Tuesday, August 18, 2020

‘ಪದಯಾನ’ - ಪದ್ಯಾಣರ ಸ್ವಗತ – (ಎಸಳು 23)


 

 (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)

ಶೇಣಿಯವರ ದಶಮುಖಗಳು: 

          ಮಲ್ಪೆ ರಾಮದಾಸ ಸಾಮಗರ ‘ರಾಮ’, ಶೇಣಿಯವರ ‘ರಾವಣ’ ಜತೆಗಾರಿಕೆಯು ಸುರತ್ಕಲ್ ಮೇಳದಲ್ಲಿ ಪ್ರಸಿದ್ಧವಾಗಿತ್ತು. ಅವರಿಬ್ಬರಿಂದಾಗಿ ದನಿಗಳಿಗೆ ಕಲೆಕ್ಷನ್ ಜಾಸ್ತಿ! ಇದೇ ರೀತಿ ಸಾಮಗರ ಕೃಷ್ಣ, ಶೇಣಿಯವರ ಮಾಗಧ – ಪಾತ್ರಗಳು ರಂಗವನ್ನು ‘ಬಿಸಿ’ಯಾಗಿಸಿತ್ತು. 

          ಒಮ್ಮೆ ಹೆಗ್ಗೋಡಿಗೆ ಹೋಗಿದ್ದೆ. “ನಾನೊಬ್ಬ ಭಾಗವತನನ್ನು, ಕರೆತರುತ್ತೇನೆ: ಎಂದಿದ್ದರಂತೆ ಶೇಣಿಯವರು. ಸಂಘಟಕರಲ್ಲಿ ಸಹಜವಾಗಿ ಗೊಂದಲವಾಗಿತ್ತು. ಶೇಣಿಯವರಲ್ವಾ, ಒಪ್ಪಿಕೊಂಡರು. ಶ್ರೀರಾಮ ಪಟ್ಟಾಭಿಷೇಕ ಪ್ರಸಂಗ. ಶೇಣಿಯವರ ‘ದಶರಥ’. ಪ್ರಸಂಗದ ಮೊದಲ ಪದ್ಯ ‘ವೀರದಶರಥ ನೃಪತಿ..’. ಈ ಪದ್ಯ ಮುಗಿಯುವಾಗ ನಾನು ಹೆಗ್ಗೋಡಿನ ಪ್ರೇಕ್ಷಕರ ಮನ ಗೆದ್ದಿದ್ದೆ.... ಮನ ಹೊಕ್ಕಿದ್ದೆ! ಅಬ್ಬಾ.... ಪ್ರಶಂಸೆಗಳ ಮಹಾಪೂರ. ಕೊನೆಕೊನೆಗೆ ಪ್ರೇಕ್ಷಕರಿಂದ ಇಂತಹ ರಾಗದಲ್ಲಿ ಹೇಳಿ ಎನ್ನುವ ಬೇಡಿಕೆಯು ಬರತೊಡಗಿತು. ಪ್ರೇಕ್ಷಕರಲ್ಲಿರುವ ರಾಗಜ್ಞಾನ ಮತ್ತು ರಾಗಪ್ರಿಯತೆಗೆ ಮಾರು ಹೋಗಿದ್ದೆ. ಅಂದಿನ ಭಾಗವತಿಕೆಯು ಶೇಣಿಯವರಿಗೆ ಮಾತ್ರವಲ್ಲ, ಸಂಘಟಕರು, ಊರವರಿಗೆ ಖುಷಿ ತಂದಿತ್ತು. ಸಮಾಧಾನವಾಗಿತ್ತು. ಕೂಟದ ಬಳಿಕ ತುಂಬು ಪ್ರಶಂಸೆಗೆ ಒಳಗಾಗಿದ್ದೆ.

