Monday, August 10, 2020

‘ಪದಯಾನ’ -ಪದ್ಯಾಣರ ಸ್ವಗತ – (ಎಸಳು 15)

 (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)

ತಾರಾಮೌಲ್ಯ ತಂದ ಪ್ರಸಂಗಗಳು 

       ನಾಟ್ಯರಾಣಿ ಶಾಂತಲೆ : ಸುರತ್ಕಲ್ ಮೇಳದ ಹಿಟ್ ಪ್ರಸಂಗಗಳಲ್ಲಿ ಒಂದು.  ನಾಟ್ಯ ಪ್ರಧಾನವಾದ ಕಥಾನಕ. ಪೌರಾಣಿಕವನ್ನು ಹೊರತು ಪಡಿಸಿದ ಇತರ ಪ್ರಸಂಗಗಳಲ್ಲಿ ಎರಡು ವಿಭಾಗಗಳನ್ನು ಗಮನಿಸಬಹುದು. ಪೂರ್ವಾರ್ಧವು ಶೃಂಗಾರ, ನಾಟ್ಯ, ಕುಣಿತಗಳಿಗೆ ಪ್ರಾಧಾನ್ಯತೆ. ಉತ್ತರಾರ್ಧದಲ್ಲಿ ಕಥಾಗಮನ. ನಾಟ್ಯರಾಣಿ ಶಾಂತಲೆ ಪ್ರಸಂಗದಲ್ಲಿ ಮೊದಲ ಭಾಗಕ್ಕೆ ನಾನು ಪದ್ಯ ಹೇಳುತ್ತಿದ್ದೆ. ಕೊನೆಗೆ ಅಗರಿ ರಘುರಾಮರು ಕಥೆಯನ್ನು ಮುನ್ನಡೆಸುತ್ತಿದ್ದರು. ಎಂ.ಕೆ.ರಮೇಶ ಆಚಾರ್ ಶಾಂತಲೆ ಪಾತ್ರವನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತಿದ್ದರು. ಮಾರ್ಮಿಕಕವಾದ ಕಥೆ.

       ಪಾಪಣ್ಣ ವಿಜಯ : ಹಾಸ್ಯಗಾರ್ ಪೆರುವೋಡಿ ನಾರಾಯಣ ಭಟ್ಟರ ಪಾಪಣ್ಣ, ಕೊಕ್ಕಡ ಈಶ್ವರ ಭಟ್ಟರ ಗುಣಸುಂದರಿ. ಆರಂಭದಲ್ಲಿ ಹೆಚ್ಚು ಪರಿಣಾಮ ನೀಡಿದ ಜತೆಗಾರಿಕೆ. ಭಾವ ಪ್ರಧಾನವಾದ ರೋಚಕ ಕಥೆ. ಘಟ್ಟ ಪ್ರದೇಶದಲ್ಲಿ ಪ್ರಸಂಗವು ತುಂಬಾ ಆಕರ್ಷಣೆ ಪಡೆದಿತ್ತು. ಕಥೆಯನ್ನು ಮಾತ್ರ ಆಸ್ವಾದಿಸುವವರಿಗೆ ಇದು ಉತ್ತಮ ಪ್ರಸಂಗ. ದುಃಖ, ಕರುಣ ರಸಗಳ ಖನಿ. ಜನರು ನಿಬ್ಬೆರಗಾಗಿ ನೋಡುತ್ತಿದ್ದರು, ಭಾವಪ್ರಧಾನವಾದ ಪದ್ಯಗಳನ್ನು ಹಾಡುವಾಗ ಹಿಮ್ಮೇಳದವರೂ ಭಾವಪರವಶರಾಗುತ್ತಿದ್ದರು. ಶಿವರಾಮ ಜೋಗಿಯವರ ಚಂದ್ರಸೇನ. ಈಶ್ವರ ಭಟ್ಟರ ನಂತರ ರಮೇಶ ಆಚಾರ್, ಉಜಿರೆ ರಾಜ ಗುಣಸುಂದರಿ ಪಾತ್ರವನ್ನು ಮಾಡುತ್ತಿದ್ದರು. ಪೆರುವಡಿಯವರು ಬೇರೆ ಮೇಳಕ್ಕೆ ಹೋದ ಮೇಲೆ ಜಾಗವನ್ನು ವೇಣೂರು ಸುಂದರ ಆಚಾರ್ಯರು ತುಂಬಿದರು, ತುಂಬಿಸಿದರು. ವೃತ್ತಿ, ಹವ್ಯಾಸಿ ರಂಗಕ್ಕೆ ಒಪ್ಪುವ, ಒಗ್ಗುವ ಪ್ರಸಂಗವಿದು.

