Wednesday, August 5, 2020

ಪದ್ಯಾಣರ ಸ್ವಗತ – (ಎಸಳು 10)

 (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ) 

ಕೊನರಿದ ಕೊರಡು:-

          ಶ್ರೀ ಧರ್ಮಸ್ಥಳ ಯಕ್ಷಗಾನ ಲಲಿತಕಲಾ ಕೇಂದ್ರದಲ್ಲಿ ಮೊದಲ ದಿನ. ಸ್ನಾನಾದಿಗಳನ್ನು ಮುಗಿಸಿ, ದೇವರ ದರ್ಶನ ಮಾಡಿ, ಗುರುಗಳ  ಆಶೀರ್ವಾದ ಪಡೆದ ಬಳಿಕ ಹಿಮ್ಮೇಳ ಕಲಿಕೆಗೆ ಶ್ರೀಕಾರ. ಮುದದಿಂದ ನಿನ್ನಾ.....

          ಶಿರಂಕಲ್ಲು ನಾರಾಯಣ ಭಟ್, ಬರೆ ಕೃಷ್ಣ ಭಟ್, ಕುಶಾಲಪ್ಪ ಗೌಡ, ಸೀತಾರಾಮ ರೈ - ಹಿಮ್ಮೇಳ ಕಲಿಕೆಯ ಸಹಪಾಠಿಗಳು. ಭಾಗವತಿಕೆಯ ಜತೆಜತೆಗೆ ಮದ್ದಳೆಯ ಪಾಠ ಕಡ್ಡಾಯ. ಇದು ಭಾಗವತಿಕೆಗೆ ಪೂರಕ.

          ಮನೋಹರ ಕುಮಾರ್ ಡಿ, ಕೊರಗಪ್ಪ ಮಾಡಾವು, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ (ದಿ.), ಬಾಲಕೃಷ್ಣ ಮುಂಡಾಜೆ, ಸದಾಶಿವ ಮುಂಡಾಜೆ, ತಿಮ್ಮಪ್ಪ ಶೆಟ್ಟಿ, ಅಮೈ ಗೋವಿಂದ ಭಟ್, ನರಸಿಂಹಯ್ಯ.. ಇವರೆಲ್ಲಾ ಮುಮ್ಮೇಳದ ಸಹಪಾಠಿಗಳು.

          ನನಗೆ ಸಂಗೀತದ ಪಾಠ ಆಗದಿದ್ದರೂ ಮನೆಯ ಸಂಗೀತದ ನಾದದ ವಾತಾವರಣದಿಂದ ಪ್ರಭಾವಿತನಾಗಿದ್ದೆ. ನನ್ನ ಚಿಕ್ಕಪ್ಪ ದಿ.ಶಂಕರನಾರಾಯಣ ಭಟ್ಟರು (ತಂದೆಯ ತಮ್ಮ) ಸಂಗೀತ ವಿದ್ವಾಂಸ. ಬೆಳಿಗ್ಗೆ ನಾಲ್ಕು ಗಂಟೆಗೆ ಅವರಿಗೆ ಬೆಳಗಾಗುತ್ತಿತ್ತು. ನಿತ್ಯ ಸಾಧನೆ ಮಾಡುತ್ತಿದ್ದರು. ಅವರ ಸ..ರಿ..ಗ..ಮ..ಪ..ದ..ನಿ..ಸ.. ಈ ಆಲಾಪನೆಯನ್ನು ಕೇಳಿಕೇಳಿ ಅದರ ಸಂಚಾರವು ಮನಸ್ಸಿನೊಳಗೆ ಆವಾಹನೆಯಾಗಿತ್ತು. ಏಕಾಂಗಿಯಾಗಿದ್ದಾಗ ಗುಣುಗುಣಿಸುತ್ತಿದ್ದೆ.ಹಾಗಾಗಿ ಕ್ಷಿಪ್ರ ಕಲಿಕೆ ಸಾಧ್ಯವಾಯಿತು. ಈ ಆಲಾಪನೆಯು ಧರ್ಮಸ್ಥಳ ಕೇಂದ್ರದಲ್ಲಿ ಉಪಯೋಗಕ್ಕೆ ಬಂತು.

ಗುರುಗಳು ಸ..ಪ..ಸ ಹೇಳಿಸುತ್ತಿದ್ದರು. ನನಗದು ರೂಢಿಯಾದ್ದರಿಂದ ಒಪ್ಪಿಸುತ್ತಿದ್ದೆ. ಉಳಿದ ಸಹಪಾಠಿಗಳು ಒದ್ದಾಡುತ್ತಿದ್ದರು. ಯಕ್ಷಗಾನ ಭಾಗವತಿಕೆ ಏನೂ ಗೊತ್ತಿಲ್ಲದ ಕಾರಣ ಪಾಠ ಅರ್ಥವಾಗುತ್ತಿತ್ತು. ಗೊತ್ತಿರುತ್ತಿದ್ದರೆ ಹಳೆ ಚಾಳಿಯನ್ನು ಬಿಡಲಾಗದೆ, ಹೊಸತನ್ನು ಸ್ವೀಕರಿಸಲಾಗದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಗುರುಗಳು ಹೇಳಿಕೊಟ್ಟದ್ದನ್ನು ತಕ್ಷಣ ಕಲಿಯುತ್ತಿದ್ದೆ. ಅದನ್ನು ಆರ್ಜಿಸಿಕೊಳ್ಳುವ ಸಾಮಥ್ರ್ಯವನ್ನು ಅಜ್ಜನ ಚೇತನ ನೀಡಿದ್ದಿರಬೇಕು.

