Wednesday, August 12, 2020

‘ಪದಯಾನ’ ಪದ್ಯಾಣರ ಸ್ವಗತ – (ಎಸಳು 17)

 (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)

       ಚೌಕಿ ಪೂಜೆ ಕಳೆದ ಬಳಿಕ ಟಿಕೇಟ್ ಕೌಂಟರ್ ತೆರೆದುಕೊಳ್ಳುತ್ತದೆ. ಸ್ವತಃ ವರದರಾಯ ಪೈಗಳೇ ಕೌಂಟರಿನಲ್ಲಿ ಕುಳಿತುಕೊಳ್ಳುತ್ತಿದ್ದರು.  ಕೊನೆಕೊನೆಗೆ ಅವರಿಗೆ ಕಷ್ಟವಾದಾಗ ಅಗರಿ ರಘುರಾಮ ಭಾಗವತರು ಸಹಕರಿಸುತ್ತಿದ್ದರು. ಆಗ ಚೌಕಿಯ ಜವಾಬ್ದಾರಿ ನನ್ನ ಪಾಲಿಗೆ ಬರುತ್ತಿತ್ತು. ಪೈಗಳು ಕೌಂಟರಿನಲ್ಲಿ ಕುಳಿತು ರಂಗದ ಚಟುವಟಿಕೆಗಳನ್ನು ಗಮನಿಸುತ್ತಿದ್ದರು. ಅಗರಿಯವರ ನಿವೃತ್ತಿಯ ಬಳಿಕ ನಾನು ಸುಮಾರು ಹನ್ನೆರಡುವರೆಯೊಳಗೆ ರಂಗಕ್ಕೆ ಹೋಗಬೇಕು. ಕೆಲವೊಮ್ಮೆ ತಡವಾದಾಗ ಪೈಗಳು ಚಹ ಕಳುಹಿಸಿಕೊಡುತ್ತಿದ್ದರು. ಅವರಿಂದ ಚಹ ಬಂತು ಎಂದಾದರೆರಂಗಕ್ಕೆ ಹೋಗಲು ಯಾಕೆ ತಡ ಮಾಡಿದಿರಿ’ ಎಂಬ ಸೂಚನೆಯದು! ಹಾಗೆಂತ ಅವರಾಗಿ ಎಂದೂ ಸೂಚನೆಯನ್ನೋ, ಆದೇಶವನ್ನು ಮಾಡಿದ್ದಿಲ್ಲ. ಅದು ಯಜಮಾನನ ಮೇಳ ನಿಭಾವಣೆಯ ಜಾಣ್ಮೆ.

       ಪೈಗಳಿಗೆ ನಾನು, ನನ್ನ ಮನೆಯವರು, ಬಂಧುಗಳೆಂದರೆ ಪ್ರೀತಿ. ಎಲ್ಲಾ ಕಲಾವಿದರಲ್ಲೂ ಪ್ರೀತಿಯಿತ್ತು. ನಾನು ‘ಬೆಳಿಗ್ಗೆ ಮನೆಗೆ ಹೋಗಿ ಸಂಜೆ ಬರ್ತೇನೆಎಂದರೆ ಸಾಕು., ಮಲ್ಲಿಗೆ ಹೂ, ಹಣ್ಣು, ಐವತ್ತು ರೂಪಾಯಿಗಳನ್ನು ದೇವರ ಮುಂದೆ ನನಗೆ ನೀಡುತ್ತಿದ್ದರು. ಇದು ಭಾಗವತಸ್ಥಾನಕ್ಕೆ ಮೇಳದ ದನಿಗಳು ಕೊಡುವ ಗೌರವ. ಬಸ್ ವೆಚ್ಚಕ್ಕೆ ನೀಡಿದರೆ ನಾನು ತೆಕ್ಕೊಳ್ಳಲಾರೆ ಎಂದು ಗೊತ್ತಿತ್ತು.

