Saturday, July 29, 2017

’ಶ್ರುತಿ ಸಿದ್ಧಿ’ಯ ಪುತ್ತೂರು ಗೋಪಣ್ಣ


 ಪುತ್ತೂರು ಗೋಪಾಲಕೃಷ್ಣಯ್ಯ (ಗೋಪಣ್ಣ)

ಪ್ರಜಾವಾಣಿಯ ದಧಿಗಿಣತೋ ಅಂಕಣ / 27-1-2017

              ಪುತ್ತೂರು ಗೋಪಾಲಕೃಷ್ಣಯ್ಯನವರು 'ಪುತ್ತೂರು ಗೋಪಣ್ಣ' ಎಂದೇ ಪರಿಚಿತರು. (ಜನನ 1901 - ಮರಣ 1973) ಇವರನ್ನು ನಾನು ನೋಡಿಲ್ಲ. ಆದರೆ ಹಿರಿಯ ಕಲಾವಿದರ ಮಾತಿನಲ್ಲಿ ಈ ಹೆಸರು ಮಿಂಚಿ ಮರೆಯಾಗುತ್ತಿದ್ದುವು. ದಕ್ಷಿಣ ಕನ್ನಡ ಜಿಲ್ಲಾ ಐದನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟವಾದ 'ಅಭಿಮಾನ' ಕೃತಿಯಲ್ಲಿ ಇವರ ಪರಿಚಯ ಬರೆಹವು ಸೆಳೆದಿತ್ತು. ದಾಖಲಾತಿ ವ್ಯವಸ್ಥೆಗಳು ಅತ್ಯಲ್ಪವಾಗಿದ್ದ ಕಾಲಘಟ್ಟದಲ್ಲಿನ ಇವರ ಬದುಕು ದಾಖಲಾಗಿಲ್ಲ.
               'ಏನಿವರ ಸಾಧನೆ'? ಕವಿಭೂಷಣ ವೆಂಕಪ್ಪ ಶೆಟ್ಟರು ಗೋಪಣ್ಣರನ್ನು ಸಂಮಾನಿಸುತ್ತಾ ಯಕ್ಷಗಾನದ ಚೆಂಡೆಯ ನಾದವನ್ನು ಪ್ರಥಮತಃ ವೈಭವೀಕರಿಸಿದವರು ಗೋಪಣ್ಣ ಹೇಳಿದ ಮಾತು ಉಲ್ಲೇಖನೀಯ. ಭಾಗವತಿಕೆಯೊಂದಿಗೆ ಮದ್ದಳೆಯ ನಾದಗಳತ್ತ ಒಲವಿದ್ದ ಕಾಲ. ವೀರರಸಕ್ಕೆ ಏರು ಸ್ಥಾಯಿಯ ಚೆಂಡೆಯ ಸ್ವರ ಮಿಳಿತವಾಗುತ್ತಿದ್ದುವಷ್ಟೇ. ಮದ್ದಳೆಯಂತೆ ಚೆಂಡೆಗೂ ನಾದತೆಯ ಸ್ಪರ್ಶವಿದ್ದುದು ಕಡಿಮೆ. ವಿವಿಧ ಮೇಳಗಳ ತಿರುಗಾಟ, ಹಿರಿಯ ಮದ್ಲೆಗಾರರ ಒಡನಾಟ ಮತ್ತು ರಂಗದ ಕುರಿತ ತೀಕ್ಷ್ಣ ಒಳತೋಟಿಯಿದ್ದ ಗೋಪಣ್ಣರಿಗೆ ಚೆಂಡೆಯ ಸ್ವರದಲ್ಲಿ ನಾದದ ಲೋಪವನ್ನು ಗುರುತಿಸಿದರು. ಕಾಯಕಲ್ಪ ಕೊಡುವ ಸಂಕಲ್ಪ.
