Monday, August 31, 2020

‘ಪದಯಾನ’ - ಎಸಳು 36


ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ -

ಪದಯಾನದಲ್ಲಿ ಸೋಲರಿಯದ ಹೆಜ್ಜೆ 1

ಲೇ : ಶೀಲಾ ಗಣಪತಿ ಭಟ್

(ಪದ್ಯಾಣರ ಪತ್ನಿ)

          ಕಾಸರಗೋಡು ತಾಲೂಕಿನ ಕುಂಬ್ಡಾಜೆ ಗ್ರಾಮದ ಉಪ್ಪಂಗಳವು ನನಗೆ ತವರು ಮನೆ. ತಂದೆ ಗೋಪಾಲಕೃಷ್ಣ ಭಟ್ಟರಿಗೆ ನಾವು ಐವರು ಮಕ್ಕಳು. ಮೂವರು ಹೆಣ್ಣು. ಇಬ್ಬರು ಗಂಡು. ನಾನು ಹಿರಿಯವಳು. ಓದಿದ್ದು ಪಿ.ಯು.ಸಿ. ಜತೆಗೆ ಸಂಗೀತ ಅಭ್ಯಾಸ. ನನ್ನ ಅಜ್ಜ ಸುಬ್ರಾಯ ಭಟ್. ಹವ್ಯಾಸಿ ಭಾಗವತರು. ತಂದೆಗೆ ಹೇಗೂ ಯಕ್ಷಗಾನದ ಒಲವಿದೆ. ಹೀಗೆ ನನ್ನೊಳಗೆ ಯಕ್ಷಗಾನದ ಆಸಕ್ತಿ ಅಜ್ಞಾನವಾಗಿ ಬೆಳೆದಿತ್ತು. ಹತ್ತಿರದಲ್ಲಿ ಮೇಳದ ಆಟ ಬಂದರೆ ಅಪ್ಪ ಹೋಗಲು ಬಿಡಲಾರರು. ಯಕ್ಷಗಾನಕ್ಕೆ ಈಗಿನಷ್ಟು ಗೌರವ ಇರಲಿಲ್ಲ.

          ನನಗಾಗ ಹದಿನೆಂಟು ವರುಷ ತುಂಬಿರಬಹುದಷ್ಟೇ. ಕಂಕಣಬಲ ಕೂಡಿಬಂತು. ಋಣಾನುಬಂಧ ಹೊಸೆಯಿತು. ನನ್ನನ್ನು ನೋಡಲು ಬಂದುಬಿಟ್ಟರು. ಅವರಲ್ಲೊಬ್ಬರು ಸ್ವಲ್ಪ ಆಧುನಿಕ ಉಡುಪು ತೊಟ್ಟು ಗಮನ ಸೆಳೆಯುತ್ತಿದ್ದರು. ಹುಡುಗಿ ನೋಡುವ ಶಾಸ್ತ್ರ ಮುಗಿಯಿತು. ಕಾಫಿ ತಿಂಡಿ ಸಮಾರಾಧನೆಯಾಗಿ ಹೊರಟುಹೋದರು.

          ಮತ್ತೆ ತಿಳಿಯಿತು, ಇವರು ಅವರಲ್ಲ ಅಂತ! ಬಂದವರಲ್ಲಿ ಪಂಚೆ ಉಟ್ಟು, ಸದ್ದಿಲ್ಲದೆ ಒಂದೆಡೆ ಕುಳಿತವರು ಭಾವಿ ಗಂಡ. ಓ.. ದೇವರೇ.. ಎಂತಹ ಪ್ರಮಾದವಾಗಿ ಹೋಗಿತ್ತು. ಮನೆಯಲ್ಲಿ ಅಪ್ಪ ಹುಡುಗನನ್ನು ತೋರಿಸಿಲ್ಲ. ಬಂದವರೂ ಹುಡುಗನ ಪರಿಚಯ ಮಾಡಲಿಲ್ಲ. ನಾವು ಯಾರನ್ನೋ ನೋಡಿದೆವು. ಆಗಿನ ಕಾಲವೂ ಹಾಗಿತ್ತು. ಆ ದಿವಸ ಅಂದರೆ ಹುಡುಗಿ ನೋಡುವ ಕಾರ್ಯಕ್ರಮಕ್ಕೆ ಅವರನ್ನು ಮೇಳದಿಂದ ನೇರವಾಗಿ ಕರಕೊಂಡು ಬಂದಿದ್ದರಂತೆ. ಇವರು ‘ಯಕ್ಷಗಾನ ಭಾಗವತ’ ಎಂದಷ್ಟೇ ತಿಳಿದಿತ್ತು. ವಿಷಯ ತಿಳಿದಾಗ ನನ್ನೊಳಗಿನ ಯಕ್ಷಗಾನದ ಆಸಕ್ತಿಯೊಂದು ಮಿಂಚಲು ಹವಣಿಸುತ್ತಿತ್ತು.

