Monday, July 31, 2017

ಪಾತ್ರಗಳಿಗೆ ಮಾನ ತಂದ ಸ್ತ್ರೀಪಾತ್ರಧಾರಿ - ಕೊಕ್ಕಡ ಈಶ್ವರ ಭಟ್


ಕೊಕ್ಕಡ ಈಶ್ವರ ಭಟ್ಟರ 'ದಾಕ್ಷಾಯಿಣಿ' ಮತ್ತು ಪೆರುವೋಡಿ ನಾರಾಯಣ ಭಟ್ಟರ 'ವಿಪ್ರ' - (ಪ್ರಸಂಗ - ದಕ್ಷಾಧ್ವರ)

ಪ್ರಜಾವಾಣಿಯ 'ದಧಿಗಿಣತೋ' ಅಂಕಣ / 3-2-2017

            "ಮುಖದಲ್ಲಿ ನೆರಿಗೆ ಕಟ್ಟಿದರೆ ಮತ್ತೆ ಸ್ತ್ರೀಪಾತ್ರ ಮಾಡಬಾರದು. ತನಗೆ ವಯಸ್ಸಾಯಿತು ಎನ್ನುವ ಮಾನಸಿಕ ಸ್ಥಿತಿಯು ಆತನನ್ನು ರಂಗದಲ್ಲಿ ಯಶಸ್ವಿಗೊಳಿಸದು. ಆತ ಎಷ್ಟೇ ಪ್ರಸಿದ್ಧನಾದರೂ ಆತನ ಅಭಿವ್ಯಕ್ತಿಯು ಪ್ರೇಕ್ಷಕರಿಗೆ ಇಷ್ಟವಾಗದು. ಅಭಿಮಾನದಿಂದ ಒಪ್ಪಿಕೊಳ್ಳುತ್ತಾರಷ್ಟೇ," ಮಾತಿನ ಮಧ್ಯೆ ಹಿರಿಯ ಸ್ತ್ರೀಪಾತ್ರಧಾರಿ ಕೊಕ್ಕಡ ಈಶ್ವರ ಭಟ್ಟರು ತನ್ನನ್ನೇ ಟಾರ್ಗೆಟ್ ಮಾಡುತ್ತಾ ಮಾತು ಮುಂದುವರಿಸುತ್ತಿದ್ದರು. 'ತನಗೆ ವಯಸ್ಸಾಯಿತು' ಎನ್ನುವಂತಹ ಸ್ವ-ಪ್ರಜ್ಞೆಯು ರಂಗಾನುಭವದಿಂದ ಪಕ್ವವಾದಾಗ ಮಾತ್ರ ಕಲಾವಿದನ ಅನುಭವಕ್ಕದು ನಿಲುಕುವುದು. ಆದರೆ ಈಶ್ವರ ಭಟ್ಟರು ಎಪ್ಪತ್ತೈದರ ಅಂಚು ದಾಟಿದರೂ ಅವರ ವೇಷವನ್ನು ಈಗಲೂ ರಂಗವು ಒಪ್ಪುತ್ತದೆ.
            2016 ದಶಂಬರ 25 - ಉಪ್ಪಿನಂಗಡಿ ಸನಿಹದ ತಾಳ್ತಜೆಯಲ್ಲಿ ಜರುಗಿದ 'ಹೇಮಂತ ಹಬ್ಬ'ದಲ್ಲಿ ಜರುಗಿದ 'ರತಿ ಕಲ್ಯಾಣ' ಪ್ರಸಂಗದಲ್ಲಿ ಭಟ್ಟರು 'ದ್ರೌಪದಿ'ಯಾಗಿ ಇಳಿ ವಯಸ್ಸಲ್ಲೂ ನಯ ನಾಜೂಕಿನ ಸ್ತ್ರೀಪಾತ್ರಧಾರಿಯಾಗಿ ಮೆರೆದರು. ಅವರ ಜತೆಗೆ ಪಾತ್ರ ಮಾಡುವ ಅವಕಾಶ ಪ್ರಾಪ್ತವಾದರೂ ಭಟ್ಟರ ಮೇರು ವ್ಯಕ್ತಿತ್ವದ ಮುಂದೆ ಕುಬ್ಜನಾಗಿದ್ದೆ. ಜತೆಗೆ ಭಟ್ಟರೊಂದಿಗೆ ವೇಷ ಮಾಡಿದ ಹೆಮ್ಮೆಯೂ! ಈ ಹೆಮ್ಮೆಯು ಕೋಡು ಮೂಡಿಸಲಿಲ್ಲ. ಬದಲಿಗೆ ನನಗೆ ಬಾಗಲು ಕಲಿಸಿತು. ಕಳೆದ ವರುಷವೂ ದಮಯಂತಿ ಪುನರ್ಸ್ವಯಂವರ ಪ್ರಸಂಗದಲ್ಲಿ 'ಚೇದಿ ರಾಣಿ'ಯಾಗಿ ಹಳೆಯ ನೆನಪನ್ನು ರಂಗದಲ್ಲಿ ದಾಖಲಿಸಿದ್ದರು. ಅಂದು ಎಂ.ಕೆ.ರಮೇಶ ಆಚಾರ್ಯರು 'ದಯಮಂತಿ'ಯಾಗಿ ಕೊಕ್ಕಡದವರಿಗೆ ಸಾಥ್ ಆಗಿದ್ದರು.
