Thursday, August 27, 2020

‘ಪದಯಾನ’ - ಪದ್ಯಾಣರ ಸ್ವಗತ – (ಎಸಳು 32)


(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ)

ಬದಲಾವಣೆ ಅಪರಾಧವಲ್ಲ :

          ಬದಲಾವಣೆಗೆ ಕಲಾವಿದ ಒಗ್ಗಿಕೊಳ್ಳಬೇಕು. ಚೌಕಟ್ಟಿನೊಳಗಿನ ಬದಲಾವಣೆ ಸ್ವೀಕಾರಾರ್ಹ. ಹಾಗೆಂತ ಸ್ವಚ್ಛಂದ ಸಲ್ಲದು. ಉದಾ: ಝಂಪೆ ತಾಳದ ಪದ್ಯ. ಇದು ಬೇರೆ ಯಾವ ತಾಳಗಳಿಗೂ ಒಗ್ಗದು, ಬಗ್ಗದು. ಇದನ್ನು ಬೇಕಾದಂತೆ ಬಾಗಿಸುವವರನ್ನು ಗಮನಿಸಿದ್ದೇನೆ. ಇಂತಹ ಸಾಹಸವನ್ನು ಮಾಡದಿರುವುದು ಒಳಿತು. ಇಷ್ಟು ವರುಷಗಳ ಕಾಲ ಇಂತಹ ರಂಗಾನ್ಯಾಯಗಳನ್ನು ಮಾಡದ್ದರಿಂದ ನನ್ನ ಸ್ಥಾನ ಈಗಲೂ ಉಳಿದುಕೊಂಡಿದೆ! ಇತರ ತಾಳಗಳು ಬೇರೆಯದಕ್ಕೂ ಹೊಂದಬಹುದು.

          ಹಿಂದಿನ ಭಾಗವತಿಕೆಯನ್ನು ಆಸ್ವಾದಿಸಿದ ಬಹಳ ಮಂದಿಯ ಆರೋಪವನ್ನು ಕೇಳಿದ್ದೇನೆ - ನಿಮ್ಮ ಪದ್ಯ ಆಧುನಿಕಗೊಂಡಿದೆ, ಹೌದೇ?. ಹೌದು, ಒಪ್ಪಿಕೊಳ್ಳುತ್ತೇನೆ. ಮೊದಲೇ ಹೇಳಿದಂತೆ ಮೇಳದ ಹಿತದೃಷ್ಟಿಯ ಮುಂದೆ ಸ್ವಂತದ್ದಾದ ಕಾಮಿತಗಳು ಗೌಣ. ‘ಒಬ್ಬನೇ ಮೆರೆಯಬೇಕು’ ಎನ್ನುವ ಜಾಯಮಾನದವನಲ್ಲ. ನಾವು ಮೇಳವನ್ನು ಒಪ್ಪಿದ್ದೇವೆ. ನಮ್ಮನ್ನು ಮೇಳ ಒಪ್ಪಿದೆ. ಜನರು ಒಪ್ಪಿದ್ದಾರೆ. ಒಪ್ಪಿತ ಬದುಕಿನಲ್ಲಿ ಆಗಬೇಕಾದುದು ಏನು? ಪ್ರದರ್ಶನ ಕಳೆಗಟ್ಟಬೇಕು. ಅಭಿಮಾನಿಗಳ ಆಕ್ಷೇಪ ಸಹಜ. ಆದರೆ ಹತ್ತು ಪದ್ಯದಲ್ಲಿ ಎರಡು ಪದ್ಯವನ್ನಾದರೂ ಹಳೆ ಶೈಲಿಯಲ್ಲಿ ಹೇಳದೆ ಬಿಡುವುದಿಲ್ಲ!

