Monday, July 31, 2017

ಶುರುವಾಗಿದೆ, 'ಗುಣಮಟ್ಟ'ದ ಹುಡುಕಾಟ

ಪ್ರಜಾವಾಣಿಯ 'ದಧಿಗಿಣತೋ' ಅಂಕಣ  / 24-2-2017

             ಮಿತ್ರ ಪ್ರಕಾಶ್ ಕುಮಾರ್ ಕೊಡೆಂಕಿರಿಯವರು ಹನ್ನೆರಡು ಅಡಕ ತಟ್ಟೆ(ಸೀಡಿ)ಯಿರುವ ಭದ್ರ ಹೊದಿಕೆಯ ಪ್ಯಾಕೆಟ್ ನೀಡಿದರು. ಅವೆಲ್ಲಾ ಖ್ಯಾತ ಗಾಯಕರ ಸಂಗೀತದ ಡಿವಿಡಿಗಳು. ಇಂಡಿಯಾ ಟುಡೇ ಬಳಗದ ನಿರ್ಮಾಣ. ವಿಶೇಷ ರಿಯಾಯಿತಿಯಲ್ಲಿ ಓದುಗರಿಗಾಗಿ ವಿನ್ಯಾಸಿಸಿದೆ. ಡಿವಿಡಿಯ ಗುಣಮಟ್ಟ, ಪ್ಯಾಕೆಟ್, ನೋಟಗಳು ಆಕರ್ಷಕ. ದರವೂ ಹೇಳುವಷ್ಟು ಕಡಿಮೆಯೇನಲ್ಲ. ಗುಣಮಟ್ಟದ ಹಿನ್ನೆಲೆಯಲ್ಲಿ ಹೆಚ್ಚೂ ಅಲ್ಲ. ಇದನ್ನು ನೋಡಿದಾಗ ಯಕ್ಷಗಾನದ ಸಿಡಿ, ಡಿವಿಡಿಗಳು ಜನರನ್ನು ಗಾಢವಾಗಿ ಸೆಳೆಯುವಲ್ಲಿ ಎಲ್ಲಿ ಸೋತಿವೆ? ಹಿರಿಯ ಕಲಾವಿದರು ಭಾಗವಹಿಸಿದ ಕೂಟ/ಆಟದ ಧ್ವನಿಮುದ್ರಣದ ದಾಖಲಾತಿಗಳು ಎಲ್ಲಿವೆ? ಇದ್ದರೂ ಅಲ್ಲೋ ಇಲ್ಲೋ ಕೆಲವು ಸಂಗ್ರಾಹಕರಲ್ಲಿ ಭದ್ರವಾಗಿವೆ! ಇವೆಲ್ಲಾ ಕೇಳುಗರಿಗೆ ಮರೀಚಿಕೆ.
               ಧ್ವನಿಸುರುಳಿಗಳ ಯಶೋಯಾನದ ಬಳಿಕ ಅಡಕ ತಟ್ಟೆಗಳ ಪರ್ವ ಶುರುವಾಯಿತು. ಆರಂಭದ ದಿವಸಗಳಲ್ಲಿ ಒಂದು ಸೀಡಿ ಖರೀದಿಸುವುದೆಂದರೆ ತೀರಾ ದುಬಾರಿ. ಅದನ್ನು ಹೊಂದುವುದೂ ಪ್ರತಿಷ್ಠೆ.  ಬರಬರುತ್ತಾ ಅವುಗಳ ದರವು ಇಪ್ಪತ್ತೋ ಮೂವತ್ತೋ ರೂಪಾಯಿ ತನಕ ಕುಸಿಯಿತು. ವಿವಿಧ ಕಂಪೆನಿಗಳು ಧ್ವನಿಸುರುಳಿಗಳನ್ನು ನಿರ್ನಾಣ ಮಾಡುತ್ತಿದ್ದುವು. 'ಸಂಗೀತ'ದಂತಹ ಕಂಪೆನಿಗಳು ಧ್ವನಿಸುರುಳಿಗಳ ತಯಾರಿಯಲ್ಲಿ ಮೇಲ್ಮೆ ಸಾಧಿಸಿದ ದಿನಮಾನಗಳೀಗ ಭೂತಕಾಲಕ್ಕೆ ಸಂದುಹೋಗಿವೆ. ಕ್ರಮೇಣ ವೈಯಕ್ತಿಕವಾಗಿ ಹಲವು ನಿರ್ಮಾಪಕರು ಸೃಷ್ಟಿಯಾದರು. ಧ್ವನಿಸುರುಳಿಗಳ  ತಯಾರಿಯಲ್ಲಿದ್ದ ಗುಣಮಟ್ಟದ ಕಾಳಜಿಗಳು ಸೀಡಿಗಾಗುವಾಗ ಕುಸಿತ ಕಂಡಿತ್ತು. 