          ಶೇಣಿಯವರಲ್ಲಿ ಆಟ, ಕೂಟದ ಪೂರ್ವದಲ್ಲಿ ‘ಯಾವ ಪದ್ಯ ಹೇಳಬೇಕು’ ಅಂತ ಕೇಳಿದರೆ ‘ರಂಗದಲ್ಲಿ ನೋಡೋಣ’ ಅನ್ನುತ್ತಿದ್ದರು. ಅವರು ರಂಗ ಪ್ರವೇಶಿಸಿದ ಬಳಿಕವೇ ಯಾವ್ಯಾವ ಪದ್ಯಗಳೆಂದು  ಚಿಂತಿಸುತ್ತಿದ್ದರು. ಅವರ ಮೂಡ್ ಅರ್ಥಮಾಡಿಕೊಳ್ಳಲು ಕಷ್ಟ. ಅಲರ್ಟ್ ಆಗಿರಬೇಕಾಗುತ್ತಿತ್ತು. ಕೆಲವೆಡೆ ಮಾಮೂಲಿ ಹೇಳುವ ಪದ್ಯಗಳ ಬದಲಿಗೆ ಬೇರೆ ಮುಂದಿನ ಆಯ್ಕೆ ಮಾಡಿಕೊಂಡಾರು. ಅವರ ಈ ಮೂಡ್ ಗೊತ್ತಿಲ್ಲದ ಹೊಸಬರಾದರೆ ಗೋವಿಂದ....

          ಖುಷಿಯಾದರೆ ರಂಗದಲ್ಲಿ ‘ಭೇಷ್’ ಅಂತಾರೆ. ಒಮ್ಮೆ ಸುಧನ್ವ ಕಾಳಗ ಪ್ರಸಂಗದ  “ಕಂಡು ಪುಳಕೋತ್ಸವದ ಹರುಷ..” ಪದ್ಯವನ್ನು ದೇವಗಾಂಧಾರ ರಾಗದಲ್ಲಿ ಹಾಡಿದ್ದೆ. ತಕ್ಷಣ ಸುಧನ್ವ ಪಾತ್ರದಿಂದ ಕಳಚಿಕೊಂಡು ಶೇಣಿಯಾಗಿ ಭೇಷ್ ಅಂದರು. ಸಭೆಯೂ ಕರತಾಡನದಿಂದ ಪ್ರೋತ್ಸಾಹಿಸಿತು.

          ಮೇಳದ ರಂಗದಲ್ಲಿ ಎದುರಿನ ಅರ್ಥಗಳು ತಪ್ಪಾದರೆ ಪಾತ್ರಧಾರಿಗೆ ಮಾತ್ರ ಅರ್ಥವಾಗುವಂತೆ ತಿದ್ದುತ್ತಿದ್ದರು. ಕಲಾವಿದರು ಕೇಳಿದರಂತೂ ಮನಸ್ಸಿಗೆ ಹೊಕ್ಕುವ ಹಾಗೆ ಹೇಳುತ್ತಿದ್ದರು. ಅವರು ತನ್ನ ಪಾತ್ರವು ರಂಗ ಪ್ರವೇಶಿಸುವ ಹತ್ತು ನಿಮಿಷ ಮುಂಚಿತವಾಗಿ ರಂಗದ ಹಿಂದೆ ಕುಳಿತುಕೊಂಡು ಯೋಚಿಸುತ್ತಿದ್ದರು.ಆಗ ಅವರು ಯಾರಲ್ಲೂ ಮಾತನಾಡರು.

          ಕೆಲವೊಮ್ಮೆ ಶೇಣಿಯವರು ಮುಜುಗರ ತಂದಿಡುತ್ತಿದ್ದುದು ಉಂಟು. ಅದು ಬೇಕೆಂದು ಅಲ್ಲ. ಆ ದಿವಸದ ಅವರ ಮನಃಸ್ಥಿತಿ.  ಒಮ್ಮೆ ಕೋಟೇಶ್ವರದಲ್ಲಿ ‘ರಾವಣ ವಧೆ’’ ಪ್ರಸಂಗ. ಅವರಲ್ಲಿ ಮೊದಲೇ ಸಮಾಲೋಚಿಸಿಕೊಂಡು ಹೋಗಿದ್ದೆ. ರಾವಣ-ಮಂಡೋದರಿ ಸಂವಾದದ ಸನ್ನಿವೇಶ. ಎಂ.ಕೆ.ರಮೇಶ ಆಚಾರ್ಯರ ಮಂಡೋದರಿ. ಒಂದೆಡೆ ‘ಸಾಕೋರ್ವ ಮಗ ವಿರೂಪಕ್ಷ’.. ಪದ್ಯದ ಎತ್ತುಗಡೆ ಮಾಡಿದೆ. ಏನಾಯಿತೋ ಏನೋ.. ಅದರ ಮುಂದಿನ ಪದ್ಯವನ್ನು ಸಿಟ್ಟಿನ ಭಾವದಲ್ಲಿ “ಇನ್ನು ಬಿಡು ಬಿಡು ಛಲ..” ಎಂದು ಏರುಸ್ಥಾಯಿಯಲ್ಲಿ ಹೇಳಬೇಕೇ... .

