Sunday, August 16, 2020

‘ಪದಯಾನ’ - ಪದ್ಯಾಣರ ಸ್ವಗತ – (ಎಸಳು 21)

 

 (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)

ಕಾಳಿಂಗ ನಾವಡರ ಪ್ರಶಂಸೆ :

          ಒಮ್ಮೆ ಮಣಿಪಾಲದ ಗೋಲ್ಡನ್ ಜ್ಯುಬಿಲಿ ಸಭಾಂಗಣದಲ್ಲಿ ‘ರುಕ್ಮಾಂಗದ ಚರಿತ್ರೆ’ ಪ್ರಸಂಗದ ಆಟ. ಗುಂಡ್ಮಿ ಕಾಳಿಂಗ ನಾವಡರ ಉಚ್ಛ್ರಾಯದ ದಿವಸಗಳು. ‘ಧರ್ಮಾಂಗದ ದಿಗ್ವಿಜಯ’ದ  ಕಥಾಭಾಗದ ತನಕ ನಾವಡರ ಪದ್ಯ. ಬಹಳ ಉತ್ತಮವಾಗಿ ಹಾಡಿ ರಂಗಕ್ಕೆ ಕಳೆ ತಂದಿದ್ದರು. ಪ್ರೇಕ್ಷಕರ ಒಲವು ಪಡೆದಿದ್ದರು. ಅವರಿಗೆ ಮೀಸಲಾಗಿದ್ದ ಕಥಾಭಾಗವನ್ನು ಮುಗಿಸಿ ಎದ್ದಾಗ ಒಂದಷ್ಟು ಮಂದಿ ಪ್ರೇಕ್ಷಕರೂ ಎದ್ದು ಹೊರಡಬೇಕೇ? ಆಗ ನಾವುಡರಿಗಾಗಿ ವ್ಯಾಪಕವಾದ ತಾರಾಮೌಲ್ಯವಿತ್ತು.

          ಛೇ.. ನನ್ನ ಮರ್ಯಾದೆ ಹೋಯಿತು. ಇನ್ನೇನು ಮಾಡಲಿ.. ನಾವಡರು ಹಾಡಿದ ಬಳಿಕ ಇತರ ಭಾಗವತರು ಹಾಡುವುದೆಂದರೆ ದೊಡ್ಡ ಸವಾಲು. ನನ್ನ ಹಾಡನ್ನು ಪ್ರೇಕ್ಷಕರೂ ಸ್ವೀಕರಿಸಬೇಕಲ್ವಾ. ಅಂತಹ ಹೊತ್ತಲ್ಲಿ ನನ್ನ ಹಾಡನ್ನು ಸ್ವೀಕರಿಸಲು ಪ್ರೇಕ್ಷಕರೂ ಸಿದ್ಧರಾಗಿರಬೇಕಲ್ವಾ... ‘ಇಂದು ನೀನು ಹಾಡಬಾರದು’ ಎಂದು ಮನಸ್ಸು ಎಚ್ಚರಿಸುತ್ತಿತ್ತು. ಯಾವ ಚಿಮ್ಮು ಉತ್ಸಾಹದಿಂದ ಮಣಿಪಾಲದ ಆಟಕ್ಕೆ ಹೋಗಿದ್ದೇನೋ ಅವೆಲ್ಲವೂ ಜರ್ರನೆ ಇಳಿದಿತ್ತು. ಇನ್ನು ಶೇಣಿಯವರ ರುಕ್ಮಾಂಗದನ ಪಾತ್ರ. ಅವರ ಪೀಠಿಕೆ ಪ್ರಸಿದ್ಧ. ಸ್ವಲ್ಪ ದೀರ್ಘ ಕೂಡಾ (ಕೆಲವೊಮ್ಮೆ) ಇಲ್ಲಿ ಆಟವನ್ನು ಹೇಗೆ ಮೇಲೆ ಹಾಕಲಿ? ಚಡಪಡಿಸುತ್ತಿದ್ದೆ. ಕಾರ್ಯಕ್ರಮಕ್ಕೆ ಒಪ್ಪಿ ಬಂದಾಗಿತ್ತು. ಕರ್ತವ್ಯ ಪೂರೈಸಬೇಕಲ್ಲವೇ.

