Saturday, August 8, 2020

ಪದ್ಯಾಣರ ಸ್ವಗತ – (ಎಸಳು 13)

  (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)

       ಇದೇ ಸಂದರ್ಭದಲ್ಲಿ ಮಿತ್ತನಡ್ಕ ಜಾತ್ರೆಯ ಸಂದರ್ಭದಲ್ಲಿ ಜರುಗಿದ ಆಟಕ್ಕೆ ಪದ್ಯ ಹೇಳುವ ಅವಕಾಶ ಒದಗಿತು. ನಾಗರಾಜ ಶೆಟ್ಟರ ನೇತೃತ್ವದ ಕುಂಡಾವು ಮೇಳದ ಆಟ. ಮಾಂಬಾಡಿ ಗುರುಗಳು ಉಪಸ್ಥಿತರಿದ್ದರು.  ನಾಲ್ಕು ಉಸಿರಿನಲ್ಲಿ ಅಂಬುರುಹದಳನೇತ್ರೆ.... ಭಾಮಿನಿಯನ್ನು ವಿಸ್ತಾರವಾಗಿ ಹೊಸ ವಿನ್ಯಾಸದಲ್ಲಿ ಧೈರ್ಯದಿಂದ ಹಾಡಿದೆ. ಗುರುಗಳು ಇರುವಾಗ ಹೀಗೆ ಹಾಡಬಾರದಿತ್ತು ಎಂದು ಒಳಮನಸ್ಸು ಎಚ್ಚರಿಸಿತ್ತು. 

       ಪ್ರಸಂಗ ಶುರುವಾಯಿತು. ಪೀಠಿಕೆ ಪದ್ಯ ಮುಗಿಯುತ್ತಿದ್ದಂತೆ ಗುರುಗಳು ಕುಳಿತಲ್ಲಿಂದ ಎದ್ದರು. ಹಿಂದಿನ ‘ಕುಟ್ಟಿ ಪ್ರಕರಣ’ ನೆನಪಾಯಿತು! ರಂಗಸ್ಥಳದತ್ತ ಹೆಜ್ಜೆ ಹಾಕಿದ್ದರು. ಆಗಲೇ ನಾನು ಬೆವತು ಕಂಗಾಲು! ಬಾಯಿ ಒಣಗಿತ್ತು. ಶರೀರ ನಡುಗುತ್ತಿತ್ತು. ಇನ್ನೊದು ಕುಟ್ಟಿ ಗ್ಯಾರಂಟಿ, ಮರ್ಯಾದೆ ಹೋಗುತ್ತದೆ! ‘ಭಾರೀ ಲಾಯಕ್ಕು ಆಯಿದು ಗಣಪ. ಇನ್ನು ಆನು ಸತ್ತರೂ ತೊಂದರೆಯಿಲ್ಲೆ. ಖುಷಿಯಾತು. ಇನ್ನಾರ ಜನಕ್ಕೆ ಹೀಂಗೇ ಬೇಕಪ್ಪದು. ಆದ್ರೆ ಯಕ್ಷಗಾನಕ್ಕೆ ಅವಮಾನ ಅಪ್ಪಂಗೆ ಸೇರಿಸಡ,’ ಎಂದು ರಂಗದಲ್ಲೇ ಬೆನ್ನು ತಟ್ಟಿದಾಗ ನಿರಾಳವಾಗಿದ್ದೆ. ತುಂಬಿದ ಸಭೆಯ ಮುಂದೆ ಗುರುಗಳು ಶ್ಲಾಘಿಸಿದಾಗ ಉಬ್ಬಿ ಉದ್ದಾಗಿದ್ದೆ! ಗುರುಗಳಿಂದ ಸಿಕ್ಕ ಆಶೀರ್ವಾದ ಪೂರ್ವಕವಾದ ಪ್ರಶಂಸೆಯ ಮುಂದೆ ಮಿಕ್ಕ ಪ್ರಶಸ್ತಿಗಳು ಯಾಕೆ?