          ಆಗಲೇ ಮೊದಲ ಪದ್ಯವನ್ನು ಝಂಪೆ ತಾಳದಲ್ಲಿ ಆರಂಭ ಮಾಡಿದ್ದೆ. ಇವರು ಎತ್ತಿದ ಪದ್ಯವನ್ನು ಹೇಳದಿದ್ದರೆ ಇತಿಶ್ರೀ ಖಂಡಿತ! ಕೊನೆಗೆ ಹೇಗೋ ಪದ್ಯವನ್ನು ಹೇಳಿ ಮುಗಿಸಿದೆ. ಸಭೆಯೂ ಈ ಗೊಂದಲವನ್ನು ಗಮನಿಸಿತು. ತಾಳಮದ್ದಳೆ ಮುಗಿಯಿತು. ‘ಮಾವ.. ಅದು ಎಂತ ಹಾಂಗಾದ್ದು’ ಅಂತ ಕೇಳಿದ್ದಕ್ಕೆ, ‘ಆನಂದಪುರದ ಕಾಫಿ ಲಾಯಕ್ಕಿದ್ದು. ವುಡ್ಲ್ಯಾಂಡಿನ ಮಸಾಲೆ ದೊಸೆ ಲಾಯಕ್ಕಿದ್ದು’ ಅಂತ ವಿಷಯಾಂತರ ಮಾಡಿಬಿಟ್ಟರು. ಕಾಫಿ, ದೋಸೆಗಳ ಭರಾಟೆಯಲ್ಲಿ ಬೆೇಸರ, ದುಃಖಗಳು ಠುಸ್ ಆಯಿತು. 

          ಅವರೊಂದಿಗೆ ಇಪ್ಪತ್ತೆರಡು ವರುಷದ ದೀರ್ಘ ತಿರುಗಾಟ ಮಾಡಿದೆ. ಮಳೆಗಾಲ ಎಂದಿಲ್ಲ, ಬೇಸಿಗೆಯೆಂದಿಲ್ಲ. ಅವರು ಸಂಘಟಿಸಿದ, ಹೇಳಿದ ತಾಳಮದ್ದಳೆಗಳಿಗೆ ಹೋದಾಗ ಸಂಘಟಕರು ಸಂಭಾವನೆ ನೀಡಿದರೆ ತೆಕ್ಕೊಳ್ಳಲು ಶೇಣಿಯವರ ಒಪ್ಪಿಗೆಗಾಗಿ ಕಾಯುತ್ತಿದ್ದೆ. ‘ತೆಕ್ಕೊಳೋ’ ಅಂತ ಹೇಳದೆ ತೆಕ್ಕೊಳ್ಳುತ್ತಿರಲಿಲ್ಲ. ಕೆಲವೆಡೆ ಸಂಘಟಕರಿಂದ ಶೇಣಿಯವರು ಸಂಭಾವನೆ ಸ್ವೀಕರಿಸುತ್ತಿರಲಿಲ್ಲ. ಜತೆ ಕಲಾವಿದರಿಗೆ ಕೊಡಿಸುತ್ತಿದ್ದರು. ಅಪರೂಪಕ್ಕೊಮ್ಮೆ ಅನ್ಯ ಕಾರಣಗಳಿಂದ ನಾನು ಗೈರುಹಾಜರಾದರೆ ದಾಮೋದರ ಮಂಡೆಚ್ಚರನ್ನು, ಬಲಿಪ ನಾರಾಯಣ ಭಾಗವತರನ್ನು ಕರೆಸುತ್ತಿದ್ದರು.