          ಪದ್ಯಾಣರ ಹಾಡುಗಳನ್ನು ಕೇಳಿದ್ದೆ. ಆಸ್ವಾದಿಸಿದ್ದೆ. ನನಗೂ ಸಂಗೀತದ ನಂಟು ಇದ್ದುದರಿಂದ ಹಾಡಿಗೆ ಮನಸೋತಿದ್ದೆ. ಮನೆ, ಅಂತಸ್ತು, ಆಸ್ತಿ.. ಯಾವುದನ್ನೂ ನೋಡಿದವಳೇ ಅಲ್ಲ! ಅಪೇಕ್ಷಿಸಿದವಳೂ ಅಲ್ಲ. 1984 ಮೇ 13ರಂದು ಪದ್ಯಾಣ ಗಣಪತಿ ಭಟ್ಟರ ಅರ್ಧಾಂಗಿಯಾದೆ. ಎರಡು ದಿವಸ ಅದ್ದೂರಿ ಮದುವೆ ಸಂಭ್ರಮ. 13ರಂದು ಮದುವೆ..... ಮೇ 18ರಂದು ಅವರು ಮೇಳಕ್ಕೆ ಹೊರಟೇ ಹೋದರು!

          ಆಟ ರಾತ್ರಿಯಿಡೀ ನಡೆಯುತ್ತದೆ ಎಂದು ತಿಳಿದಿರಲಿಲ್ಲ. ಅವರು ಮನೆಬಿಟ್ಟು ತಿಂಗಳುಗಟ್ಟಲೆ ಇರುತ್ತಾರೆ ಎನ್ನುವುದೂ ಅರಿತವಳಲ್ಲ. ಆತಂಕವಾಯಿತು. ಮನೆಯಲ್ಲಿ ಹಿರಿಯರಿದ್ದರು. ಮಾತನಾಡುವ ಹಾಗಿಲ್ಲ. ಅಕ್ಕಂದಿರಲ್ಲಿ ವಿಚಾರಿಸಿದಾಗ ‘ಅವರಾ.. ಅಪರೂಪಕ್ಕೆ ಬರುತ್ತಾರಷ್ಟೇ’ ಎಂದು ಕಣ್ಣು ಮಿಟುಕಿಸಿದರು. ನನಗೆ ಆಕಾಶ ತಲೆಮೇಲೆ ಬೀಳಲು ಮಾತ್ರ ಬಾಕಿ! ಸುದ್ದಿ ಕೇಳಿ ಅಧೀರಳಾಗಿದ್ದೆ. ಅವರನ್ನು ಗ್ರಹಿಸುತ್ತಾ ಅತ್ತ ದಿನಗಳಿಗೆ ಲೆಕ್ಕವಿಲ್ಲ. ನನ್ನ ಅಳುವನ್ನು ಮನೆಯಲ್ಲಿ ಯಾರೂ ಗಮನಿಸಿಲ್ಲ. ಅಳುವುದು ಅಭ್ಯಾಸವಾಯಿತು. ಮೇ 18ನೇ ತಾರೀಕಿಗೆ ಹೋದವರು ಮೇ 25ಕ್ಕೆ ಮನೆಗೆ ಬಂದರು.

