ಲಾ.. ಒಂದು ಪೇಪರ್ ಪೀಸ್ ಕೊಡ್ತೀರಾ' ಎಂದರು. ಅದರಲ್ಲಿ ತನ್ನ ತಟ್ಟೆಯ ಒಂದೂವರೆ ಚಪಾತಿಯನ್ನು ಮಡಚಿ ಜುಬ್ಬಾದ ಕಿಸೆಗೆ ಸೇರಿಸುತ್ತಿದ್ದರು. 'ಅದ್ಯಾರಿಗೆ ಸಾಮಗ್ರೆ' ಎಂದಾಗ, 'ಅದಾ.. ಅದು ಕಾರು ಡ್ರೈವರ್ರಿಗೆ.. ಅವ ಕಾಣ್ತಾ ಇಲ್ಲ.. ಎಲ್ಲಿಗೆ ಹೋದ್ನಪ್ಪಾ, ಬೇಗ ಬರ್ತೇನೆ ಅಂದಿದ್ದ' ಎಂದಾಗ ಎಲ್ಲರೂ ದಂಗು! 'ಅವರಿಗೆ ಬೇರೆ ಕೊಡೋಣ. ಇದನ್ನು ನೀವು ತಿನ್ನಿ' ಎಂದಾಗ, 'ಹೌದಾ.. ಹಾಗಾದ್ರೆ ಆದೀತು' ಎನ್ನುತ್ತಾ ಕಿಸೆಗೆ ಸೇರಿಸಿದ್ದ ಚಪಾತಿಯ ಪ್ಯಾಕೆಟನ್ನು ಬಿಚ್ಚಿ ತನ್ನ ಪ್ಲೇಟ್ಗೆ ಸೇರಿಸಿ ಚಪಾತಿ ತಿನ್ನತೊಡಗಿದರು. ಪ್ರಸಂಗದ ಕುರಿತು ಮಾತುಕತೆ ಆರಂಭವಾದುದೇ ಕಾಫಿ ಸೇವನೆಯ ಬಳಿಕ.
               ತನ್ನ ಸಾರಥಿಯ ಹೊಟ್ಟೆ ಹಸಿದಿರಬಾರದೆಂಬ ಎಚ್ಚರ. ಸಂಘಟಕರಲ್ಲಿ ಈ ವಿಚಾರ ಹೇಳಲು ಮುಜುಗರ. ಆತನ ಅನುಪಸ್ಥಿತಿಯ ಕಾತರ. ತಳಮಳ ಸ್ಥಿತಿ. ಅವರಿಗೆ ಬೇರೆ ವ್ಯವಸ್ಥೆಯ ಆಶ್ವಾಸನೆ ಸಿಕ್ಕಾಗ ಸಂತೋಷ. ಇಂತಹ ಸೂಕ್ಷ್ಮ ಸಂವೇದನೆಯನ್ನು ಕಾಪಾಡಿಕೊಂಡವರು ಸಾಮಗರು. 'ತಾಳಮದ್ದಳೆ ಮುಗಿಯುವಾಗ ತಡವಾಗುತ್ತದಲ್ಲಾ.. ನಂತರ ನಮ್ಮನ್ನು ಕರೆದುಕೊಂಡು ಹೋಗಬೇಕಲ್ಲಾ..' ಎಂದು ಸಮರ್ಥಿಸಿಕೊಳ್ಳುತ್ತಿದ್ದರು. ತಾನು ಕಾರನ್ನು ಬಾಡಿಗೆಗೆ ಗೊತ್ತು ಮಾಡಿ ಬಂದಿದ್ದರೂ ಚಾಲಕರ ಬಗೆಗಿನ ಮಾನವೀಯ ತುಡಿತ ಇದೆಯಲ್ಲಾ, ಅದು ಎಲ್ಲರಿಗೂ ಬರುವುದಿಲ್ಲ ಬಿಡಿ.
                ಅಂದಿನ ಪ್ರಸಂಗ 'ರುಕ್ಮಾಂಗದ ಚರಿತ್ರೆ.' ಸಾಮಗರ 'ರುಕ್ಮಾಂಗದ' ಪಾತ್ರ. ಡಾ.ರಾಮಚಂದ್ರ ರಾವ್ ಕೋಳ್ಯೂರರ 'ಮೋಹಿನಿ'. ಅಂದಿನ ರುಕ್ಮಾಂಗದ ಭಕ್ತಿ, ಕರುಣ, ಶೃಂಗಾರ.. ರಸಗಳ ಘನಿಯೇ ಆಗಿದ್ದ! ಕೆಲವೊಮ್ಮೆ ಅಳುತ್ತಾ, ನಗುತ್ತಾ, ಸಂದರ್ಭವನ್ನು ಅನುಭವಿಸುತ್ತ ಸಾಗುವ ರುಕ್ಮಾಂಗದನನ್ನು ಕೋಳ್ಯೂರರ ಮೋಹಿನಿ ಚುಚ್ಚಿ ಚುಚ್ಚಿ, ಕಠೋರ ಮಾತುಗಳಿಂದ ನೋಯಿಸುತ್ತಿದ್ದಳು, ಕೆಣಕುತ್ತಿದ್ದಳು. ಎಲ್ಲದಕ್ಕೂ ಸಮಾಧಾನಕರವಾದ ಉತ್ತರ. ಕೊನೆಗೆ ರುಕ್ಮಾಂಗದನ ಪತ್ನಿ ವಿಂದ್ಯಾವಳಿ(ನಾನು)ಯು 'ಮೋಹಿನಿ.. ಯಾಕೆ ಅವರನ್ನು ನೋಯಿಸುತ್ತಿ. ಅವರ ವೃತ ಕಳೆದ ಬಳಿಕ ಅವರನ್ನು ಒಲಿಸಿ ನಾನೇ ನಿನ್ನ ಬಳಿಗೆ ಅವರನ್ನು ಕಳುಹಿಸುತ್ತೇನೆ' ಎಂದಾಗ ಸಾಮಗರು   'ಓಹೊ..' ಎಂಬ ಗಟ್ಟಿ ಧ್ವನಿಯನ್ನು ಹೊರಡಿಸಿದರು. ಒಂದು ಕ್ಷಣ ರಂಗ ಮೌನ!