          ಸಾರಸ್ವತರ ಅಡುಗೆಯನ್ನು ಇಷ್ಟ ಪಡುತ್ತಿದ್ದರು. ಶುಭ ಸಮಾರಂಭಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅವರಿಗೆ ಕಡ್ಲೆ ಗಸಿ, ಗುಜ್ಜೆ ಗಸಿ.. ಇಷ್ಟ.  ಅವರಿಂದಾಗಿ ನನಗೂ ಈ ರುಚಿಗಳ ಅಭ್ಯಾಸವಾಗಿದೆ. ಒಂದೊಂದು ಪ್ರದೇಶಕ್ಕೆ ಹೋದರೆ ಅಲ್ಲಿನ ಹೋಟೆಲುಗಳ ಪರಿಚಯ ಮಾಡಿಕೊಳ್ಳುತ್ತಿದ್ದರು.

          ಮಳೆಗಾಲದಲ್ಲಿ ಕಾಸರಗೋಡಿನ ‘ದಾಸ ನಿವಾಸಕ್ಕೆ’  ನಿಯಮಿತವಾಗಿ ಹೋಗುತ್ತಿದ್ದೆ. ಉಭಯಕುಶಲೋಪರಿ, ಮೇಳ ತಿರುಗಾಟ, ಸಹ ಕಲಾವಿದರ ಸ್ಥಿತಿ-ಗತಿ.. ಹೀಗೆ ಮಾತುಕತೆಗಳು. ಅವರು ಆರ್ಥಿಕವಾಗಿ ಸೋತಾಗ ಕೆಲವೊಮ್ಮೆ ಹೆಗಲು ಕೊಟ್ಟ ದಿನಮಾನಗಳೂ ಇವೆ. ಅದನ್ನೆಂದೂ ಉಳಿಸಿಕೊಳ್ಳದೆ ಶೀಘ್ರ ಚುಕ್ತಾ ಮಾಡುತ್ತಿದ್ದರು.  ಶೇಣಿಯವರು ಧಾರಾಳಿ. ನೂರು ರೂಪಾಯಿ ಉತ್ಪತ್ತಿ ಇದ್ದರೆ ನೂರ ಒಂದು ರೂಪಾಯಿ ಖರ್ಚು ಮಾಡಿಯಾರು. ತಾನು ನಷ್ಟ ಮಾಡಿಕೊಂಡು ಸಂಘಟಕರಿಗೆ ನೆರವಾದುದೂ ಇದೆ.

          ಶೇಣಿಯವರು ಚೌಕಿಯಲ್ಲಿ ರಾಜ! ತುಂಬು ವ್ಯಕ್ತಿತ್ವ. ಅನಗತ್ಯ ಹರಟರು. ಕಲಾವಿದರು ಬಿಡಿ, ದನಿಗಳೂ ಮಾತನಾಡರು. ಶೇಣಿಯವರು ಉಳ್ಳವರನ್ನು ಹೆಚ್ಚು ಹಾರೈಸುತ್ತಿರಲಿಲ್ಲ. ಅರ್ಥಿಕವಾಗಿ ಅಸಬಲರಲ್ಲಿ ತುಂಬಾ ಪ್ರೀತಿ. ಅವರು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಉಚಿತವಾಗಿ ಭಾಗವಹಿಸಿದ್ದಿದೆ. 

          ಅವರಲ್ಲಿ ವೈವಿಧ್ಯವಾದ ವೀಳ್ಯ ಪೆಟ್ಟಿಗೆಯಿರುತ್ತಿತ್ತು. ಎಲ್ಲವೂ ದುಬಾರಿ ಮೊತ್ತದ್ದೇ. ಅವರಿಗೆ ಇತರರ ವೀಳ್ಯಪೆಟ್ಟಿಗೆಯತ್ತ ಮೋಹ ಹೆಚ್ಚು. ನಾನು ಯಾವುದೇ ವೀಳ್ಯಪೆಟ್ಟಿಗೆ ಖರೀದಿ ಮಾಡಲಿ, ಅದು ಅವರಿಗೆ ಬೇಕು! ಅದೇ ರೀತಿ ಚಾಕು ಕೂಡಾ. ಹೊಸ ಚಾಕುವಿನತ್ತ ಆಸಕ್ತ. ಶೇಣಿಯವರು ನನ್ನ ಎರಡನೇ ಗುರುಗಳು. ಮೂರನೇಯವರು ಅಗರಿ ರಘುರಾಮ ಭಾಗವತರು.


No comments:

Post a Comment