                 ಬಹುಶಃ ಆಧುನಿಕ ತಂತ್ರಜ್ಞಾನಗಳು ಧ್ವನಿಸುರುಳಿಗಳ ಮೂಲಕ ಪ್ರವೇಶವಾದುವು. ಮನೆಮನೆಯಲ್ಲಿ ಟೇಪ್ರೆಕಾರ್ಡರ್ಗಳು ಮನೆಮಾಡಿದುವು. ಜತೆಜತೆಗೆ ಹೊಸ ಹೊಸ ಧ್ವನಿಸುರುಳಿಗಳು ಮಾರುಕಟ್ಟೆಗೆ ಬಂದುವು. ಕೊಳ್ಳುಗಳ ಸಂಖ್ಯೆ ವೃದ್ಧಿಯಾಯಿತು. ಸಮಾರಂಭಗಳಲ್ಲಿ ಯಕ್ಷಗಾನದ ಧ್ವನಿಸುರುಳಿಯನ್ನು ಕೇಳಿಸುವುದು ಅಭಿಮಾನದ ವಿಚಾರವಾಯಿತು.  ನಿಧಾನಕ್ಕೆ ಈ ಮನಃಸ್ಥಿತಿ ಹಬ್ಬಿತು. ಯಾವಾಗ ಬೇಡಿಕೆ ಹೆಚ್ಚಾಯಿತೋ ಕಂಪೆನಿಯ ಹೊರತಾದ ಚಿಕ್ಕಚಿಕ್ಕ ನಿರ್ಮಾಾತೃಗಳು ಹುಟ್ಟಿಕೊಂಡರು. ತಂತಮ್ಮ ಅಭಿಮಾನಿ ಕಲಾವಿದರ ಸಂಯೋಜನೆಯಲ್ಲಿ ಧ್ವನಿಸುರುಳಿಗಳು ತಯಾರಾದುವು. ಯಾವ್ಯಾವುದೋ ಕಥಾನಕಗಳು ರಚನೆಯಾದುವು. 'ಗುಣಮಟ್ಟ' ಎನ್ನುವುದು ಶಬ್ದಕೋಶದಲ್ಲಿ ಉಳಿದುವು!   ಕೊನೆಕೊನೆಗೆ ಧ್ವನಿಸುರುಳಿಗಳ ತಯಾರಿಯಲ್ಲಿ ಲಾಭವಿದೆಯೆಂದು ಗ್ರಹಿಸಿದ ಕಲಾವಿದರೇ ಕ್ಯಾಸೆಟ್ಟಿನ ನಿರ್ಮಾತೃಗಳಾದರು.
                 ಇದೇ ಪಾಡು ಅಡಕ ತಟ್ಟೆ ಯಾ ಸೀಡಿಗಳದ್ದು ಕೂಡಾ. ವೈಯಕ್ತಿಕ ಆಸಕ್ತಿಯಿಂದ ಯಕ್ಷಗಾನದ ನೂರಾರು ಸೀಡಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟವು. ಸೀಡಿ ತಯಾರಿಯಲ್ಲಿ ಕಲಾವಿದರು ಆಸಕ್ತರಾದರು. ಅಭಿಮಾನಿ ಪ್ರಭಾವವು ಸೀಡಿ ತಯಾರಿಯಲ್ಲೂ ನುಸುಳಿದುವು. ಅಭಿಮಾನಿಗಳ ವ್ಯಾಪ್ತಿಯಲ್ಲಿ ಸೀಡಿಗಳು ಕೂಡಾ ಸೀಮಿತ ಚಾನೆಲ್ಲಿನಲ್ಲಿ ಪ್ರಚಾರವಾದುವು. ಅಭಿಮಾನದ ಪ್ರಖರತೆ ಮತ್ತು ಹೊಗಳಿಕೆಯ ಪರಾಕಾಷ್ಠೆಯ ಮುಂದೆ ಗುಣಮಟ್ಟಗಳು ಮಂಡಿಯೂರಿದುವು. ಬಹುತೇಕ ಕಲಾವಿದರು ಬಿಡುವಿನ ಅವಧಿಯಲ್ಲಿ ಸೀಡಿಗಳ ಮಾರಾಟವನ್ನು ಮಾಡಿದುದನ್ನು ನೋಡಿದ್ದೇನೆ. ತಪ್ಪಲ್ಲ, ಬಿಡಿ.