       ಶ್ರೀಧರ್ಮಸ್ಥಳ ಮೇಳದ ಭಾಗವತ ಕಡತೋಕ ಮಂಜುನಾಥ ಭಾಗವತರಿಗೆ ಅಪಘಾತವಾಗಿತ್ತು. ಆಗ ಮೇಳಕ್ಕೆ ಗಣಪತಿ ಭಟ್ಟರನ್ನು ಕಳುಹಿಸಬಹುದಾ ಎಂಬ ಪ್ರಸ್ತಾಪ ಬಂದಿತ್ತು. ಬಹುಶಃ ಪೈಗಳು ಒಪ್ಪಿಲ್ಲ ಎಂದು ಮೇಳದ ಮ್ಯಾನೇಜರ್ ಐತ್ತಪ್ಪರಿಂದ ಮತ್ತೆ ತಿಳಿಯಿತು.

       ಪೈಗಳು ತಡರಾತ್ರಿ ಬಳಿಕ ಕೌಂಟರಿಗೆ ಬಾಗಿಲು ಹಾಕಿ ಚೌಕಿಗೆ ಬಂದು ಕಲಾವಿದರೊಂದಿಗೆ ಮಾತನಾಡಿದ ಬಳಿಕ ನಿದ್ರೆಗೆ ಜಾರುತ್ತಿದ್ದರು. ಬೆಳಿಗ್ಗೆ ಐದು ಗಂಟೆಗೆ ಸ್ನಾನ ಮುಗಿಸಿ ಬೆಳಗ್ಗಿನ ಚೌಕಿಪೂಜೆಗೆ ಅಣಿಯಾಗುತ್ತಿದ್ದರು. ನಿಯತ್ತು ಬಹಳ ವರುಷದ ತನಕ ಅನುಷ್ಠಾನ ಮಾಡುತ್ತಿದ್ದರು.

       ಮೇಳದಲ್ಲಿ ಕಲಾವಿದರಿಗೆ ಅಸೌಖ್ಯ ಬಾಧಿಸಿದಾಗ ಸ್ಪಂದಿಸುತ್ತಿದ್ದರು. ಕೆಲವೊಮ್ಮೆ ಕೊಡುವ ಮೊತ್ತ ಕಡಿಮೆಯಾಗುವುದುಂಟು. ಅಂತಹ ಹೊತ್ತಲ್ಲಿ ಕಲಾವಿದ ಅಸಹಾಯಕನಾದಾಗ ಆತನಿಗೆ ಕಡಿಮೆಯಾದ ಹಣವನ್ನು ಹಲವು ಬಾರಿ ನಾನು ಸರಿದೂಗಿಸಿದ್ದೇನೆ. ಕಲಾವಿದರ ಒಲವು ಪಡೆದಿದ್ದೇನೆ. ಅಸಹಾಯಕರಿಗೆ ಸಹಕಾರ ಮಾಡಿದ್ದೇನೆ. ಹಾಗೆಂತ ಇದು ಪ್ರಚಾರಕ್ಕಿರುವುದಲ್ಲ. ಸ್ವಯಂಘೋಷಣೆಯೂ ಅಲ್ಲ. ಬಾಲ್ಯದಿಂದಲೇ ನನಗಂಟಿದ ಇಂತಹ ಉದಾರತೆಗಳಿಂದ ಕಳೆದುಕೊಂಡದ್ದೇ ಹೆಚ್ಚು! ಜತೆಗೆ ಪಡೆದೂಕೊಂಡಿದ್ದೇನೆ. ಹಣವನ್ನಲ್ಲ....!