               'ಹೆಂಡತಿಯೆಂದರೆ ಹೀಗಿರಬೇಕು' ಎನ್ನುತ್ತಾ ಹೆಣ್ತನ, ತಾಯ್ತನ, ಮಾತೃತ್ವದ ಕುರಿತಾಗಿ ಏನಿಲ್ಲವೆಂದರೂ ಆರ್ಧ ಗಂಟೆಗೂ ಮಿಕ್ಕಿ ಸಾಗಿದ ವಾಗ್ವಿಲಾಸದ ಮುಂದೆ ಶರಣು ಶರಣು. ನನ್ನ ಅರ್ಥ ಒಂದೆರಡು ವಾಕ್ಯಕ್ಕೆ ನಿಂತಿತ್ತು! 'ಗಂಡನಾದವನ ಕರ್ತವ್ಯ'ದ ಕುರಿತು ಪ್ರಸ್ತಾಪ ಬಂದಾಗ, ತನ್ನ ನಿಜ ಜೀವನದ ಕೆಲವು ಘಟನೆಗಳನ್ನು ಥಳಕು ಹಾಕಿ ಸಾಮಗರು ಗೋಳೋ ಅತ್ತಿದ್ದರು. ಬಳಿಕ ಸಾವರಿಸಿಕೊಂಡು ಅರ್ಥ ಮುಂದುವರಿಸಿದ್ದರು. ಪಾತ್ರವಾಗಿ ನೋಡಿದರೆ ಪಾತ್ರಕ್ಕೆ ಉಚಿತವಾದ ಅರ್ಥಗಾರಿಕೆ.
                 ಮತ್ತೊಮ್ಮೆ ಉಡುಪಿ ರಾಜಾಂಗಣದಲ್ಲಿ ರಾಮಾಯಣ ಸರಣಿ ತಾಳಮದ್ದಳೆ. ಪ್ರಸಂಗ : ಶಬರಿ ಮೋಕ್ಷ. ಸಾಮಗರ 'ರಾಮ', ನನ್ನ ಪಾತ್ರ 'ಶಬರಿ'. ವೃದ್ಧಾಪ್ಯದ ಅಸಹಾಯಕತೆಯನ್ನು ಶಬರಿ ಪ್ರಕಟಿಸಿದಾಗ ಸಾಮಗರು ಫಕ್ಕನೆ ಮಧ್ಯದಲ್ಲಿ ತಾನು ಅರ್ಥವನ್ನು ಮುಂದುವರಿಸುತ್ತಾ ವೃದ್ಧಾಪ್ಯದ ಲಕ್ಷಣ, ಅದು ಅನುಭವಕ್ಕೆ ಬಂದಾಗ ಆಗುವ ಅನುಭವಗಳನ್ನು ಭಾವಪೂರ್ಣವಾಗಿ ಹೇಳುತ್ತಾ ಅತ್ತಿದ್ದರು. ಅಳುತ್ತಾ ಅರ್ಥ ಮುಂದುವರಿಸಿದ್ದರು. ನೋಡುಗರಿಗೆ ಅದು ಅಳುವಾಗಿ ಕಾಣಲಿಲ್ಲ. ಅದೊಂದು ಪಾತ್ರವಾಗಿ ಕಂಡಿತು.
                  ಆದರೆ ಅದು ಪಾತ್ರವನ್ನು ಅನುಭವಿಸಿದ ಕಣ್ಣೀರಲ್ಲ, ತನ್ನ ಬದುಕಿನ ಯಾವುದೋ ಘಟನೆಯನ್ನು ಎಣಿಸಿ ದುಃಖ ಉಮ್ಮಳಿಸಿ, ಅದುಮಿಟ್ಟುಕೊಳ್ಳಲಾಗದೆ ಅತ್ತ ಪರಿಯಿದೆಯಲ್ಲಾ, ನಿಜಕ್ಕೂ ದುಃಖದ ಕಡಲು. ಮರೆಯಲಾಗದ ದೃಶ್ಯ. ಕಣ್ಣೀರ ಹನಿಯೊಳಗೆ ಮಿಣುಕಿದ ವಾಗ್ವಿಲಾಸ. ಸಾಮಗರನ್ನು ನೆನೆಸಿಕೊಂಡಾಗಲೆಲ್ಲಾ ಈ ಘಟನೆ ಕಾಡುತ್ತದೆ.

(ಚಿತ್ರ : ಆಸ್ಟ್ರೋ ಮೋಹನ್)

No comments:

Post a Comment