              ಆಟ ನೋಡುವ ಅಭಿಮಾನಿ ಚೌಕಿಗೆ ಹೋಗಿ ಕಲಾವಿದರನ್ನು ಮಾತನಾಡಿಸುವುದು ಕಲಾವಿದರ ಮೇಲಿನ ಗೌರವ. ನಿಜ ಅಭಿಮಾನಿಯ ಅಂದರೆ 'ಯಕ್ಷಗಾನದ ಅಭಿಮಾನಿ'ಯ ಇಂತಹ ವರ್ತನೆಯನ್ನು ಹಗುರವಾಗಿ ಕಂಡವರ ಹಲವರ ಪರಿಚಯ ನನಗಿದೆ. ತನ್ನ ಸಂಯೋಜನೆಯಲ್ಲಿ ಸಿದ್ಧವಾದ ಸೀಡಿಯನ್ನು ಬಲವಂತದಿಂದ ಅಭಿಮಾನಿಯ ಕೈಗಿಡುವ ಮಾರಾಟ ತಂತ್ರಕ್ಕೆ ಅಭಿಮಾನಿ ಮೊದಮೊದಲು ಒಗ್ಗಿಕೊಂಡರೂ, ಬಳಿಕ ರೋಸಿ ಹೋಗಿದ್ದಾರೆ. ಇದರಿಂದಾಗಿ ಚೌಕಿಗೆ ಹೋಗದ ಎಷ್ಟೊ ಮಂದಿಗಳು ಇದ್ದಾರೆ. ಅಲ್ಲಿಗೆ ಹೋದರೆ ಸಾಕು, ನೂರೋ ಇನ್ನೂರೋ ರೂಪಾಯಿ ಕಿಸೆಯಿಂದ ಜಾರಿದಂತೆ! ಖರೀದಿಸುವವರ ಆಸಕ್ತಿ ಗಮನಿಸಿ ಸೀಡಿಯನ್ನು ಮಾರಾಟ ಮಾಡಿದರೆ ಓಕೆ. ಆದರೆ ಅಭಿಮಾನಿಯ ಅಭಿಮಾನವನ್ನು ಎಷ್ಟೋ ಮಂದಿ ಸೀಡಿ ಮಾರಾಟಪ್ರಿಯ ಕಲಾವಿದ ಕೆಣಕಿದುದನ್ನು, ಹಗುರವಾಗಿ ಕಂಡುದನ್ನು ನೋಡಿ ಮರುಗಿದ್ದೇನೆ. ಸೀಡಿ ಮಾರಾಟಕ್ಕಿದ್ದಷ್ಟು ಆಸಕ್ತಿಯು ರಂಗಾಭಿವ್ಯಕ್ತಿಯಲ್ಲಿ ಇರುತ್ತಿದ್ದರೆ ಪ್ರದರ್ಶನಕ್ಕೂ ನ್ಯಾಯ ಸಲ್ಲಿಕೆಯಾಗುತ್ತಿತ್ತಲ್ವಾ.
                  ಇಷ್ಟೆಲ್ಲಾ ಹೇಳುವಾಗ ಸಹಜವಾಗಿ ಸಂಬಂಧಪಟ್ಟ ಕಲಾವಿದರಿಗೆ ನೋವಾಗುತ್ತದೆ, ಅದು ನಮ್ಮ ವೈಯಕ್ತಿಕ. ಅದನ್ನು ಹೇಳಲು ನೀವಾರು? ನಿಮಗೆ ಬೇಕಾದರೆ ಫ್ರೀ ಕೊಡ್ತೇನೆ, ಎಂದು ಉಡಾಫೆ ಮಾತನಾಡಿದ ಮನಸ್ಸುಗಳ ಮಾತಿನ್ನೂ ಹಸಿಯಾಗಿದೆ. "ಇವರೆಲ್ಲಾ ಹವ್ಯಾಸಿಗಳು. ನಮ್ಮ (ವೃತ್ತಿಪರ) ಕುರಿತು ಮಾತನಾಡಲು ಯೋಗ್ಯತೆಯಿಲ್ಲ. ಇವರು ಎಷ್ಟು ವರುಷ ಮೇಳದಲ್ಲಿ ತಿರುಗಾಟ ಮಾಡಿದ್ದಾರೆ," ಎನ್ನುವ ಮಾತನ್ನು ಕೇಳಿದ್ದೇನೆ. ಕಲಾವಿದ ಮಾರಾಟ ಮಾಡುವುದು ತಪ್ಪಲ್ಲ. ಅದು ಹೊಟ್ಟೆಪಾಡಿನ ವಿಚಾರ. ಆದರೆ ತಾನು ಅಭಿಮಾನಿಗೆ ನೀಡುವ ಸೀಡಿಗಳ ಗುಣಮಟ್ಟ ಹೇಗಿದೆ? ಅವರು ಯಾವ ಕಲಾವಿದರನ್ನು ಅಪೇಕ್ಷೆ ಪಡುತ್ತಾರೆ? ಆವರಿಗೆ ಆಸಕ್ತಿ ಇದೆಯಾ? ಮೊದಲಾದ ಕನಿಷ್ಠ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ.