              ಹಿರಿಯರ ಜಾಡನ್ನು ಸ್ಪರ್ಶಿಸುವಂತಿಲ್ಲ, ಪ್ರಶ್ನಿಸುವಂತಿಲ್ಲ. ಸಾಗಿ ಬಂದ ಪರಂಪರೆಗೆ ಹೊಸತನ್ನು ಲೇಪಿಸುವಂತಿಲ್ಲ. ತೀರಾ ಇಕ್ಕಟ್ಟಿನ ಮನಃಸ್ಥಿತಿ. ಹಿರಿಯರೊಂದಿಗೆ ಸಮಾಲೋಚನೆ. ನೆಡ್ಲೆ ನರಸಿಂಹ ಭಟ್, ದಿವಾಣ ಭೀಮ ಭಟ್, ಕುದ್ರೆಕೂಡ್ಲು ರಾಮ ಭಟ್, ಮಾಂಬಾಡಿ ನಾರಾಯಣ ಭಟ್, ಕುರಿಯ ವಿಠಲ ಶಾಸ್ತ್ರಿ, ದಾಮೋದರ ಮಂಡೆಚ್ಚ.... ಹೀಗೆ ಉದ್ಧಾಮರು ಗೋಪಣ್ಣರಿಗೆ ಪ್ರಿಯ. ಹತ್ತಿರದ ನಂಟು. ತನ್ನ ಮನಸ್ಸಿನ ತುಮುಲಕ್ಕೆ ಎಲ್ಲರ ಸಾಂತ್ವನ. ಉದ್ದೇಶಕ್ಕೆ ಸಹಮತ.
              ಆಜೂಬಾಜು 1940ರ ಇಸವಿ ಇರಬಹುದು. ಆಗಷ್ಟೇ ಪುತ್ತೂರಿನಲ್ಲಿ ಗೋಪಣ್ಣ ಚೆಂಡೆ-ಮದ್ದಳೆಗಳನ್ನು ಮನೆಯಲ್ಲೇ ತಯಾರಿಸುವ ಘಟಕವನ್ನು ಹೊಂದಿದ್ದರು. ಹೆಚ್ಚಿನ ಕಲಾವಿದರು ದಿನಪೂರ್ತಿ ಇವರಲ್ಲಿದ್ದು ಹರಟೆ ಹೊಡೆಯುವಷ್ಟು ಆಪ್ತತೆಯಿತ್ತು. ಒಂದಿವಸ ಮದ್ದಳೆಯ ಶ್ರುತಿಗೆ ಚೆಂಡೆಯ ನಾದವನ್ನು ಸಮನ್ವಯಗೊಳಿಸಿ ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ನುಡಿಸಿದರು. ಅಂದು ಅನೇಕ ಮಂದಿ ಹಿರಿಯರು ಕಲಾವಿದರಾಗಿದ್ದರು. ಹಿಮ್ಮೇಳದ ಬದಲಾದ ನಾದಕ್ಕೆ ಖುಷಿಪಟ್ಟರು. ಇದೇ ಸಮಾರಂಭದಲ್ಲಿ ವೆಂಕಪ್ಪ ಶೆಟ್ಟರು ಗೋಪಣ್ಣರನ್ನು ಸಂಮಾನಿಸಿದರು.
               ಆಗ ತುತ್ತಿಗೂ ತತ್ವಾರ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ತಾನದಲ್ಲಿ ವಾದನ ಸೇವೆಯ ವೃತ್ತಿಯಲ್ಲಿದ್ದರು. ಜತೆಗೆ ಚೆಂಡೆ-ಮದ್ದಳೆ ತಯಾರಿ. ತಲೆಗಿದ್ದರೆ ಕಾಲಿಗಿಲ್ಲ ಎನ್ನುವಂತಹ ಸ್ಥಿತಿಯಿತ್ತು. ಹೀಗಿದ್ದೂ ಮನೆಗೆ ಬಂದ ಕಲಾವಿದರಿಗೆಲ್ಲಾ ಹೊಟ್ಟೆ ತುಂಬಾ ಅನ್ನವನ್ನು ಬಡಿಸಿದ್ದನ್ನು ನೋಡಿದ್ದೇನೆ, ಎನ್ನುತ್ತಾರೆ ಅವರ ಪುತ್ರ ಪಿ.ವೆಂಕಟ್ರಮಣ. ಇವರು ಶಿಕ್ಷಣ ಇಲಾಖೆಯಲ್ಲಿ ಸಹ ನಿರ್ದೇಶಕರಾಗಿ ಈಗ ನಿವೃತ್ತ.