       ಕಡುಗಲಿ ಕುಮಾರ ರಾಮ : ಶೇಣಿಯವರ ತುಘಲಕ್. ವೇಣೂರು ಸುಂದರ ಆಚಾರ್ಯರ ಬರ್ಕತ್ತಿಲಖಾನ್ ಪಾತ್ರಗಳು. ಶೇಣಿಯವರ ಪಾತ್ರವು ಕೆಲವೊಮ್ಮೆ ಮಾತು ಕಡಿಮೆ, ಭಾವನೆ ಹೆಚ್ಚು. ಕೆಲವೊಂದು ಪದ್ಯಗಳಿಗೆ ಎರಡೇ ವಾಕ್ಯದ ಅರ್ಥ. ಎರಡು ಅರ್ಥದಲ್ಲಿ ಹತ್ತು ಭಾವನೆ ಬರುವಷ್ಟು ಮಾಡುತ್ತಾರೆ! ಪಾತ್ರಕ್ಕೆ ಉಚಿತವಾದ ಅಭಿನಯ.

       ರಾಜಾಯಯಾತಿ : ಹಿಟ್ ಪ್ರಸಂಗ. ಶೇಣಿಯವರ ಯಯಾತಿ ಮರೆಯಲಾಗದ ಪಾತ್ರ. ತಾಳಮದ್ದಳೆಯಲ್ಲಿ ಗಂಟೆಗಟ್ಟಲೆ ಮಾತನಾಡುವ ಶೇಣಿಯವರು ಇಲ್ಲಿ ಪದ್ಯದ ವ್ಯಾಪ್ತಿಯಷ್ಟೇ ಭಾವನಾತ್ಮಕವಾಗಿ ಮಾತನಾಡುತ್ತಿದ್ದರು. ಹೀಗೂ ಸಾಧ್ಯವಾ ಎಂದು ಚೋದ್ಯವಾಗುತ್ತಿತ್ತು. ಕೆಲವು ಪದ್ಯಗಳಿಗೆ ಭಾವನೆ ಮಾತ್ರ. ಕೆಲವಕ್ಕೆ ಹೂಂಕಾರ. ಇನ್ನೂ ಕೆಲವಕ್ಕೆ ಒಂದೆರಡು ವಾಕ್ಯದ ಅರ್ಥ. ಅದು ಪ್ರೇಕ್ಷಕರ ಮೇಲೆ ಪರಿಣಾಮ ಆಗುತ್ತಿತ್ತು. ಅದರಲ್ಲಿ ಬರುವ ಎಲ್ಲಾ ಪಾತ್ರಗಳೂ ತುಂಬಾ ಜವಾಬ್ದಾರಿಯುಳ್ಳದ್ದು. ಎಲ್ಲಾ ಕಲಾವಿದರು ಗರಿಷ್ಠ ಯತ್ನವನ್ನು ಮಾಡಿ ಪ್ರಸಂಗಕ್ಕೆ ಹೆಸರು ತಂದಿರುತ್ತಾರೆ.

       ಸತೀ ಶೀಲವತಿ : ಅತ್ತೆ-ಸೊಸೆ ಸಂಬಂಧಗಳ ಸುತ್ತ ಹೊಸೆದ ಕಥೆ. ಇಲ್ಲಿ ಮಾವನು ಸೊಸೆಯ ಪಕ್ಷ. ಅತ್ತೆಯದು ಸ್ವ-ನಿರ್ಮಿತ ಬದುಕು. ಶೇಣಿಯವರಿಗೆ ಶಾಂತಶೀಲ ಗುರುವಿನ ಪಾತ್ರ. ಅತ್ತೆಯ ಪಾತ್ರವನ್ನು ರಮೇಶ ಆಚಾರ್ಯರು ಮಾಡಿದರೆ, ಸೊಸೆಯಾಗಿ ಉಜಿರೆ ರಾಜ ಪರಿಣಾಮಕಾರಿ ಅಭಿವ್ಯಕ್ತಿಸಿದ್ದರು.

ತುಳುನಾಡ ಬಲಿಯೇಂದ್ರ : ತುಳು ಪ್ರಸಂಗ. ಉತ್ತಮ ಪದ್ಯಗಳು. ಅರ್ಥಗರ್ಭಿತ ಪದ್ಯಗಳು. ಪ್ರಸಂಗದ ಕೆಲವು ಪದ್ಯಗಳಿಗೆಪದ್ಯಾಣದಾರ್ನ ಪದ್ಯ ಕೇನೊಡು’ ಅಂತ ಜನರೇ ಮಾತನಾಡುವುದನ್ನು ಕೇಳಿ ಖುಷಿಪಟ್ಟಿದ್ದೇನೆ.      