                  ಈಗೀಗ ಯಕ್ಷಗಾನದ ಪ್ರದರ್ಶನಗಳು ಅದ್ದೂರಿಯಾಗಿ ನಡೆಯುತ್ತವೆ. ವೀಡಿಯೋ ಚಿತ್ರೀಕರಣ ಇಲ್ಲದ ಆಟಗಳೇ ಕಡಿಮೆ. ಕ್ರಮೇಣ ಈ ಪ್ರದರ್ಶನದ ಚಿತ್ರೀಕರಣವು ಸೀಡಿ/ವಿಸಿಡಿ ರೂಪದಲ್ಲಿ ಲಭ್ಯವಾಗುತ್ತದೆ. ಅದಕ್ಕಿಂತಿಷ್ಟು ಮೊತ್ತವನ್ನೂ ನಿಗದಿ ಪಡಿಸಲಾಗುತ್ತದೆ. ತಪ್ಪಲ್ಲ ಬಿಡಿ, ಅದು ಅವರವರ ವಿವೇಚನೆಗೆ ಬಿಟ್ಟ ವಿಚಾರ. ಒಂದು ಗಂಟೆಯ ಸೀಡಿಯನ್ನೇ ಎಷ್ಟು ಮಂದಿ ಪೂರ್ತಿಯಾಗಿ ನೋಡುತ್ತಾರೆ, ಅಂತಹುದಲ್ಲಿ ಇಡೀ ರಾತ್ರಿಯ ಆರೇಳು ಗಂಟೆಯದನ್ನು ಪೂರ್ತಿಯಾಗಿ ಮನಸಾ ನೋಡುತ್ತಾರೆ ಎನ್ನುವುದರಲ್ಲಿ ನನಗಂತೂ ನಂಬುಗೆಯಿಲ್ಲ. ಇಂತಹ ಸೀಡಿಗಳನ್ನು ಆಸಕ್ತರು ಅಪೇಕ್ಷೆ ಪಟ್ಟರೆ ನೀಡಲಿ. ಆದರೆ ಬಲವಂತದಿಂದ ನಾನೂರೋ, ಐನೂರೋ ರೂಪಾಯಿಗೆ ಮಾರಾಟ ಮಾಡುವುದು, ಖರೀದಿಸುವವನಿಗೆ ಹೊರೆ. ನಾನು ಇಂತಹ ಒಂದೆರಡು ಘಟನೆಗಳ ಫಲಾನುಭವಿ. ಸರಿ, ನೀಡಿದ ನಾಲ್ಕೋ ಐದೋ ಡಿವಿಡಿಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ಒಂದೆರಡು ಮುಷ್ಕರ ಹೂಡದೇ ಇರುವುದೇ ಕಡಿಮೆ.