              ಎಪ್ಪತ್ತೊಂಭತ್ತರ ಹರೆಯದ ವೆಂಕಟ್ರಮಣ ನೆನಪಿಸುತ್ತಾರೆ, ಚೆಂಡೆಯ ಒಂದೊಂದು ಕಣ್ಣಿನ ನಾದವನ್ನು ಶ್ರುತಿಗೆ ಸರಿದೂಗಿಸುತ್ತಿದ್ದ, ಚೆಂಡೆಯ ಹಗ್ಗವನ್ನು ಬೆವರಿಳಿಸುತ್ತಾ ಬಿಗಿಯುತ್ತಿದ್ದುದನ್ನು, ಹಗ್ಗಕ್ಕಾಗಿ ಸೆಣಬನ್ನು ಹದ ಬರಿಸುತ್ತಿದ್ದ ತೀರ್ಥರೂಪರ ತನುಶ್ರಮ ಎಳೆಯವರಾದ ನಮಗೆ ಹಿರಿದಾಗಿ ಕಾಣಲಿಲ್ಲ. ಆದರೆ ಯಕ್ಷ ರಂಗವು ಅವರನ್ನು ಸ್ವೀಕರಿಸಿದ ರೀತಿ, ಕಲಾವಿದರು ತಮ್ಮ ಆಪ್ತತೆಯೊಳಗೆ ಸೇರಿಸಿದ ಕ್ಷಣಗಳು.. ಮತ್ತೆ ಮತ್ತೆ ಕಾಡುತ್ತದೆ. ಬಹುಶಃ ಆಗ ಚೆಂಡೆ ಬಾರಿಸುವಾಗ ಎಡದ ಕೈಯಲ್ಲಿ ಕೋಲಿಟ್ಟುಕೊಂಡು ಬಾರಿಸುವ ಪರಿಪಾಠವಿಲ್ಲ.  ಬದಲಿಗೆ ಕೈಯಲ್ಲೇ ಬಾರಿಸುತ್ತಿದ್ದರು. ತಂದೆಯವರು ಚಿಕ್ಕ ಕೋಲನ್ನು ಬಾರಿಸಲು ಬಳಸುತ್ತಿದ್ದರು. ಕುದ್ರೆಕೂಡ್ಲು ರಾಮ ಭಟ್ಟರು ಇದನ್ನು ಮೆಚ್ಚಿಕೊಂಡಿದ್ದ ನೆನಪು ನನ್ನಲ್ಲಿನ್ನೂ ಹಸಿಯಾಗಿದೆ. ಕೂಡ್ಲು ಶ್ಯಾನುಭೋಗರ ಬೆಂಬಲವೂ ಇತ್ತು.
              ಶ್ರುತಿಗೆ ಪರ್ಯಾಯ ಹೆಸರು ಗೋಪಣ್ಣ! ಕಲಾವಿದರೊಳಗೊಂದು ಅವ್ಯಕ್ತ ಗೌರವವಿತ್ತು. ಒಂದು ಛಾಪು ಹಾಕಿದರೆ ಸಾಕಂತೆ, ಯಾವ ಶ್ರುತಿ ಅಂತ ಫಕ್ಕನೆ ಗ್ರಹಿಸುವಷ್ಟು ಶ್ರುತಿ ಸಿದ್ಧಿ. ಶ್ರುತಿ ಮಾಡುವಾಗಲೂ ಅಷ್ಟೇ. ಕಪ್ಪು ಎರಡು, ಬಿಳಿ ಮೂರು... ಸಿದ್ಧಿಯ ಬಲದಿಂದ ಶ್ರುತಿ ಮಾಡುತ್ತಿದ್ದರು. ನಂತರವಷ್ಟೇ ಹಾರ್ಮೋನಿಯಂನೊಂದಿಗೆ ಪರೀಕ್ಷಿಸುತ್ತಿದ್ದರು. ಮದ್ಲೆಗಾರನಿಗೆ ಎಷ್ಟು ಅನುಭವ ಇದೆಯೆಂದು ತಿಳಿಯಲು ಮದ್ದಳೆ ಬಾರಿಸಬೇಕಾಗಿಲ್ಲ. ಛಾಪಿನ ದನಿಯಲ್ಲೇ ಅನುಭವ ಗುರುತಿಸುತ್ತಿದ್ದರು. ಎನ್ನುತ್ತಾರೆ ವೆಂಕಟ್ರಮಣ.