          ಎಲ್ಲರಿಗೂ ಒಂದೇ ರೀತಿಯ ಪಾಠ. ಒಬ್ಬ ಬೇಗ ಕಲಿತರೆ ಆತನಿಗೆ ಮುಂದಿನ ಪಾಠ ಹೇಳುತ್ತಿರಲಿಲ್ಲ. ಎಲ್ಲರಿಗೂ ಒಂದು ಪಾಠ ಕರಗತವಾದ ಬಳಿಕವೇ ಮುಂದಿನ ತಾಳ, ಪದ್ಯ. ಉಳಿದವರ ನಿಧಾನಗತಿಯಿಂದಾಗಿ ನನಗೆ ಕಲಿಯುವ ಹಸಿವು ಹೆಚ್ಚಾಗುತ್ತಿತ್ತು. ಮಾಂಬಾಡಿ ಗುರುಗಳ ಕಲಿಸುವ ಪದ್ಧತಿ ಅಪೂರ್ವ, ಅನನ್ಯ. ಕಲಿಸಿದಷ್ಟೂ ಗಟ್ಟಿ. ಪದ್ಯಗಳಲ್ಲಿರುವ ಅಕ್ಷರ, ಆ ಅಕ್ಷರವು ನಿಲ್ಲಬೇಕಾದ ತಾಳದ ಜಾಗದ ನಿಖರವನ್ನು ಕಲಿಸುವ ಜಾಣ್ಮೆ ಮಾಂಬಾಡಿಯವರಿಗೆ ಸಿದ್ಧಿಸಿತ್ತು.

          ಉದಾ :- ಅಂಬುರುಹದಳನೇತ್ರೆ.... ನಾಲ್ಕು ಸಾಲಿನ ಇದನ್ನು ನಾಲ್ಕು ಉಸಿರಿನಲ್ಲಿ ಹೇಳಬೇಕು. ಒಮ್ಮೆ ಉಸಿರು ತೆಕ್ಕೊಂಡು ಬಿಡುವ ಕಾಲ ಇದೆಯಲ್ಲಾ ಅದರಲ್ಲಿ ಮೊದಲ ಚರಣ ಹಾಡಬೇಕು. ಅದರಂತೆ ಇಡೀ ಭಾಮಿನಿಯು ನಾಲ್ಕು ಉಸಿರಿನೊಳಗೆ ಬಂಧಿಯಾಗಬೇಕು. ಒಂದೇ ರಾಗವನ್ನು ಬಳಸಬೇಕು. ಹಾಗೆ ಹೇಳಿದರೆ ಅದು ಯಕ್ಷಗಾನ.

          ನಾಟಿ, ಕಾಂಭೋದಿ, ಭೈರವಿ, ಪೀಲು, ಸುರುಟಿ, ಸಾವೇರಿ, ನವರೋಜು, ಜಂಜೂಟಿ.. ಇವು ಯಕ್ಷಗಾನದ ಪ್ರಸಿದ್ಧ ರಾಗಗಳು. ಇವುಗಳನ್ನು ಗುರುಗಳು ಆಲಾಪಿಸಿ ಹೇಳಿಕೊಡುತ್ತಿರುವಾಗ ಬಳಿಯಲ್ಲಿರುತ್ತಿದ್ದ ಕುರಿಯ ವಿಠಲ ಶಾಸ್ತ್ರಿಗಳು ತಲ್ಲೀನರಾಗುತ್ತಿದ್ದರು. ಅಂದರೆ ಗುರುಗಳು ಬಳಸುವ ರಾಗಕ್ಕೆ ಅಷ್ಟೊಂದು ಆಕರ್ಷಣೆಯಿತ್ತು. ಭಾವನೆಗಳಿದ್ದುವು.  ಕರ್ಣಪರ್ವ ಪ್ರಸಂಗದ ‘ಶಿವ ಶಿವಾ ಸಮರದೊಳು...’ ಪದ್ಯವನ್ನು ಸಾವೇರಿ ರಾಗದಲ್ಲಿ ಹೇಳಿದಾಗ ಕರ್ಣನ ನೆನಪಾಗಿ ಕುರಿಯದವರು ಒಂದು ಕ್ಷಣ ಕುಸಿದಿದ್ದರು! ಕಲಿಕಾ ಕೇಂದ್ರದಲ್ಲಿ ಹಾಡನ್ನು ಕೇಳಿಯೇ ಪರಕಾಯ ಪ್ರವೇಶ ಮಾಡುವ ಕುರಿಯರ ಪಾತ್ರಗಳು ರಂಗದಲ್ಲಿ ಅದ್ಭುತ.


No comments:

Post a Comment