              "ರಂಗದಲ್ಲಿ ಕಸುಬು ಮಾಡುವ ಕಲಾವಿದನಿಗೆ ತನ್ನ ಪಾತ್ರ ನಿರ್ವಹಣೆಯಲ್ಲಿ 'ತೃಪ್ತಿ' ಬೇಕು. ಸ್ತ್ರೀಪಾತ್ರಗಳಿಗೆ ರಂಗದಲ್ಲಿ ಅವಕಾಶ ಹೆಚ್ಚಿದ್ದಾಗ ಕಸುಬಿನಲ್ಲಿ ತೃಪ್ತಿ ಸಹಜವಾಗಿ ಬರುತ್ತದೆ. ಬೆಳಗ್ಗಿನವರೆಗೆ ಆಗಾಗ್ಗೆ ಬಂದು ಮರೆಯಾಗುವ ಸ್ತ್ರೀಪಾತ್ರಗಳು ರಂಗದಲ್ಲಿ ಮೆರೆಯುವುದಿಲ್ಲ. ಆತನಿಂದ ಉತ್ತಮ ಅಭಿವ್ಯಕ್ತಿಯನ್ನು ನಿರೀಕ್ಷಿಸುವಂತಿಲ್ಲ. ಕಲಾವಿದನನ್ನು ಪ್ರೇಕ್ಷಕ ಬಹುಬೇಗ ಮರೆಯುತ್ತಾನೆ," ಎಂನ್ನುತ್ತಾ ಕಳೆದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾರೆ.
              ಎಪ್ಪತ್ತೈದರ ಹರೆಯದ ಈಶ್ವರ ಭಟ್ಟರು ಅರ್ಧ ಶತಮಾನಕ್ಕೂ ಮಿಕ್ಕಿ ರಂಗದಲ್ಲಿ ತರುಣಿಯಾಗಿದ್ದಾರೆ. 'ಮೋಹಿನಿ'ಯಿಂದ 'ಚಂದ್ರಮತಿ' ತನಕ. ಒಂದು ಕಾಲಘಟ್ಟದ ಪ್ರದರ್ಶನಗಳನ್ನು ನೆನಪಿಸಿಕೊಂಡಾಗ ನಿವೃತ್ತಿಯಾಗುವಲ್ಲಿಯ ತನಕವೂ ಇವರ ಪಾತ್ರಾಭಿವ್ಯಕ್ತಿಯಲ್ಲಿ 'ಪಾತ್ರದ ಹಿರಿತನ'ದ ಗಟ್ಟಿತನವಿದ್ದುದನ್ನು ಗಮನಿಸಬಹುದು. ಗಟ್ಟಿ ಸಂಪನ್ಮೂಲವನ್ನು ಹೊಂದಿದ ಅನುಭವಿಗಳ ಮಧ್ಯದಲ್ಲಿ ಬೆಳೆದ ಪರಿಣಾಮ; ಈಗಲೂ ಕೊಕ್ಕಡದವರನ್ನು ನೆನಪಿಸಿಕೊಡರೆ ಸಾಕು, 'ದಾಕ್ಷಾಯಿಣಿ, ಮಾಯಾ ಶೂರ್ಪನಖಿ' ಪಾತ್ರಗಳು ಮಿಂಚುತ್ತವೆ.