          ರುಕ್ಮಾಂಗದನ ‘ಡಿಂಬ ದೇವಾಲಯದೊಳಗೆ.’ ಪದ್ಯಕ್ಕೆ ಶೇಣಿಯವರ ರುಕ್ಮಾಂಗದನ ಪ್ರವೇಶವಾಯಿತು. ಚಾರುಕೇಶಿ ರಾಗದಲ್ಲಿ ಪದ್ಯವನ್ನು ಆರಂಭಿಸಿದೆ. ಶೇಣಿಯವರೂ ಎತ್ತುಗಡೆ ಮಾಡಿಸುತ್ತಾ ಹಾಡಿಸುತ್ತಿದ್ದರು. ತಾನು ಸ್ವತಃ  ಹಾಡುತ್ತಿದ್ದರು. ಪದ್ಯದ ಮುಕ್ತಾಯ ಭಾವಕ್ಕೆ ನಾನು ಬರುವಾಗ ಪುನಃ ಎತ್ತುಗಡೆ ಮಾಡಿ ಹಾಡಲು ಅನುವು ಮಾಡುತ್ತಿದ್ದರು. ಏನಿಲ್ಲವೆಂದರೂ ಇಪ್ಪತ್ತು ನಿಮಿಷ ಹಾಡಿಸಿರಬಹುದು. ನಾನಂತೂ ಗರಿಷ್ಠ ಯತ್ನವನ್ನೂ ಮಾಡಿದ್ದೆ. ಪ್ರೇಕ್ಷಕರಿಂದ ಚಪ್ಪಾಳೆಯ ಸುರಿಮಳೆ. ಮನಸ್ಸಿನೊಳಗಿದ್ದ ತೊಳಲಾಟ ಶಮನವಾಯಿತು. ಏರಿದ ಒತ್ತಡ ಇಳಿದಿತ್ತು.

          ಪದ್ಯ ಮುಗಿದು ಇನ್ನೇನು ನಿಮಿಷವಾಗಿರಲಿಲ್ಲ. ಆಟವನ್ನು ವೀಕ್ಷಿಸುತ್ತಿದ್ದ ಕಾಳಿಂಗ ನಾವಡರು ವೇದಿಕೆಗೆ ಬಂದರು. ಕೈಕುಲುಕಿ, ಅಪ್ಪಿ ಅಭಿನಂದನೆ ಸಲ್ಲಿಸಿದರು. ಇದೆಲ್ಲಾ ಅನಿರೀಕ್ಷಿತವಾಗಿ ಆಗಿ ಹೋದ ವಿದ್ಯಮಾನ. ನಾನು ನಿಬ್ಬೆರಗಾಗಿದ್ದೆ. ಮಾತುಗಳು ಮೌನವಾಗಿತ್ತು. ಆಗ ಪ್ರೇಕ್ಷಕರ ಪ್ರತಿಕ್ರಿಯೆ ನೋಡಬೇಕಿತ್ತು... ನಿಜಕ್ಕೂ ಅದೊಂದು ಬೆರಗಿನೊಂದಿಗೆ ಸೇರಿದ ಪುಳಕದ ಸನ್ನಿವೇಶ. ಸಾರ್ಥಕದ ಕ್ಷಣ. ಈ ಕ್ರೆಡಿಟ್ ಶೇಣಿಯವರಿಗೆ ಸಲ್ಲಬೇಕು. ‘ನಮ್ಮ ಗಣಪ ಸೋಲಬಾರದು’ ಎಂಬ ಹಠ ಅವರಲ್ಲಿತ್ತು. ನಂತರದ ನನ್ನ ಪದ್ಯ ಪದ್ಯಗಳಿಗೆ ಪ್ರಶಂಸೆಗಳ ಮಾಲೆಗಳು.