       ಮುಂದಿನ ವರುಷ ಪುನಃ ಧರ್ಮಸ್ಥಳ ಕೇಂದ್ರದಲ್ಲಿ ತರಬೇತಿ ಮುಂದುವರಿಕೆ. ಆಗ ಭಾಗವತಿಕೆಗೆ ವಾಸು ಮದ್ಲೆಗಾರರ ನಿಕಟವರ್ತಿ ರಾಮಕೃಷ್ಣ ಪದಾರ್ಥಿಯವರು ಗುರುಗಳು. ಮಾಂಬಾಡಿ ಗುರುಗಳ ಪಾಠಕ್ಕೂ ಇವರ ಪಾಠಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ಶೈಲಿ, ಮಟ್ಟುಗಳಲ್ಲೂ ಭಿನ್ನ. ಮೊದಲ ವರುಷವೇ ಅಜ್ಜನಿಂದ ಬಹುತೇಕ ರಾಗ, ತಾಳಗಳನ್ನು ಕಲಿತ ಕಾರಣ ಎರಡನೇ ವರುಷ ಚೆಂಡೆ, ಮದ್ದಳೆಯ ಕಲಿಕೆಯನ್ನು ಗಟ್ಟಿಗೊಳಿಸಿದೆ. ಮೂರೂವರೆ ತಿಂಗಳ ತರಬೇತಿ. ನಂತರ ಪುನಃ ಹವ್ಯಾಸಿ ಆಠ-ಕೂಟಗಳಲ್ಲಿ ಭಾಗಿ.

       ಕುಕ್ಕುಜಡ್ಕದಲ್ಲಿ ಒಮ್ಮೆ ಕುಂಡಾವು ಮೇಳವು ಟೆಂಟ್ ಊರಿತ್ತು. ಆಗ ಮೇಳದಲ್ಲಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಭಾಗವತರು. ಸಣ್ಣಜ್ಜನ ಮಗ ಪದ್ಯಾಣ ಶಂಕರನಾರಾಯಣ ಭಟ್ಟರು ಮದ್ದಳೆಗಾರರು. ಇವರು ಶಂಕರಪ್ಪಚ್ಚಿ ಎಂದೇ ಆಪ್ತರು, ಅಭಿಮಾನಿಗಳು ಕರೆಯುತ್ತಾರೆ. ಅಂದು ಭಾಗವತರಿಗೆ ಅಸೌಖ್ಯ. ಪರ್ಯಾಯ ವ್ಯವಸ್ಥೆಗಾಗಿ ಶಂಕರಪ್ಪಚ್ಚಿ ಮನೆಗೆ ಬಂದರು. ತಂದೆಯವರಲ್ಲಿ ವಿಚಾರ ಪ್ರಸ್ತಾಪಿಸಿದ್ದರು. ‘ಗಣಪ ಬಂದ್ರೆ ಒಳ್ಳೇದಿತ್ತು’ ಎಂದರು. ತಂದೆ ಒಪ್ಪಿಗೆ ನೀಡಿದರು. ಆಗ ಸ್ವರ್ಗಕ್ಕೆ ಮೂರೇ ಗೇಣು!

       ಶಂಕರಪ್ಪಚ್ಚಿಯಲ್ಲಿ ಜಾವಾ ಬೈಕ್ ಇತ್ತು. ಅವರೊಂದಿಗೆ ತೆರಳಿದೆ. ಊರಿನ ಉಂರ್ಬಿ ತೋಡು ದಾಟುವಾಗ ಕಲ್ಲಿಗೆ ನನ್ನ ಪಾದ ಬಡಿದು ಅಡಿ ಮಗುಚಿ, ಪಾದ ಬಾತು ಹೋಯಿತು! ಮನೆಗೆ ವಿಷಯ ತಿಳಿಸಿ ಅವರು ಆಟಕ್ಕೆ ಹೋದರು. ಸ್ಥಳೀಯ ವೈದ್ಯ ಮಜಲುಕರೆ ನರಸಿಂಹ ಭಟ್ಟರಲ್ಲಿಗೆ ಕರೆದೊಯ್ದರು. ಮಗುಚಿದ ಭಾಗಕ್ಕೆ ಪೊಳಿಮಣೆಯಲ್ಲಿ ಒಂದೇ ಪೆಟ್ಟು! ಪಾದ ಮೊದಲಿನ ಸ್ಥಿತಿಗೆ ಬಂದಿತ್ತು. ಪೆಟ್ಟು ಬಿದ್ದಾಗಿನ ಕ್ಷಣ ಇದೆಯಲ್ಲಾ... ಪಡ್ಚ..! ಹದಿನೈದು ದಿವಸದ ಆರೈಕೆಯ ಬಳಿಕ ಗುಣವಾಯಿತು. ಭಾಗವತಿಕೆ ಮಾಡುವ ಅವಕಾಶವು ಕೈಗೆ ಬಂದರೂ ಬಾಯಿಗೆ ಸಿಗದಂತಾಯಿತು.