                    ಈಗಂತೂ ತಂತ್ರಜ್ಙಾನ ನಾಗಾಲೋಟದಲ್ಲಿದೆ. ಸೀಡಿ, ಡಿವಿಡಿಯಿಂದ 'ಪೆನ್ಡ್ರೈವ್'ಗೆ ಇಳಿದಿದೆ. ಹಳತನ್ನು ಪೆನ್ಡ್ರೈವಿಗೆ ಇಳಿಸಿಕೊಂಡೋ, ಕಾರ್ಯಕ್ರಮದ ನೇರ ಧ್ವನಿಮುದ್ರಣವನ್ನು ದಾಖಲಿಸಿಕೊಂಡು ಕೇಳುವ ದೊಡ್ಡ ವರ್ಗವಿದೆ. ಉತ್ತಮ ಕಲಾವಿದರ ಸಂಯೋಜನೆಯ ಆಟ, ಕೂಟಗಳನ್ನು ನೋಡುವ ಸಹೃದಯಿ ಪ್ರೇಕ್ಷಕರಿದ್ದಾರೆ. ಯಾವುದೇ ಅಭಿಮಾನದ, ಅಭಿಮಾನಿ ಕಲಾವಿದರ ಹಂಗಿಲ್ಲದೆ ಯಕ್ಷಗಾನವನ್ನು ನೋಡುವ ಅಜ್ಞಾತ ಪ್ರೇಕ್ಷಕರಿದ್ದಾರೆ. ಅಂತಹವರು ಉತ್ತಮ ಕಾರ್ಯಕ್ರಮಗಳ ಹುಟುಕಾಟದಲ್ಲಿದ್ದಾರೆ. ಗುಣಮಟ್ಟದ ಧ್ವನಿಸುರುಳಿ, ಸೀಡಿಗಳನ್ನು ಅರಸುವ ಯಕ್ಷಪ್ರಿಯರ ಗಡಣ ದೊಡ್ಡದಿದೆ.
                  ಇಂತಹವರಿಗೆ ಪೂರೈಸುವುದಕ್ಕಾಗಿಯೇ ಗುಣಮಟ್ಟದ ಸೀಡಿ/ಡಿವಿಡಿಗಳ ನಿರ್ಮಾಣ ಯಾಕೆ ಆಗುತ್ತಿಲ್ಲ? ಲೇಖನಾರಂಭದಲ್ಲಿ ಉಲ್ಲೇಖಿಸಿದಂತೆ ಹತ್ತೋ ಹನ್ನೆರಡು ಸಿಡಿಗಳ ಪ್ಯಾಕೆಜ್ ಮಾಡಿದರೆ ದರದ ಬಗ್ಗೆ ತಲೆಕೆಡಿಸಿಕೊಳ್ಳದೆ ಖರೀದಿಸುವವರಿದ್ದಾರೆ. ಶೇಣಿ, ಸಾಮಗ, ತೆಕ್ಕಟ್ಟೆ, ಕುಂಬಳೆ, ಸಿದ್ಧಕಟ್ಟೆ.. ಇಂತಹ ಕಲಾವಿದರ ಪ್ಯಾಕೇಜ್ ಪ್ಯಾಕೆಟನ್ನು ಸಿದ್ಧಪಡಿಸಬಹುದು. ಇಂಡಿಯ ಟುಡೇಯವರ ಸಂಗೀತದ ಈ ಪ್ಯಾಕೆಜ್ ಸೀಡಿಗಳ ಗುಚ್ಛ ಯೋಜನೆಯನ್ನು ಯಕ್ಷಗಾನ ಕ್ಷೇತ್ರ ಸ್ವೀಕರಿಸಬಹುದು. ಹತ್ತಿಪ್ಪತ್ತು ವರುಷಗಳ ಹಿಂದಿನ ಕ್ಯಾಸೆಟ್ಟನ್ನು ಸೀಡಿ ಮಾಡಿ ಕೇಳುವ ಪ್ರೇಕ್ಷಕರು ಈಗಲೂ ಇದ್ದಾರೆ ಎಂದರೆ ಇಂತಹ ಪ್ಯಾಕೆಜನ್ನು ಸ್ವೀಕರಿಸುವುದರಲ್ಲಿ ಎರಡು ಮಾತಿಲ್ಲ. ವಾಟ್ಸಪ್ ಗುಂಪುಗಳಲ್ಲಿ ಆಗೊಮ್ಮೆ ಈಗೊಮ್ಮೆ ಎರಡು ದಶಕಗಳ ಹಿಂದಿನ ಧ್ವನಿಸುರುಳಿಗಳನ್ನು ಹೊಸ ತಂತ್ರಜ್ಞಾನಕ್ಕೆ ಬದಲಾಯಿಸಿ ಹರಿಯಬಿಡುವುದನ್ನು ನೋಡಿದರೆ ಪ್ಯಾಕೇಜ್ ಪ್ಯಾಕೆಟ್ಟಿನ ಯೋಜನೆ ಯಶವಾಗಬಹುದು. ಅದನ್ನು ಉಡುಗೊರೆಯ ಸಾಧನವಾಗಿಯೂ ಬಳಸಬಹುದು.


No comments:

Post a Comment