          ಸುರತ್ಕಲ್ ಮೇಳದ ಚೌಕಿಯಲ್ಲಿ ಅವ್ಯಕ್ತ ಶಿಸ್ತು ಅನಾವರಣಗೊಳ್ಳುತ್ತಿದ್ದುವು. ಹಿರಿಯ ಕಲಾವಿದರಲ್ಲಿ ಭಯ, ಭಕ್ತಿಯಿತ್ತು. ಶೇಣಿಯವರು ಚೌಕಿಗೆ ಬಂದರೆಂದರೆ ಗಪ್ಚಿಪ್. ಅವರಿಗೆ ಹೆದರಿ ಎಂದು ಭಾವಿಸಬೇಕಾಗಿದ್ದಿಲ್ಲ. ಅವರ ವಿದ್ವತ್ತನ್ನು ಕಲಾವಿದರು, ಪ್ರೇಕ್ಷಕರು ಗೌರವಿಸುತ್ತಿದ್ದರು. ಸುಮಾರು ಒಂದೂವರೆ ದಶಕಗಳಿಂದ ಯಾವ ಮೇಳಗಳಲ್ಲೂ ಶಿಸ್ತು ಕಾಣುವುದಿಲ್ಲ. ಕಾರಣ ಅವಜ್ಞೆಯಲ್ಲ. ಕಾಲಸ್ಥಿತಿ, ಚಿತ್ತಸ್ಥಿತಿಗಳೇ ಕಾರಣ. ಚೌಕಿಯಲ್ಲಿ ಕನಿಷ್ಠ ಶಿಸ್ತು ಬೇಕು. ಶಿಸ್ತು ಎಲ್ಲಿಂದ ಬರುತ್ತದೆ? ಕಲಾವಿದರಾದ ನಾವು ರೂಢಿಸಿಕೊಂಡು ಅನುಷ್ಠಾನಿಸಿದರೆ ಆಯಿತು. ಇದನ್ನೇ ಬದ್ಧತೆ ಎನ್ನುವುದು. ಅದು ಒತ್ತಾಯದಿಂದ, ಒತ್ತಡದಿಂದ ಬರುವಂತಹುದಲ್ಲ. ಸ್ವ-ವಿವೇಚನೆಯಿಂದ ರೂಢಿಸಿಕೊಳ್ಳಬೇಕು. ಸ್ವ-ಶಿಸ್ತು ಕಲಾವಿದನಿಗೆ ಭೂಷಣ.

          ಕಲಾಯಾನದಲ್ಲಿ ಸಮಯ ಪಾಲನೆಯನ್ನು ಗಾಢವಾಗಿ ಪಾಲಿಸಿದ್ದೇನೆ. ಸಂಘಟಕರು, ಪ್ರೇಕ್ಷಕರು ನಮ್ಮನ್ನು ಕಾಯುವುಂತೆ ಮಾಡುವುದು ಇದೆಯಲ್ಲಾ, ಅದು ಕಲೆಗೆ ಮಾಡುವ ದ್ರೋಹ. ಕಲೆಯ ಮುಂದೆ ಕಲಾವಿದ ಎಂದೆಂದಿಗೂ ಸಣ್ಣವನು. ‘ಗಣಪಣ್ಣ ತಡವಾಗಿ ಬಂದು ಕಾರ್ಯಕ್ರಮ ತಡವಾಯಿತು’ ಎನ್ನುವ ಅಪವಾದವನ್ನು ಇದುವರೆಗೆ ಕೇಳಿಲ್ಲ, ಅದರಂತೆ ವರ್ತಿಸಿಲ್ಲ ಎನ್ನುವ ಸಮಾಧಾನವಿದೆ. ಆಟವಿರಲಿ, ಕೂಟವಿರಲಿ ಕನಿಷ್ಠ ಅರ್ಧ ಗಂಟೆ ಮುಂಚಿತವಾಗಿ ತಲುಪುತ್ತಿದ್ದೆ. ಕೆಲವೊಮ್ಮೆ ನಾನೇ ಪ್ರಥಮ ಪ್ರೇಕ್ಷಕನಾದುದೂ ಇದೆ! ನಾನು ಹೋದ ಬಳಿಕವೇ ಸಂಘಟಕರು ಆಗಮಿಸಿದ ಕಾರ್ಯಕ್ರಮಗಳೂ ಇವೆ! ಅದು ನನ್ನ ಸಮಸ್ಯೆಯಲ್ಲ. ಬದ್ಧತೆಯು ಕಲಾವಿದನಿಗೆ ಮೆರುಗನ್ನು ತರುತ್ತದೆ. ಸಂಘಟಕರಿಗೆ ಕಲಾವಿದ ಹೊರೆಯಾಗದಂತೆ ಎಚ್ಚರ ವಹಿಸಿದಷ್ಟೂ ಹೆಚ್ಚು ಕಾಲ ಖುಷಿಯಿಂದ ವ್ಯವಸಾಯ ಮಾಡಬಹುದು!