                ಯಕ್ಷಗಾನಕ್ಕೆ ದೀರ್ಘ ಪರಂಪರೆಯಿರುವ ಕೂಡ್ಲು - ಗೋಪಾಲಕೃಷ್ಣಯ್ಯನವರ ಹುಟ್ಟೂರು. ಕೂಡ್ಲು ಮೇಳದ ಚೆಂಡೆ-ಮದ್ದಳೆಯ ದನಿಯೊಂದಿಗೆ ಬಾಲ್ಯ. ಕೂಡ್ಲಿನ ಕೀರ್ತಿಶೇಷ ಸುಬ್ರಾಯ ಶ್ಯಾನುಭಾಗರು ಗೋಪಣ್ಣನವರ ಮಾರ್ಗದರ್ಶಕರು. ಹಿರಿಯರಾದ ಎಚ್ಚಣ್ಣ ಮದ್ಲೆಗಾರರ ಪ್ರಭಾವ. ಕೊರಕ್ಕೋಡು, ಇಚ್ಲಂಪಾಡಿ, ಕೂಡ್ಲು ಮೇಳಗಳಲ್ಲಿ ಮದ್ಲೆಗಾರರಾಗಿ ವ್ಯವಸಾಯ. ಚೆಂಡೆ, ಮದ್ದಳೆ ತಯಾರಿ ಕೆಲಸಗಳಿಗೆ ಕಾಸರಗೋಡಿನ ನಾಞಣ್ಣ ಎನ್ನುವವರು ಗುರುಗಳು. ಅಜ್ಜ ಲಕ್ಷ್ಮಣ ಮದ್ಲೆಗಾರ್, ದೊಡ್ಡಣ್ಣ ಈಶ್ವರ ಮದ್ಲೆಗಾರರ ಹಿನ್ನೆಲೆ. ಶಾಲಾ ಓದು ಕಡಿಮೆಯಿದ್ದರೂ ಬದುಕಿನ ಅನುಭವದ ಓದು ಅಪಾರ.
               ತೆಂಕುತಿಟ್ಟಿನ ಬಹುತೇಕ ಎಲ್ಲಾ ಮೇಳಗಳ ಚೆಂಡೆ-ಮದ್ದಳೆಗಳ ತಯಾರಿ ಇವರಲ್ಲಾಗುತ್ತಿದ್ದುವು. ಜೋಡಾಟದ ಸಂದರ್ಭದಲ್ಲಿ ಎರಡೂ ಮೇಳಗಳ ಹಿಮ್ಮೇಳ ಪರಿಕರಗಳನ್ನು ಇವರೇ ಸಿದ್ಧಪಡಿಸುತ್ತಿದ್ದರು. ಒಂದು ಚೆಂಡೆಯೋ, ಮದ್ದಳೆಯೋ ತಯಾರಾದರೆ ಹದಿನೈದು ರೂಪಾಯಿ ಸಂಭಾವನೆ ಸಿಕ್ಕಿದರೆ ಹೆಚ್ಚು. ಬದುಕಿನ ಇಳಿ ವಯಸ್ಸಿನಲ್ಲಿ ಮೇಳಗಳಿಗೆ ವಿದಾಯ ಹೇಳಿದ್ದರು. ಆದರೂ ಬಲಿಪ ನಾರಾಯಣ ಭಾಗವತರು (ಈಗಿನ ಬಲಿಪ ನಾರಾಯಣ ಭಾಗವತರ ಅಜ್ಜ) ಭಾಗವತಿಕೆಗಿದ್ದ ಮೇಳ ಊರಿಗೆ ಬಂದರೆ ಮೇಳದಲ್ಲಿ ಗೋಪಣ್ಣರಿಗೆ ಮದ್ದಳೆ ಕಾಯುತ್ತಿತ್ತು! ಬಲಿಪರ ಪದ್ಯಕ್ಕೆ ಮದ್ದಳೆ ನುಡಿಸುವುದು ದೊಡ್ಡ ಹೆಗ್ಗಳಿಕೆಯ ವಿಚಾರ. ಬಲಿಪರಿಗೂ ಖುಷಿಯಿತ್ತು. ಗೋಪಣ್ಣರೂ ಸಂತೃಪ್ತರಾಗುತ್ತಿದ್ದರು.
