Wednesday, August 19, 2020

‘ಪದಯಾನ’ - ಪದ್ಯಾಣರ ಸ್ವಗತ – (ಎಸಳು 24)

(ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಗ್ರಂಥ ‘ಪದಯಾನ’ ಕೃತಿಯಿಂದ)

ಯಕ್ಷಯಾನದ ಹೊಸ ಹಾದಿ:

          ಯಕ್ಷಗಾನದ ಮೇಳಗಳ ಇತಿಹಾಸದಲ್ಲಿ ಸುರತ್ಕಲ್ ಮೇಳದ ಯಕ್ಷಗಾಥೆಯು ಸುವರ್ಣಾಕ್ಷರದಲ್ಲಿ ಬರೆದಿಡುವಂತಹುದು. ಮೇಳದ ಯಜಮಾನ ವರದರಾಯ ಪೈಗಳ ಸಮತೋಲನ ಮತ್ತು ಬುದ್ಧಿವಂತಿಕೆಯ ಆಡಳಿತ ನಿರ್ವಹಣೆಗಳು ಮೇಳವನ್ನು ಮುನ್ನಡೆಸಿತ್ತು. ಜೀವನದಲ್ಲಿ ಹಣ ಒಂದೇ ಮುಖ್ಯವಲ್ಲ, ಹತ್ತು ಜನರ ಮಧ್ಯದಲ್ಲಿ ಎದ್ದು ಕಾಣುವ ನಿಲುವು ಮತ್ತು ಜಾಣ್ಮೆಗಳು ಯಶಸ್ವೀ ಬದುಕಿನ ಸೂತ್ರ, - ಪೈಗಳ ಬದುಕಿನಲ್ಲಿ ಇಣುಕಿದಾಗ ಗೋಚರವಾದ ಸತ್ಯ. ಶೈಕ್ಷಣಿಕ ಅರ್ಹತೆಯತ್ತ ಆಗಾಗ ಕೀಳರಿಮೆ ಕಾಡಿದಾಗ ಪೈಗಳನ್ನು ನೆನಪಿಸಿಕೊಳ್ಳುತ್ತೇನೆ. ‘ಮಾತು ಮುತ್ತಿನಂತಿರಬೇಕು. ಮಾತೇ ಸರ್ವಸ್ವ’ - ಈ ಮಾತು ಪೈಗಳಿಗೆ ಅಕ್ಷರಶಃ ಹೊಂದುತ್ತದೆ.

          ಕೊನೆಕೊನೆಗೆ ದೇಹಾರೋಗ್ಯ ಕೈಕೊಟ್ಟಿತ್ತು. ಮಾನಸಿಕವಾಗಿ ಯಕ್ಷಗಾನದ ಪ್ರೀತಿಯಿದ್ದರೂ, ದೈಹಿಕವಾಗಿ ಮುನ್ನಡೆಸಲು ಕಷ್ಟವಾಗುತ್ತಿತ್ತು. ಅವರ ಬವಣೆ, ಮಾನಸಿಕ ಒದ್ದಾಟ, ಅಸಹಾಯಕತೆಗಳು ಗೋಚರವಾಗುತ್ತಿದ್ದುವು. “ಇಷ್ಟು ವರುಷ ಜನಸ್ವೀಕೃತಿ ಪಡೆದ ಮೇಳವು ಕುಗ್ಗಬಾರದು. ಅದು ಸಂಪಾದಿಸಿದ ಕೀರ್ತಿಕಾಮಿನಿಗೆ ಧಕ್ಕೆಯಾಗಬಾರದು. ನಿಮ್ಮ ಅಸಹಾಯಕತೆ ಅರ್ಥವಾಗುತ್ತದೆ. ನಿಮ್ಮ ಒಪ್ಪಿಗೆ ಇದ್ದರೆ ಮೇಳವನ್ನು ನಿಲ್ಲಿಸಿಬಿಡೋಣ, ಆಗದೇ,” ಎಂದೆ.

          ಸರಿ, ನನ್ನ ಯೋಚನೆಯೂ ಅದೇ. ಮತ್ತೆ ನೀವೇನು ಮಾಡುತ್ತೀರಿ? ಕಲಾವಿದರನ್ನು ಅರ್ಧದಲ್ಲೇ ಕೈಬಿಟ್ಟ ಹಾಗಾಗುವುದಿಲ್ಲವೇ.., ಪೈಗಳು ಅಂದಾಗ ಆಶ್ಚರ್ಯವಾಯಿತು. ಕಲಾವಿದರ  ಕಾಳಜಿಗೆ ಮನಸಾ ಅಭಿನಂದಿಸಿದೆ. ಪೈಗಳೇ... ಮನೆಯಲ್ಲಿ ಗಂಜಿ, ಚಟ್ನಿಗೆ ತೊಂದರೆಯಿಲ್ಲ,.. ಎಂದಾಗ ನಕ್ಕರು. ಆಗಲೇ ಮೇಳ ನಿಲ್ಲಿಸುವ ಗುಸುಗುಸು ಸುದ್ದಿ ಹರಡಿತ್ತು. ಕೆಲವು ಕಲಾವಿದರು ಬೇರೆ ಮೇಳಕ್ಕೆ ಹೋಗುವ ಲೆಕ್ಕಾಚಾರ ಹಾಕುತ್ತಿದ್ದರು.