          ಮಹಮ್ಮಾಯಿ ಮೇಳದಲ್ಲಿ ಕೀರ್ತಿಶೇಷ ಕಡಬ ನಾರಾಯಣ ಆಚಾರ್ಯರು ಚೆಂಡೆ, ಮದ್ದಳೆಯಲ್ಲಿ ಸಾಥ್. ನನ್ನ ಮನೋಧರ್ಮವನ್ನು ಅರಿತ ಕಲಾವಿದ. ಸ್ವಭಾವತಃ ಸಜ್ಜನ. ಆಟ, ಕೂಟಗಳಲ್ಲಿ ಒಂದಾಗಿ, ಒಂದೇ ಮನೆಯವರಂತೆ ಬಾಳಿದ, ಬೆಳೆದ ದಿನಗಳಿದ್ದುವು. ಒಟ್ಟಿಗೆ ಊಟ, ತಿಂಡಿ, ಪ್ರಯಾಣ... ಒಂದೇ ಮನಸ್ಸು, ದೇಹ ಎರಡು. ಅಕಾಲಿಕವಾಗಿ ಅವರನ್ನು ಕಳೆದುಕೊಂಡೆವು. ಆ ದಿವಸಗಳಲ್ಲಿ ಅವರಿಲ್ಲದ ಹಿಮ್ಮೇಳವನ್ನು ಊಹಿಸುವುದೂ ಕಷ್ಟವಾಗಿತ್ತು. ಮತ್ತೆ ಸರಿಹೋಯಿತು. ಅವರ ಚಿರಂಜೀವಿ ವಿನಯ ಆಚಾರ್ ಕಡಬ ತಂದೆಯ ಹಾದಿಯಲ್ಲಿ ಮುನ್ನಡೆದವರು. ಪ್ರತಿಭಾನ್ವಿತ ಕಲಾವಿದ. ಸುರತ್ಕಲ್ ಮೇಳದಲ್ಲಿ ನಾರಾಯಣ ಆಚಾರ್, ಈಗ ಅವರ ಮಗ ವಿನಯ ಆಚಾರ್ - ಇದು ಯೋಗಾಯೋಗ.

          ಹೊಸನಗರ ಮೇಳದ ಹತ್ತನೇ ವರುಷ ತಿರುಗಾಟ ಪೂರ್ತಿಯಾಯಿತು. ಚಿಕ್ಕಪ್ಪ ಪದ್ಯಾಣ ಶಂಕರನಾರಾಯಣ ಭಟ್ಟರು ಹಿಮ್ಮೇಳದ ಭಾಷಾವಿದ. ರಂಗ ನಿರ್ದೇಶಕ. ಪೌರಾಣಿಕ ಪ್ರಸಂಗಗಳ ಸಂಪೂರ್ಣ ಮಾಹಿತಿಯಿದ್ದವರು. ಚೆಂಡೆ, ಮದ್ದಳೆಗಳ ನುಡಿತಕ್ಕೆ ಭಾಷೆ ಕೊಟ್ಟವರು. ಸುನಾದವನ್ನು ನೀಡಿದವರು. ಎಲ್ಲಾ ಪಾತ್ರಗಳ ಸ್ವ-ಭಾವ, ನಡೆಗಳನ್ನು ಅರಿತ ಪರಿಪೂರ್ಣ ಕಲಾವಿದ. ಅವರು ನನ್ನೊಂದಿಗೆ ಹಿಮ್ಮೇಳದಲ್ಲಿರುವುದರಿಂದ ಭೀಮಬಲ ಬಂದಿದೆ. ಸಹೋದರ ಪದ್ಯಾಣ ಜಯರಾಮ ಭಟ್ ಇವನನ್ನು ಪ್ರತ್ಯೇಕ ಹೇಳಬೇಕಾಗಿಲ್ಲ. ಚೈತನ್ಯಕೃಷ್ಣ ಪದ್ಯಾಣ ಹಿರಿಯರ ಹಾದಿಯಲ್ಲಿ, ಭರವಸೆಯ ಕಲಾವಿದನಾಗಿ ಮೈತುಂಬಿಸಿಕೊಳ್ಳುತ್ತಿದ್ದಾರೆ.


No comments:

Post a Comment