          ಕಾಳಿಂಗ ನಾವಡರ ಷಣ್ಮುಖಪ್ರಿಯ, ನವರೋಜು, ಸುರುಟಿ.. ರಾಗಗಳ ಪ್ರಸ್ತುತಿ ಪರಿಣಾಮಕಾರಿ. ನಂತರದ ದಿನಗಳಲ್ಲಿ ಹಲವು ಬಾರಿ ದ್ವಂದ್ವ ಭಾಗವತಿಕೆಯಲ್ಲಿ ಒಂದಾಗುತ್ತಿದ್ದೆವು.  ರಂಗದಲ್ಲಿ ಸಹಕರಿಸುವ ಮನೋಭಾವ ಅವರಲ್ಲಿತ್ತು. ಅವರ ಹಿಂದೋಳ, ರಾಗದ ಪ್ರಸ್ತುತಿ ಜನಪ್ರಿಯವಾಗಿತ್ತು. ಕರ್ಣಪರ್ವ ಪ್ರಸಂಗದಲ್ಲೊಮ್ಮೆ ಶೇಣಿಯವರ ಕರ್ಣನ ಅರ್ಥಗಾರಿಕೆ. ನಾವಡರ ಭಾಗವತಿಕೆ. ‘ಏನು ಸಾರಥಿ ಸರಳು ಪಾಂಡವ..’ ಪದ್ಯವನ್ನು ಸೊಗಸಾಗಿ ಹೇಳಿದ್ದರು ಎಂದು ಶೇಣಿಯವರೇ ಪ್ರಶಂಸೆ ಮಾಡಿದ್ದರು.

          ಕಮ್ಮಟವೊಂದರಲ್ಲಿ ನಮಗಿಬ್ಬರಿಗೂ ಹಾಡುವ ಸಂದರ್ಭ ಒದಗಿ ಬಂದಿತ್ತು. ಕಾರ್ಯಕ್ರಮ ಮುಗಿದ ಮೇಲೆ, ‘ಗಣಪಣ್ಣ.. ತುಂಬಾ ತ್ರಾಣ ಹಾಕಿ ಯಾಕೆ ಹಾಡ್ತೀರಿ. ತ್ರಾಸವಾಗದಂತೆ ಹಾಡಲು ಅಭ್ಯಾಸ ಮಾಡಿ. ಆಗ ಸುಸ್ತಾಗುವುದಿಲ್ಲ.’ ಸಲಹೆ ನೀಡಿದ್ದರು. ‘ನಾವಡ್ರೆ.. ಗುರುಗಳ ಪಾಠವೇ ಹಾಗೆ. ಒಮ್ಮೆ ಪದ್ಯ ತೆಗೆಯುವಾಗ ಪಂಚಮಕ್ಕೆ ಏರಿಯೇ ಇಳಿಯಬೇಕು. ಅದು ಪರಿಣಾಮ ಹೆಚ್ಚು. ಅದನ್ನು ಪಾಲಿಸುತ್ತಿದ್ದೇನೆ’ ಎಂದಿದ್ದಕ್ಕೆ ಮನಸಾ ಬಾಯಿತುಂಬಾ ನಕ್ಕ ಆ ದಿನಗಳನ್ನು ಮರೆಯಲಾಗುತ್ತಿಲ್ಲ.

          ಕಾಳಿಂಗ ನಾವಡರು ಮರಣಿಸಿದಾಗ ನೋವಿನಿಂದ ಅಧೀರನಾಗಿದ್ದೆ. ನಂತರ  ಪ್ರತೀ ವರುಷವೂ ಅವರ ನೆನಪಿನ ಕಾರ್ಯಕ್ರಮಕ್ಕೆ ಅವರ ಶ್ರೀಮತಿಯವರು ಆಮಂತ್ರಣವನ್ನೂ ಕಳುಹಿಸುತ್ತಿದ್ದರು. ನನಗೆ  ಅವರ ಹೆಸರಿನ ಪ್ರಶಸ್ತಿ ಅರಸಿ ಬಂದಾಗ ಖುಷಿಯಾಗಿತ್ತು. ಶೇಣಿಯವರಿಗೆ ಬಡಗು ತಿಟ್ಟಿನಲ್ಲಿ ಕಾಳಿಂಗ ನಾವಡರು, ತೆಂಕಿನಲ್ಲಿ ದಾಮೋದರ ಮಂಡೆಚ್ಚರೆಂದರೆ ಅಚ್ಚುಮೆಚ್ಚು.

1 comment:

  1. The Best Slots | Casino Roll
    The best slots at Casino Roll. If you love table games, ventureberg.com/ to play blackjack, you casino-roll.com have to bet apr casino twice for https://tricktactoe.com/ the dealer to win. The dealer https://deccasino.com/review/merit-casino/ must

    ReplyDelete