               ಓದಿದ್ದು ಆರನೇ ತರಗತಿ. ಕುಡಾಣ ಗೋಪಾಲಕೃಷ್ಣ ಭಟ್ಟರಿಂದ ನಾಟ್ಯಾಭ್ಯಾಸ. ಒಂದಷ್ಟು ಕಾಲ ಭರತನಾಟ್ಯದ ಕಲಿಕೆ. ಮಧ್ಯೆ ಬಡಗುತಿಟ್ಟಿನ ಹೆಜ್ಜೆಗಳ ಅಭ್ಯಾಸ. ಮುಂದೆ ಕೆರೆಮನೆ ಮೇಳದಲ್ಲಿ ಒಂದು ವರುಷದ ತಿರುಗಾಟ. ಬಡಗು ಹಜ್ಜೆಗಳಿಗೆ ದಯಾನಂದ ನಾಗೂರು ಮತ್ತು ಮೊಳಹಳ್ಳಿ ಕೃಷ್ಣ ಇವರಿಗೆ ಗುರು. ಭಟ್ಟರ ತಂದೆ ಮಹಾಲಿಂಗ ಭಟ್. ತಾಯಿ ಪರಮೇಶ್ವರಿ. ಅಳಿಕೆ ಸನಿಹದ ಮುಳಿಯದಲ್ಲಿ ಹುಟ್ಟು. ಕಡೆಂಗೋಡ್ಲಿನಲ್ಲಿ ಬದುಕು. ಆರನೇ ತರಗತಿ ತನಕ ಶಾಲಾಭ್ಯಾಸ. ಪುತ್ತೂರಿನ ಪೆರುವಡಿಯವರ ನೂಜಿ ಮನೆಯಲ್ಲಿ ಮಿಕ್ಕ ಯಕ್ಷಗಾನದ ವಿವಿಧಾಂಗಗಳ ಆರ್ಜನೆ.
                ಪೆರುವಡಿ ಕೃಷ್ಣ ಭಟ್ಟರ ಸಾರಥ್ಯದ ಮೂಲ್ಕಿ ಮೇಳದಲ್ಲಿ 'ಬಾಲಕೃಷ್ಣ' ಪಾತ್ರದ ಮೂಲಕ ಬಣ್ಣದ ಮೊದಲ ಹೆಜ್ಜೆ. ಮೂಲ್ಕಿಯೂ ಸೇರಿದಂತೆ ಕೂಡ್ಲು, ಸುರತ್ಕಲ್, ಕದ್ರಿ, ಕುಂಬಳೆ, ಸಾಲಿಗ್ರಾಮ, ಶಿರಸಿ, ಇಡಗುಂಜಿ, ಎಡನೀರು ಮೇಳಗಳಲ್ಲಿ ವ್ಯವಸಾಯ. "ಚಂದ್ರಮತಿ, ಶಾರದೆ, ಚಿತ್ರಾಂಗದೆ, ದ್ರೌಪದಿ, ಸುಭದ್ರೆ, ಪ್ರಭಾವತಿ, ಮಾಯಾ ಶೂರ್ಪನಖಿ, ಮಾಯಾಹಿಡಿಂಬಿ, ಮೋಹಿನಿ.." ಹೀಗೆ ಅನೇಕಾನೇಕ ಪಾತ್ರಗಳು ಭಟ್ಟರ ನೆಚ್ಚಿನವುಗಳು. ಖ್ಯಾತಿ ತಂದವುಗಳು. ಕೂಡ್ಲು ಮೇಳದಲ್ಲಿ ಪ್ರದರ್ಶನವಾಗುತ್ತಿದ್ದ 'ಶ್ರೀದೇವಿ ಲಲಿತೋಪಾಖ್ಯಾನ' ಪ್ರಸಂಗದ 'ಶ್ರೀಲಲಿತೆ' ಪಾತ್ರವು ಈಶ್ವರ ಭಟ್ಟರಿಗೆ ತಾರಾಮೌಲ್ಯ ತಂದಿತ್ತು.