       ಹವ್ಯಾಸಿಯಾಗಿ ಆಟಗಳಲ್ಲಿ ಭಾಗವಹಿಸುತ್ತಿದ್ದಾಗ ಶಂಕರ ಭಟ್ಟರ ಟೂರಿಂಗ್ ಕ್ಯಾಂಪು ತಿರುಗಾಟಕ್ಕೆ ಸಿದ್ಧವಾಗಿತ್ತು. ಬರ್ತೀರಾ ಎಂದಾಗ ಒಪ್ಪಿಗೆ ಕೊಟ್ಟಿದ್ದೆ. ದೂರದೂರಿನ ಆಟಕ್ಕೆ ಭಾಗವತನಾಗಿ ಹೋದೆ. ಅದುವರೆಗೆ ಚೆಂಡೆ, ಮದ್ದಳೆಯನ್ನು ನುಡಿಸುತ್ತಿದ್ದವ ಜಾಗಟೆ ಹಿಡಿದೆ. ತಂಡದ ಎಲ್ಲಾ ಕಲಾವಿದರೂ ಭಾಗವತಿಕೆಯನ್ನು ಶ್ಲಾಘಿಸಿದರು. ಕಲಾವಿದರು ರಂಗ ಮತ್ತು ಪ್ರಸಂಗದ ನಡೆಯನ್ನು ಪ್ರೀತಿಯಿಂದ ಹೇಳುತ್ತಿದ್ದರು. ಹಗಲು ಹೊತ್ತಲ್ಲಿ ಪ್ರಸಂಗಗಳನ್ನು ಕೈಯಲ್ಲಿ ಬರೆದು ಪ್ರತಿ ಮಾಡುತ್ತಿದ್ದೆ.

       ತಂಡದಲ್ಲಿ ಶಿವರಾಮ ಜೋಗಿ, ಪ್ರಕಾಶ್ಚಂದ್ರ ರಾವ್ ಬಾಯಾರು, ವೇಣೂರು ಸುಂದರ ಆಚಾರ್.. ಮೊದಲಾದ ಅನುಭವಿ ಕಲಾವಿದರಿದ್ದರು. ಅವರಾಗ ಸುರತ್ಕಲ್ ಮೇಳದ ಕಲಾವಿದರು. ಮಳೆಗಾಲದಲ್ಲಿ ಟೂರಿಂಗ್ ತಂಡದಲ್ಲಿ ಭಾಗವಹಿಸುತ್ತಿದ್ದರು. ಸಂಪಾದನೆ ಏನಾದ್ರೂ ಬೇಕಲ್ವಾ. ವರುಷ ಸುರತ್ಕಲ್ ಮೇಳದಲ್ಲಿ ವಾಸುದೇವ ಆಚಾರ್ಯ ಎನ್ನುವವರು ಸಂಗೀತಗಾರರಾಗಿದ್ದರು. ಅವರು ಮೇಳವನ್ನು ಬಿಡುವವರಿದ್ದರು.

  ನೀವು ಸುರತ್ಕಲ್ ಮೇಳಕ್ಕೆ ಸಂಗೀತಗಾರರಾಗಿ ಬರ್ತೀರಾ - ಶಿವರಾಮ ಜೋಗಿ, ವೇಣೂರು ಸುಂದರ ಆಚಾರ್ಯರು ಆಮಂತ್ರಿಸಿದಾಗ ಖುಷಿಯಿಂದ ದಿಕ್ಕೇ ತೋಚಲಿಲ್ಲ. ಮೇಳಗಳಿಗೆ ಹೋಗಿ ಅಭ್ಯಾಸವಿಲ್ಲದ್ದರಿಂದ ಅಳುಕಿದೆ. ಬರುವಂತೆ ಒತ್ತಾಯಿಸಿದರು.

       ಮುಂದಿನ ಚೊಚ್ಚಲ ತಿರುಗಾಟ ಸುರತ್ಕಲ್ ಮೇಳದಿಂದ.

(ಚಿತ್ರ ಕೃಪೆ : ಜಾಲತಾಣ – ಚಿತ್ರ ಕಲಾವಿದರ ಹೆಸರು ತಿಳಿದಿಲ್ಲ.)

No comments:

Post a Comment