       ಮೇಳ ನಿಲುಗಡೆಯಾಗುವಾಗ ಆಟದ ವೀಳ್ಯ ಎಂಟು ಸಾವಿರ ರೂಪಾಯಿ ಇತ್ತು. ವರುಷದಲ್ಲಿ ಏಳು ತಿಂಗಳು ನಿರಂತರ ಆಟ. ಅದರಲ್ಲಿ ಏನಿಲ್ಲವೆಂದರೂ ಐದೂವರೆ ತಿಂಗಳು ಸ್ವಂತದ್ದಾದ ಆಟ. ಘಟ್ಟದ ತಿರುಗಾಟದಲ್ಲಿ ಕಾಂಟ್ರಾಕ್ಟ್ ಕೊಡುತ್ತಿರಲಿಲ್ಲ. ಹದಿನೆಂಟು, ಇಪ್ಪತ್ತು ಸಾವಿರ ರೂಪಾಯಿ ಕಲೆಕ್ಷನ್ ಆಗುವ ಕ್ಯಾಂಪ್ಗಳವು. ವಾರದಲ್ಲಿ ಐದು ದಿವಸ ಖುಷ್. ಘಟ್ಟದ ಆಟಗಳಲ್ಲಿ ರಕ್ಷಣೆಗಾಗಿ ನಾಲ್ಕೈದು ಮಂದಿ ಪೋಲಿಸರು ನಿಯುಕ್ತಿಯಾಗುತ್ತಿದ್ದರು. ಅವರಿಗೆಲ್ಲಾ ಊಟ, ಚಹ, ಭಕ್ಷೀಸು ನೀಡಿ ಸಂಮಾನಿಸುತ್ತಿದ್ದರು.

       ಕೈತುಂಬಾ ಹಣ ಬಂದ ದಿವಸ ಕಲಾವಿದರಿಗೆ ಚಹ, ತಿಂಡಿ ಸರಬರಾಜು. ಹೀಗೆ ವಾರದಲ್ಲಿ ಐದು ದಿವಸ ಚಹದ ಯೋಗ. ಅಂದರೆ ಕಲೆಕ್ಷನ್ ಆಗಿದೆ ಎನ್ನುವುದರ ಸೂಚನೆ. ನಾನು ಮೇಳ ಸೇರುವ ಹೊತ್ತಿಗೆ ಮೊದಲ ದರ್ಜೆಯ ಟಿಕೆಟಿಗೆ ಏಳು ರೂಪಾಯಿ. ಎರಡನೇ ದರ್ಜೆಯದಕ್ಕೆ ಐದು, ನಂತರದ್ದು ಮೂರು ರೂಪಾಯಿ. ನೆಲಕ್ಕೆ ಎಂಟಾಣೆ. ಮೇಳ ನಿಲುಗಡೆಯಾಗುವ ವರುಷ ಇದು ಮೂವತ್ತು, ಇಪ್ಪತ್ತು, ಹದಿನೈದು ರೂಪಾಯಿ ಆಗಿತ್ತು.

       ನಾನು ರಜೆ ಮಾಡುತ್ತಿದ್ದುದು ಕಡಿಮೆ. ಯಾಕೆಂದರೆ ಮೇಳದ ಬವಣೆ ಗೊತ್ತಿತ್ತು. ರಜೆಯ ಸುದ್ದಿ ಮಾತನಾಡುವಾಗ ನನ್ನ ಮದುವೆಯ ದಿನ ನೆನಪಾಗುತ್ತದೆ! ಅಂದು ವರದರಾಯ ಪೈಗಳು ಉಡುಗೊರೆ ಕೊಡುತ್ತಾ, ‘ಗಣಪಣ್ಣ, ನಾಡಿದ್ದು ಮಂಗಳೂರಿನ ನೆಹರು ಮೈದಾನದಲ್ಲಿ ಆಟ ಹಾಕಿದ್ದೇನೆಎಂದರು. ಹಾಗೆಂದುಬನ್ನಿ’ ಎಂದು ಹೇಳಲಿಲ್ಲ. ಅವರು ಹೇಳರು ಕೂಡಾ. ಆಟ ಹಾಕಿದ್ದೇನೆ ಅಂದರೆ ನೀವು ಬಂದರಾದೀತು ಎನ್ನುವ ಪರೋಕ್ಷ ಸೂಚನೆ.

(ಚಿತ್ರ ಕೃಪೆ : ರಾಮ್ ನರೇಶ್ ಮಂಚಿ)


No comments:

Post a Comment