               ವೈಯಾರದ ನಾಟ್ಯ, ನಯನಾಜೂಕಿನ ಅಭಿವ್ಯಕ್ತಿ. ಮನಮೋಹಕ ಚಿತ್ರ. ಪಾತ್ರಕ್ಕನುಚಿತವಾದ ಸಂಭಾಷಣೆ ಇವರದು. 'ಮೂಲ್ಕಿ ಮೇಳದಲ್ಲಿ ನನ್ನ ಬಾಹುಕ, ಪಾಪಣ್ಣ ಪಾತ್ರಗಳಿಗೆ ಈಶ್ವರ ಭಟ್ಟರು  ದಮಯಂತಿಯಾಗಿ, ಗುಣಸುಂದರಿಯಾಗಿ ಜತೆಯಾಗಿದ್ದಾರೆ. ಮೇಳಕ್ಕೂ ಹೆಸರು ತಂದಿದ್ದಾರೆ. ಅವರದು ಮೋಹಕ ಪಾತ್ರ. ಲಾಲಿತ್ಯದ ನಡೆ. ಎಷ್ಟೊ ಕಡೆ ಹೆಣ್ಣುಮಕ್ಕಳು ಇವರ ವಯ್ಯಾರದ ಮುಂದೆ ನಾಚಿದ್ದೂ ಇದೆ, ಎಂದು ತನ್ನ ಮೇಳದ ತಿರುಗಾಟದ ಕ್ಷಣಗಳನ್ನು ನೆನಪಿಸಿಕೊಂಡರು, ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್.
             'ಕಲಾವಿದನಿಗೆ ದುಡ್ಡು ಮುಖ್ಯ ಹೌದು. ಜತೆಗೆ ಅಭಿಮಾನವೂ ಕೂಡಾ. ರಂಗದಲ್ಲಿ ಸರಿಯಾದ ಅಭಿವ್ಯಕ್ತಿಗೆ ಅವಕಾಶವಿಲ್ಲದೇ ಹೋದಾಗ ಅಭಿಮಾನಿಗಳಿಗೆ ಮುಖ ತೋರಿಸಲು ನಾಚಿಕೆಯಾಗುತ್ತದೆ. ಜತೆಗೆ ರಂಗದಲ್ಲಿ ಸಹಪಾತ್ರಧಾರಿಗಳ ಹೊಂದಾಣಿಕೆಯೂ ಕೈಕೊಟ್ಟಾಗ ಆಗುವ ಫಜೀತಿ ಯಾರಲ್ಲಿ ಹೇಳುವುದು ಹೇಳಿ, ರಂಗಸುಖದ ಕುರಿತಾದ ಅವರ ವಿಷಾದ ಬಹುತೇಕ ಸ್ತ್ರೀಪಾತ್ರಧಾರಿಗಳು ಅನುಭವಿಸುವಂತಾದ್ದು.
            ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಮಾನ, ಕೆರೆಮನೆ ಶಂಭು ಹೆಗಡೆ ಜಯಂತಿ ಸಂಮಾನ, ಮಂಗಳೂರು ಹವ್ಯಕ ಸಭಾ, ಶ್ರೀ ಎಡನೀರು ಮಠ, ಕಲಾರಂಗ ಉಡುಪಿ, ಪಾತಾಳ ಪ್ರಶಸ್ತಿ.. ಹೀಗೆ ಹಲವು ಪ್ರತಿಷ್ಠಿತ ಪುರಸ್ಕಾರಗಳು ಈಶ್ವರ ಭಟ್ಟರ ಕಲಾ ಸೇವೆಗೆ ಸಂದ ಮಾನಗಳು. ಕೊಕ್ಕಡ-ಪಟ್ರಮೆ ಸಮೀಪದ ಹೆನ್ನಳದಲ್ಲಿ ವಾಸ. ಪತ್ನಿ ಶಕುಂತಳೆ. ಮೂವರು ಮಕ್ಕಳು. ಕಡೆಂಗೋಡ್ಲು ನನಗೆ ಬಾಲ್ಯವನ್ನು ಕೊಟ್ಟದ್ದರಿಂದ ಈ ಊರು ನನ್ನ ಹೆಸರಿನೊಂದಿಗೆ ಹೊಸೆಯಬೇಕಿತ್ತು. ಈಗ ಕೊಕ್ಕಡ ಸಮೀಪವಿರುವುದರಿಂದಲೋ ಏನೋ ನಾನೀಗ ಕೊಕ್ಕಡ ಈಶ್ವರ ಭಟ್.