               ಆಗೆಲ್ಲಾ ಟಿಕೆಟಿನ ಟೆಂಟಿನ ಮೇಳ. ಟಿಕೇಟ್ ಇಲ್ಲದೆ ಯಾರನ್ನೂ ಒಳ ಬಿಡುತ್ತಿರಲಿಲ್ಲ. ನನಗೆ ಮಾತ್ರ ರಿಯಾಯಿತಿಯಿತ್ತು. ಗೋಪಣ್ಣನ ಮಗ ಅಂದರೆ ಸಾಕು, ಎಲ್ಲಾ ಮೇಳದವರು ಒಳಬಿಡುತ್ತಿದ್ದರು. ಎಷ್ಟೋ ಆಟವನ್ನು ಹೀಗೆನೇ ನೋಡಿದ್ದೇನೆ, ಎನ್ನುತ್ತಾರೆ ವೆಂಕಟ್ರಮಣ. ಗೋಪಣ್ಣರ ಹಿರಿ ಮಗ ಟಿ.ಪಿ.ಶ್ರೀಧರ ರಾವ್. ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರು. ಎರಡನೆಯವರು 'ಚೆಂಡೆ ವಾಸಣ್ಣ' ಎಂದೇ ಪರಿಚಿತರಾದ ವಾಸುದೇವ ರಾವ್, ನಂತರದವರು ವೆಂಕಟ್ರಮಣ, ಪಿ.ಜಿ.ಚಂದ್ರಶೇಖರ ರಾವ್, ಮತ್ತು ಪಿ.ಜಿ.ಜಗನ್ನಿವಾಸ ರಾವ್. ಎಲ್ಲರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಲೆಯ ಸ್ಪರ್ಶವಿದೆ.
               ಯಕ್ಷಗಾನದ ವ್ಯವಸಾಯ ಮತ್ತು ಅದಕ್ಕೆ ಸಂಬಂಧಿಸಿದ ಹಿಮ್ಮೇಳ ಪರಿಕರಗಳ ತಯಾರಿಗಳು ಗೋಪಣ್ಣರಿಗೆ ಆರಾಧನೆ. ಹೇಗೋ ಬದುಕು ಸಾಗಿಸಬೇಕೆನ್ನುವ ಇರಾದೆಯವರಲ್ಲ. ತನ್ನ ಇತಿ-ಮಿತಿಗಳ ಸ್ಪಷ್ಟ ಜ್ಞಾನದೊಳಗೆ ಬದುಕಿನ ರಿಂಗಣ. ಪ್ರಸಿದ್ಧಿಯು ಹೆಸರಿನೊಂದಿಗೆ ಹೊಸೆದಿಲ್ಲ. ಹೀಗೆ ಹೊಸೆದ ಪ್ರಸಿದ್ಧಿಗಳ ವಿಶೇಷಣಗಳ ಆಯುಷ್ಯ ಕ್ಷಣಿಕ. ಗೋಪಣ್ಣರ ಸಿದ್ಧಿಯ ಗಟ್ಟಿತನಕ್ಕೆ ಜ್ಞಾನದ ಗಾಢತೆ ಇದ್ದುದರಿಂದ ಅವರು ಮರಣಿಸಿ ನಾಲ್ಕು ದಶಕಗಳ ಬಳಿಕವೂ ಪ್ರಸ್ತುತರಾಗುತ್ತಾರೆ 

No comments:

Post a Comment