          ವಿವಾಹವಾಗಿ ಪದ್ಯಾಣರ ಮನೆಯನ್ನು, ಮನವನ್ನು ಹೊಕ್ಕಿದ್ದೆ. ಹನಿಮೂನ್ ಇಲ್ಲ! ಮದುಮಕ್ಕಳ ತಿರುಗಾಟ ದೂರದ ಮಾತು. ಪದ್ಯಾಣ ಮನೆತನ ತುಂಬಾ ಶ್ರೀಮಂತಿಕೆಯಿಂದ ಕೂಡಿದ್ದು. ನಾನು ಮನೆ ಹೊಕ್ಕಾಗ ಇಲ್ಲಿನ ಆತಿಥ್ಯದ ವ್ಯವಸ್ಥೆ ನೋಡಿ ದಂಗಾಗಿದ್ದೆ. ಪ್ರತಿದಿನ ಐವತ್ತು ಮಂದಿ ಭೋಜನಕ್ಕೆ ಹಾಜರ್. ಯಕ್ಷಗಾನಕ್ಕೆ ಸಂಬಂಧಪಟ್ಟವರು, ಹರಟೆಗಾಗಿ ಬರುವವರು, ಮಾತುಕತೆಗಾಗಿ ಆಗಮಿಸಿದವರು, ತಮಾಶೆ, ವಿಮರ್ಶೆಗಾಗಿ ಬಂದವರು.. ಇವರಿಗೆಲ್ಲಾ ಅವರವರ ಬಾಯಿರುಚಿಯಂತೆ ಅಡುಗೆ ತಯಾರಿ.

          ಮನೋರಂಜನೆಗಾಗಿ ಒಂದೆಡೆ ಚೆಸ್ ಆಟ, ಮತ್ತೊಂದೆಡೆ ಇಸ್ಪೀಟ್, ಇನ್ನೊಂದೆಡೆ ಯಕ್ಷಗಾನದ ಚೆಂಡೆ, ಮದ್ದಳೆ, ನಾಟ್ಯ .. ಹೀಗೆ ನಿತ್ಯವೂ ಹಬ್ಬದ ವಾತಾವರಣ. ಈ ನೆಪದಲ್ಲಿ ಬರುವ ಅತಿಥಿಗಳು ಅನೇಕ. ವೀಳ್ಯ ಮೆಲ್ಲಲು ಬರುವವರೂ ಇದ್ದರು. ವೀಳ್ಯಕ್ಕಾಗಿ ಅಡಿಕೆಯನ್ನು ಸಜ್ಜುಗೊಳಿಸಲೆಂದೇ ಒಂದಿಬ್ಬರು ಆಳುಗಳಿರುತ್ತಿದ್ದರು. ಇದನ್ನೆಲ್ಲಾ ನೋಡಿ ತಲೆ ತಿರುಗಿತ್ತು! ಒಂದರ್ಥದಲ್ಲಿ ಧರ್ಮಛತ್ರ. ಅತ್ತೆಯವರದ್ದೇ ಉಸ್ತುವಾರಿಕೆ. ಹೊಂದಿಕೊಳ್ಳಲು ಸ್ವಲ್ಪ ದಿನ ಬೇಕಾಯಿತು. ರಾತ್ರಿ, ಹಗಲು ಒಂದೇ ಆಗಿತ್ತು. ಬೆಳ್ಳಂಬೆಳಿಗ್ಗೆ ಅಡುಗೆಗಾಗಿ ನಾಲ್ಕು ಒಲೆಗಳಿಗೆ ಏಕಕಾಲಕ್ಕೆ ಬೆಂಕಿ ಹಾಕುವ ದೃಶ್ಯವನ್ನು ಎಣಿಸಿಕೊಂಡರೆ ಆ ಸಮಯದ ವೈಭವ ಅರ್ಥವಾದೀತು. 

(ಲೇಖನದ ಉಳಿದ ಭಾಗ ನಾಳೆಗೆ..)

 

No comments:

Post a Comment