              ವರ್ತಮಾನದ ರಂಗದ ಪೌರಾಣಿಕ ಸ್ತ್ರೀಪಾತ್ರಗಳು ತನ್ನ ಪೌರಾಣಿಕ ನೆಲೆಯನ್ನು ಮರೆತಿವೆ. ಪಾತ್ರಗಳಿಗೂ ಮತಿಯಿದೆ, ಮಾತಿದೆ, ಗೌರವದ ಸ್ಥಾನವಿದೆ. ಅಲ್ಲಿ ಬರುವ ಪಾತ್ರಗಳು ಬದುಕಿನಲ್ಲಿ ಕಾಣ ಸಿಗುವ ಹೆಣ್ಣುಮಕ್ಕಳಂತೆ ಅಲ್ಲ. ಪೌರಾಣಿಕ ಪಾತ್ರಗಳಲ್ಲಿ ಉದಾತ್ತತೆಯನ್ನು ತನ್ನ ಅಭಿವ್ಯಕ್ತಿಯ ಮೂಲಕ ಕಲಾವಿದ ತುಂಬಬೇಕು. ಹಿರಿಯ ಕಲಾವಿದರನೇಕರಲ್ಲಿ ಇಂತಹ ಪ್ರಜ್ಞೆ ಸದಾ ಎಚ್ಚರದಲ್ಲಿರುತ್ತಿತ್ತು. ರಂಗದ ಗೌರವವನ್ನು ಕಾಪಾಡುತ್ತಾ, ಅಭಿವ್ಯಕ್ತಿ-ಮಾತಿನಲ್ಲಿ ಹಿಡಿತ ಸಾಧಿಸುತ್ತಾ ಪಾತ್ರವನ್ನು ಜನಮನದತ್ತ ಒಯ್ಯುವುದು ಸುಲಭದ ಮಾತಲ್ಲ - ಕೊಕ್ಕಡ ಈಶ್ವರ ಭಟ್ಟರ ಹಿರಿನುಡಿ.
              ಹಿರಿಯರು ಹೀಗೆಂದಾಗ ಬಹಳಷ್ಟು ಮಂದಿ ವರ್ತಮಾನದ ರಂಗದಲ್ಲಿ ತೊಡಗಿಸಿಕೊಂಡಿರುವ - ಹವ್ಯಾಸಿ, ವೃತ್ತಿ - ಕಲಾವಿದರು ಅಲ್ಲಗೆಳೆಯುವುದನ್ನು ಗಮನಿಸಿದ್ದೇನೆ. ಒಂದೊಂದು ಪದ್ಯಕ್ಕೆ ಕಾಲು, ಅರ್ಧ ಗಂಟೆ ಕುಣಿಯುವುದೇ ಸ್ತ್ರೀಪಾತ್ರದ ಅರ್ಹತೆ ಎಂದು ಸ್ಥಾಪಿಸುವ ಕಾಲಮಾನದಲ್ಲಿ ಈಶ್ವರ ಭಟ್ಟರಂತಹ ಹಿರಿಯರ ಮಾತು ಅಪಥ್ಯದಂತೆ ಕಾಣಬಹುದು. ಆದರೆ ಇಂದು ರಂಗದಲ್ಲಿ ನಾವು ಏನಾದರೂ ಹೆಜ್ಜೆ ಊರಿದ್ದೇವೆ, ಊರುತ್ತಿದ್ದೇವೆ ಎಂದಾದರೆ ಅದು ಈಶ್ವರ ಭಟ್ಟರಂತಹ ಹಿರಿಯರು ರಂಗದಲ್ಲಿ ಮೂಡಿಸಿದ ನಡೆಯಿಂದ ಎನ್ನುವುದನ್ನು ವರ್ತಮಾನದ ವೃತ್ತಿ-ಹವ್ಯಾಸಿ ಕಲಾವಿದರು ಮರೆಯಕೂಡದು.
              ಅನುಭವದ ಪಕ್ವತೆಯಿಂದ ಮಾಗಿರುವ ಕೊಕ್ಕಡ ಈಶ್ವರ ಭಟ್ಟರ ಅಭಿನಂದನ ಸಮಾರಂಭವು  ೨೦೧೭ ಫೆಬ್ರವರಿ ೧೧ ಶನಿವಾರದಂದು ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ ದಿನಪೂರ್ತಿ ಜರುಗಲಿದೆ. ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಅಭಿನಂದನ ಕೃತಿಯ ಅನಾವರಣ ಜರುಗಲಿದೆ. ನವರಸವಾಹಿನಿ, ನವರಸ ಅರ್ಥ ವೈಭವ, ಯಕ್ಷ ಗಾನ ವಿಹಾರ ಮತ್ತು ಎಡನೀರು ಮೇಳದವರಿಂದ 'ಸೀತಾಪರಿತ್ಯಾಗ-ಗದಾಯುದ್ಧ' ಪ್ರಸಂಗದ ಯಕ್ಷಗಾನ ಜರುಗಲಿದೆ.

No comments:

Post a Comment