ದುಗುಡ-ದುಮ್ಮಾನ : ವರದರಾಯ ಪೈಗಳಿಗೆ ಸಮಾಧಾನ ಏನೋ ಹೇಳಿದೆ. ಮೇಳ ಇಲ್ಲದಿದ್ದರೆ ಬದುಕು? ಹೋಗುವುದಿದ್ದರೆ ಸುರತ್ಕಲ್ ಮೇಳಕ್ಕಿಂತ ಹಿರಿದಾದ ಮೇಳಕ್ಕೆ ಹೋಗಬೇಕು. ಚಿಕ್ಕಮೇಳಗಳಲ್ಲಿ ತಿರುಗಾಟ ಮಾಡದಿರಲು ನಿಶ್ಚಯಿಸಿದೆ. ಇದರರ್ಥ ಚಿಕ್ಕ ಮೇಳಗಳ ಕುರಿತು ಅನಾದರವಲ್ಲ. ಸುರತ್ಕಲ್ ಮೇಳದಂತಹ ದೊಡ್ಡ ಮೇಳಗಳಲ್ಲಿ ತಿರುಗಾಟ ಮಾಡಿದ ಬಳಿಕ, ಅದಕ್ಕಿಂತ ದೊಡ್ಡ ಮೇಳದಲ್ಲಿ ತಿರುಗಾಟ ಮಾಡುವುದು ಅನುಭವದ ಹಿನ್ನೆಲೆಯಲ್ಲಿ ಸಾಧು. ಇಲ್ಲದಿದ್ದರೆ ಹಿಂಬಡ್ತಿಯ ಅನುಭವ ಅಲ್ವಾ.

          ನನ್ನ ಗೊಂದಲವನ್ನು ಮಡದಿ ಶೀಲಾ ಅರ್ಥಮಾಡಿಕೊಂಡಿದ್ದಳು. ‘ಯಕ್ಷಗಾನವನ್ನೇ ಸರ್ವಸ್ವ’ ಎಂದು ಸ್ವೀಕರಿಸಿದ್ದೆ. ಅದುವೇ ಈಗ ಬದುಕಿಗೆ ಮುಳುವಾಯಿತೇ? ಮುಂದೇನು ದಾರಿ? ಬೇರೆ ಉದ್ಯೋಗ ಮಾಡುವಂತಿಲ್ಲ. ಕೃಷಿ ಕೆಲಸಗಳು ಮೈಗೆ ಹತ್ತದು. ಸಂಘ, ಸಂಸ್ಥೆಗಳ ಆಟಗಳಿಗೆ ಅತಿಥಿಯಾಗಿ ಹೋಗಬಹುದಲ್ಲಾ. ವಾರಕ್ಕೆ ಮೂರು ದಿವಸ ಆಟ ಸಿಕ್ಕರೂ ಸಾಕು. ತಾಳಮದ್ದಳೆಗಳು ಸಾಕಷ್ಟು ನಡೆಯುತ್ತಿವೆ. ಹೀಗೆಲ್ಲ ಯೋಚನೆ, ಯೋಜನೆಗಳ ಸುಳಿಯಲ್ಲಿ ಸುತ್ತುತ್ತಿದ್ದೆ.

          ಅದೇ ಹೊತ್ತಿಗೆ ಕುಟುಂಬದಲ್ಲಿ ಅಣ್ಣತಮ್ಮಂದಿರೊಳಗೆ ಆಸ್ತಿಯೂ ಪಾಲಾಯಿತು. ಮನಸ್ಸು, ಸಂಬಂಧಗಳು ನಗುನಗುತ್ತಾ ಇರುವಾಗಲೇ ಪ್ರತ್ಯೇಕವಾಗಿ ವಸತಿ ಹೂಡಲು ನಿರ್ಧಾರ.  ಮನಗಳೆಲ್ಲಾ ಒಂದು, ಮನೆ ಮಾತ್ರ ಬೇರೆ ಅಷ್ಟೇ. ತಾತ್ಕಾಲಿಕವಾಗಿ ಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ. ಒಂದು ಮುಂಜಾನೆ ಮಂಗಳಾದೇವಿ, ಕರ್ನಾಟಕ, ಸಾಲಿಗ್ರಾಮ.. ಹೀಗೆ ಹಲವು ಮೇಳಗಳ ಯಜಮಾನರಾದ ಕಿಶನ್ ಹೆಗಡೆಯವರು ಬಂದು ನೀವು ಮಂಗಳಾದೇವಿ ಮೇಳಕ್ಕೆ ಭಾಗವತರಾಗಿ ಬರಬೇಕು - ಆಹ್ವಾನವಿತ್ತರು.

          ನೆರೆಯಲ್ಲಿ ಕೊಚ್ಚಿ ಹೋಗುತ್ತಿರುವವನಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಂತೆ, ಗೊಂದಲ ಸನ್ನಿವೇಶದಲ್ಲಿದ್ದಾಗ ಕಿಶನ್ ಹೆಗಡೆಯವರು ಆಸರೆಯಾದರು. ಯಾವುದೇ ತಕರಾರು ಇಲ್ಲದೆ, ಸಂಬಳವನ್ನೂ ನಿಶ್ಚಯಿಸದೆ, ಮುಂಗಡ ಪಡೆಯದೆ ಕೋರಿಕೆಯನ್ನು ಒಪ್ಪಿಕೊಂಡೆ. ಮಂಗಳಾದೇವಿ ಮೇಳದಲ್ಲಿ ಮುಂದಿನ ತಿರುಗಾಟ. ಶೀಲಾ ಸಹಮತ ವ್ಯಕ್ತಪಡಿಸಿದಳು.


No comments:

Post a Comment