- ಹೀಗೆ ಹಲವು ಪ್ರಸಂಗಗಳು ಮೇಳಕ್ಕೆ, ಕಲಾವಿದರಿಗೆ ತಾರಾಮೌಲ್ಯವನ್ನು ತಂದಿತ್ತವು. ಕನ್ನಡ ಪ್ರಸಂಗವನ್ನಷ್ಟೇ ಹಾಡುತ್ತಿದ್ದ ನನಗೆ ಮೊದಮೊದಲು ತುಳು ಭಾಷೆಯ ಪದ್ಯಗಳನ್ನು ಹಾಡಲು ಕಷ್ಟವಾಗುತ್ತಿತ್ತು. ಮನೆಮಾತು, ವ್ಯವಹಾರದ ಮಾತುಗಳೆಲ್ಲಾ ಕನ್ನಡವೇ ಆಗಿರುವುದರಿಂದ ತುಳು ಭಾಷೆಯ ಹಿಡಿತ, ಅರ್ಥ ಗೊತ್ತಿಲ್ಲದೆ ಕಷ್ಟವಾಗುತ್ತಿತ್ತು. ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ಮೊದಲ ಪ್ರದರ್ಶನಗಳಿಗೆ ಪ್ರಸಂಗಕರ್ತರು ಬರುತ್ತಿದ್ದರು, ಮಾರ್ಗದರ್ಶನ ಮಾಡುತ್ತಿದ್ದರು. ಸಹಕಲಾವಿದರು ಭಾಷೆಯ ಸಮಸ್ಯೆಯನ್ನು ಹೋಗಲಾಡಿಸಿದ್ದರು.

ಆಕರ್ಷಣೆಗೆ ಪರಿಷ್ಕಾರ : ಟೆಂಟ್ ಮೇಳ. ಕಲೆಕ್ಷನ್ ಹೆಚ್ಚಾಗಲು ಏನಾದರೂ ಉಪಾಯ ಮಾಡಲೇ ಬೇಕಾಗಿತ್ತು. ಚೌಕಟ್ಟಿನೊಳಗೆ ಜನಾಕರ್ಷಣೆಗಾಗಿ ಚಿಕ್ಕಪುಟ್ಟ ಬದಲಾವಣೆಗೆ ಪೈಗಳೂ ಆಸಕ್ತರು. ಶೇಣಿ, ತೆಕ್ಕಟ್ಟೆಯವರ ಒಪ್ಪಿಗೆಯೂ ಇತ್ತು. ಉದಾ: ನಾಟ್ಯರಾಣಿ ಶಾಂತಲಾ ಪ್ರಸಂಗ. ನಾಟ್ಯವೇ ಪ್ರಧಾನವಾಗಿರುವ ಶಾಂತಲೆಯ ಪಾತ್ರಕ್ಕೆ ಪ್ರತ್ಯೇಕ ಹಾಡು, ವಿನ್ಯಾಸ ಮಾಡಿದೆವು. ರಾಣಿ ರತ್ನಾವಳಿ, ರಾಜಾ ಯಯಾತಿ.. ಪ್ರಸಂಗಗಲ್ಲಿ ಇಂತಹ ಚಿಕ್ಕಪುಟ್ಟ ಆವಿಷ್ಕಾರಗಳು ಜನಮೆಚ್ಚುಗೆ ಗಳಿಸಿದ್ದುವು.

       ದುರ್ಗಾದಾಸ್ ಎಂಬವರು ಮೇಳದ ಪ್ರಚಾರಕರು. ನಾನು ಸೇರುವುದಕ್ಕಿಂತ ಮೊದಲೇ ಉತ್ತರ ಕನ್ನಡ ಮೂಲದ, ಅವರ ಒಂದು ಕಣ್ಣು ದೃಷ್ಟಿಯಿಂದ ದೂರ! ಅವರಲ್ಲೊಂದು ಚಿಕ್ಕ ಮೈಕ್. ಅದರ ಮೂತಿಯಲ್ಲಿ ಗಟ್ಟಿಯಾಗಿ ಮಾತನಾಡಿದರೆ ಧ್ವನಿವರ್ಧಕದಂತೆ ಕೇಳಿಸುತ್ತದೆ. ಒಂದೇ ಒಂದು ಆಟ, ಆಟ ಚೆಲುನೋಟ, ರಸಿಕರಿಗೆ ರಸದೂಟ ಹೇಳುತ್ತಾ ಊರಿಡೀ ಸಂಚರಿಸುತ್ತಾರೆ. ಪ್ರಚಾರದಿಂದ ಆಟಕ್ಕೆ ಜನ ಬರುತ್ತಾರೆ. ಒಳ್ಳೆಯ ಕಲೆಕ್ಷನ್ ಕೂಡಾ. ಊರಿಗೆ ದುರ್ಗಾದಾಸ್ ಬಂದರೆ ಸುರತ್ಕಲ್ ಮೇಳ ಬಂತು ಎಂದರ್ಥ. ಆಗ ಮೇಳದ ಆಟದ ಪ್ರಚಾರಕ್ಕೆ ಈಗಿನಂತೆ ಬ್ಯಾನರ್, ಫ್ಲೆಕ್ಸಿಗಳಿರಲಿಲ್ಲ. ಅವರು ಮೇಳದ ಕೊನೆಯ ದಿನದ ವರೆಗೆ ಬದುಕಿದ್ದರು. ಈಚೆಗೆ ನಿಧನರಾದರಂತೆ.

(ಪದಯಾನ ಕೃತಿಯ ಸಂಪಾದಕ ನಾ. ಕಾರಂತ ಪೆರಾಜೆಯ ಬ್ಲಾಗಿನಲ್ಲೂ ಓದಬಹುದು - yakshamatu.blogspot.com )


No comments:

Post a Comment